ಭಾನುವಾರ, ಏಪ್ರಿಲ್ 18, 2021
33 °C

ಮುಕ್ತ ಜಗತ್ತಿಗೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಕ್ತ ಜಗತ್ತಿಗೆ ಸ್ವಾಗತ

ಅವರು ಹಿಂದೆ ಯಾವುದೋ ಒಂದು ತಂತ್ರಾಂಶವನ್ನು ಉಪಯೋಗಿಸಿಕೊಂಡು ಒಂದು ಲೇಖನ ಬರೆದಿದ್ದರು. ಅವರು ಆ ತಂತ್ರಾಂಶವನ್ನು ಉಪಯೋಗಿಸಲಿಕ್ಕೆ ಕಾರಣ- ಅದು ಬಳಸಲು ತುಂಬಾ ಸುಲಭವಾಗಿದ್ದು, ಚೆನ್ನಾಗಿರುವುದು. ಹಾಗೇ ಕಾಲ ಉರುಳಿತು. ಆ ತಂತ್ರಾಂಶ ತಯಾರಕರಿಗೆ ಏನೋ ತೊಂದರೆಯಾಗಿ ಅದನ್ನು ನಿಲ್ಲಿಸಿಬಿಟ್ಟರು. ಲೇಖಕರು ಅದನ್ನು ಗಮನಿಸಿರಲಿಲ್ಲ. ಒಂದು ದಿನ ಅವರು ಬಹಳ ಹಿಂದೆ ಬರೆದಿದ್ದನ್ನು ಓದಬೇಕು ಎನ್ನಿಸಿ, ತಮ್ಮ ಬಳಿ ಇದ್ದ ಲೇಖನದ .XYZ ಅಂತ ಎಂಬ ಫೈಲ್ ತೆರೆಯಲೆತ್ನಿಸಿದರು. ಅದನ್ನು ಆ ತಂತ್ರಾಂಶ ಯಾವ ರೀತಿಯಲ್ಲಿ save ಮಾಡಿದೆ ಎಂದು ಯಾರಿಗೂ ಗೊತ್ತೇ ಆಗಲಿಲ್ಲ. ಆ ಕಂಪನಿಯವರನ್ನು ಕೇಳೋಣವೆಂದುಕೊಂಡರೆ, ತಂತ್ರಾಂಶವನ್ನೇ ನಿಲ್ಲಿಸಿ ಆಗಿರುವುದರಿಂದ ಅದರಿಂದ ಏನೂ ಪ್ರಯೋಜನವಿಲ್ಲ. ಬರೆದಿದ್ದು ತಮ್ಮ ಬಳಿಯೇ ಇದ್ದರೂ ಓದಲಾಗದ ಕಷ್ಟ.

ಒಂದಷ್ಟು ಕಂಪನಿಗಳು ಇಂತಹ ಫೈಲ್‌ಗಳನ್ನು ಓದುವಂತೆ ಮಾಡಿಕೊಡುವುದನ್ನೇ ಹಣ ಮಾಡುವ ಉದ್ಯೋಗ ಮಾಡಿಕೊಂಡಿವೆ.ಕನ್ನಡ ಮಾತ್ರವೇ ಗೊತ್ತಿದ್ದವರು ಕಂಪ್ಯೂಟರ್ ಬಳಸುವುದು ಇವತ್ತಿಗೂ ಕಷ್ಟ! ನಾವು ಬಳಸುವ ತಂತ್ರಾಂಶಗಳು ಕನ್ನಡದಲ್ಲೇ ಇದ್ದರೆ ಎಷ್ಟು ಚೆನ್ನ ಎಂದು ಅನ್ನಿಸದೇ ಇರುವುದಿಲ್ಲ. ಆದರೇನು ಮಾಡುವುದು? ನಾವು ಬಳಸುತ್ತಿರುವ ತಂತ್ರಾಂಶ ತಯಾರಿಸುವ ಕಂಪನಿಗೆ ಹೇಳಿದ್ದೇವೆ, ನಮ್ಮ ಭಾಷೆಗೂ ಮಾಡಿಕೊಡಿ ಎಂದು. ಅವರು ಯಾವಾಗ ಮಾಡಿ ಕೊಡುತ್ತಾರೋ ಗೊತ್ತಿಲ್ಲ! ನಮಗೆ ತಂತ್ರಾಂಶಗಳನ್ನು ಹೇಗೆ ಮಾಡೋದು ಹೇಗೆಂಬುದು ಗೊತ್ತಿಲ್ಲ.ನನಗೆ ತಂತ್ರಾಂಶಗಳನ್ನು ತಯಾರಿಸುವುದರಲ್ಲಿ ಆಸಕ್ತಿ. ಆದರೆ ನಾನು ಬಳಸುವ ಒಂದು ತಂತ್ರಾಂಶದಲ್ಲಿ ಅದು ಕೆಲಸ ಮಾಡುವ ರೀತಿ ನನಗೆ ಇಷ್ಟ ಆಗುತ್ತಿಲ್ಲ. ಅದನ್ನು ಬದಲಾಯಿಸಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆ ತಂತ್ರಾಂಶವನ್ನು ಪೂರ್ಣ ಹೊಸದಾಗಿ ಮಾಡೋಣ ಅಂದರೆ ಸಮಯದ ಅಭಾವ ಮತ್ತು ಎಲ್ಲಾ ವಿಷಯಗಳು ಗೊತ್ತಿಲ್ಲ.ಕಾಲೇಜಲ್ಲಿ ಅದ್ಯಾವುದೋ ಒಂದು ತಂತ್ರಾಂಶ ಉಪಯೋಗಿಸುತ್ತಿದ್ದಾರೆ. ನಾವು ಅದನ್ನೇ ಉಪಯೋಗಿಸಬೇಕಂತೆ. ಆದರೆ ನನ್ನ ಮನೆಯ ಕಂಪ್ಯೂಟರ್‌ನಲ್ಲಿ ಅದನ್ನು ಹಾಕಿಕೊಳ್ಳೋಣ ಎಂದರೆ ಅದು ಎಲ್ಲಾರಿಗೂ ಸಿಗೋಲ್ಲವಂತೆ. ಕಾಲೇಜಿನಲ್ಲಿ ಅದನ್ನು ಬಳಸಲು ಅನುಮತಿ ಪಡೆದಿದ್ದಾರಂತೆ. ಮನೆಯಲ್ಲೂ ಹಾಕಿಕೊಂಡಿದ್ದರೆ, ಅಭ್ಯಾಸ ಮಾಡಲು ಅನುಕೂಲ ಆಗುತ್ತಿತ್ತು.ನಮ್ಮ ಆಫೀಸಲ್ಲಿ ಒಂದು ತಂತ್ರಾಂಶ ಬಳಸುತ್ತಿದ್ದೇವೆ. ಅದರಲ್ಲಿ ಕೆಲವು ತೊಂದರೆಗಳಿವೆ. ಅದರ ಬದಲಿಗೆ ಇನ್ನೊಂದನ್ನು ಬಳಸಬಹುದಾ ಎಂದು ಕೇಳಿದೆ. ಇಲ್ಲ, ಈ ತಂತ್ರಾಂಶದ ಬೆಲೆ ಎಷ್ಟು ಗೊತ್ತಾ ನಿಂಗೆ? ಅಂತ ಕೇಳಿ ಅದರ ಉತ್ತರ ಕೇಳಿದ ಮೇಲೆ ಬೇರೆ ವಿಧಿ ಇಲ್ಲದೇ ಅದೇ ತಂತ್ರಾಂಶ ಬಳಸುತ್ತಿದ್ದೇವೆ.ಫೋಟೋಗಳನ್ನು ಬದಲಾಯಿಸಿ ಸುಂದರ ಕಲಾಕೃತಿಗಳನ್ನು ಮಾಡುವುದು ಅವನಿಗೆ ಬಹಳ ಖುಷಿ. ಅದಕ್ಕೆಂದೇ ಇದ್ದ ತಂತ್ರಾಂಶವನ್ನು ಒಂದಷ್ಟು ಬೆಲೆಗೆ ಕೊಂಡಿದ್ದಾಯ್ತು. ಒಂದು ದಿನ ಸ್ನೇಹಿತನೊಬ್ಬ ತನಗೂ ಆ ತಂತ್ರಾಂಶ ಬೇಕೆಂದು ಕೇಳಿದ. ತಂತ್ರಾಂಶ ತಯಾರಿಸಿದ ಕಂಪನಿ ಒಬ್ಬರು ಬಳಸಲಿಕ್ಕೆ ಮಾತ್ರ ಅನುಮತಿ ಕೊಟ್ಟಿದೆ. ಹಾಗಂತ ಅವನ ಸ್ನೇಹಿತನಿಗೂ ಬಳಸಲು ಕೊಡಲಾಗುವುದಿಲ್ಲ ಎಂದಲ್ಲ. ಕೊಟ್ಟರೆ ಕಾನೂನು ರೀತಿಯಲ್ಲಿ ಅಪರಾಧ! ಮುಕ್ತ ತಂತ್ರಾಂಶಗಳು ಎಂದೊಡನೆ ಅದು ಉಚಿತ ಹಾಗಾಗಿ ಉಪಯೋಗಿಸಬಹುದು ಎಂದು ಮಾತ್ರ ಕೇಳಿರುತ್ತೇವೆ. ಉಚಿತ ಮಾತ್ರವಲ್ಲದೆ, ಮುಕ್ತ ತಂತ್ರಜ್ಞಾನದಿಂದ ಬಹಳಷ್ಟು ಅನುಕೂಲಗಳಿವೆ. ಮೇಲೆ ತಿಳಿಸಿದ ಅಷ್ಟೂ ತೊಂದರೆಗಳಿಗೆ ಮುಕ್ತ ತಂತ್ರಜ್ಞಾನ ಉತ್ತರ ಕೊಡಬಲ್ಲದು.

ಏನಿದು ಮುಕ್ತ ತಂತ್ರಾಂಶ?ಯಾವುದೇ ಒಂದು ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ, ಅದರಲ್ಲಿ ನಮ್ಮ ಕೆಲಸಗಳನ್ನು save ಮಾಡಿದಾಗ ಅದು ಯಾವ ವಿಧದಲ್ಲಿ ಇಟ್ಟಿರುತ್ತೆ. ಹೀಗೇ ಅದರ ಪ್ರತಿಯೊಂದು ವಿಷಯವನ್ನೂ ಯಾರು ಬೇಕಾದರೂ ತಿಳಿದುಕೊಳ್ಳಬಹುದು. ಅದು ಕೆಲಸ ಮಾಡುವ ವಿಧಾನ ಸರಿಯಿಲ್ಲ ಎನ್ನಿಸಿದರೆ, ನಮಗೆ ಬೇಕಾದಂತೆ ಬದಲಾಯಿಸಬಹುದು. ನಾವು ತಯಾರಿಸುತ್ತಿರುವ ತಂತ್ರಾಂಶಕ್ಕೆ ಬೇಕಾದ ಒಂದು ಭಾಗ ಈಗಾಗಲೇ ಇದೆ ಎಂದುಕೊಳ್ಳಿ, ನಾವು ಅದನ್ನು ಬಳಸಿಕೊಂಡು ನಮ್ಮ ಕೆಲಸ ಮುಂದುವರೆಸಬಹುದು.ನಾವೀಗ ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಸುಲಭವಾಗಿ ಓದುತ್ತಿದ್ದೇವೆ. ಆ ಕನ್ನಡ ಅಕ್ಷರಗಳು ನಮಗೆ ಕಾಣುವಂತೆ ಮಾಡಲು ಫಾಂಟ್ ಬೇಕು. ಫಾಂಟ್‌ನ ಜೊತೆಗೆ ಕೆಲವು ತಂತ್ರಾಂಶಗಳೂ ಅಗತ್ಯ. ಕಂಪ್ಯೂಟರ್‌ನಲ್ಲಿ ಒಂದು ಅಕ್ಷರ ತೋರಿಸಬೇಕಾದರೆ ಎಷ್ಟು ಕೆಲಸವಾಗಬೇಕು ಎಂಬುದನ್ನು ಈಗ ಅರ್ಥ ಮಾಡಿಕೊಳ್ಳೋಣ.ಫಾಂಟ್ ಲೋಕ

ಫಾಂಟ್ ಎಂದರೆ ಬೇರೆ ಬೇರೆ ಚಿತ್ರಗಳ ಒಂದು ಗುಂಪು. ಯಾವಾಗ ಯಾವ ಚಿತ್ರಗಳನ್ನು(Glyph) ತೋರಿಸಬೇಕು, ಯಾವುದನ್ನ ಜೋಡಿಸಬೇಕು ಎಂಬ ನಿಯಮಗಳನ್ನು ಫಾಂಟ್‌ನಲ್ಲೇ ಬರೆದಿರುತ್ತಾರೆ. ಕನ್ನಡಕ್ಕೆ ಬೇಕಾದ ಚಿತ್ರಗಳನ್ನೆಲ್ಲಾ ಮೊದಲಿಗೇ ಬರೆದಿಟ್ಟರೆ ಕಾಗುಣಿತ ಒತ್ತಕ್ಷರ ಇತ್ಯಾದಿಯನ್ನೂ ಬರೆಯಬೇಕಾಗುತ್ತೆ. ಬದಲಾಯಿಸುವುದೂ ಬಹಳಷ್ಟು ತೊಂದರೆ.ಬಹಳಷ್ಟು ಪ್ರಯೋಗಗಳನ್ನು ಮಾಡಿದ ನಂತರ ಆದಷ್ಟು ಕಡಿಮೆ ಚಿತ್ರಗಳನ್ನು ಬರೆದು ಯಾವುದೇ ಅಕ್ಷರ ಮಾಡುವ ಬಗೆಯನ್ನು ಕಂಡುಹಿಡಿದರು. ಉದಾಹರಣೆಗೆ, ‘ಕ’ ಎಂದು ಒಂದು ಚಿತ್ರ ಮತ್ತು ‘ಕು’ ಬರೆದಾಗ ಬರುವ ಕೊಂಬಿನ ಚಿತ್ರವನ್ನು ಬೇರೆ ಬೇರೆಯಾಗಿ ಮಾಡಿದರು. ನೀವು ಅಂದುಕೊಳ್ಳುತ್ತಿರಬಹುದು ಒಂದು ಬರೆಯೋ ಜಾಗದಲ್ಲಿ ಎರಡು ಚಿತ್ರವಾಯಿತು ಎಂದು. ಆದರೆ ಗಮನಿಸಿ, ಕೊಂಬು ಬರೆದಿದ್ದನ್ನು ಗು, ಚು, ರು ಹೀಗೆ ಯಾವುದೇ ಅಕ್ಷರಕ್ಕೆ ಕೊಂಬು ಬೇಕಿದ್ದಲ್ಲಿ ಉಪಯೋಗಿಸಬಹುದು.ಕಂಪ್ಯೂಟರ್ ಅರ್ಥ ಮಾಡಿಕೊಳ್ಳಲು ಒಂದೊಂದು ಅಕ್ಷರಕ್ಕೂ ಒಂದೊಂದು ಸಂಖ್ಯೆ ಕೊಡಬೇಕಾಗುತ್ತದೆ. ಹೀಗೆ ಸಂಖ್ಯೆ ಕೊಡಲು ಬಹಳಷ್ಟು ವಿಧಾನಗಳಿವೆ. ಆ ವಿಧಾನಗಳಲ್ಲಿ ASCII (American Standard Code for Information Interchange) ಕೂಡ ಒಂದು. ASCII character encodingನ ವಿಧಾನದಲ್ಲಿ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ಇರುವ ಅಕ್ಷರಗಳಿಗೆ ಸಂಖ್ಯೆ ಕೊಡುವುದು ಸಾಧ್ಯವಿಲ್ಲವಾದ್ದರಿಂದ ಯುನಿಕೋಡ್ ವಿಧಾನ ಪ್ರಾರಂಭಿಸಿದರು.

