ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶರಣರು ನಿಜವನ್ನೇ ಹೇಳಿದ್ದಾರೆ!

Last Updated 19 ಡಿಸೆಂಬರ್ 2010, 13:25 IST
ಅಕ್ಷರ ಗಾತ್ರ

ಚಿತ್ರದುರ್ಗದ ಮುರುಘಾ ಶರಣರಿಗೆ ಸಿಟ್ಟು ಬಂದುದು ಕಡಿಮೆ. ಮೊನ್ನೆ ಅವರು ಉಗ್ರರಾಗಿದ್ದರು. ಪತ್ರಕರ್ತರನ್ನು ತಾರಾಮಾರಾ ಬೈದರು. ‘ಇವರು ಕಾವಲು ನಾಯಿಗಳಾಗಬೇಕಿತ್ತು. ಆದರೆ, ನಾಯಿಗಳಾಗಿದ್ದಾರೆ. ಹರ್ಕೊಂಡು ತಿನ್ನುತ್ತಿದ್ದಾರೆ. ವಸೂಲಿ ವೀರರಾಗಿದ್ದಾರೆ. ಭ್ರಷ್ಟಾಚಾರದಲ್ಲಿ ರಾಜಕಾರಣಿಗಳನ್ನೂ ಮೀರಿಸುತ್ತಾರೆ...’ ಬೈಗುಳದ ಭಂಡಾರವನ್ನೇ ಅವರು ಪತ್ರಕರ್ತರ ಮೇಲೆ ಸುರಿದರು. ಪತ್ರಕರ್ತರಿಂದ, ಅವರನ್ನು ಪ್ರತಿನಿಧಿಸುವ ಸಂಘಟನೆಗಳಿಂದ ನಿರೀಕ್ಷಿತ ಪ್ರತಿಕ್ರಿಯೆಯೇ ವ್ಯಕ್ತವಾಯಿತು. ಎಲ್ಲರೂ ಅವರ ಮೇಲೆ ಬಿದ್ದರು. ಶರಣರು ಶರಣಾದರು. ಅವರು ಕ್ಷಮೆ ಕೇಳಬೇಕಿರಲಿಲ್ಲ. ‘ಕೆಲವರು ಪತ್ರಕರ್ತರು ಇಂಥವರು’ ಎಂದು ಮೊದಲೇ ಅವರು ಹೇಳಿದ್ದರೆ ಸುರಕ್ಷಿತವಾಗಿ ಇರಬಹುದಿತ್ತೇನೋ?

ಶರಣರು ಸತ್ಯವನ್ನೇ ಹೇಳಿದ್ದಾರೆ. ಒಟ್ಟಾರೆ ಪತ್ರಿಕೋದ್ಯಮ ಈಗ ಪವಿತ್ರವಾಗಿ ಉಳಿದಿಲ್ಲ. ಯಾರ ಕಪಾಟಿನಿಂದ ಯಾವಾಗ ತಲೆಬುರುಡೆ ಉರುಳಿ ಬೀಳುತ್ತದೋ ಎಂದು ಹೇಳುವುದು ಕಷ್ಟ. ಈಗಾಗಲೇ ತಲೆಬುರುಡೆಗಳು ಒಂದೊಂದಾಗಿ ಹೊರಗೆ ಬೀಳುತ್ತಿವೆ. ದೂರದ ದೆಹಲಿಯಲ್ಲಿ ದೊಡ್ಡ ದೊಡ್ಡವರ ಕಪಾಟುಗಳ ತುಂಬ ಬರೀ ಬುರುಡೆಗಳೇ ಇದ್ದಂತೆ ಇವೆ! ಏಕೆ ಹೀಗೆ ಆಯಿತು? ಪತ್ರಕರ್ತರಿಗೆ ಸಣ್ಣಪುಟ್ಟ ಆಮಿಷಗಳು ಯಾವಾಗಲೂ ಇದ್ದುವು. ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು ಆಗಾಗ ಕರೆದು ಗುಂಡು ಪಾರ್ಟಿ ಕೊಡುತ್ತಿದ್ದರು. ಆದರೆ, ಮನೆಗೆ ಹೋಗುವಾಗ ಪಾಕೀಟು ಕೊಟ್ಟು ಕಳಿಸುವ ಧೈರ್ಯವನ್ನು ಯಾರೂ ಮಾಡುತ್ತಿರಲಿಲ್ಲ. ವಾಣಿಜ್ಯ ಪತ್ರಿಕಾಗೋಷ್ಠಿಗಳಲ್ಲಿ ಗುಂಡು, ತುಂಡಿನ ಜತೆಗೆ ಒಂದು ವಾಚನ್ನೋ, ಇಸ್ತ್ರಿ ಪೆಟ್ಟಿಗೆಯನ್ನೋ ಕೊಟ್ಟು ಕಳಿಸುವ ರೂಢಿಯೂ ಹೊಸದೇನಲ್ಲ. ವಾಚು ಅಥವಾ ಇಸ್ತ್ರಿಪೆಟ್ಟಿಗೆಯನ್ನು ಬಿಟ್ಟು ಹೋಗುವವರು ಆಗಲೂ ಇದ್ದರು, ಈಗಲೂ ಇದ್ದಾರೆ. ಆದರೆ, ಉದ್ಯಮಿಗಳು ಕೊಡುವ ಪಾಕೀಟಿನ ಗಾತ್ರದ ಮೇಲೆ ವಾಣಿಜ್ಯ ಸುದ್ದಿಯ ಅಳತೆಯೂ ಅವಲಂಬಿತವಾಗಿರುತ್ತದೆ ಎಂದು 16 ವರ್ಷಗಳ ಹಿಂದೆಯೇ ಹಿರಿಯ ವಾಣಿಜ್ಯ ಪತ್ರಕರ್ತ ಟಿ.ಎನ್. ನೈನನ್ ನನಗೆ ಹೇಳಿದ್ದರು. ಬರುಬರುತ್ತ ವಾಣಿಜ್ಯೋದ್ಯಮಿಗಳ ಜತೆಗೆ ಏಕಾಂಗಿಯಾಗಿ (ಒನ್ ಟು ಒನ್) ಸಂದರ್ಶನಕ್ಕೆ ವ್ಯವಸ್ಥೆ ಮಾಡುವ ಮಟ್ಟಕ್ಕೆ ಸಾರ್ವಜನಿಕ ಸಂಪರ್ಕ ಸಂಸ್ಥೆಗಳು ಹೆಚ್ಚಿಕೊಂಡವು. ಪತ್ರಕರ್ತರೂ ಅದನ್ನು ಬಯಸತೊಡಗಿದರು. ಈ ಸಂದರ್ಶನದಲ್ಲಿ ಕಂಪೆನಿಗಳ ಷೇರುಗಳನ್ನು ಜೇಬಿಗೆ ಹಾಕಿಕೊಂಡ ಪತ್ರಕರ್ತರ ಸುದ್ದಿಗಳೂ ಹೊರಗೆ ಬರತೊಡಗಿದುವು.

ಆದರೆ, ಪತ್ರಕರ್ತರನ್ನು ದೊಡ್ಡದಾಗಿ ಹಾಳು ಮಾಡಿದವರು ರಾಜಕಾರಣಿಗಳು. ಅವರು ಪ್ರಚಾರಜೀವಿಗಳು. ಅವರಿಗೆ ಪ್ರಚಾರ ಎಷ್ಟು ಮುಖ್ಯ ಎಂದು ಪತ್ರಕರ್ತರಿಗೂ ಅರಿವಾಗತೊಡಗಿತು. ಹಾದಿಗೆ ಒಂದು ಬೀದಿಗೆ ಒಂದು ಪತ್ರಿಕೆಗಳು ಹುಟ್ಟಿಕೊಂಡವು. ಇವು ಒಂದೋ ಜಾಹೀರಾತಿನ ಮೇಲೆ ಇಲ್ಲವೇ ರಾಜಕಾರಣಿಗಳು ಕೊಡುವ ಬಿಟ್ಟಿ ಹಣದ ಮೇಲೆ ಅವಲಂಬಿತವಾದುವು. ತಮ್ಮ ಸಂಖ್ಯೆ ದೊಡ್ಡದಾದಂತೆ ಅವರು ಸಂಘಟಿತರೂ ಆದರು. ಸಭೆ-ಸಮಾರಂಭಗಳಲ್ಲಿ ಕುಳಿತುಕೊಳ್ಳಲು ಕುರ್ಚಿ ಕೊಡದಿದ್ದರೆ ಇಡೀ ಸಭೆಗೇ ಬಹಿಷ್ಕಾರ ಹಾಕಿ ಹೊರಗೆ ನಡೆಯುವ, ಸಂಘಟಕರಿಗೆ ಮುಜುಗರ ಮಾಡುವ ಪರಂಪರೆ ಬೆಳೆಯತೊಡಗಿತು. ದೊಡ್ಡ ಪತ್ರಿಕೆಯ ವರದಿಗಾರನಾದರೆ ಅವನ ಮಾಲೀಕರಿಗೆ ಅಥವಾ ಸಂಸ್ಥೆಯ ಮುಖ್ಯಸ್ಥರಿಗೆ ದೂರು ಕೊಟ್ಟು ಇಂಥ ವರ್ತನೆಯನ್ನು ನಿಯಂತ್ರಿಸಲು ಸಾಧ್ಯ. ಅವನೇ ಸಂಪಾದಕ, ಅವನೇ ವರದಿಗಾರನಾದರೆ ಅವನನ್ನು ನಿಯಂತ್ರಿಸುವವರು ಯಾರು?

ಅವರ ಸಂಖ್ಯೆಯೇ ಹೆಚ್ಚಾಗತೊಡಗಿತು. ವಿಚಿತ್ರ ಎಂದರೆ ಬಹಿಷ್ಕಾರ ಸಂಪ್ರದಾಯವನ್ನು ದೊಡ್ಡ ಪತ್ರಿಕೆಗಳ ವರದಿಗಾರರೂ ಅನುಸರಿಸತೊಡಗಿದರು. ಆ ಸಭೆ, ಸಮಾರಂಭ ನಡೆಯುತ್ತಿದ್ದುದು ತಮಗಾಗಿ ಅಲ್ಲ, ಸಾರ್ವಜನಿಕರಿಗಾಗಿ ಎಂಬ ಕನಿಷ್ಠ ತಿಳಿವಳಿಕೆಯೂ ಬಹಿಷ್ಕಾರ ಹಾಕುವವರಿಗೆ ಇರಲಿಲ್ಲ. ತನ್ನ ಕೆಲಸ ಸುದ್ದಿ ಬರೆಯುವುದು, ಅದನ್ನು ಸಾರ್ವಜನಿಕರಿಗೆ ತಿಳಿಯಪಡಿಸುವುದು, ಅದಕ್ಕಾಗಿಯೇ ಸಂಸ್ಥೆ ತನಗೆ ಸಂಬಳ ಕೊಟ್ಟು ಇಟ್ಟುಕೊಂಡಿದೆ ಎಂಬುದನ್ನು ಅವರು ಮರೆತರು. ಪತ್ರಕರ್ತರು ಸ್ವತಃ ಸೃಷ್ಟಿಸಿಕೊಂಡ ಅಥವಾ ಅವರ ಸುತ್ತ ಸಮಾಜ ಸೃಷ್ಟಿಸಿದ ಪ್ರಭಾವಳಿ ದೊಡ್ಡದಾಗುತ್ತ ಹೋದಂತೆ ಈ ಸಮಸ್ಯೆ ಇನ್ನೂ ಕ್ಲಿಷ್ಟವಾಗುತ್ತ ಹೋಯಿತು. ಮುರುಘಾ ಶರಣರು ಹೆದರಿದ್ದು ಈ ಪ್ರಭಾವಳಿಗೆ.

ನನ್ನ ವಾರಿಗೆಯವರು ವೃತ್ತಿಗೆ ಸೇರಿದಾಗ ನಮಗೆ ಇದ್ದ ಸಂಬಳ ಸಾವಿರ ರೂಪಾಯಿ ಮೀರಿರಲಿಲ್ಲ. ಅದೂ ಇದೂ ಕಡಿತವಾಗಿ ಕೈಗೆ ಎಂಟು ನೂರು ರೂಪಾಯಿ ಸಿಗುತ್ತಿತ್ತು. ಮನೆ ಬಾಡಿಗೆಗೆ ನಾನೂರು ರೂಪಾಯಿ ಹೋಗುತ್ತಿತ್ತು. ಉಳಿದ ಹಣದಲ್ಲಿಯೇ ಸಂಸಾರ ಸಾಗುತ್ತಿತ್ತು. ಹೆಂಡತಿಯ ಕೊರಳಲ್ಲಿ ಕರಿಮಣಿ ಸರ ಮಾತ್ರ ಇರುತ್ತಿತ್ತು. ಅಕ್ಕಿ ಆರಿಸುವಾಗ ಅವಳ ಕೈಯಿಂದ ಬರೀ ಬಳೆಗಳ ಕಿಂಕಿಣಿ ನಾದ ಕೇಳಿ ಬರುತ್ತಿತ್ತು. ಆದರೆ, ಮನಸ್ಸು ನಿರಾಳವಾಗಿ ಇರುತ್ತಿತ್ತು. ಯಾರ ವಿರುದ್ಧ ಬರೆಯುವಾಗಲೂ ಕೈ ‘ಹಿಡಿ’ದಂತೆ ಆಗುತ್ತಿರಲಿಲ್ಲ. ನನ್ನ ವಾರಿಗೆಯವರ ಮುಂದೆಯೇ ಜಗತ್ತು ಬದಲಾಗಿ ಹೋಯಿತು. ನಮ್ಮ ಪತ್ರಿಕೆ ಸರ್ಕಾರವನ್ನು ಉರುಳಿಸಬಹುದು’ ಎಂದುಕೊಂಡ ತಲೆಮಾರಿನವರು ನಾವು. ಆದರೆ, ಈಗ ‘ಮಂತ್ರಿಗಳನ್ನು ಮಾಡಬಲ್ಲೆವು, ಅವರಿಗೆ ಬೇಕಾದ ಖಾತೆಗಳನ್ನು ಕೊಡಿಸಬಲ್ಲೆವು’ ಎಂಬ ಕಾಲ! ಕಾಲ ಎಷ್ಟು ಬೇಗ ಬದಲಾಯಿತು?

ನಮ್ಮ ಮಹತ್ವಾಕಾಂಕ್ಷೆ ಬೆಳೆದಂತೆ ನಾವು ರಾಜಕಾರಣಿಗಳ ಕೈಗೆ ದಾಳವಾದೆವು. ವಿಧಾನಸೌಧ ಸುತ್ತುವ ಪತ್ರಕರ್ತರಿಗೆ ತಾವು ಅಧಿಕಾರಿಗಳನ್ನು ವರ್ಗ ಮಾಡಿಸಬಹುದು ಎಂಬುದು ತಿಳಿಯಿತು. ಇದು ಪತ್ರಕರ್ತರಿಗೇ ತಿಳಿಯಿತೇ ಅಥವಾ ರಾಜಕಾರಣಿಗಳೇ ಹೇಳಿಕೊಟ್ಟರೇ ಗೊತ್ತಿಲ್ಲ. ಅಧಿಕಾರಿಯ ಹುದ್ದೆ ದೊಡ್ಡದಾದಷ್ಟೂ ಆತನಿಂದ ಬರುವ ಪ್ರತಿಫಲ ದೊಡ್ಡದಾಗುತ್ತ ಹೋಯಿತು. ಪತ್ರಕರ್ತರು ಶಾಲಾ ಶಿಕ್ಷಕರ ವರ್ಗಾವಣೆ ಏಕೆ ಮಾಡಿಸುತ್ತಾರೆ? ಲೋಕೋಪಯೋಗಿ, ನೀರಾವರಿ ಇಲಾಖೆಯ ಎಂಜಿನಿಯರ್‌ಗಳ, ಅಬ್ಕಾರಿ ಅಧಿಕಾರಿಗಳ ವರ್ಗ ಮಾಡಿಸಿದರು. ಶ್ರೀಮಂತರ ಮಕ್ಕಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಡಿ, ಎಂ.ಎಸ್ ಸೀಟು ಕೊಡಿಸಿದರು. ಇಂಥ ಒಂದು ವರ್ಗ, ಒಂದು ಸೀಟು ಇಡೀ ವರ್ಷದ ಉಂಬಳಿಗೆ ಸಾಕಾಗುವಷ್ಟು ಆಯಿತು. ‘ದೊಡ್ಡ’ ಪತ್ರಕರ್ತರು ಇಂಥ ದೊಡ್ಡ ದೊಡ್ಡ ‘ಕೆಲಸ’ ಮಾಡಿದರೆ ಸಣ್ಣ ಪುಟ್ಟ ಪತ್ರಕರ್ತರು ರಾಜಕಾರಣಿಗಳ ಮುಂದೆ ಹಲ್ಲು ಗಿಂಜಿ ಕೆಲಸ ಮಾಡಿಸಿಕೊಂಡರು. ವಿಧಾನಸೌಧದಲ್ಲಿ ಪತ್ರಿದಿನ ಸಂಜೆ 4.30ಕ್ಕೆ ಸಚಿವಾಲಯ ಎಂಬ ರೌಂಡ್‌ಗೆ ಇದೇ ಕಾರಣಕ್ಕಾಗಿ 420 ರೌಂಡ್ ಎಂಬ ಹೆಸರು ಬಂತು. ಮೊದಲು ಕೊಠಡಿಯಲ್ಲಿ ಇದ್ದ ಸಚಿವರನ್ನು ಹುಡುಕಿಕೊಂಡು ಹೋಗಿ ಸುದ್ದಿ ಕೇಳುವ ಕಾಲ ಇತ್ತು. ಬರುಬರುತ್ತ ಕೆಲವರು ಪತ್ರಕರ್ತರು ಸಚಿವರನ್ನು ಆ ವೇಳೆಗೆ ಕೊಠಡಿಗೆ ಬರಲು ಹೇಳಿ ಅವರನ್ನು ‘ಭೇಟಿ ಮಾಡಿಸುವ’ ಕಾಲ ಬಂತು. ಈಗ ಯಾರಾದರೂ ಸಿಕ್ಕರೆ ಸಾಕು ಎನ್ನುವ ಕಾಲ! ಅವರನ್ನು ಕಂಡು ‘ಏನಾದರೂ ಸುದ್ದಿ ಕೊಡಿ’ ಎನ್ನುವ ಕಾಲ! ಏಕೆಂದರೆ ಪತ್ರಕರ್ತರು ರೌಂಡ್ ಬರುವ ವೇಳೆಗೆ ಈಗ ಯಾವ ಸಚಿವರೂ ತಮ್ಮ ಕೊಠಡಿಯಲ್ಲಿ ಇರುವುದೇ ಇಲ್ಲ. ಇವರ ಸಹವಾಸವೇ ಬೇಡ ಎಂದುಕೊಂಡರೇ ಸಚಿವರು? ವೃತ್ತಿಯ ಮರ್ಯಾದೆ ಹೋದುದು ಹೀಗೆ, ಹೋಗುವುದು ಹೀಗೆ.

ಹಣ ಕೊಟ್ಟರೆ ಸುದ್ದಿ ಬರುತ್ತದೆ ಎಂಬುದರಲ್ಲಿ ಈಗ ಶಂಕೆಯೇನೂ ಇಲ್ಲ. ಆ ಸಂದೇಶವನ್ನು ನಾವೇ ಕೊಟ್ಟಿದ್ದೇವೆ. ಪತ್ರಿಕಾ ಹೇಳಿಕೆಗಳ ಮೇಲೆ ಮೂಲೆಯಲ್ಲಿ ‘ಎಂ.ಜಿ-ಮನಿ ಗಿವನ್’ ಎಂಬ ಒಕ್ಕಣೆ ಇರುತ್ತಿದ್ದ ಕಾಲ ಈಗಿನದೇನೂ ಅಲ್ಲ. ಹಾಗೆ ಒಕ್ಕಣೆ ಇದ್ದ ಸುದ್ದಿಗಳಿಗೆ ಮೊದಲು ಜಾಗ, ನಂತ ಬಾಕಿ ಸುದ್ದಿಗಳಿಗೆ. ಬಹುಶಃ ಮುರುಘಾ ಶರಣರು ಕಾರ್ಯಕ್ರಮಕ್ಕೆ ಕರೆಯೋಲೆ ಜತೆಗೆ ಹಣವನ್ನೂ ಕಳುಹಿಸಬೇಕು, ಕಾರೂ ಕಳುಹಿಸಬೇಕು ಎಂದು ಈ ಹಿನ್ನೆಲೆಯಲ್ಲಿಯೇ ಹೇಳಿರಬೇಕು. ಕೆಲವು ದಿನಗಳ ಹಿಂದೆ ಎಂ.ಪಿ. ಪ್ರಕಾಶ್ ಅವರು ‘ನಾನೇ ಅಲ್ಲಿ, ಇಲ್ಲಿ ಚಾನೆಲ್‌ಗಳಲ್ಲಿ ಕೆಲಸ ಕೊಡಿಸಿದ ಹುಡುಗರೇ ನನ್ನ ಕಾರ್ಯಕ್ರಮಕ್ಕೆ ಬರಲು, ಸಾವಿರ ರೂಪಾಯಿ ಕೇಳುತ್ತಿದ್ದಾರೆ’ ಎಂದು ನನ್ನ ಮುಂದೆ ಗೊಣಗಿದ್ದರು.

 ಭೌತಿಕ ಆಮಿಷಗಳು ನಮ್ಮನ್ನು ಈಗೇನೂ ಆಕ್ರಮಿಸಿಲ್ಲ. ಈಗ ಅದು ಜಾಸ್ತಿಯಾಗಿರಬಹುದು. ಪತ್ರಿಕೋದ್ಯಮದ ಪಿತಾಮಹ ಎಂದೇ ಹೆಸರಾಗಿದ್ದ ಡಿ.ವಿ.ಗುಂಡಪ್ಪನವರು 60 ವರ್ಷಗಳ ಹಿಂದೆಯೇ, ‘ಸುದ್ದಿ ಬರೆಯಲು 50 ರೂಪಾಯಿ, ಬರೆಯದೇ ಇರಲು 100 ರೂಪಾಯಿ’ ಎಂಬ ಮಟ್ಟಕ್ಕೆ ಪತ್ರಕರ್ತರು ಇಳಿಯಬಾರದು ಎಂದಿದ್ದರು. ಈ ಕಳಂಕ ನಮ್ಮ ವೃತ್ತಿಗೆ ಆಗಲೂ ಅಂಟಿತ್ತು. ಈಗ ಜಾಸ್ತಿ ಅಂಟಿದೆ ಅಷ್ಟೇ. ಆದರೆ, ಆಗ ಅನೇಕ ಪತ್ರಕರ್ತರು ಈ ವೃತ್ತಿಯನ್ನು ಒಂದು ಮಿಷನ್, ಆಂದೋಲನ ಎಂದು ತಿಳಿದುಕೊಂಡಿದ್ದರು. ಬದುಕು-ಬರಹದ ನಡುವೆ ದೊಡ್ಡ ಕಂದರ ಇರಲಿಲ್ಲ. ಅವರ ಮುಂದೆ ನಿರ್ದಿಷ್ಟ ಗುರಿಗಳೂ ಇದ್ದುವು. ಸ್ವಸ್ಥ, ಶ್ರೀಮಂತ ಸಮಾಜ ಕಟ್ಟುವುದು ಅವರ ಧ್ಯೇಯವಾಗಿತ್ತು. ‘ಈಗ ಸಮಾಜ ಹಾಳಾಗಿ ಹೋಗಲಿ ನಾವು ಸ್ವಸ್ಥವಾಗಿದ್ದರೆ ಸಾಕು, ಶ್ರೀಮಂತರಾದರೆ ಸಾಕು’ ಎನ್ನುವುದು ಧ್ಯೇಯ. ವ್ಯತ್ಯಾಸ ಬಹಳ. ಆಗ ನಾಲ್ಕಾರು ಪತ್ರಕರ್ತರು ಸೇರಿಕೊಂಡು ರಾತ್ರಿ ಹಗಲು, ಕೆಲಸ ಮಾಡಿ ಒಂದು ಪತ್ರಿಕೆ ತರುತ್ತಿದ್ದರು. ರಾತ್ರಿ ತಡವಾದರೆ ಪತ್ರಿಕಾ ಕಚೇರಿಯಲ್ಲಿ ಪೇಪರ್ ಹಾಸಿಕೊಂಡು ಮಲಗಿ ಬಿಡುತ್ತಿದ್ದರು. ಈಗ ಹಾಗೆ ಮಲಗುವವರು ಯಾರಾದರೂ ಉಂಟೇ? ಬಿಡುದೀಪ ಹಚ್ಚಿಕೊಂಡು ಹುಡುಕಬೇಕು.

