ಬುಧವಾರ, ಏಪ್ರಿಲ್ 14, 2021
31 °C

ಮುಳುಗಡೆ ಊರಲ್ಲಿ ರಂಗೋ ರಂಗು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನೆತ್ತಿಸುಡುವ ರಣಬಿಸಿಲು... ಮುಗಿಲುಮುಟ್ಟಿದ ತುರಾಯಿ ಹಲಗೆ ಸದ್ದು, ಮಕ್ಕಳ ಕೇಕೆ, ಸಿಳ್ಳೆಗಳು... ಸಿನಿಮಾ ಹಾಡುಗಳಿಗೆ ಉನ್ಮಾದದಲ್ಲಿ ಕುಣಿಯುತ್ತ ಸಾಗಿದ ಯುವಕರ ಗುಂಪುಗಳು... ಇವೆಲ್ಲವುಗಳ ಮಧ್ಯೆ ಹೊತ್ತೇರುತ್ತಿದ್ದಂತೆ ಹೊರಬಿದ್ದ ಬಣ್ಣದ ಬಂಡಿಗಳ ಸಾಲು.... ಆ ಸಾಲುಗಳ ಸುತ್ತಲೂ ಬಣ್ಣ ಬಣ್ಣಗಳಲ್ಲಿ ಮಿಂದೆದ್ದ ಜನರು! ವಿಶಿಷ್ಟ ಆಚರಣೆ ಮೂಲಕ ನಾಡಿನ ಗಮನಸೆಳೆದಿರುವ ಮುಳುಗಡೆ ನಗರ ಬಾಗಲಕೋಟೆಯಲ್ಲಿ ಹೋಳಿಹಬ್ಬದ ಮೊದಲ ದಿನವಾದ ಭಾನುವಾರ ಕಂಡುಬಂದ ಸಂಭ್ರಮವಿದು.ಸಂಪ್ರದಾಯದ ಪ್ರಕಾರ ಮೊದಲ ದಿನ ಕಿಲ್ಲಾ ಪ್ರದೇಶದಲ್ಲಿ ಓಕುಳಿ ನಡೆಯಿತು. ಬಣ್ಣದ ಹಿಂದಿನ ರಾತ್ರಿ ವಿವಿಧ ಬಗೆಯ ಸೋಗಿನ ಬಂಡಿಗಳ ಮೂಲಕ ಬಣ್ಣದಾಟಕ್ಕೆ ವೀಳ್ಯ ನೀಡಿದ್ದ ಕಿಲ್ಲಾ ನಿವಾಸಿಗಳು, ಭಾನುವಾರ ಬಣ್ಣದ ಬಂಡಿಗಳನ್ನು ಕಟ್ಟಿಕೊಂಡು ಅಕ್ಕಪಕ್ಕದ ಓಣಿಗಳ ಜನರಿಗೆ ಬಣ್ಣದ ನೀರು ಎರಚಿ ಸಂತಸಪಟ್ಟರು. ಪ್ರತಿವರ್ಷದ ಸಂಪ್ರದಾಯದಂತೆ ಮೊದಲ ದಿನ ಕಿಲ್ಲಾಪ್ರದೇಶದ ಜನರು ಮಾತ್ರ ಬಣ್ಣದ ಬಂಡಿ ಹೂಡಿದ್ದರಿಂದ ಬಂಡಿಗಳ ಸಂಖ್ಯೆ ಕಡಿಮೆಯಿತ್ತು. ಹೋಳಿ ಆಚರಣೆಯ ಕೇಂದ್ರಬಿಂದುವಾಗಿರುವ ಹಳಪೇಟೆ, ಜೈನಪೇಟೆ, ವೆಂಕಟಪೇಟೆ, ಹೊಸಪೇಟೆ ಹಾಗೂ ಕಿಲ್ಲಾ ಪ್ರದೇಶದ ಜನರು ಕೊನೆಯ ದಿನದಂದು ಸಾಮೂಹಿಕವಾಗಿ ಓಕುಳಿ ಆಡಳಿರುವುದರಿಂದ ಮೊದಲ ದಿನ ಜನರೂ ಕಡಿಮೆ ಕಂಡುಬಂದರು.ಹೊತ್ತೇರಿತು ರಂಗೇರಿತು: ಕಳೆದ ಒಂದು ವಾರದಿಂದ ಹಲಗೆವಾದನದಲ್ಲಿಯೇ ಖುಷಿಪಡುತ್ತಿದ್ದ ಚಿಣ್ಣರು ಭಾನುವಾರ ಬೆಳಿಗ್ಗೆಯೇ ಪಿಚಕಾರಿ ಹಿಡಿದು ಬೀದಿಗಿಳಿದರು.