 

ಪ್ರಪಂಚದ ಎಲ್ಲಾ ಭಾಷೆಗಳೂ ಸೇರಿ ಯುನಿಕೋಡ್ ಆಗಿದ್ದು, 107,000 ಕ್ಕೂ ಹೆಚ್ಚು ಅಕ್ಷರ/ಆಕರಗಳಿಗೆ ಸಪೋರ್ಟ್ ಇದೆ. ಕನ್ನಡದ ಬಹಳಷ್ಟು ಫಾಂಟ್‌ಗಳು ASCII character encodingನಲ್ಲಿ ಇವೆ. ಈ ದಿನಗಳಲ್ಲಿ ASCII ವಿಧಾನ ಉಪಯೋಗಿಸಬೇಕು ಅಂದರೆ ಅದಕ್ಕೆ ಬೇಕಾದ ತಂತ್ರಾಂಶಗಳನ್ನು ನಾವೇ ಬರೆದುಕೊಳ್ಳಬೇಕು. ಗೂಗಲ್ ಅಥವಾ ಇನ್ಯಾವುದೇ ಸರ್ಚ್ ಇಂಜಿನ್‌ನಲ್ಲಿ ಹುಡುಕಲು ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ಯುನಿಕೋಡ್ ಶಿಷ್ಟತೆಯನ್ನೇ ಬಳಸುತ್ತಾರೆ.ಕನ್ನಡಿಗರಲ್ಲಿ ಅನೇಕ ಕಲಾವಿದರಿದ್ದರೂ ಗುಣಮಟ್ಟದ ಫಾಂಟ್‌ಗಳು ಯಾಕಿಲ್ಲ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ- ಎಲ್ಲ ತಂತ್ರಜ್ಞರೂ ಕಲಾವಿದರಲ್ಲದೆ ಇರುವುದು ಹಾಗೂ ಕಲಾವಿದರಿಗೆ ಫಾಂಟ್ ತಯಾರಿಕೆಯ ಮಾಹಿತಿ ದೊರೆಯದೇ ಇರುವುದು. ಫಾಂಟ್ ತಯಾರಿಕೆಯ ಬಗ್ಗೆ ಮುಕ್ತವಾಗಿ ಮಾಡಿದರೆ ಏನು ಉಪಯೋಗ? ಅಷ್ಟೆಲ್ಲಾ ಚಿತ್ರಗಳನ್ನು ಬರೆಯುವಾಗ ನಮ್ಮ ಎಷ್ಟು ಸಮಯ ಖರ್ಚು ಮಾಡಿದ್ದೇವೆ? ಎಂದು ಅನ್ನಿಸದೇ ಇರದು.ಆದರೆ ಮುಕ್ತವಾಗಿ ಮಾಡಿದರೆ ಆ ತರಹದ್ದೇ ಕೆಲಸ ಮಾಡುವ ಮನಸಿದ್ದವರು ನಮ್ಮನ್ನು ಸೇರಿಕೊಳ್ಳುತ್ತಾರೆ, ಜನ ಹೆಚ್ಚಾಗಿ ಪಾಲ್ಗೊಂಡರೆ ಬಹಳ ಬೇಗ ಕೆಲಸ ಮುಗಿಯುತ್ತೆ ಹಾಗೂ ಎಲ್ಲರಿಗೂ ಉಪಯೋಗ ಆಗುತ್ತೆ. ಏನಾದರೂ ತೊಂದರೆ ಬಂತು ಅಂದುಕೊಳ್ಳಿ, ಅದನ್ನು ತಯಾರಿಸಿದವರೇ ಸರಿಪಡಿಸಲಿ ಎಂದು ಕಾದು ಕುಳಿತುಕೊಳ್ಳುವುದು ಬೇಕಿಲ್ಲ. ಯಾರು ಬೇಕಿದ್ದರೂ ಸರಿಪಡಿಸಿ ಮತ್ತೆ ಎಲ್ಲರಿಗೂ ಹಂಚಬಹುದು.ಮುಖ್ಯವಾಗಿ ಕನ್ನಡಕ್ಕೆ ಮೂರು ಯುನಿಕೋಡ್ ಫಾಂಟ್‌ಗಳಿವೆ. ಕೇದಗೆ, ಮಲ್ಲಿಗೆ ಮತ್ತು ಲೋಹಿತ್ ಕನ್ನಡ. ಇವು ಮೂರೂ ಫಾಂಟ್‌ಗಳು ಮುಕ್ತವಾಗಿದ್ದು, ಯಾರು ಬೇಕಿದ್ದರೂ ಉಪಯೋಗಿಸಬಹುದು ಮತ್ತು ಬದಲಾಯಿಸಬಹುದು. ಈ ಫಾಂಟ್‌ಗಳನ್ನು ಮಾಡಲು ಬಳಸಿದ ಚಿತ್ರಗಳನ್ನೇ ಬದಲಾಯಿಸಿ ಇನ್ನೂ ಚೆನ್ನಾಗಿ ಅಕ್ಷರಗಳು ಕಾಣುವಂತೆ ಮಾಡಬಹುದು. ಕನ್ನಡಕ್ಕೆ ಇನ್ನೂ ಹೆಚ್ಚಿನ ಫಾಂಟ್‌ಗಳು ಬೇಕು.ಹೆಚ್ಚುಹೆಚ್ಚು ಕಲಾವಿದರು ಫಾಂಟ್ ತಯಾರಿಕೆಯಲ್ಲಿ ಪಾಲ್ಗೊಳ್ಳಬೇಕು. ಕೈಬರಹದ ಫಾಂಟ್‌ಗಳಿಗೆ ಬೇಡಿಕೆ ಇದ್ದೇ ಇದೆ, ನಮಗೆ ಇಷ್ಟವಾದವರ ನೆನಪಿಗೋಸ್ಕರವೇ ಅವರ ಕೈ ಬರಹದ ಫಾಂಟ್‌ಗಳನ್ನು ಮಾಡಬಹುದು. ಆ ಫಾಂಟ್‌ಗಳನ್ನು ಉಪಯೋಗಿಸಿ ಬರೆದರೆ, ಅವರು ಬರೆದಂತೆಯೇ ಕಾಣುತ್ತದೆ ಹಾಗೂ ಅವರ ನೆನಪು ಸದಾ ಉಳಿಯುತ್ತದೆ.ಬರೆಯುವುದು ಹೀಗೆ...

