ಸೋಮವಾರ, ಮಾರ್ಚ್ 8, 2021
24 °C

ಮುಂದುವರಿಕೆಯ ಅನಿವಾರ್ಯ ಮುಂದಿರುವ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂದುವರಿಕೆಯ ಅನಿವಾರ್ಯ ಮುಂದಿರುವ ಸವಾಲು

ನಿರೀಕ್ಷೆಯಂತೆ ಅಮಿತ್ ಷಾ ಅವರು ಬಿಜೆಪಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಪಕ್ಷದ ಮುಂದೆ ಬೇರೆ ಆಯ್ಕೆಗಳು ಇಲ್ಲದಿದ್ದರಿಂದ ಅವರ ಮುಂದುವರಿಕೆ ಅನಿವಾರ್ಯವಾಗಿತ್ತು. ನಿತಿನ್‌ ಗಡ್ಕರಿ ಇಲ್ಲವೆ ರಾಜನಾಥ್‌ ಸಿಂಗ್‌ ಅಧ್ಯಕ್ಷರಾಗಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಪೇಕ್ಷಿಸಿತ್ತಾದರೂ ಅವರು ಸಚಿವ ಸ್ಥಾನ ತ್ಯಜಿಸಲು ಸಿದ್ಧರಿರಲಿಲ್ಲ. ಲೋಕಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ರಾಜನಾಥ್‌ ಹಟ ಹಿಡಿದು ಸಚಿವರಾದರು.ಆನಂತರ ಅವರ ಉತ್ತರಾಧಿಕಾರಿಯಾಗಿ ಷಾ ಅವರನ್ನು ಆಯ್ಕೆ ಮಾಡಲಾಯಿತು. ಆಗ ಪ್ರಧಾನಿ ನರೇಂದ್ರ ಮೋದಿ ಅವರೇ ಷಾ ಅವರಿಗೆ ಬೆಂಬಲವಾಗಿ ನಿಂತರು. ಷಾ  ಎರಡನೇ ಅವಧಿಗೆ ಮುಂದುವರಿಯುವುದು ಮೋದಿ ಅವರಿಗೆ ಬೇಕಿತ್ತು. ಬೇರೆಯವರು ಅಧ್ಯಕ್ಷರಾದರೆ ಮತ್ತೊಂದು ಅಧಿಕಾರ ಕೇಂದ್ರ ಸೃಷ್ಟಿಯಾಗಬಹುದು ಎಂಬ ವಾಸ್ತವದ ಕಲ್ಪನೆ ಅವರಿಗೆ ಇದ್ದುದರಿಂದ ತಮಗೆ ನಿಷ್ಠರಾದ ಷಾ ಅವರೇ ಪುನರಾಯ್ಕೆ ಆಗುವಂತೆ ನೋಡಿಕೊಂಡಿದ್ದಾರೆ. ಮೋದಿ ಹಾಗೂ ಷಾ ಅವರ ನಡುವೆ ಮೊದಲಿಂದಲೂ ಉತ್ತಮ ಸಹಕಾರ, ಹೊಂದಾಣಿಕೆ ಇದೆ. ಮೋದಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ದಿನಗಳಿಂದಲೂ ಷಾ ಜತೆಗೂಡಿ ಕೆಲಸ ಮಾಡಿದ್ದಾರೆ.ಮೋದಿ ಅವರ ಜನಪ್ರಿಯತೆ ಅಲೆಯಲ್ಲಿ ಬಿಜೆಪಿ ತೇಲುತ್ತಿದ್ದಾಗ ಅಮಿತ್‌ ಷಾ ಅಧ್ಯಕ್ಷರಾದರು. ಆನಂತರ ನಡೆದ ಜಾರ್ಖಂಡ್‌, ಹರಿಯಾಣ, ಮಹಾರಾಷ್ಟ್ರ ಮತ್ತು ಜಮ್ಮು– ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಹುಡುಕಿಕೊಂಡು ಬಂದಿತ್ತು. ಇದರಿಂದಾಗಿ ಚುನಾವಣಾ ತಂತ್ರಗಳನ್ನು ಯಶಸ್ವಿಯಾಗಿ ರೂಪಿಸಬಲ್ಲ ಚಾಣಾಕ್ಷ ಎಂಬ ಹೆಗ್ಗಳಿಕೆಯೂ ಅವರಿಗೆ ಬಂತು. ಆದರೆ, ಕಳೆದ ವರ್ಷದ ದೆಹಲಿ ಹಾಗೂ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಅವರ ಕೈಹಿಡಿಯಲಿಲ್ಲ. ಲಾಲು–ನಿತೀಶ್‌ ಜೋಡಿ ಎದುರು  ಬಿಹಾರದಲ್ಲಿ ಹೀನಾಯವಾಗಿ ಸೋತ ಬಳಿಕ ಬಿಜೆಪಿ ಅಧ್ಯಕ್ಷರು ಟೀಕೆಗೆ ಗುರಿಯಾದರು.  ಅವರ ಬದಲಾವಣೆಗೆ ಕೆಲವು ಮುಖಂಡರು ಒತ್ತಾಯಿಸಿದ್ದರು.