ಮಿನಿ ದುರಂತ: ಕೇಂದ್ರ ಅಧ್ಯಯನ ತಂಡ ವಿಶ್ಲೇಷಣೆ

7

ಮಿನಿ ದುರಂತ: ಕೇಂದ್ರ ಅಧ್ಯಯನ ತಂಡ ವಿಶ್ಲೇಷಣೆ

Published:
Updated:ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮಿನಿ ದುರಂತ ಎಂದು ಕೇಂದ್ರದ ಪ್ರವಾಹ ಪರಿಶೀಲನಾ ಅಧ್ಯಯನ ತಂಡ ವಿಶ್ಲೇಷಿಸಿದೆ.ತಂಡದ ಸದಸ್ಯರಾದ ಕೇಂದ್ರ ಕೃಷಿ ಸಚಿವಾಲಯದ ನಿರ್ದೇಶಕ ಡಾ.ಮಾನಸಿಂಗ್, ಕೇಂದ್ರ ಜಲ ಆಯೋಗದ ನಿರ್ದೇಶಕ ಡಾ.ರಂಗಾರೆಡ್ಡಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದ ಪ್ರಾದೇಶಿಕ ಅಧೀಕ್ಷಕ ಎಂಜಿನಿಯರ್ ಸಿ.ಆರ್. ಗಂಗಾಧರ್, ಬುಧವಾರ ಅತಿವೃಷ್ಟಿಯಿಂದ ತೀವ್ರ ಹಾನಿಗೊಳಗಾಗಿದ್ದ ನಗರದ ಚನ್ನಕ್ಕಿಹೊಂಡ ಹಾಗೂ ಮಠದಕುರುಬರಹಟ್ಟಿ ಮತ್ತು ಮಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಆಂಧ್ರಪ್ರದೇಶದಲ್ಲಿ ಭೀಕರ ಅತಿವೃಷ್ಟಿ ಸಂಭವಿಸಿದ ಉದಾಹರಣೆಗಳಿವೆ. ಆದರೆ, ಇದು ಸಹ ಮಿನಿ ದುರಂತ. ಕಂದಾಯ, ಪೊಲೀಸ್ ಸೇರಿದಂತೆ ಎಲ್ಲ ಇಲಾಖೆಗಳು ಸನ್ನದ್ಧರಾಗಿ ಪರಿಹಾರ ಕ್ರಮಗಳನ್ನು ಕೈಗೊಂಡಿವೆ. ಮುಂದೆ ಈ ರೀತಿಯ ಘಟನೆಗಳು ಸಂಭವಿಸಿದರೆ ಹೇಗೆ ಸಿದ್ಧರಾಗಬೇಕು ಎನ್ನುವ ಪಾಠ ಕಲಿಸಿದೆ ಎಂದರು.ನಾವು ವಸ್ತುಸ್ಥಿತಿಯನ್ನುಪರಿಶೀಲಿಸಿದ್ದೇವೆ. ಅತಿ ಹೆಚ್ಚಿನ ಪರಿಹಾರ ದೊರೆಯುವಂತೆ ಶಿಫಾರಸು ಮಾಡುತ್ತೇವೆ. ರಾಜ್ಯ ಸರ್ಕಾರವು ನಮಗೆ ವರದಿ ನೀಡಿದೆ. ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಪರಿಹಾರ ಕ್ರಮಗಳ ಬಗ್ಗೆ ನಮಗೆ ತೃಪ್ತಿ ತಂದಿದೆ. ಗುರುವಾರ ಬೆಂಗಳೂರಿನಲ್ಲಿ ರಾಜ್ಯದ ವಿವಿಧೆಡೆ ತೆರಳಿರುವ ತಂಡಗಳು ಸಭೆ ಸೇರಲಿವೆ. ತಂಡದ ಮುಖ್ಯಸ್ಥರಿಗೆ ನಾವು ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.ಬೆಳೆ ಹಾನಿಯ ಪರಿಹಾರ ಹೆಚ್ಚಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಕ್ಷಣಕ್ಕೆ ಹೆಚ್ಚಿಸಲು ಸಾಧ್ಯವಿಲ್ಲ. 13ನೇ ಹಣಕಾಸು ಆಯೋಗ ಈ ಬಗ್ಗೆ ರೂಪಿಸಿರುವ ಮಾನದಂಡಗಳನ್ನು ಪರಿಷ್ಕರಿಸುತ್ತದೆ. ಆದರೆ, ಪರಿಹಾರಕಾರ್ಯ ಕೈಗೊಳ್ಳಲು ಹೆಚ್ಚಿನ ಹಣ ಅಗತ್ಯವಿದ್ದರೆ ವಿಶೇಷ ಅನುದಾನಕ್ಕೆ ರಾಜ್ಯ ಸರ್ಕಾರ ಕೇಂದ್ರವನ್ನು ಕೋರಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.ಜಿ.ಪಂ. ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಯನ ತಂಡಕ್ಕೆ ಮಳೆ ಹಾಗೂ ‘ಜಲ್’ ಚಂಡಮಾರುತದಿಂದ ಸಂಭವಿಸಿದ ಹಾನಿ ಕುರಿತು ಸಮಗ್ರವಾಗಿ ಛಾಯಾಚಿತ್ರ ಮತ್ತು ವಿಡಿಯೋ ದೃಶ್ಯಗಳ ಮೂಲಕ ವಿವರ ನೀಡಿದ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲೆಯಲ್ಲಿ ಪ್ರವಾಹದಿಂದ ್ಙ 68.32 ಕೋಟಿ ಮೂಲಸೌಕರ್ಯ ನಷ್ಟವಾಗಿದೆ. ್ಙ 8.89 ಕೋಟಿ ಕೃಷಿ ಬೆಳೆ ಮತ್ತು ್ಙ 1.54 ಕೋಟಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ ಸಹ ಅತಿವೃಷ್ಟಿ ಸಂದರ್ಭದಲ್ಲಿ ಕೈಗೊಂಡ ರಕ್ಷಣಾ ಕಾರ್ಯಗಳನ್ನು ವಿಡಿಯೋ ದೃಶ್ಯಾವಳಿಗಳ ಮೂಲಕ ತಂಡಕ್ಕೆ ವಸ್ತುಸ್ಥಿತಿಯ ಮನವರಿಕೆ ಮಾಡಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry