ಶುಕ್ರವಾರ, ಜೂನ್ 18, 2021
27 °C

ಮುಕ್ತಛಂದ: ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಕ್ತಛಂದ: ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ...

ಇತ್ತೀಚಿನ ಒಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ರೌಂಡ್ಸ್ ಮುಗಿಸಿಕೊಂಡು, ಚಹಾ ಕುಡಿಯುತ್ತಾ ಕುಳಿತ್ದ್ದಿದೆ. ದೂರವಾಣಿ ಕರೆಯೊಂದು ಬಂತು. ನಮ್ಮ ವಿಭಾಗದ ಕಿರಿಯ ವೈದ್ಯರು ಕರೆ ಮಾಡಿ, `ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು ಎದೆ ನೋವೆಂದು ಕರೆದುಕೊಂಡು ಬಂದಿದ್ದಾರೆ. ಇ.ಸಿ.ಜಿ.ಯಲ್ಲಿ `ಅಕ್ಯೂಟ್ ಎಮ್ ಐ (ಹೃದಯಾಘಾತದ ಲಕ್ಷಣಗಳು)~ ಎಂದರು. ಇದು ಮತ್ತೊಂದು `ಹುಸಿ ಬಾಂಬ್ ಕರೆ~ ಇರಬೇಕೆಂದುಕೊಂಡೆ.ಬಹಳಷ್ಟು ಸಲ ಕಿರಿಯ ವೈದ್ಯರು ಇ.ಸಿ.ಜಿ. ನೋಡಿ ನಮ್ಮನ್ನು ತುರ್ತಾಗಿ ಕರೆಯುವುದುಂಟು. ನಾವು ಆತುರಾತುರವಾಗಿ ಓಡಿ ಹೋಗಿ ನೋಡಿದರೆ ಆ ರೀತಿಯೇನೂ ಆಗಿರುವುದಿಲ್ಲ. ಹಾಗಾಗಿ, ಅವರ ಆತಂಕದ ಕರೆಗಳನ್ನು `ಹುಸಿ ಬಾಂಬ್ ಕರೆಗಳು~ ಎಂದು ತಮಾಷೆ ಮಾಡುತ್ತೇವೆ. ಅಲ್ಲದೆ ರೋಗಿಯು ಚಿಕ್ಕ ಬಾಲೆ ಎಂದಾಗ ಹೃದಯಾಘಾತದ ಸಾಧ್ಯತೆ ಬಹಳ ಕಡಿಮೆ ಎಂದುಕೊಳ್ಳುತ್ತಲೇ ಅಲ್ಲಿಗೆ ಹೋದೆ. ಆದರೆ, ಇ.ಸಿ.ಜಿ.ಯನ್ನು ನೋಡಿದಾಗ ಬೆಪ್ಪನಾಗುವ ಸರದಿ ನನ್ನದಾಗಿತ್ತು. ಹದಿನಾಲ್ಕರ ಬಾಲೆಗೆ `ಹೃದಯಾಘಾತ~ವಾಗಿತ್ತು.ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ತಂಬಾಕು ಸೇವನೆ- ಇವೆಲ್ಲಕ್ಕೂ ಹೃದಯಾಘಾತಕ್ಕೂ ನಂಟು. ಆದರೆ, ಇತ್ತೀಚೆಗೆ ವಯಸ್ಸಿನ ಭೇದಭಾವ ಅಥವಾ ಲಿಂಗ ತಾರತಮ್ಯ ತೋರದೆ ಹೃದಯಾಘಾತ ವ್ಯಾಪಕವಾಗುತ್ತಿದೆ. ಗಂಡಸರಲ್ಲಿ ಮೊದಲೆಲ್ಲಾ ಐವತ್ತರ ನಂತರ ಬರುತ್ತಿದ್ದ ಹೃದ್ರೋಗ ಸಮಸ್ಯೆಗಳನ್ನು ಈಗ 20-30 ವಯಸ್ಸಿನ ಯುವಕರಲ್ಲಿ ನೋಡುತ್ತಿದ್ದೇವೆ. ಇದಕ್ಕೆ ಕಾರಣ- ಸ್ಪರ್ಧಾತ್ಮಕ ಜಗತ್ತಿನ ಮಾನಸಿಕ ಒತ್ತಡಗಳು ಹಾಗೂ ಮಿತಿಯಿಲ್ಲದ ಮೋಜಿನ ಜೀವನ. ಸಿಗರೇಟು, ಮದ್ಯ, ಕಣ್ಣಿಗೆ ಕಂಡದ್ದನ್ನೆಲ್ಲಾ ತಿನ್ನುವುದು- ಇವೆಲ್ಲ, ಹೃದಯದ ತೊಂದರೆಗೆ ಕಾರಣವಾಗುತ್ತವೆ. ಕೆಲವೊಮ್ಮೆ, ಪಿತ್ರಾರ್ಜಿತ ಆಸ್ತಿಯ ಜೊತೆಗೆ ತಂದೆ ತಾಯಿಯವರ ಬಳವಳಿಯಾಗಿ ಕೂಡ ಹೃದ್ರೋಗ ಬರುವುದಿದೆ.ಸಾಮಾನ್ಯವಾಗಿ ಸ್ತ್ರೀಯರಿಗೆ ಮುಟ್ಟುನಿಲ್ಲುವವರೆಗೆ `ಈಸ್ಟ್ರೋಜನ್~ ಎಂಬ ಹಾರ್ಮೋನು ಹೃದಯವನ್ನು ಆಘಾತದಿಂದ ರಕ್ಷಿಸುತ್ತದೆ. ಆದ್ದರಿಂದ ಸ್ತ್ರೀಯರಲ್ಲಿ ಹೃದಯ ಸಮಸ್ಯೆಗಳು 45-50ರ ನಂತರವೇ ಜಾಸ್ತಿ. ಆದರೆ ಬರಬರುತ್ತಾ ಮಹಿಳೆಯರಲ್ಲೂ ಮೂವತ್ತರ ಆಸುಪಾಸಿನಲ್ಲೇ ಹೃದ್ರೋಗ ಕಾಣಿಸಿಕೊಳ್ಳತೊಡಗಿದೆ. ಆದರೆ, ನನ್ನ ಈವರೆಗಿನ ಅನುಭವದಲ್ಲಿ ಹದಿನಾಲ್ಕನೇ ವಯಸ್ಸಿನ ಬಾಲಕಿಗೆ ಹೃದಯಾಘಾತವಾಗ್ದ್ದಿದನ್ನು ಕಂಡದ್ದು ಇದೇ ಮೊದಲು.ಈ ಹೆಣ್ಣುಮಗಳಿಗೆ ಹೃದಯಾಘಾತ ಆಗಲು ಕಾರಣಗಳಾದರೂ ಏನು ಎಂದು ಕೆದಕುತ್ತಾ ಹೋದೆ. ನನಗೆ ಸಿಕ್ಕಿದ್ದು ಮನಸ್ಸಿಗೆ ನೋವು ತರುವ ವಿಷಯಗಳು.ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಬಡ ಕುಟುಂಬಕ್ಕೆ ಸೇರಿದವಳು. ತಂದೆ ಆಟೋ ಓಡಿಸುತ್ತಾರೆ. ಅವರ ದುಡಿಮೆಯಲ್ಲೇ  ಕುಟುಂಬದ ನಿರ್ವಹಣೆ ನಡೆಯಬೇಕು. ಈ ಹುಡುಗಿಗೆ ಪದೇ ಪದೇ ಅನಾರೋಗ್ಯ. ಜ್ವರ, ಸುಸ್ತು, ಕೈಕಾಲು ನೋವು. ಮನೆಯವರು ದೇವರು ದಿಂಡಿರು ಮೊರೆಹೋದರು. ಹರಕೆ ಕಟ್ಟಿಕೊಂಡರು. ಯಾವುದೂ ಫಲ ನೀಡಲಿಲ್ಲ.