ಮಂಗಳವಾರ, ಮೇ 18, 2021
28 °C

ಮುಂದಿನ ಪಂದ್ಯಕ್ಕೆ ಗೇಲ್ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಸ್ ಗೇಲ್ ಅಬ್ಬರದ ಆಟವನ್ನು ನೋಡಬೇಕೆಂಬ ಆಸೆಯೊಂದಿಗೆ ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳು ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ವೆಸ್ಟ್ ಇಂಡೀಸ್‌ನ ಈ ಬ್ಯಾಟ್ಸ್‌ಮನ್ ಕಣಕ್ಕಿಳಿಯದೇ ಇದ್ದುದು ಹೆಚ್ಚಿನವರ ನಿರಾಸೆಗೆ ಕಾರಣವಾಯಿತು.



ಈ ಪಂದ್ಯದಲ್ಲಿ ಗೇಲ್ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ ಮತ್ತು ಚೇತೇಶ್ವರ ಪೂಜಾರ ಆರ್‌ಸಿಬಿ ಇನಿಂಗ್ಸ್ ಆರಂಭಿಸಲು ಕಣಕ್ಕಿಳಿದಾಗ ಕ್ರೀಡಾಂಗಣದಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಗೇಲ್ ಆಡುವುದಿಲ್ಲ ಎಂಬುದು ಎಲ್ಲರಿಗೂ ಖಚಿತವಾಯಿತು.



ಈ ಅಪಾಯಕಾರಿ ಬ್ಯಾಟ್ಸ್‌ಮನ್ ಗಾಯದ ಸಮಸ್ಯೆಯೊಂದಿಗೆಯೇ ಉದ್ಯಾನನಗರಿಗೆ ಆಗಮಿಸಿದ್ದರು. ಇದೀಗ ಪೂರ್ಣವಾಗಿ ಚೇತರಿಸಿಕೊಂಡಿರುವರಾದರೂ ಪಂದ್ಯಕ್ಕೆ ಬೇಕಾಗುವಷ್ಟು ಫಿಟ್‌ನೆಸ್ ಹೊಂದಿರಲಿಲ್ಲ. ಈ ಕಾರಣ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿಲ್ಲ. `ಗೇಲ್ ಶ್ರೇಷ್ಠ ಬ್ಯಾಟ್ಸ್‌ಮನ್. ಆದರೆ ಈ ಪಂದ್ಯದಲ್ಲಿ ತಂಡಕ್ಕೆ ಅವರ ನೆರವು ಲಭಿಸಲಿಲ್ಲ. ಗೇಲ್ ಶೇ. 100 ರಷ್ಟು ಫಿಟ್‌ನೆಸ್ ಹೊಂದಿಲ್ಲ. ಈ ಕಾರಣ ಅವರನ್ನು ಕಣಕ್ಕಿಳಿಸಿ ಅಪಾಯವನ್ನು ಆಹ್ವಾನಿಸಲು ತಂಡ ಬಯಸಲಿಲ್ಲ. ಮುಂದಿನ ಪಂದ್ಯಕ್ಕೆ ಅವರು ಲಭ್ಯರಿರುವರು~ ಎಂದು ಎಬಿ ಡಿವಿಲಿಯರ್ಸ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



ಆರ್‌ಸಿಬಿ ಎರಡನೇ ಪಂದ್ಯ  ಮಂಗಳವಾರ ಬೆಂಗಳೂರಿನಲ್ಲೇ ನಡೆಯಲಿದೆ. ಈ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.



ಮುತ್ತಯ್ಯ ಮುರಳೀಧರನ್ ಬೌಲಿಂಗ್ ಪ್ರದರ್ಶನವನ್ನು `ಪಂದ್ಯಶ್ರೇಷ್ಠ~ ವಿಲಿಯರ್ಸ್ ಶ್ಲಾಘಿಸಿದರು. `ಅವರು ಕ್ರಿಕೆಟ್‌ನ ದಂತಕತೆ. ನಾನು ಇದೇ ಮೊದಲ ಬಾರಿಗೆ ಮುರಳಿ ಬೌಲಿಂಗ್ ವೇಳೆ ವಿಕೆಟ್‌ಕೀಪಿಂಗ್ ನಡೆಸಿದ್ದೇನೆ. ನನ್ನ ಕನಸು ನನಸಾಗಿದೆ. ಪಂದ್ಯಶ್ರೇಷ್ಠ ಪ್ರಶಸ್ತಿ ಅವರಿಗೆ ನೀಡಬೇಕಿತ್ತು~ ಎಂದು ವಿಲಿಯರ್ಸ್ ನುಡಿದರು.



ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಲು ಮುರಳಿ ಮತ್ತು ಡಿರ್ಕ್ ನಾನೆಸ್ ನಡುವೆ ಸ್ಪರ್ಧೆ ಇದೆ ಎಂದು ಆರ್‌ಸಿಬಿ ನಾಯಕ ಡೇನಿಯಲ್ ವೆಟೋರಿ ಕೆಲ ದಿನಗಳ ಹಿಂದೆ ಹೇಳಿದ್ದರು. ಶನಿವಾರ ತೋರಿದ ಪ್ರದರ್ಶನದ ಮೂಲಕ ಮುರಳಿ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.



`ಆಲ್‌ರೌಂಡ್ ಪ್ರದರ್ಶನದಿಂದಾಗಿ ಗೆಲುವು ಪಡೆದಿದ್ದೇವೆ. ಡಿವಿಲಿಯರ್ಸ್ ಮತ್ತು ವಿನಯ್ ಕುಮಾರ್ ನಡುವಿನ ಜೊತೆಯಾಟ ಮಹತ್ವದ್ದಾಗಿತ್ತು. 157 ರನ್‌ಗಳ ಒಳಗೆ ಎದುರಾಳಿ ತಂಡವನ್ನು ನಿಯಂತ್ರಿಸುವುದು ಕಠಿಣವೇ ಸರಿ. ಆದರೆ ನಮ್ಮ ಬೌಲರ್‌ಗಳು ಕೊನೆಯಲ್ಲಿ ಒತ್ತಡವನ್ನು ಮೆಟ್ಟಿನಿಂತರು~ ಎಂದು ವೆಟೋರಿ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.



ಉಮೇಶ್ ಯಾದವ್‌ಗೆ ಗಾಯ: ಡೆಲ್ಲಿ ತಂಡ ಕೂಡಾ ಪಂದ್ಯದ ವೇಳೆ ಗಾಯದ ಸಮಸ್ಯೆ ಎದುರಿಸಿತು. ಉಮೇಶ್ ಯಾದವ್ ಅವರು ಸ್ನಾಯು ಸೆಳೆತದ ಕಾರಣ ಅರ್ಧದಲ್ಲೇ ಅಂಗಳದಿಂದ ಹೊರನಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.