ಷಾ ಅವರ ಎರಡನೇ ಇನಿಂಗ್ಸ್‌ ಸುಲಭದ ಹಾದಿಯಲ್ಲ. ಅನೇಕ ಸವಾಲುಗಳಿಂದ ಕೂಡಿದ ಕಲ್ಲು–ಮುಳ್ಳಿನ ಹಾದಿ. ಬಿಜೆಪಿಯು ಮುಸ್ಲಿಂ ಮತ್ತು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಒಂದು ರೀತಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಷಾ ಅವರ ಪುನರಾಯ್ಕೆ ಆಗಿದೆ. ಈ ಸವಾಲುಗಳನ್ನು ಅಧ್ಯಕ್ಷರು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ, ಈ ವರ್ಷ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ವಿಧಾನಸಭೆಗಳಿಗೆ  ಚುನಾವಣೆಗಳು ನಡೆಯಲಿವೆ. ಅಸ್ಸಾಂ ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಬಿಜೆಪಿ ಸ್ಥಿತಿ ಉತ್ತಮವಾಗಿಲ್ಲ.ಪಕ್ಷಕ್ಕೆ ನೆಲೆ ಇಲ್ಲದ ರಾಜ್ಯಗಳಲ್ಲಿ ಅಮಿತ್‌ ಷಾ ಯಾವ ರೀತಿಯ ಕಾರ್ಯತಂತ್ರ ರೂಪಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ. ಬಿಹಾರ ಚುನಾವಣೆ ಸೋಲಿನ ಬಳಿಕ ಬಿಜೆಪಿಯೊಳಗೆ ಎಲ್ಲವೂ ಸರಿಯಾಗಿಲ್ಲ. ಪ್ರಧಾನಿ ಮೋದಿ ಅವರ ಕಾರ್ಯವೈಖರಿಯಿಂದ ಬೇಸತ್ತಿರುವ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತಿತರರು ಸಹಜವಾಗಿ ಷಾ ಅವರ ಕಾಲೆಳೆಯುತ್ತಿದ್ದಾರೆ. ಭಾನುವಾರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೂ ಈ ನಾಯಕರು ಗೈರುಹಾಜರಾಗಿದ್ದರು. ಬಿಜೆಪಿ ಅಧ್ಯಕ್ಷರು ಈ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವರೇ ಇಲ್ಲವೆ ಮೊದಲಿನ ಧೋರಣೆಯನ್ನೇ ಮುಂದುವರಿಸುವರೇ ಎನ್ನುವುದು ಯಕ್ಷಪ್ರಶ್ನೆ.ಬಿಜೆಪಿ ಅಧ್ಯಕ್ಷರು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡುವುದಿಲ್ಲ. ಅವರ ಅಹವಾಲುಗಳನ್ನು ಕೇಳುವುದಿಲ್ಲ ಎಂಬ ಆರೋಪಗಳು ಪಕ್ಷದೊಳಗೆ ಹೇರಳವಾಗಿವೆ. ಅಮಿತ್‌ ಷಾ ತಮ್ಮ ಎರಡನೇ ಅವಧಿಯಲ್ಲಾದರೂ ಕಾರ್ಯಶೈಲಿ ಬದಲಾವಣೆ ಮಾಡಿಕೊಳ್ಳುವರೇ ಎಂದು ಕಾದು ನೋಡಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅತೀ ಹೆಚ್ಚು ಸ್ಥಾನಗಳನ್ನು ಕೊಟ್ಟಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ಈ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವುದು ಅಮಿತ್‌ ಷಾ ಅವರ ಮುಂದಿರುವ ದೊಡ್ಡ ಜವಾಬ್ದಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.