ಬುಧವಾರ, ಮೇ 12, 2021
26 °C
ಮಾನವೀಯತೆ ಮೆರೆದ ತಹಶೀಲ್ದಾರ್ ಲಕ್ಷ್ಮಣ

ಮೂಕವ್ವಳಿಗೆ ಮಾಸಾಶನದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ಅವಳು ಮಾತು ಬಾರದ ಮೂಕಿ. ಅವಳ ಹೆಸರು ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ ಜನರು ಕರೆಯುವುದು ಮೂಕವ್ವ ಎಂದು. ತಂದೆ ಡೊಳ್ಳಪ್ಪ ಕುಂಟೋಜಿ. ಗೊಲ್ಲರ ಓಣಿಯ ನಿವಾಸಿ. ಅವಳಿಗೆ ಪ್ರತಿ ತಿಂಗಳೂ ಬರುತ್ತಿದ್ದ ಅಂಗವಿಕಲತೆಯ ಮಾಸಾಶನ ಮೂರು ವರ್ಷದ ಹಿಂದೆ ನಿಂತು ಹೋಗಿದೆ. ತನಗೆ ಬರಬೇಕಾದ ಮಾಸಾಶನ ಮರಳಿ ನೀಡುವಂತೆ ಕಚೇರಿಗಳನ್ನು ಅಲೆದಿದ್ದಾಳೆ. ಪ್ರಯೋಜನ ಆಗಿಲ್ಲ.ಮಾಸಾಶನಕ್ಕಾಗಿ ತಹಶೀಲ್ದಾರ್ ಕಚೇರಿ, ಖಜಾನೆ ಇಲಾಖೆಗೆ ಹಲವಾರು ಬಾರಿ ತಿರುಗಾಡಿದ್ದಳೆ. ಅವರಿಂದ ಸಿಕ್ಕಿದ್ದು ಬೈಗುಳ. ಜೀವನಕ್ಕೆ ಆಸರೆಯಾಗಿದ್ದ ಮಾಸಾಶನ ನೀಡುವಂತೆ ಕೋರಿ ಕಚೇರಿಗಳಲ್ಲಿ ಕಂಡವರ ಕಾಲು ಹಿಡಿಯುತ್ತಾಳೆ. ಕಣ್ಣೀರು ಹಾಕಿ ಗೋಳು ತೋಡಿಕೊಂಡಿದ್ದಾಳೆ, ತನ್ನ ಹಳೆಯ ಮಾಸಾಶನದ ಚೀಟಿ ತೋರಿಸಿ ನೆರವಾಗುವಂತೆ ಗೋಗರೆದಿದ್ದಾಳೆ. ಸಮಸ್ಯೆ ಏನೆಂದು ಹೇಳಲು ಸಾಧ್ಯವಾಗದು. ಮೂಕ ಭಾಷೆಯಲ್ಲಿ, ಕೈ ಬಾಯಿ ಸನ್ನೆಯಿಂದ ನೋವು ಹೇಳಿಕೊಂಡರೂ ಕೇಳುವವರು ಇರಲಿಲ್ಲ.ಮೂಕವ್ವನಿಗೆ ಸಂಬಂಧಿ ಎಂದು ಹೇಳಿಕೊಳ್ಳಲು ಇದ್ದುದು ತಮ್ಮನ ಹೆಂಡತಿ ತಿಮ್ಮವ್ವ ಗೊಲ್ಲರ. ಮೂಕವ್ವನ ನೋವಿಗೆ ಮಾತಿನ ಭಾಷೆ ನೀಡುವುದು ತಿಮ್ಮವ್ವ. `ಬಾಳ ದಿನಾ ಆಗೈದ್ರಿ, ಪಾಪ ಅಕಿಗೆ ಬಾಯಿ ಇಲ್ಲರಿ, ಯಪ್ಪಾ, ತಿರಗಾಡಿ ತಿರಗಾಡಿ ಸಾಕಾಗೈತ್ರಿ ಯಪ್ಪಾ, ಹೊಸಾ (ಮಿನಿ ವಿಧಾನಸೌಧ) ಆಫೀಸನ್ಯಾಗ ಬೆದರಿಸ್ತಾರ‌್ರಿ. ಅರ್ಜಿ ಕೊಟ್ಟಿದಿ, ಸುಮ್ಮ ಹೋಗ ಇನ್ನ. ಮತ್ತ ಹೋದಾಗ ಬೆಂಗಳೂರಿಗೆ ಕಳಿಸೀವಿ, ಬರಾನ ಕೊಡ್ತೀನಿ, ನಾ ಅದನ್ನ ಇಟಗೊಂತಿನೇನ ಬೇ, ಅಕೀಗಿ ಬಾಯಿ ಇಲ್ಲಾ, ನಿನಗೂ ಬಾಯಿ ಇಲ್ಲೇನ ಬಾಯಿ,.. ಅಂತಾರ‌್ರಿ. ನಾ ಅವರಿಗೆ ಬಾಳ ಬ್ಯಾಸ್ರ ಆಗಿನ್ರೀ ಸಾಹೇಬ್ರ. ಹಳೀ ಪತ್ರ ತೊಗೋಂಬಾ ಅಂತಾರ‌್ರಿ. ಅಕೀ (ಮೂಕಿ) ಮನೀ ಸೋರ‌್ತೈತ್ರಿ. ಅದರಾಗ ಇಟ್ಟ ರೇಶನ್ ಕಾರ್ಡ್, ಪೇಪರ‌್ರು ತೋಯ್ದು ಗುಗ್ಗರಿ ಆಗ್ಯಾವ್ರಿ. ನಾನೇ ಅಕಿಗಿ ಮೋಡಕಾದಾಗ ತಗಡ ತೊಗೊಂಡು ಚಾಟ್ ಮಾಡಿನ್ರಿ. ನನಗೂ ಏನೂ ಇಲ್ರಿ, ಅಕೀದು ಅಕೀಗೆ ಮಾಡ್ತಿನ್ರಿ. ವಾರ‌್ದಾಗ ಎರ್ಡ ದಿವಸ ಯಲ್ಲವ್ವನ ಪೂಜೆ ಮಾಡ್ತಿನ್ರಿ. ನನಗ 15 ಕಿಲೋ ಅಕ್ಕಿ ಬರ‌್ತಾವ್ರಿ, ಮನ್ಯಾಗ ಐದು ಮಂದಿ ಅದಿವ್ರಿ. ಅದರಾಗ ಮೂಕವ್ವಗೂ ಮಾಡಿ ಕೊಡ್ತಿನ್ರಿ' ಎನ್ನುವರು.ಇಂಥ ಕರುಣಾಜನಕ ಕಥೆ ಹೊಂದಿರುವ ಮೂಕಿವ್ವನನ್ನು ಪರಿಚಿತರೊಬ್ಬರು ತಹಶೀಲ್ದಾರ್ ಲಕ್ಷ್ಮಣ ಬಳಿ ನಿಲ್ಲಿಸಿದರು. ತಾಲ್ಲೂಕಿನ ಪಡಿತರ ವಿತರಕರ ಸಭೆಯನ್ನು ಅರ್ಧದಲ್ಲಿಯೇ ನಿಲ್ಲಿಸಿದ ಅವರು ಸಮಸ್ಯೆ ಕೇಳಿದ ತಕ್ಷಣವೇ ಸಂಬಂಧಿಸಿದ ತಲಾಟಿ ಸಾಲಿಮಠ ಅವರಿಗೆ ಫೋನ್ ಮಾಡಿ ಕರೆಯಿಸಿದರು. ಸಾಲಿಮಠ ಬಂದವರೇ ಏನೇನೋ ಹೇಳಲು ಮುಂದಾದರು. ಅವರ ಸಮಜಾಯಿಷಿ ಕೇಳುವ ಸ್ಥಿತಿಯಲ್ಲಿ ತಹಶೀಲ್ದಾರ್ ಇರಲಿಲ್ಲ.ತಲಾಟಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಅದಕ್ಕೆ ಸಂಬಂಧಿಸಿದ ಇತರ ಸಿಬ್ಬಂದಿಯನ್ನೂ ವಿಚಾರಣೆ ಮಾಡಿದರು. `ಇಂಥಾ ಜನರಿಗೆ ಸಹಾಯ ಮಾಡ್ರಿ, ಪುಣ್ಯಾ ಬರ‌್ತಾದ. ವಾರದೊಳಗೆ ಮೂಕಿಗೆ ಮಾಸಾಶನ ತಲುಪಬೇಕು. ಇಲ್ಲವಾದರೆ ಸಂಬಂಧಿಸಿದ ಎಲ್ಲರ ವಿರುದ್ಧ ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಕೆ ನೀಡಿದರು.ನಾನೇ ನಿಂತು ಮಾಡ್ತಿನಿ: ಮೂಕವ್ವಳೊಂದಿಗೆ ಕಚೇರಿಯಿಂದ ಹೊರ ಬಂದ ತಲಾಟಿ ಸಾಲಿಮಠ ಅವರು, ಕೂಡಲೇ ನಾಲ್ಕು ಫೋಟೊ, ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ತರುವಂತೆ ಹೇಳಿದರು. `ನಾನೇ ಮೂರು ಸಲ ಅರ್ಜಿ ಬರದ ಹಾಕಿನ್ರಿ, ಮ್ಯೋಲಿಂದ ಬಂದಿಲ್ಲ. ಈ ಸಲ ನಾನೇ ಮುಂದ ನಿಂತು ಮಾಡ್ತಿನ್ರಿ' ಎಂದು ಸಾಲಿಮಠ ಭರವಸೆ ನೀಡಿದರು. ಆಗ ಮೂಕವ್ವನಿಂದ ಸಮಾಧಾನದ ನಿಟ್ಟುಸಿರು ಹೊರಬಂದು, ಮುಖದಲ್ಲಿ ನಗು ಕಾಣಿಸಿಕೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.