ಇತ್ತೀಚೆಗೆ ಮುಖದ ಚರ್ಮ ಕಪ್ಪು ಬಣ್ಣಕ್ಕೆ ತಿರುಗತೊಡಗಿದಾಗ `ದೊಡ್ಡಾಸ್ಪತ್ರೆಗೆ~ ಕರೆದುಕೊಂಡು ಬಂದರು. ಪರೀಕ್ಷೆಗಳನ್ನು ಮಾಡಿದ ನಂತರ, ವೈದ್ಯರೆಲ್ಲಾ ಸೇರಿ ಬಾಲಕಿಯ ಕಾಯಿಲೆಗೆ ಕೊಟ್ಟ ಹೆಸರು- SLY (Systemic lupus erythematosus)..`ಎಸ್‌ಎಲ್‌ಇ~ ಬಿಳಿ ರಕ್ತಕಣಗಳನ್ನು ದುರ್ಬಲಗೊಳಿಸುತ್ತದೆ. ರೋಗಕಾರಕ ಬ್ಯಾಕ್ಟೀರಿಯಾ-ವೈರಸ್‌ಗಳನ್ನು ಮತ್ತು ಇತರೆ ಶತ್ರುಗಳನ್ನು ಹೊಡೆದೋಡಿಸಬೇಕಾದ ಬಿಳಿ ರಕ್ತಕಣಗಳು ತನ್ನ ಯಜಮಾನನ ದೇಹದ ವಿರುದ್ಧವೇ ಸಂಚು ರೂಪಿಸಿ, ದಾಳಿ ಮಾಡುವುದು `ಎಸ್‌ಎಲ್‌ಇ~ ವಿಶೇಷ. ಒಮ್ಮೆ `ಎಸ್‌ಎಲ್‌ಇ~ ವಕ್ರದೃಷ್ಟಿ ಬಿದ್ದಿತೆಂದರೆ, ಜೀವನ ಪರ್ಯಂತ ಅದನ್ನು ಅನುಭವಿಸಲೇಬೇಕು.ಈ ನತದೃಷ್ಟ ಹೆಣ್ಣುಮಗಳ ತಂದೆಗೆ ತನ್ನ ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಸಾಲ ಮಾಡಬೇಕಾಯಿತು. ದೊಡ್ಡಾಸ್ಪತ್ರೆಯಲ್ಲಿ ಮಗಳು ಇನ್ನೇನು ಚೇತರಿಸಿಕೊಂಡಳು ಎನ್ನುವಾಗ್ಗೆ `ಹೃದಯಾಘಾತ~ ಬರಸಿಡಿಲಿನಂತೆ ಎರಗಿತ್ತು. `ಎಸ್‌ಎಲ್‌ಇ~ ಕಾಯಿಲೆಯಲ್ಲಿ ರಕ್ತನಾಳಗಳಲ್ಲಿ ನಡೆಯುವ ಬದಲಾವಣೆಗಳು ರಕ್ತವನ್ನು ಹೆಪ್ಪುಗಟ್ಟಿಸಿ, ಹೃದಯಾಘಾತವನ್ನು ತಂದೊಡ್ಡುತ್ತವೆ.ರೋಗಿಯ ಕುಟುಂಬದ ಬಡತನದ ಹಿನ್ನೆಲೆಯಲ್ಲಿ ಆದಷ್ಟೂ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸುವ ಏರ್ಪಾಟನ್ನು ನಮ್ಮ ವಿಭಾಗದ ಹಿರಿಯ ತಜ್ಞ ವೈದ್ಯರು ಮಾಡಿದರು.ರೋಗಿಯನ್ನು ಸಿ.ಸಿ.ಯು.ಗೆ ಸೇರಿಸಿಕೊಂಡು, ಈ ರೋಗವನ್ನು ದೃಢೀಕರಿಸುವ ಕೆಲವು ಪ್ರಾರಂಭೀಕ ಪರೀಕ್ಷೆಗಳಾದ ಎಕೋಕಾರ್ಡಿಯೋಗ್ರಾಮ್, ಕಾರ್ಡಿಯಾಕ್ ಎನ್‌ಜೈಮ್ಸನ್ನು ಮಾಡಿ, ನಂತರ ಎಂಜಿಯೋಗ್ರಾಮ್ ಮಾಡಿದೆವು. ಆ್ಯಂಜಿಯೋಗ್ರಾಮ್‌ನಲ್ಲಿ ಹೃದಯದ ಅತೀ ಮುಖ್ಯ ರಕ್ತನಾಳವಾದ `ಎಲ್‌ಎಡಿ~ಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಆದರೆ ರಕ್ತನಾಳವೇನೂ ಪೂರ್ತಿಯಾಗಿ ಮುಚ್ಚಿರಲಿಲ್ಲ. ಹೆಪ್ಪುಗಟ್ಟಿದ ರಕ್ತವು ಮಾಮೂಲಿನ ಸ್ಥಿತಿಗೆ ಬಂದು ಸರಾಗವಾಗಿ ರಕ್ತ ಹರಿಯುವಂತೆ ಮಾಡಲು ದುಬಾರಿಯಾದ ಇಂಜಕ್ಷನ್ Integrillin ಎಂಬ ಔಷಧಿಯನ್ನು ನಮ್ಮ ವಿಭಾಗದ ಸಂಗ್ರಹದಿಂದ ಕೊಟ್ಟೆವು.ಮೂರ್ನಾಲ್ಕು ದಿವಸಗಳ ಚೇತರಿಕೆಯ ನಂತರ ಮತ್ತೆ ರಕ್ತ ಸಂಚಾರ ಹೇಗಿದೆಯೆಂದು ನೋಡಲು ಎಂಜಿಯೋಗ್ರಾಮ್ ಮಾಡಿದಾಗ, ಹೃದಯದ ರಕ್ತನಾಳದಲ್ಲಿ ರಕ್ತ ಮಾಮೂಲಿನಂತೆ ಹರಿಯುತ್ತಿತ್ತು.ನಾವು ಚಿಕಿತ್ಸೆ ನೀಡಿದ ಬಾಲಕಿಗೆ ತನಗಾಗಿರುವ ಹೃದಯಾಘಾತದ ತೀವ್ರತೆ ತಿಳಿದುಕೊಳ್ಳುವಷ್ಟು ಪ್ರಬುದ್ಧತೆ ಬಂದಿರಲಿಲ್ಲ. ತನ್ನ ತರಗತಿಯ `ಅಂತಿಮ ಪರೀಕ್ಷೆ~ ವೇಳೆಗೆ ನಾನು ಗುಣವಾಗುತ್ತೇನೋ ಇಲ್ಲವೋ ಎನ್ನುವ ಆತಂಕ ಅವಳದು.ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಆ ಬಾಲಕಿ ಅನೇಕ ಕುತೂಹಲದ ಪ್ರಶ್ನೆಗಳನ್ನು ಕೇಳುತ್ತಾ, `ತನಗೇನೂ ಆಗಿಲ್ಲವಲ್ಲವೇ~ ಎಂದು ಕೇಳುತ್ತಿದ್ದಳು. ಆಕೆ ಯಾವತ್ತೂ ಭರವಸೆ ಮತ್ತು ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಆಕೆಯ ಮುಖದಿಂದ ಮುಗುಳ್ನಗೆ ಮಾಸಿರಲಿಲ್ಲ.ನಮ್ಮಂದಿಗೆ ಹುಡುಗಾಟಿಕೆ ಮಾಡಿಕೊಂಡಿದ್ದ ಹುಡುಗಿ ಪೂರ್ತಿ ಚೇತರಿಸಿಕೊಂಡು ಮನೆಗೆ ಹೊರಟಾಗ, ಅವಳ ಕಣ್ಣಿನಲ್ಲಿ ಜೀವನೋತ್ಸಾಹ ಕಾಣಿಸುತ್ತಿತ್ತು.ಆ ಬಾಲಕಿಯನ್ನು ನೋಡಿದಾಗ, ವಿಧಿ ಒಡ್ಡುವ ಸಮಸ್ಯೆಗಳಿಗೆ ಜೀವನದ ಬಗೆಗೆ ಒಲವು, ಆತ್ಮವಿಶ್ವಾಸ ಮತ್ತು ನಗುವೇ ನಮ್ಮ ಉತ್ತರವಾಗಿರಬೇಕು ಅನ್ನಿಸಿತು.

ಲೇಖಕರು ಬೆಂಗಳೂರಿನ ಎಂ.ಎಸ್. ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ವೈದ್ಯರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.