ಬುಧವಾರ, ಮೇ 25, 2022
31 °C

ಮುನಿದ ಮಳೆ, ಮರುಕಳಿಸಿದ ಬರದ ಛಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆಯ ಹಿನ್ನಡೆಯಿಂದಾಗಿ ಬರದ ವಾತಾವರಣ ಮರುಕಳಿಸಿದೆ. ಮುಂಗಾರು ಮಳೆಯೊಂದಿಗೆ ಆರಂಭವಾಗಬೇಕಿದ್ದ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.ತಿಂಗಳ ಹಿಂದೆ ಮಳೆಯಾದಾಗ ಮಳೆಗಾಗಿ ಕಾದು ಕುಳಿತಿದ್ದ ಕೃಷಿಕರಿಗೆ ತಡವಾಗಿಯಾದರೂ ಮಳೆ ಬಂತಲ್ಲ ಎಂಬ ನೆಮ್ಮದಿ ಉಂಟಾಗಿತ್ತು. ಕಡಿಮೆ ದಿನಗಳ ಅಂತರದಲ್ಲಿ ಮೂರು ಬಾರಿ ವ್ಯಾಪಕವಾಗಿ ಮಳೆ ಸುರಿದಾಗ, ಉತ್ತಮ ಮುಂಗಾರಿನ ನಿರೀಕ್ಷೆ ಬಲಗೊಂಡಿತ್ತು. ಇನ್ನೇನು ಜಾನುವಾರು ಮೇವಿನ ಸಮಸ್ಯೆ ತೀರಿತೆಂಬ ಭಾವನೆ ಉಂಟಾಗಿತ್ತು. ಕೆಲವರು ಮೊದಲ ಮಳೆಗೆ ಜಾನುವಾರು ಮೇವಿಗಾಗಿ ಮುಸುಕಿನ ಜೋಳ ಬಿತ್ತಿದರು. ಬೀಜ ಮೊಳೆತು ಪೈರಾಯಿತು. ಮತ್ತೆ ಮಳೆ ಕೈಕೊಟ್ಟ ಪರಿಣಾಮ, ಪೈರಿನ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.ಕೆಲವರು ಮಳೆ ಆಶ್ರಯದಲ್ಲಿ ರಾಗಿ ಬಿತ್ತನೆ ಮಾಡಲು ಜಮೀನನ್ನು ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರವನ್ನು ರಾಶಿ ಹಾಕಿದ್ದಾರೆ. ಗೊಬ್ಬರವನ್ನು ನೆಲಕ್ಕೆ ಚೆಲ್ಲಿ ಉಳುಮೆ ಮಾಡಬೇಕಾದರೆ ಮಳೆಯ ಅಗತ್ಯ ಇದೆ. ಆದರೆ ಮಳೆಯ ಸುಳಿವೇ ಇಲ್ಲ. ಗಾಳಿ ಭೋರ್ಗರೆಯುತ್ತಿದೆ. ಅಂತರ್ಜಲದ ಮಟ್ಟ ಕುಸಿದು ಕೊಳವೆ ಬಾವಿಗಳು ಬರಿದಾಗುತ್ತಿವೆ.ತಾಲ್ಲೂಕಿನ ಗಡಿ ಭಾಗದ ರೈತರು ನೆಲಗಡಲೆ ಕಾಯಿ ಸುಲಿದು ಬೀಜ ಮಾಡಿ ಬಿತ್ತನೆ ಮಾಡಲು ಮಳೆಗಾಗಿ ಕಾದು ಕುಳಿತಿದ್ದಾರೆ. ಈಗಾಗಲೆ ಒಂದೆರಡು ಸಲ ಜಮೀನನ್ನು ಉಳುಮೆ ಮಾಡಿ ಗೊಬ್ಬರ ಮುಳುಗಿಸಲು ಕಾಯುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮೊದಲ ಮಳೆಗೆ ಸಾಲು ಪದ್ಧತಿಯಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಅದು ಮೊಳೆತಿದೆಯಾದರೂ ಬೆಳೆಯಲು ಮಳೆಯ ಅಗತ್ಯವಿದೆ.ತಾಲ್ಲೂಕಿನ ದಕ್ಷಿಣದ ಬಯಲು ಪ್ರದೇಶದಲ್ಲಿ ಮಾವಿನ ಸುಗ್ಗಿ ಮುಂದುವರಿದಿದ್ದು, ಉಳುಮೆ ಕಾರ್ಯ ಪ್ರಾರಂಭವಾಗಬೇಕಿದೆ. ಮಾವಿನ ಕಾಯಿ ಕೊಯಿಲು ಮುಗಿದ ತಕ್ಷಣ ಉಳುಮೆ ಮಾಡಿ ರಾಗಿ, ಅವರೆ, ಅಲಸಂದೆ ಬಿತ್ತನೆ ಮಾಡುವುದು ರೂಢಿ. ಮಳೆ ಅಭಾವದಿಂದ ಉಳುಮೆ ಸಾಧ್ಯವಾಗುತ್ತಿಲ್ಲ.ಜಾನುವಾರು ಮೇವಿನ ಸಮಸ್ಯೆಯೂ ಮರುಕಳಿಸಿದೆ. ಹಸಿರು ಮೇವಿನ ಅಭಾವ ಕಾಣಿಸಿಕೊಂಡಿದೆ. ಮೊದಲ ಮಳೆಯಿಂದಾಗಿ ಬಯಲಿನ ಮೇಲೆ ಹಸಿರು ಮೂಡಿತ್ತು. ಹುಲ್ಲು ಬೆಳೆದಿತ್ತು. ಗ್ರಾಮೀಣ ಮಹಿಳೆಯರು ಬಯಲಿಗೆ ಹೋಗಿ ಹುಲ್ಲು ಒರೆದು ತಂದು ಜಾನುವಾರುಗಳಿಗೆ ಹಾಕುತ್ತಿದ್ದರು. ಕೆಲವರು ತಮ್ಮ ಜಾನುವಾರುಗಳನ್ನು ಬಯಲಿನ ಮೇಲೆ ಮೇಯಿಸಿಕೊಂಡು ಬರುತ್ತಿದ್ದರು. ಆದರೆ ಈಗ ಹುಲ್ಲು ಒಣಗಿದೆ.ಮೊದಲ ಮಳೆಗೆ ಸಣ್ಣ ಪುಟ್ಟ ಕೆರೆ ಕುಂಟೆಗಳಿಗೆ ಸ್ಪಲ್ಪ ಪ್ರಮಾಣದ ನೀರು ಬಂದಿತ್ತು. ಅದು ಜಾನುವಾರು ನೀರಿನ ಸಮಸ್ಯೆಯನ್ನು ನೀಗಿತ್ತು. ಈಗ ಆ ನೀರೂ ಮುಗಿಯುತ್ತಿದೆ. ಮಳೆ ಬರುವುದು ಇನ್ನಷ್ಟು ತಡವಾದರೆ ಮತ್ತೆ ಜಾನುವಾರು ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಂಭವ ಇದೆ. ಬರದ ಹಿನ್ನೆಲೆಯಲ್ಲಿ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ಸಮೀಪ ಜಾನುವಾರು ಮೇವಿನ ಬ್ಯಾಂಕ್ ತೆರೆಯಲಾಗಿತ್ತು. ಸುಮಾರು 13 ಟನ್ ಬತ್ತದ ಹುಲ್ಲನ್ನು ರೈತರಿಗೆ ವಿತರಿಸಲಾಯಿತು. ಮಳೆಯಾದ ಕೂಡಲೆ ಮೇವಿನ ಬ್ಯಾಂಕ್ ಮುಚ್ಚಲಾಯಿತು.ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ರೈತರ ಬಳಿಯಿದ್ದ ಒಣ ಹುಲ್ಲಿನ ದಾಸ್ತಾನು ಮುಗಿದಿದೆ. ಕೊಳ್ಳಲು ಒಣ ಹುಲ್ಲು ಸಿಗದಂತಹ ಪರಿಸ್ಥಿತಿ ಉಂಟಾಗಿದೆ. ಕೆಲವರು ಪಕ್ಕದ ಆಂಧ್ರಪ್ರದೇಶದ ಗ್ರಾಮಗಳಿಂದ ಬತ್ತದ ಹುಲ್ಲನ್ನು ಖರೀದಿಸಿ ತಂದು ದಾಸ್ತಾನು ಮಾಡಿದ್ದರು. ಅದೂ ಮುಗಿದಿದೆ. ಮಳೆಯಾದ ಕೆಲವು ದಿನಗಳಲ್ಲಿ ಹಸಿರು ಹುಲ್ಲಿನ ಬೇಡಿಕೆ ಕಡಿಮೆಯಾಗಿತ್ತು.