ಈಗ ಪ್ರಾಮಾಣಿಕರನ್ನೂ ಬಿಡುದೀಪ ಹಚ್ಚಿಕೊಂಡು ಹುಡುಕಬೇಕು ಎನ್ನುವಂಥ ಪರಿಸ್ಥಿತಿ ಏಕೆ ಬಂತು? ಇದು ಆದರ್ಶಗಳೇ ಇಲ್ಲದ ಕಾಲ. ಈಗ ಹಣ ಮಾತನಾಡುತ್ತದೆ. ಮಾತನಾಡಿಸುತ್ತದೆ. ನಾವು ಮಕ್ಕಳಾಗಿದ್ದಾಗ ಒಂದು ಬಿಸ್ಕತ್ತು, ಒಂದು ಚಾಕಲೇಟ್‌ನ್ನೂ ತಿನ್ನದೇ ನಮ್ಮ ಬಾಲ್ಯ ಕಳೆದು ಹೋಯಿತು. ಆಗ ಹೋಟೆಲ್‌ಗೆ ಹೋಗಿ ತಿಂಡಿ ತಿನ್ನುವುದು ‘ಉಡಾಳತನ’ ಎನಿಸುತ್ತಿತ್ತು. ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ನಮ್ಮ ಶಿಕ್ಷಕರು ನಮಗೆ ಹೇಳಿ ಕೊಡುತ್ತಿದ್ದರು. ಈಗ ಹಾಗೆ ಹೇಳಿಕೊಡುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ, ಹಾಗೆ ಹೇಳುವುದೇ ಅರ್ಥಹೀನ ಎನಿಸುತ್ತದೆ. ಸಮಾಜಕ್ಕೆ ಯಾವಾಗಲೂ ಆದರ್ಶಗಳು, ನಾಯಕತ್ವ ಸಿಕ್ಕಿದ್ದು ರಾಜಕೀಯ ನಾಯಕರಿಂದ. ಈಗ ಅಲ್ಲಿಯೇ ಸಮಸ್ಯೆ ಇದೆ. ಇದು ಒಂದು ವಿಷ ಚಕ್ರ. ರಾಜಕಾರಣಿಗಳನ್ನು ನಾವು ಹಾಳು ಮಾಡಿದೆವೇ? ಅಥವಾ ಅವರು ನಮ್ಮನ್ನು ಹಾಳು ಮಾಡಿದರೇ ಎಂಬ ಪ್ರಶ್ನೆ ‘ಬೀಜ ಮೊದಲೋ ಗಿಡ ಮೊದಲೋ’ ಎಂಬ ಪ್ರಶ್ನೆಯಷ್ಟೇ ಕ್ಲಿಷ್ಟವಾದುದು.

ಯಾವ ವೃತ್ತಿಯೂ ಈಗ ಪರಮ ಪವಿತ್ರ ಎನ್ನುವಂತೆ ಉಳಿದಿಲ್ಲ. ಎಲ್ಲೆಲ್ಲೂ ಕಪ್ಪುಕುರಿಗಳು ಇದ್ದೇ ಇವೆ. ತಮ್ಮ ಸಂಘಟನೆಗೆ ಒಳಪಟ್ಟ ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ ಯಾವ ಸಂಘವೂ ಚಕಾರ ಎತ್ತಿದ್ದು ನನಗೆ ನೆನಪಿಲ್ಲ. ‘ಪತ್ರಕರ್ತರ ಭ್ರಷ್ಟಾಚಾರ ತಡೆಯುವುದು ಹೇಗೆ?’ ಎಂಬ ಒಂದು ವಿಚಾರ ಗೋಷ್ಠಿಯನ್ನು ಯಾವ ಸಂಘವೂ ಏರ್ಪಡಿಸುವ ಧೈರ್ಯ ಮಾಡಿಲ್ಲ. ಹೋಗಲಿ, ಪತ್ರಕರ್ತರ ಸಮ್ಮೇಳನದಲ್ಲಿ ಇದು ಚರ್ಚೆಯಾದುದೂ ನನಗೆ ನೆನಪಿಲ್ಲ. ಎಲ್ಲಿಯೋ ಮುರುಘಾ ಶರಣರಂಥವರು ಧೈರ್ಯ ಮಾಡಿ, ‘ಪತ್ರಕರ್ತರು ವಸೂಲಿ ವೀರರು’ ಎಂದರೆ ನಾವು ಅವರ ಮೇಲೆ ನಾಯಿ-ನರಿಗಳ ಹಾಗೆ ಬೀಳಬಾರದು. ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ಕನಿಷ್ಠ ಸೌಜನ್ಯವನ್ನಾದರೂ ಬೆಳೆಸಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT