ಬುಧವಾರ, ಮೇ 25, 2022
30 °C

ಮೂರನೇ ಬಾರಿಗೆ ಜೈಲಿನ ದಾರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಮೂರನೇ ಬಾರಿಗೆ ಜೈಲುವಾಸ ಎದುರಿಸುತ್ತಿರುವ ಶಾಸಕ ವೈ.ಸಂಪಂಗಿ ರಾಜಕೀಯವಾಗಿ ನಡೆದು ಬಂದ ದಾರಿಯೂ ಕುತೂಹಲಕರವಾಗಿದೆ.ಲಂಚ ಸ್ವೀಕರಿಸಿ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಾಗ ಮೊದಲ ಬಾರಿಗೆ ಜೈಲು ಕಂಡಿದ್ದರು. ಎರಡನೇ ಬಾರಿ 2011ರ ಅಕ್ಟೋಬರ್‌ನಲ್ಲಿ ದೂರುದಾರ ಫಾರೂಕ್ ಸಾಕ್ಷಿ ಹೇಳುವ ಸಂದರ್ಭದಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಮೂರನೇ ಬಾರಿಗೆ, ಶನಿವಾರ ಜೈಲು ಶಿಕ್ಷೆ ಪ್ರಕಟವಾಗಿದೆ.ಕಳೆದ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಕೆಜಿಎಫ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವೈ.ಸಂಪಂಗಿ ಆಯ್ಕೆ ಪ್ರಕಟವಾದಾಗ ಎಲ್ಲರಿಗೂ ಕುತೂಹಲ ಹಾಗೂ ಅಚ್ಚರಿಯಾಗಿತ್ತು. ಏಕೆಂದರೆ ಅವರು ಕ್ಷೇತ್ರಕ್ಕೆ ಅಪರಿಚಿತರಾಗಿದ್ದರು.ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ, ಕೆಜಿಎಫ್ ಮಾಜಿ ಶಾಸಕರಿಬ್ಬರ ಕಿತ್ತಾಟ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮೂಲತಃ ಕನ್ನಡಿಗರೊಬ್ಬರು ಆಯ್ಕೆಯಾಗಬೇಕು ಎಂಬ ಮತದಾರರ ಉತ್ಸಾಹದಿಂದ ಸಂಪಂಗಿ ಶಾಸಕರಾದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸಂಪಂಗಿ ಈಗಲೂ ಬೆಂಗಳೂರಿನ ಹೊಂಗಸಂದ್ರದ ನಿವಾಸಿ. (ಕೆಜಿಎಫ್ ಕ್ಷೇತ್ರದ ಬೇತಮಂಗಲದಲ್ಲಿಯೂ ಅವರು ಮನೆ ಮಾಡಿದ್ದು, ಸಾಮಾನ್ಯವಾಗಿ ವಾರಕ್ಕೆರಡು ದಿನ ಇರುತ್ತಾರೆ). ಇಲ್ಲಿನ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಂಘದ ಸಂಸ್ಥಾಪಕ ಅಧ್ಯಕ್ಷರು.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದಾಗ ಕೊಠಡಿಯಲ್ಲಿದ್ದ ಡಾ.ಅಂಬೇಡ್ಕರ್ ಭಾವಚಿತ್ರ ತೆಗೆದು ಅವಮಾನಿಸಿದರು ಎಂದು ದಲಿತ ಸಂಘಟನೆಗಳು ಹೋರಾಟದ ಹಾದಿ ಹಿಡಿದಿದ್ದಾಗ ತಮ್ಮ ಡಿಎಚ್‌ಎಎಸ್ ಸಂಘದ ಮೂಲಕ ಸಂಪಂಗಿ ಯಡಿಯೂರಪ್ಪ ಪರ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಕ್ಷೇತ್ರದಲ್ಲಿ ಎಷ್ಟೇ ವಿರೋಧವಿದ್ದರೂ ಕೆಜಿಎಫ್‌ನಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದು ಕಮಲ ಅರಳಲು ಕಾರಣರಾದ ಸಂಪಂಗಿ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪನವರಿಗೇ ಸೆಡ್ಡು ಹೊಡೆದದ್ದು ಪ್ರಮುಖ ಬೆಳವಣಿಗೆ.ಯಡಿಯೂರಪ್ಪನವರನ್ನು ಬದಲಾವಣೆ ಮಾಡಬೇಕೆನ್ನುವ ಗುಂಪಿನಲ್ಲಿ ಸೇರಿಕೊಂಡು ಕುಮಾರಸ್ವಾಮಿ ಸಂಗಡ ಗೋವಾಕ್ಕೆ ತೆರಳಿದ್ದರು. ನಂತರದ ವಿದ್ಯಮಾನದಲ್ಲಿ ಅವರನ್ನು ಶಾಸಕ ಸ್ಥಾನದಿಂದ ಸ್ಪೀಕರ್ ಅನರ್ಹಗೊಳಿಸಿದ್ದರು. ಅದೇ ವೇಳೆ ಬಿಜೆಪಿ ಮೂಲ ಕಾರ್ಯಕರ್ತರು ಕೆಜಿಎಫ್‌ನಲ್ಲಿದ್ದ ಶಾಸಕರ ಕೊಠಡಿಯನ್ನು ಧ್ವಂಸ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ್ದರು.ಬಿಜೆಪಿ ಶಾಸಕರಾಗಿದ್ದರೂ, ಕೆಲವು ಕಾರ್ಯಕ್ರಮದಲ್ಲಿ ಸಂಪಂಗಿ ತಮ್ಮ ಸಂಘಟನೆಯಾದ ಡಿಎಚ್‌ಎಎಸ್ ಧ್ವಜ ಪ್ರದರ್ಶಿಸುತ್ತಿದ್ದುದು ಕಾರ್ಯಕರ್ತರ ಅಸಹನೆಗೆ ಕಾರಣವಾಗಿತ್ತು. ಈ ಸಂಬಂಧ ಹೈಕಮಾಂಡಿಗೆ ದೂರನ್ನೂ ಸಲ್ಲಿಸಲಾಗಿತ್ತು. ಈಗಲೂ ಕೆಜಿಎಫ್‌ನಲ್ಲಿ ಬಿಜೆಪಿ ಒಡೆದ ಮನೆ. ಈಚೆಗೆ ಬಿಜೆಪಿ ಸೇರಿದ ಮುಖಂಡರು ಸಂಪಂಗಿ ಬೆಂಬಲಿಸುತ್ತಿದ್ದಾರೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಸಂದರ್ಭದಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಂಪಂಗಿ ಬಿಜೆಪಿ ಬದಲು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಆದರೂ ಬಿಜೆಪಿ ಅಭ್ಯರ್ಥಿಗಳು ಬಹುತೇಕ ಕ್ಷೇತ್ರದಲ್ಲಿ ಜಯಗಳಿಸಿದ್ದರು.ಈಚಿನ ದಿನಗಳಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಬಿಜೆಪಿ ಪರವಾಗಿ ಮಾತನಾಡುತ್ತಿರಲಿಲ್ಲ. ಪಕ್ಷಾತೀತವಾಗಿ ಕೆಲಸ ಮಾಡಿದವರಿಗೆ ಓಟು ಹಾಕಿ. ಪಕ್ಷ ನೋಡಬೇಡಿ ಎನ್ನುತ್ತಿದ್ದರು. ಈಗ ಅವರಿಗೆ ಜೈಲುವಾಸ ಮೂರನೇ ಬಾರಿಗೆ ಎದುರಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.