ಕಂಪ್ಯೂಟರ್‌ನಲ್ಲಿ ಕನ್ನಡ ಓದಲು ಇರುವ ತಂತ್ರಾಂಶಗಳ ಬಗ್ಗೆ ನೋಡಿದ್ದಾಯ್ತು. ಬರೆಯುವುದು ಹೇಗೆ ಎಂದು ನೋಡೋಣ. ಕೀಬೋರ್ಡ್ ಮೂಲಕ ಕಳುಹಿಸಿದ ಸೂಚನೆಗಳನ್ನು ಕಂಪ್ಯೂಟರ್‌ಗೆ ಅರ್ಥವಾಗುವ ಭಾಷೆಯ ಸಂಕೇತವಾಗಿ ಬದಲಾಯಿಸುವುದು ತಂತ್ರಾಂಶದ ಕೆಲಸ. ಆ ತಂತ್ರಾಂಶ ಮಧ್ಯವರ್ತಿ ತರಹ ವರ್ತಿಸುತ್ತದೆ. ಕಂಪ್ಯೂಟರ್‌ಗೆ ಅರ್ಥವಾಗುವುದು ಒಂದೇ ಭಾಷೆ, ಆದರೆ ಆ ಭಾಷೆ ಎಲ್ಲರಿಗೂ ಬರುವುದಿಲ್ಲವಾದ್ದರಿಂದ ನಮ್ಮ ಭಾಷೆಯನ್ನು ಅದಕ್ಕೆ ಅರ್ಥವಾಗುವಂತೆ ಮಾಡುವ ತಂತ್ರಾಂಶಗಳಿಗೆ Input Method Engine (IME) ಎನ್ನುತ್ತಾರೆ. ಈ ತಂತ್ರಾಂಶಗಳನ್ನೇ ನಮ್ಮ ಭಾಷೆಗೆ ತಕ್ಕನಾಗಿ ಬದಲಾಯಿಸಬೇಕೆಂದರೆ ಆ ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿಯಬೇಕು.ಎಲ್ಲರಿಗೂ ಇದು ಸಾಧ್ಯವಿಲ್ಲವಾದ್ದರಿಂದ, ಆ ತಂತ್ರಾಂಶ ಬರೆದವರು ಪ್ರತಿ ಭಾಷೆಯ ಸೂಚನೆಗಳನ್ನೇ ಪ್ರತ್ಯೇಕವಾಗಿ ಬರೆದರು. ಹೀಗೆ ಮಾಡಿದ್ದರಿಂದ ನಮ್ಮ ಭಾಷೆ ಬದಲಾಯಿಸಬೇಕೆಂದರೆ ಇಡೀ ತಂತ್ರಾಂಶವನ್ನು ಬದಲಿಸುವ ಅಗತ್ಯ ಮಾಯವಾಯಿತು.ಬರೀ ನಮ್ಮ ಭಾಷೆಯ ಸೂಚನೆ ಫೈಲ್ ಅನ್ನು ಮಾಡಿ ಈ ತಂತ್ರಾಂಶದ ಫೋಲ್ಡರ್ ಒಳಗೆ ಹಾಕಿದರಾಯಿತು.ಮುಂದಿನ ಬಾರಿ ಈ ತಂತ್ರಾಂಶವನ್ನು ಚಾಲೂ ಮಾಡಿದಾಗ ಹೊಸದಾಗಿ ಹಾಕಿದ ನಮ್ಮ ಸೂಚನೆಗಳನ್ನು ಓದಿಕೊಂಡು ನಮ್ಮ ಭಾಷೆಯಲ್ಲೇ ನಮಗೆ ಬರೆಯಲು ಕೊಡುತ್ತದೆ. ಬೇರೆ ಬೇರೆ ತರಹದ ಬಳಕೆಗೆ ಬೇರೆ ಬೇರೆ ಸೂಚನೆ ಫೈಲ್‌ಗಳನ್ನು ಮಾಡಬಹುದು. ಕನ್ನಡವನ್ನು ಇಂಗ್ಲಿಷ್‌ನಲ್ಲಿ ಬರೆದರೆ ಯಾವ ರೀತಿ ಬರೆಯುತ್ತೇವೆಯೋ ಹಾಗೆ ಬರೆಯಲು itrans (Indian Languags Transliteration) ಎಂಬ input method ಇದೆ. ಉದಾಹರಣೆಗೆ, ಅದನ್ನು ಉಪಯೋಗಿಸಿಕೊಂಡು ‘namma’ ಎಂದು ಬರೆದರೆ ‘ನಮ್ಮ’ ಎಂದಾಗುತ್ತದೆ. ಈ ವಿಧಾನ ಹೊಸದಾಗಿ ಬರೆಯಲು ಅಭ್ಯಾಸ ಮಾಡಿಕೊಂಡವರಿಗೆ ಸುಲಭ. ಆದರೆ ದಿನಕ್ಕೆ ಪುಟಗಟ್ಟಲೆ ಬರೆಯುವವರಿಗೆ ಇದು ತುಂಬಾ ಕಷ್ಟ.ಅದಕ್ಕಾಗಿಯೇ KP Rao Layout ಇದೆ. ಇದನ್ನು ನುಡಿ Layout ಅಂತಲೂ ಕರೆಯುತ್ತಾರೆ. ಅದರ ಪ್ರಕಾರ ಕಡಿಮೆ type ಮಾಡಿದರೆ ಸಾಕು. ಅದೇ ಉದಾಹರಣೆ ನೋಡುವುದಾದರೆ ‘ನಮ್ಮ’ ಎಂದು ಬರೆಯಲು ‘nmfm’ ಎಂದು ಬರೆದರೆ ಸಾಕು (ಎರಡು ಅಕ್ಷರ ಕೂಡಿಸಬೇಕಿದ್ದರೆ ‘f’ ಬರೆದರಾಯಿತು). ಒಂದು ಸಣ್ಣ ಪದದಲ್ಲೇ ಒಂದು ಸಲ type ಮಾಡುವುದು ಕಡಿಮೆಯಾಯಿತು. ಇನ್ನು ಪುಟಗಟ್ಟಲೆ ಬರೆಯುವಾಗ ಎಷ್ಟು ಉಳಿಸಬಹುದು ನೀವೇ ಯೋಚಿಸಿ. ನಿಮಗೆ ಇದಕ್ಕಿಂತ ಅನುಕೂಲವಾಗಿರುವ ವಿಧಾನ ಸಿಕ್ಕಿತು ಅಂದುಕೊಳ್ಳಿ, ಅದಕ್ಕೂ ಇಂತಹದ್ದೇ ಒಂದು ಸೂಚನೆ ಫೈಲ್ ಅನ್ನು ಮಾಡಿ ಹಾಕಿದರಾಯಿತು. ಇದೆಲ್ಲವೂ ಸಾಧ್ಯವಾಗಿದ್ದು ಮೂಲ ತಂತ್ರಾಂಶವನ್ನು ಮುಕ್ತವಾಗಿರಿಸಿದ್ದರಿಂದ.ಅನುವಾದದ ಅನುಕೂಲ

ಮುಕ್ತ ತಂತ್ರಾಂಶಗಳ ಇನ್ನೊಂದು ಅನುಕೂಲವೆಂದರೆ ಅನುವಾದ. ಯಾವುದೇ ತಂತ್ರಾಂಶವಾಗಲಿ, ಬೇರೆ ಭಾಷೆಯಲ್ಲಿ ಈಗಾಗಲೇ ಇದ್ದರೆ ಅದನ್ನು ನಮ್ಮ ಭಾಷೆಗೆ ಅನುವಾದಿಸಬಹುದು. ಈ ಹಿಂದೆ ನೋಡಿದಂತೆ ಸೂಚನೆ ಫೈಲ್‌ನ ವಿಧಾನ ಇಲ್ಲೂ ಉಪಯೋಗಕ್ಕೆ ಬರುತ್ತೆ. ಇಂಗ್ಲಿಷ್‌ಗೆಂದೇ ಇರುವ ಸೂಚನೆ ಫೈಲ್ ಅನ್ನು ಬದಲಾಯಿಸಿ ಕನ್ನಡದ ಸೂಚನೆ ಫೈಲ್ ಹಾಕಿದರೆ, ಆ ತಂತ್ರಾಂಶಗಳ Menu ಎಲ್ಲಾ ಕನ್ನಡದಲ್ಲೇ ಕಾಣುತ್ತದೆ. ಮುಕ್ತ ತಂತ್ರಾಂಶವಾದ್ದರಿಂದ ಯಾರು ಬೇಕಿದ್ದರೂ ಪಾಲ್ಗೊಳ್ಳಬಹುದು. ಉದಾಹರಣೆಗೆ ನಾನು ಮೊಜಿಲ್ಲಾ ಫೈರ್ ಫಾಕ್ಸ್ ಬಳಸುತ್ತಿದ್ದೇನೆ, ಅದರ Menuಗಳೆಲ್ಲ ಕನ್ನಡದಲ್ಲೇ ಕಂಡಿದ್ದರೆ ಚೆನ್ನ ಎಂದು ನನಗೆ ಅನ್ನಿಸಿದರೆ ಆ ತಂತ್ರಾಂಶದ ಅನುವಾದ ಮಾಡುವ ಬಳಗಕ್ಕೆ ಸೇರಿದರಾಯಿತು.ಲೇಖನಗಳನ್ನು ಬರೆಯಲು, ಲೆಕ್ಕ ಮಾಡಲು ಇತ್ಯಾದಿ ಕೆಲಸಕ್ಕಾಗಿ ಒಂದು ಮುಕ್ತ ತಂತ್ರಾಂಶವಿದೆ. ಅದರ ಹೆಸರು ‘ಲಿಬ್ರೆ ಆಫೀಸ್’. ಇದರಲ್ಲಿ ಈಗಾಗಲೇ ಇರುವ ವಿಶೇಷತೆಯಲ್ಲದೆ ಇನ್ನೂ ಹೆಚ್ಚಿನ ಶಕ್ತಿ ಕೊಡಬಹುದು. ಅಂದರೆ ಆ ತಂತ್ರಾಂಶವು ಹೆಚ್ಚಿನ ಕೆಲಸ ಮಾಡುವಂತೆ ಬರೆದು ಅದಕ್ಕೆ ಹಾಕಬಹುದು. ಈ ವಿಧಾನವನ್ನು Extensions ಅಥವಾ Plugins ಎನ್ನುತ್ತಾರೆ. ಉದಾಹರಣೆಗೆ, ಲಿಬ್ರೆ ಆಫೀಸ್‌ನಲ್ಲಿ ಕನ್ನಡದ ವ್ಯಾಕರಣ ದೋಷ ಪತ್ತೆ ಮಾಡುವ ಸೌಲಭ್ಯ ಇಲ್ಲದಿರಬಹುದು. ಆ ಸೌಲಭ್ಯವನ್ನು ನಾವು ಬರೆಯಬಹುದು.