ಭಾನುವಾರ, ಏಪ್ರಿಲ್ 18, 2021
31 °C

ಮುನ್ನಡೆಯುತ್ತಿರುವ ಗಡಾಫಿ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರಿಪೋಲಿ (ಪಿಟಿಐ): ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಪರ ಪಡೆಯು ಲಿಬಿಯಾದ ಪೂರ್ವ ಪ್ರಾಂತ್ಯದ ಅಜ್ದಬಿಯಾ ಪಟ್ಟಣದತ್ತ ಮುನ್ನುಗ್ಗುತ್ತಿದೆ. ಗಡಾಫಿ ವಿರೋಧಿ ಗುಂಪಿನ ಹಿಡಿತದಲ್ಲಿರುವ ಬೆಂಘಾಜಿ ಪಟ್ಟಣವನ್ನು ವಶಪಡಿಸಿಕೊಳ್ಳಲು ಅಜ್ದಬಿಯಾ ಹೆಬ್ಬಾಗಿಲಾಗಿದೆ.ತೈಲ ನಿಕ್ಷೇಪದ ಪಟ್ಟಣವಾದ ಬ್ರೆಗಾದಿಂದ ವಿರೋಧಿಗಳನ್ನು ಹಿಮ್ಮೆಟಿಸಿದ ಗಡಾಫಿ ಪಡೆಯು ಬ್ರೆಗಾ ಮತ್ತು ಬೆಂಘಾಜಿ ಮಧ್ಯೆ ಇರುವ ಅಜ್ದಬಿಯಾವನ್ನು ವಶ ಪಡಿಸಿಕೊಳ್ಳಲು ಮುನ್ನಡೆದಿದೆ.ಈ ಮಧ್ಯೆ ಪಶ್ಚಿಮ ಭಾಗದಲ್ಲಿರುವ ಮಿಸುರತ ಪಟ್ಟಣದಲ್ಲಿ ನಡೆದ ಘರ್ಷಣೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಈ ಪಟ್ಟಣವನ್ನು ಸರ್ಕಾರಿ ಪಡೆಗಳು ಸುತ್ತುವರೆದಿವೆ.

ಗಡಾಫಿ ಪಡೆ ಮತ್ತು ವಿರೋಧಿ ಗುಂಪುಗಳ ನಡುವೆ ನಡೆಯುತ್ತಿರುವ ಕದನದಿಂದ ದೇಶದಲ್ಲಿ ಆಹಾರ ಪದಾರ್ಥಗಳು, ನೀರು, ಔಷಧಗಳ ಕೊರತೆ ಉಂಟಾಗಿದೆ. ಆಸ್ಪತ್ರೆಗಳು ಗಾಯಗೊಂಡವರಿಂದ ತುಂಬಿಹೋಗಿದೆ ಎಂದು ಅಲ್ ಜಜೀರ ವಾಹಿನಿ ವರದಿ ಮಾಡಿದೆ.ಏತನ್ಮಧ್ಯೆ ಲಿಬಿಯಾದಲ್ಲಿ ಶಾಂತಿ ಕಾಪಾಡುವಂತೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗುತ್ತಿದ್ದು, ಘರ್ಷಣೆಗಳು ಕ್ಷೀಣಿಸಿವೆ ಎಂದು ವಿರೋಧಿ ಗುಂಪಿನ ವಕ್ತಾರರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್ ಜುಮಾ ಅವರು ಈ ವಾರಾಂತ್ಯದಲ್ಲಿ ಲಿಬಿಯಾಗೆ ತೆರಳಲಿದ್ದು, ಅವರು ಗಡಾಫಿಯನ್ನು ಟ್ರಿಪೋಲಿಯಲ್ಲೂ, ವಿರೋಧ ಪಡೆಯ ಮುಖಂಡರನ್ನು ಬೆಂಘಾಜಿಯಲ್ಲೂ ಭೇಟಿ ಮಾಡಲಿದ್ದಾರೆ.ಪ್ರತಿಭಟನಾಕಾರರ ವಿರುದ್ಧ ತಿರುಗಿಬಿದ್ದ ಸೇನೆ: ಇಬ್ಬರ ಹತ್ಯೆ

ಕೈರೊ (ಪಿಟಿಐ): ಹೋಸ್ನಿ ಮುಬಾರಕ್ ಪದಚ್ಯುತಿ ವೇಳೆ ಪ್ರತಿಭಟನಾಕಾರರ ಪರ ನಿಂತಿದ್ದ ಈಜಿಪ್ಟ್ ಸೇನಾಪಡೆ ದಿಢೀರನೆ ಅವರ ವಿರುದ್ಧ ತಿರುಗಿಬಿದ್ದಿದ್ದು, ಶನಿವಾರ ತಹ್ರೀರ್ ಚೌಕವನ್ನು ಸುತ್ತುವರಿದು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸತ್ತಿದ್ದಾರೆ.ಹೋಸ್ನಿ ಮುಬಾರಕ್ ಅವರನ್ನು ಕಾನೂನು ವಿಚಾರಣೆಗೆ ಒಳಪಡಿಸುವ ಜತೆಗೆ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಮೊಹಮ್ಮದ್ ಹುಸೇನ್ ತಂತಾವಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಐತಿಹಾಸಿಕ ಚೌಕದಲ್ಲಿ ಜಮಾಯಿಸಿದ್ದ ವೇಳೆ ಈ ದಾಳಿ ನಡೆಯಿತು.ಆದರೆ ಈ ದಾಳಿಯನ್ನು ತಾನು ನಡೆಸಿಲ್ಲ ಎಂದಿರುವ ಸೇನಾಪಡೆ, ಇದು ಹೋಸ್ನಿ ಮುಬಾರಕ್ ಅವರ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಸಂಚು ಎಂದು ದೂಷಿಸಿದೆ.

ಸೇನಾಪಡೆ ಸ್ಪಷ್ಟನೆ ನೀಡಿದ್ದರೂ ಆ ಬಗ್ಗೆ ಅನುಮಾನವಿದೆ. ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ಸೇನಾಪಡೆ ಹೊರಡಿಸಿರುವ ಆದೇಶ ಧಿಕ್ಕರಿಸಿ ಪ್ರತಿಭಟನಾಕಾರರ ಜತೆ ಕೈಜೋಡಿಸಿರುವ ತನ್ನ ಕೆಲವು ಅಧಿಕಾರಿಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಸೇನಾಪಡೆಯೇ ಈ ದಾಳಿ ನಡೆಸಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.