ಪಿಚಕಾರಿಗಳಲ್ಲಿ ತುಂಬಿಕೊಂಡಿದ್ದ ನೀಲಿ, ಕೆಂಪು, ಗುಲಾಬಿ ಬಣ್ಣದ ನೀರನ್ನು ಓರಗೆಯವರಿಗೆ ಎರಚಿ ಬಣ್ಣದಾಟಕ್ಕೆ ಚಾಲನೆ ನೀಡಿದ ಮಕ್ಕಳು ಮಧ್ಯಾಹ್ನದ ವೇಳೆಗೆ ತೆರೆಗೆ ಸರಿದರು. ಯುವ ಸಮುದಾಯ ಹಾಗೂ ಹಿರಿಯರು ಬಣ್ಣದಾಟದಲ್ಲಿ ಪಾಲ್ಗೊಂಡ ಬಳಿಕವೇ ರಂಗಿನಾಟಕ್ಕೆ ಮತ್ತಷ್ಟು ರಂಗು ಬಂದಿತು.ಮಧ್ಯಾಹ್ನದವರೆಗೂ ಬಣ್ಣದ ಎರೆಚಾಟದಲ್ಲಿ ನಿರತವಾಗಿದ್ದ ಯುವಕರ ಗುಂಪು ಸಂಜೆ ವೇಳೆಗೆ ಬಣ್ಣದ ಬಂಡಿಗಳನ್ನು ಕಟ್ಟಿಕೊಂಡು ಮೆರವಣಿಗೆ ಆರಂಭಿಸಿದಾಗಲೇ ಮುಳುಗಡೆ ಊರು ರಂಗೇರಿತು. ಇದೇ ರೀತಿ ಬೆಳಿಗ್ಗೆಯಿಂದ ಓಕುಳಿಯಾಡಿದ ನವನಗರ ಮತ್ತು ವಿದ್ಯಾಗಿರಿಯ ಜನರು ಸಂಜೆ ವೇಳೆಗೆ ಬಣ್ಣದಬಂಡಿಗಳನ್ನು ನೋಡಲು ಕಿಲ್ಲಾಪ್ರದೇಶಕ್ಕೆ ದೌಡಾಯಿಸಿದರು. ಪ್ರಮುಖ ವೃತ್ತಗಳು ಹಾಗೂ ಓಣಿಗಳ ತಿರುವಿನಲ್ಲಿ ಸೇರಿದ ಯುವಕರ ಗುಂಪುಗಳು ಅಬ್ಬರದ ಸಂಗೀತಕ್ಕೆ ಹೆಜ್ಜೆಹಾಕುತ್ತ ರಂಗಿನಾಟದಲ್ಲಿ ಮೈಮರೆತಿದ್ದರು.ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರ- ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಮಾರುಕಟ್ಟೆಗಳು ಹಾಗೂ ಪ್ರಮುಖ ರಸ್ತೆಗಳು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು.

ಸಾಂಪ್ರದಾಯಿಕ ಹಬ್ಬದ ಎರಡನೇ ದಿನವಾದ ಸೋಮವಾರ(ಮಾ.21) ಹಳಪೇಟೆ, ಜೈನಪೇಟೆ ಮತ್ತು ವೆಂಕಟಪೇಟೆಯ ಜನರು ಓಕುಳಿ ಆಡಲಿದ್ದಾರೆ. ಎರಡನೇ ದಿನದ ಓಕುಳಿಯಲ್ಲಿ ಕಿಲ್ಲಾ ಸೇರಿದಂತೆ ನಾಲ್ಕೂ ಓಣಿಗಳಲ್ಲಿ ರಂಗಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.