ಶುಕ್ರವಾರ, ಮೇ 20, 2022
27 °C

ಮುಂದುವರಿದ 104ನೇ ಮೈಲ್ ಕೆಳಭಾಗದ ರೈತರ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ರೈತರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಪ್ರತಿ ವರ್ಷ ಬೇಸಿಗೆ ದಿನದ ಬೆಳೆಗೆ ಮೂರ್ನಾಲ್ಕು ತಿಂಗಳು ಮೊದಲಿನಿಂದಲೂ ರೈತರು ಸಮರ್ಪಕ ನೀರು ಪೂರೈಕೆ, ಗೇಜ್ ನಿರ್ವಹಣೆ ಬಗ್ಗೆ ಒತ್ತಾಯ, ಒತ್ತಡ,ರಸ್ತೆ ತಡೆ ಮಾಡುತ್ತ ಬಂದಿದ್ದರೂ ಆಡಳಿತಯಂತ್ರ ಕಣ್ತೆರೆದಿಲ್ಲ.ಆಡಳಿತಯಂತ್ರದ ಕಾರ್ಯನಿರ್ವಹಣೆ ರೈತರ ಪಾಲಿಗೆ ‘ಡೊಂಕು’ ರೂಪದಲ್ಲಿ ಗೋಚರಿಸುತ್ತಿದೆ. ಈ ರೀತಿಯ ಒತ್ತಾಯ ಒತ್ತಡ ಮಾಡಿ ಸುಸ್ತಾದ ರೈತ ಸಮೂಹ 104ನೇ ಮೈಲ್ ಕೆಳಭಾಗದ ರೈತರ ಸಂಘವನ್ನೇ ಸ್ಥಾಪಿಸಿಕೊಂಡು ಸಮಸ್ಯೆಗೆ ಪರಿಹಾರ ಹುಡುಕುವ ಯತ್ನ ಮಾಡುತ್ತಿದ್ದರೂ ಸ್ಪಂದನೆ ದೊರಕಿಲ್ಲ. ಹಿಂದಿನ ಸ್ಥಿತಿಯೇ ಈಗಲೂ ಮುಂದುವರಿದಿದೆ. ನೀರಿಗಾಗಿ ರೈತರು ಚಾತಕ ಪಕ್ಷಿಯಂತೆ ಕಾಯುವುದು ಮುಂದುವರಿದಿದೆ.ರೈತರು ಮತ್ತು ನೀರಾವರಿ ಅಧಿಕಾರಿಗಳೊಂದಿಗೆ ಬಹಿರಂಗ ಸಭೆ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆದಾಗ ರೈತರಲ್ಲಿ ಆಶಾಭಾವನೆ ಮೂಡಿತ್ತು. ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ರೈತರು ನೀರಿಗಾಗಿ ಕಣ್ಣೀರು ಹರಿಸಿದ್ದಾರೆ. ಅವರ ಕಷ್ಟ ನಮಗೆ ಗೊತ್ತು. ಪರಿಹಾರ ಕಂಡುಕೊಳ್ಳೋಣ ಎಂಬ ಎಂಜನಿಯರ್‌ಗಳ ಅನುಕಂಪದ ಮಾತುಗಳು ಅನುಷ್ಠಾನಕ್ಕೆ ಬರಲಿಲ್ಲ. ಜಿಲ್ಲಾಧಿಕಾರಿ ಅನ್ಬುಕುಮಾರ ಅವರು ಕಾಲುವೆ ಮೇಲೆ ರೌಂಡ್ಸ್ ಹೊಡೆದಾಗ ಎರಡು ದಿನ ಮಾತ್ರ ಗೇಜ್ ನಿರ್ವಹಣೆ ಆಗಿದ್ದು ಬಿಟ್ಟರೆ ಮತ್ತೆ ಗೇಜ್ ಪ್ರಕಾರ ನೀರು ಕಾಲುವೆಯಲ್ಲಿ ಹರಿಯಲೇ ಇಲ್ಲ ಎಂಬ ಆಪಾದನೆ ರೈತರದ್ದು.ಪ್ರಸ್ತುತ ನೀರಿನ ನಿರ್ವಹಣೆ: ರಾಯಚೂರು ನಗರಕ್ಕೆ ಹಾಗೂ ಕಾಲುವೆಯ ಕೆಳಭಾಗದ ಗ್ರಾಮೀಣ ಪ್ರದೇಶ, 104ನೇ ಮೈಲ್ ಕೆಳಭಾಗದ ರೈತರ ಜಮೀನಿಗೆ ಗಣೇಕಲ್ ಜಲಾಶಯ ಆಧಾರ.ಆದರೆ ಈಗ ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಿಂದಲೇ ಗಣೇಕಲ್ ಜಲಾಶಯಕ್ಕೆ ಸಮರ್ಪಕ ನೀರು ಹರಿದು ಬರುತ್ತಿಲ್ಲ. ಮೇಲ್ಭಾಗದಲ್ಲೇ ನೀರಾವರಿ ಇಲಾಖೆಯಿಂದ ಗೇಜ್ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಸಮಸ್ಯೆ ಜಟಿಲವಾಗುತ್ತಿದೆ.ಪ್ರಸ್ತುತ ಗಣೇಕಲ್ ಜಲಾಶಯದಲ್ಲಿ 15 ಟಿಎಂಸಿ ನೀರು ಸಂಗ್ರಹವಿದೆ. ಆದರೆ ಇದೇ ಜಲಾಶಯದಿಂದ ರೈತರ ಜಮೀನಿಗೆ ನೀರು ಹರಿಯುತ್ತಿದೆ. ರಾಯಚೂರು ನಗರಕ್ಕೂ ನೀರು ಪೂರೈಕೆ ಆಗಬೇಕು. ಬೇಸಿಗೆ ದಿನವಾದ್ದರಿಂದ ಬೆಳೆಗೆ ಹೆಚ್ಚಿನ ನೀರು ಅಗತ್ಯ. ಹೆಚ್ಚು ನೀರು ಪಡೆದರೆ ರಾಯಚೂರು ನಗರ ಮತ್ತು ಕೆಳಭಾಗದ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. 104ನೇ ಮೈಲ್ ಕೆಳಭಾಗದಲ್ಲಿ ಈಗಲೂ ಗೇಜ್ ನಿರ್ವಹಣೆ ಇಲ್ಲ.ಕನಿಷ್ಠ 6 ಅಡಿ ನೀರು ಕಾಲುವೆಯಲ್ಲಿ ಹರಿಸಬೇಕು. ಆದರೆ ಈಗ 3.6 ಅಡಿಯಷ್ಟು ಮಾತ್ರ ನೀರು ಹರಿದುಬರುತ್ತಿದೆ. ಇದನ್ನು ಮನಗಂಡು ಗೇಜ್‌ನ್ನು ಸಮರ್ಪಕ ನಿರ್ವಹಣೆ ಮಾಡಬೇಕಾದ ನೀರಾವರಿ ಅಧಿಕಾರಿಗಳು ಗಮನವನ್ನೇ ಕೊಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ರೈತರ ಸ್ಥಿತಿ  ಮತ್ತಷ್ಟು ಗಂಭೀರವಾಗಲಿದೆ ಎಂದು 104ನೇ ಮೈಲ್ ಕೆಳಭಾಗದ ರೈತರ ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.