 

ಆದರೆ ಈಗ ಮತ್ತೆ ಬೇಡಿಕೆ ಹೆಚ್ಚಿದೆ. ಸೀಮೆ ಹಸು ಸಾಕಿರುವ ರೈತರು, ಕೊಳವೆ ಬಾವಿಗಳ ಆಶ್ರಯದಲ್ಲಿ ಮಾರಲೆಂದೇ ಬೆಳೆದಿರುವ ಜೋಳದ ದಂಟನ್ನು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಇದು ಹಸುಗಳ ಸಾಕಾಣಿಕೆ ವೆಚ್ಚವನ್ನು ಹೆಚ್ಚಿಸಿದೆ. ಹಸಿರು ಮೇವನ್ನು ಕೊಂಡು ಹಸು ಸಾಕಿದರೆ ಏನೂ ಗಿಟ್ಟುವುದಿಲ್ಲ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತಿದೆ.ಈ ಎಲ್ಲ ಸಮಸ್ಯೆಗಳಿಗೆ ಮಳೆ ಮಾತ್ರ ಪರಿಹಾರ ನೀಡಬಲ್ಲದು. ಕೃಷಿಕರು ಹಾಗೂ ಕೃಷಿ ಕಾರ್ಮಿಕರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಮಳೆಯ ಸುಳಿವೇ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.