ಪೂರ್ಣ ತಂತ್ರಾಂಶ ಬರೆಯುವುದು ಬೇಡ, ವ್ಯಾಕರಣ ನೋಡುವ ಭಾಗವೊಂದನ್ನು ಬರೆದರೆ ಸಾಕು. Kannada Grammer Plugin ಎಂದೂ ಕರೆಯಬಹುದು. ಕನ್ನಡದ ಅರ್ಥಕೋಶ/ನಿಘಂಟು ಬಳಸಿಯೇ ಬಹಳಷ್ಟು ಕೆಲಸಗಳನ್ನು ಮಾಡಿಕೊಳ್ಳಬಹುದು. ಲೇಖನ ಬರೆಯುತ್ತಿರುವಾಗಲೇ ತಪ್ಪಾಗಿ ಬರೆದಿದ್ದನ್ನು ಕಂಡು ಹಿಡಿಯಬಹುದು, ವ್ಯಾಕರಣ ದೋಷ ಪತ್ತೆ ಮಾಡಬಹುದು ಮತ್ತು ಬೇರೆ ಭಾಷೆಯಿಂದ ಕನ್ನಡಕ್ಕೆ ಯಾವುದೇ ಲೇಖನಗಳನ್ನು ಬದಲಾಯಿಸಿಕೊಂಡು ಓದಬಹುದು.ಇದೆಲ್ಲವೂ ಸಾಧ್ಯವಾಗುವುದು ಕನ್ನಡ ನಿಘಂಟು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡಿದರೆ ಹಾಗೂ ಲಿಬ್ರೆ ಆಫೀಸ್‌ಗಳಂತಹ ಮುಕ್ತ ತಂತ್ರಾಂಶಗಳಿದ್ದರೆ ಮಾತ್ರ. Extensions ಅಥವಾ Plugins ಎಲ್ಲಾ ತಂತ್ರಾಂಶಗಳಿಗೂ ಮಾಡಲಾಗುವುದಿಲ್ಲ, ಆ ತಂತ್ರಾಂಶ ಬರೆದವರು ಆ ತರಹದ ಅವಕಾಶ ಕಲ್ಪಿಸಿದ್ದರೆ ಮಾತ್ರ ಸಾಧ್ಯ. ಬಹುತೇಕ ಎಲ್ಲ ಮುಕ್ತ ತಂತ್ರಾಂಶಗಳಲ್ಲೂ ಈ ವಿಶೇಷ ಗುಣ ಇದ್ದೇ ಇರುತ್ತದೆ.ದಿನನಿತ್ಯ ಗೊತ್ತಿದ್ದೋ ಗೊತ್ತಿಲ್ಲದೆಯೋ ಮುಕ್ತ ತಂತ್ರಾಂಶಗಳನ್ನು ಬಳಸಿರುತ್ತೇವೆ. ಉದಾಹರಣೆಗೆ- ಫೈರ್ ಫಾಕ್ಸ್, VLC player ಇತ್ಯಾದಿ.

ಕಂಪ್ಯೂಟರ್ ಕೆಲಸ ಮಾಡಲು ಬಹುಮುಖ್ಯವಾಗಿ ಒಂದು ತಂತ್ರಾಂಶ ಬೇಕು. ಅದನ್ನು ಆಪರೇಟಿಂಗ್ ಸಿಸ್ಟಮ್ ಎಂದು ಕರೆಯುತ್ತಾರೆ.ಬಹಳಷ್ಟು ಜನರಿಗೆ ಮುಕ್ತ ಆಪರೇಟಿಂಗ್ ಸಿಸ್ಟಮ್ ಲಭ್ಯವಿದೆ ಎಂದು ತಿಳಿದೇ ಇಲ್ಲ. ಗ್ನು/ಲಿನಕ್ಸ್ ಮುಕ್ತ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಒಂದು. ಮುಕ್ತ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸಿಕೊಂಡು ನಮಗೆ ಬೇಕಾದಂತೆ ಬದಲಾಯಿಸಬಹುದು. ಉದಾಹರಣೆಗೆ, ಕನ್ನಡದ್ದೇ ಒಂದು ಆಪರೇಟಿಂಗ್ ಸಿಸ್ಟಮ್ ಮಾಡಬಹುದು, ಅದರಲ್ಲಿ ಎಲ್ಲ ಸೂಚನೆಗಳೂ ಕನ್ನಡದ್ದೇ ಬರುವಂತೆ ಮಾಡಬಹುದು. ಅಷ್ಟೇ ಅಲ್ಲ, ನಾವು ತಂತ್ರಜ್ಞರಾಗಿದ್ದರೆ ಇನ್ನೂ ಕೆಲವು ತಂತ್ರಾಂಶಗಳನ್ನು ಬರೆದು ಸೇರಿಸಬಹುದು.ನಡೆದ ಯತ್ನಗಳು

ಇಷ್ಟೆಲ್ಲಾ ಸಾಧ್ಯತೆಗಳಿದ್ದರೂ ಪ್ರಯತ್ನವೇನೂ ನಡೆದಿಲ್ಲವೇ? ಖಂಡಿತ ನಡೆದಿದೆ. ಸುಮಾರು ಎರಡು ವರ್ಷಗಳ ಹಿಂದೆ ನಮ್ಮ ತಾಂತ್ರಿಕ ಗೆಳೆಯರ ಬಳಗ ಸೇರಿ ‘ಚಿಗುರು’ ಎಂಬ ಆಪರೇಟಿಂಗ್ ಸಿಸ್ಟಮ್ ಅನ್ನು ಮಾಡಿದ್ದೆವು. ಅದರ ವಿಶೇಷ ಎಂದರೆ ಕನ್ನಡಿಗರಿಗಾಗಿ ಕನ್ನಡಿಗರೇ ತಯಾರಿಸಿದ್ದು. ‘ಡೇಬಿಯನ್’ ಎಂಬ ಒಂದು ಮುಕ್ತ ಆಪರೇಟಿಂಗ್ ಸಿಸ್ಟಮ್ ಇದೆ, ಅದನ್ನು ಉಪಯೋಗಿಸಿ ಕನ್ನಡ ಬಳಸಲು ಇದ್ದ ತೊಂದರೆಗಳನ್ನೆಲ್ಲಾ ಸರಿಪಡಿಸಿ ಮತ್ತೂ ಕೆಲವು ತಂತ್ರಾಂಶಗಳನ್ನು ಸೇರಿಸಿದ್ದೆವು. ಈ ತಂತ್ರಾಂಶ ಚೆನ್ನಾಗಿದ್ದರೂ ಸಮಯದ ಅಭಾವದಿಂದ ಮುಂದುವರೆಸಲಾಗಲಿಲ್ಲ.ಇಷ್ಟೆಲ್ಲಾ ಯೋಜನೆಗಳು ನಡೆಯುತ್ತಿದ್ದರೂ ಕನ್ನಡದ ಸಮಸ್ಯೆಗಳೆಲ್ಲವೂ ಇನ್ನೂ ಬಗೆಹರಿದಿಲ್ಲ. ಕನ್ನಡದ ಫಾಂಟ್‌ಗಳಲ್ಲಿ ಕೆಲವು ತೊಂದರೆಗಳು ಇನ್ನೂ ಉಳಿದಿವೆ, ಕೆಲವು ತೊಂದರೆಗಳನ್ನು ಸರಿಪಡಿಸಲು ಫಾಂಟ್ ಒಳಗೆ ಇರುವ ಚಿತ್ರಗಳನ್ನು ಬದಲಾಯಿಸಬೇಕಾಗುತ್ತದೆ. ಇನ್ನು ಕೆಲವು ತೊಂದರೆಗಳಿಗೆ ಫಾಂಟ್‌ನಲ್ಲಿನ ನಿಯಮಗಳನ್ನು ಬದಲಾಯಿಸಬೇಕಾಗುತ್ತದೆ.ಇಂಗ್ಲಿಷ್‌ನಲ್ಲಿ ನಾವು ಬರೆದಿದ್ದನ್ನು ಓದುವ ಬಹಳಷ್ಟು ತಂತ್ರಾಂಶಗಳಿವೆ, ಅದೇ ರೀತಿ ಕನ್ನಡದಲ್ಲಿ ಬರೆದಿದ್ದನ್ನು ಓದುವಂತೆ ಮಾಡುವುದು ಬಹಳ ಕಷ್ಟ. ಈ ನಿಟ್ಟಿನಲ್ಲಿ ಕೆಲವು ಯೋಜನೆಗಳು ನಡೆಯುತ್ತಿವೆಯಾದರೂ ಪೂರ್ಣಗೊಳ್ಳಲು ಕನ್ನಡ ತಂತ್ರಜ್ಞರ ಸಹಾಯಹಸ್ತ ಬೇಕು.

ಅದೇ ರೀತಿ ಒಂದು ಚಿತ್ರದಲ್ಲಿ ಕನ್ನಡದ ಪದಗಳಿದ್ದರೆ ಗುರುತಿಸಿ ಅರ್ಥ ಮಾಡಿ ಕೊಳ್ಳುವ ತಂತ್ರಾಂಶಗಳ ಕೆಲಸಗಳೂ ನಡೆಯುತ್ತಿವೆ.

 

ಈ ತಂತ್ರಾಂಶವನ್ನು Optical Character Recognition (OCR) ಎಂದು ಕರೆಯುತ್ತಾರೆ. ಈ ತರಹದ ತಂತ್ರಾಂಶಗಳು ಜನಬಳಕೆಗೆ ಸಿದ್ಧವಾದರೆ ಬಹಳಷ್ಟು ಉಪಯೋಗವಾಗುತ್ತದೆ. Scan ಮಾಡಿದ ಚಿತ್ರಗಳಿಂದ/ಅಥವಾ ಬರಹಗಳಿಂದ ಅವುಗಳಲ್ಲಿರುವ ಕನ್ನಡ ಅಕ್ಷರಗಳನ್ನು ಗುರುತಿಸಬಹುದು. ಕಂಪ್ಯೂಟರ್‌ಗಳು ನೀವು ಹಾಳೆಯಲ್ಲಿ ಬರೆದದ್ದನ್ನು Scanಮಾಡಿದಾಗ ಅದನ್ನು ಚಿತ್ರ ಎಂದೇ ಗುರುತು ಹಿಡಿಯುತ್ತದೆ.ಕೆಲವರಿಗೆ ಏನನ್ನಾದರೂ ಬರೆಯುವಾಗ ಪೇಪರ್‌ನಲ್ಲಿ ಬರೆದರೆ ಮಾತ್ರ ‘ಐಡಿಯಾ’ ಬರುತ್ತದೆ. ಹಾಗಿದ್ದಾಗ ಪೇಪರ್‌ನಲ್ಲಿ ಒಮ್ಮೆ ಬರೆದು ನಂತರ ಅದನ್ನು ನೋಡಿಕೊಂಡು ಕಂಪ್ಯೂಟರ್‌ನಲ್ಲಿ ಮತ್ತೆ ಬರೆಯುತ್ತಾರೆ. ಅದೇ OCR ಕನ್ನಡಕ್ಕೆ ಇದ್ದಿದ್ದರೆ ಅದೇ ಹಾಳೆಯನ್ನು Scan ಮಾಡಿದ್ದರೆ ಸಾಕಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.