ಶನಿವಾರ, ಜನವರಿ 18, 2020
20 °C

ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ: ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ: ಹಿರೇಮಠ

ಧಾರವಾಡ: ‘ಅರಣ್ಯ ಇಲಾಖೆಯ 60 ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದನ್ನು ವರದಿಯಲ್ಲಿ ದಾಖಲಿಸಿದ್ದ ಸರ್ಕಾರಿ ಜಮೀನು ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ವಿ.ಬಾಲಸುಬ್ರಮಣಿಯನ್‌ ವಿರುದ್ಧವೂ ವಿಧಾನಸಭೆಯ ಮಾಜಿ ಸ್ಪೀಕರ್‌ ರಮೇಶಕುಮಾರ್‌ ಹಕ್ಕುಚ್ಯುತಿ ಮಂಡಿಸಿದ್ದರು. ಈಗ ನನ್ನ ವಿರುದ್ಧ ಮಂಡಿಸಿದ್ದಾರೆ. ಆದರೆ, ಅಕ್ರಮ ಭೂಕಬಳಿಕೆಯ ವಿರುದ್ಧದ ನಮ್ಮ ಹೋರಾಟದ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲ’ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಸ್ಪಷ್ಟಪಡಿಸಿದರು.ರಮೇಶಕುಮಾರ್‌ ತಮ್ಮ ವಿರುದ್ಧ ಸೋಮವಾರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹಿರೇಮಠ, ‘2011ರ ಜನವರಿಯಿಂದಲೂ ಹಲವು ಅಕ್ರಮ ಗಣಿಗಾರಿಕೆ, ಭೂಕಬಳಿಕೆ ವಿರುದ್ಧ ಸುಪ್ರೀಂಕೋರ್ಟ್‌, ಹೈಕೋರ್ಟ್ ಹಾಗೂ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮುಂದೆ ನಾವು ಹಲವರ ಅಕ್ರಮಗಳನ್ನು ಪ್ರಶ್ನಿಸಿದ್ದೇವೆ.

ದಾಖಲೆಗಳನ್ನೂ ಇಟ್ಟಿದ್ದೇವೆ. ದಾಖಲೆ ಇಲ್ಲದೇ ನಾವು ಮಾತನಾಡುವುದಿಲ್ಲ. ರಮೇಶಕುಮಾರ್‌ 60 ಎಕರೆ ಜಮೀನು ಕಬಳಿಸಿದ್ದನ್ನು ಡಿಎಫ್‌ಓ ಅನಿಲ್‌ಕುಮಾರ್‌ ರತನ್‌ ಪತ್ತೆ ಹಚ್ಚಿದ್ದರು. ಇದು ಸಾರ್ವಜನಿಕ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಬಾಲಸುಬ್ರಮಣಿಯನ್‌ ಅವರು ಕೋಲಾರ ಜಿಲ್ಲೆ ಶ್ರೀನಿವಾಸಪುರದ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಭೂಕಬಳಿಕೆ ಮಾಡಿದ್ದು ಖಚಿತವಾದ ಬಳಿಕವೇ ತಮ್ಮ ವರದಿಯಲ್ಲಿ ದಾಖಲಿಸಿದ್ದರು. ಇದು ಅವರ ವಿರುದ್ಧ ಪ್ರಮುಖ ದಾಖಲೆ’ ಎಂದು ಹಿರೇಮಠ ಹೇಳಿದರು.‘ಶಾಸಕಾಂಗದ ಉನ್ನತ ಸಂಸ್ಥೆಯಾದ ವಿಧಾನ­ಸಭೆಯ ಬಗ್ಗೆ ನನಗೆ ಗೌರವವಿದೆ. ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರು ಪ್ರಾಜ್ಞ ವ್ಯಕ್ತಿಯಾಗಿದ್ದಾರೆ. ಹಾಗಾಗಿ ನನ್ನ ವಿರುದ್ಧದ ಹಕ್ಕುಚ್ಯುತಿಯ ಅಗತ್ಯದ ಸತ್ಯಾಸತ್ಯತೆಯನ್ನು ಅವರೇ ಪರಿಶೀಲಿಸಿ ನಿರ್ಧರಿಸಲಿ­ದ್ದಾರೆ. ಬಾಲಸುಬ್ರಮಣಿಯನ್‌ ವಿರುದ್ಧ ಇದೇ ರಮೇಶಕುಮಾರ್‌ ಹಕ್ಕುಚ್ಯುತಿ ಮಂಡಿಸಿದಾಗ ಸ್ವತಃ ರಾಜ್ಯಪಾಲ ಭಾರದ್ವಾಜ್‌ ಅವರೇ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಇಂತಹ ಬೆಳವಣಿಗೆಗಳಿಂದ ಪ್ರಾಮಾಣಿಕ ಅಧಿಕಾರಿಗಳು ಹಾಗೂ ಸಾಮಾಜಿಕ ಹೋರಾಟಗಾರರ ನೈತಿಕ ಸ್ಥೈರ್ಯ ಕುಂದುತ್ತದೆ ಎಂದೂ ಕಳವಳ ವ್ಯಕ್ತಪಡಿಸಿದ್ದರು. ಸಂವಿಧಾನ ನಮಗೆ ನೀಡಿದ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಬಳಸಿಕೊಂಡೇ ನಾವು ರಮೇಶಕುಮಾರ್‌ ವಿರುದ್ಧ ಆರೋಪ ಮಾಡಿದ್ದೇವೆ’ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಪ್ರತಿಕ್ರಿಯಿಸಿ (+)