ಶುಕ್ರವಾರ, ಆಗಸ್ಟ್ 7, 2020
26 °C

ಮಿಶ್ರ ಮಾಧ್ಯಮದಲ್ಲಿ ಬುದ್ಧ, ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಶ್ರ ಮಾಧ್ಯಮದಲ್ಲಿ ಬುದ್ಧ, ಕೃಷ್ಣ

ಅರೆಕಣ್ಣುಮುಚ್ಚಿದ ಧ್ಯಾನಸ್ಥ ಬುದ್ಧನ ಮುಗುಳ್ನಗೆ- ಚಾಂಚಲ್ಯ- ಚಾಣಾಕ್ಷತನ, ಕೃಷ್ಣನ ತುಂಟತನ ಅನೇಕ ಕಲಾವಿದರನ್ನು ಆಕರ್ಷಿಸುವ ಭಾವಗಳು. ಇವರಿಬ್ಬರ ವ್ಯಕ್ತಿತ್ವ ಎಂಥ ಕಲಾವಿದರನ್ನೂ ಸೆಳೆಯುತ್ತದೆ. ಪ್ರತಿಯೊಬ್ಬ ಕಲಾವಿದನೂ ತನ್ನ ಒಂದಲ್ಲ ಒಂದು ಕೃತಿಯಲ್ಲಿ ಇವರಿಬ್ಬರನ್ನೂ ಬಿಂಬಿಸಿರುತ್ತಾರೆ.ನಾಗ್ಪುರ ವಿಶ್ವವಿದ್ಯಾಲಯದ ಅಂಜನಾ ಚಂದಕ್ ಅವರೂ ಕೃಷ್ಣ ಮತ್ತು ಬುದ್ಧನ ಸೆಳೆತದಿಂದ ಹೊರತಾಗಿಲ್ಲ. ಬದಲಿಗೆ ಈ ಸುಳಿವಿನಲ್ಲಿ ಸುಳಿದ ಎಲ್ಲ ಭಾವಗಳನ್ನೂ ಗೆರೆಗಳಲ್ಲಿ ಹಿಡಿದಿಟ್ಟಿದ್ದಾರೆ. ಬುದ್ಧನ ಶಾಂತಿ ಸೂಸುವ ಪ್ರೀತಿಯ ಕಂಗಳು, ಆತನ ಸಂದೇಶದ ಜೊತೆಗೆ ಕೃಷ್ಣನ ಜೀವನಪ್ರೀತಿ ಅವರನ್ನು ತುಂಬಾ ಕಾಡಿರಬೇಕು.

 

ಅದಕ್ಕೇ ಬುದ್ಧ ಹಾಗೂ ಕೃಷ್ಣ ತಮ್ಮ ಆಧ್ಯಾತ್ಮಿಕ ಗುರುಗಳೆಂದು ಅಂಜನಾ ಒಪ್ಪಿಕೊಂಡಿದ್ದಾರೆ.ಬುದ್ಧ ಹಾಗೂ ಕೃಷ್ಣನನ್ನು ಧೇನಿಸುತ್ತಲೇ ಬದುಕಿನ ನಶ್ವರತೆಯೊಂದಿಗೆ ನಿರಂತರ ಹರಿವಿನ ಸೊಬಗನ್ನೂ ಚಿತ್ರದಲ್ಲಿ ತುಂಬುವ ಯತ್ನ ಮಾಡಿದ್ದೇನೆ ಎನ್ನುತ್ತಾರೆ ಅಂಜನಾ.ತಮ್ಮ ವೈವಿಧ್ಯಮಯ ತೈಲ ಚಿತ್ರಗಳು, ಮಿಶ್ರ ಮಾಧ್ಯಮದ ವರ್ಣಚಿತ್ರಗಳು ಮೈತಳೆದಿವೆ. ಇದರಲ್ಲಿ ಧ್ಯಾನಸ್ಥ ಬುದ್ಧನ ಚಿಂತನೆ ಮತ್ತು ಜೀವನೋಪದೇಶಗಳನ್ನು ನೆನಪಿಸುವಂತಿವೆ. ಕೃಷ್ಣ ಕರ್ಮಯೋಗಿ ಹಾಗೂ ಯುಕ್ತಿಪೂರ್ಣ ಗುಣದೊಂದಿಗೆ ತುಂಟತನವನ್ನೂ ಮೈಗೂಡಿಸಿಕೊಂಡಿರುವ ಹಲವಾರು ಚಿತ್ರಗಳು ಈ ಪ್ರದರ್ಶನದಲ್ಲಿವೆ.`ಆಧ್ಯಾತ್ಮಿಕ ವ್ಯಕ್ತಿಗಳ ಜೀವನದ ಒಂದು ನಿರ್ದಿಷ್ಟ ಘಟ್ಟದಲ್ಲಿ, ದೈವತ್ವ ಪ್ರಜ್ಞೆಯನ್ನು ಅರಿಯುವ ಹಾಗೂ ಆ ದೈವತ್ವದ ಅಂಶ ಕಾಣೆಯಾದಾಗ ಅವರಲ್ಲಿ ಆಗಬಹುದಾದ ಅಸಹಾಯಕತೆಯ ಭಾವ ಈ ಕೃತಿಗಳ ಜೀವಾಳವಾಗಿದೆ~ ಎನ್ನುತ್ತಾರೆ ಅಂಜನಾ.

`ಚಿತ್ರದಲ್ಲಿ ಬಳಸಿರುವ ವರ್ಣಗಳೂ ಭಾವಸೂಚಕಗಳಾಗಿವೆ.ಬಿಳಿ ಬಣ್ಣ ಪರಿಶುದ್ಧತೆಯನ್ನು ಸಂಕೇತಿಸುತ್ತದೆ. ಜೊತೆಗೆ ಪ್ರತಿಯೊಬ್ಬರೂ ಪರಿಶುದ್ಧತೆಗಾಗಿ ತಮ್ಮ ಜೀವನದಲ್ಲಿ ಪರಿತಪಿಸುವ ತಹತಹಿಕೆ ಇದೆ. ಈ ಚಿತ್ರದಲ್ಲಿರುವ ಕೊಳಲಿನ ಐದು ವಿವಿಧ ಅಂಶಗಳು ಮಾನವನ ಪಂಚೇಂದ್ರಿಯಗಳನ್ನು ಸೂಚಿಸುತ್ತವೆ. ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಿದರೆ ನಮಗೆ ಬೇಕಿರುವ ರಾಗವನ್ನೇ ಬದುಕಿನಲ್ಲಿ ಪಡೆಯಬಹುದು ಎಂಬುದು ಚಿತ್ರದ ಅರ್ಥ~ ಎಂದೂ ಅವರು ವಿವರಿಸುತ್ತಾರೆ. ನಾಗ್ಪುರ ವಿಶ್ವವಿದ್ಯಾನಿಲಯದ ಇಂಟೀರಿಯರ್ ಡಿಸೈನಿಂಗ್ ಹಾಗೂ ಕಲೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಜನಾ ಚಂದಕ್ ಅವರ ಚಿತ್ರಗಳ ಪ್ರದರ್ಶನವನ್ನು ಇದೇ 15ರವರೆಗೆ ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತಿ ದಿ ಆರ್ಟ್ ಕ್ವಾರ್ಟರ್ ಸಂಸ್ಥೆಯು `ಆತ್ಮದ ವಾಗ್ಝರಿ~ ಎಂಬ ಹೆಸರಿನಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.