ಶನಿವಾರ, ಮೇ 8, 2021
26 °C

ಮೂರು ದಿನಗಳಲ್ಲಿ ಉತ್ತರ ಒಳನಾಡಿಗೂ ಮುಂಗಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಗಾರು ಮಳೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳನ್ನು ವ್ಯಾಪಿಸಿದ್ದು, ಮೂರು ದಿನಗಳೊಳಗೆ ಉತ್ತರ ಒಳನಾಡನ್ನೂ ಪೂರ್ಣವಾಗಿ ಆವರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.`ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೂರು ದಿನಗಳಿಂದ ಮಳೆ ಬೀಳುತ್ತಿದೆ. ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ.ಸೋಮವಾರ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬಿದ್ದಿದೆ. ದಕ್ಷಿಣ ಒಳನಾಡಿನಲ್ಲಿ 16 ಜಿಲ್ಲೆಗಳಿದ್ದು, ಬಳ್ಳಾರಿ ಹೊರತುಪಡಿಸಿ ಎಲ್ಲ ಜಿಲ್ಲೆ ಗಳಲ್ಲೂ ಮಳೆ ಬೀಳುತ್ತಿದೆ' ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ  `ಪ್ರಜಾವಾಣಿ'ಗೆ ತಿಳಿಸಿದರು.ಉತ್ತರ ಒಳನಾಡಿನಲ್ಲೂ ಮಳೆ ಆರಂಭವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಮಳೆ ಸುರಿಯುತ್ತಿದೆ. ಮುಂಗಾರು ಮಾರುತಗಳು ಎರಡರಿಂದ ಮೂರು ದಿನಗಳೊಳಗೆ ಉಳಿದ ಜಿಲ್ಲೆಗಳನ್ನೂ ತಲುಪುವ ನಿರೀಕ್ಷೆ ಇದೆ. ಮುಂಗಾರು ಮಾರುತಗಳು ಅತ್ಯಂತ ವೇಗವಾಗಿ ಸಾಗುತ್ತಿದ್ದು, ಒಂದೆರಡು ದಿನಗಳಲ್ಲೇ ಮಳೆ ಮತ್ತಷ್ಟು ಬಿರುಸಾಗಲಿದೆ ಎಂದರು.ವಾಡಿಕೆಗಿಂತ ಹೆಚ್ಚು ಮಳೆ: ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಿದ ಮೊದಲ ಮೂರು ದಿನಗಳಲ್ಲಿ ಎಲ್ಲ ಜಿಲ್ಲೆ ಗಳಲ್ಲೂ ಸರಾಸರಿ 12.2 ಮಿಲಿಮೀಟರ್ ಮಳೆ ಸುರಿಯುವುದು ವಾಡಿಕೆ. ಆದರೆ, ಈ ಬಾರಿ ಎಲ್ಲ ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದಿದೆ. ಈ ಬಾರಿ ಮೊದಲ ಮೂರು ದಿನಗಳ ಅವಧಿಯಲ್ಲಿ ಸುರಿದ ಮಳೆಯ ಸರಾಸರಿ ಪ್ರಮಾಣ 35.4 ಮಿ.ಮೀ ಇದೆ ಎಂದು ವಿವರ ನೀಡಿದರು.`ಮುಂದಿನ ಎರಡು ದಿನಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ಇದೆ. ಮುಂಗಾರು ಮಾರುತಗಳ ವೇಗ ಹೆಚ್ಚಿರುವುದರಿಂದ ಸಮುದ್ರದಲ್ಲಿ ವೇಗವಾಗಿ ಗಾಳಿ ಬೀಸುತ್ತಿದೆ. ಈ ಕಾರಣದಿಂದ ಮುಂಗಾರು ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಕರಾವಳಿ ತೀರದ ಮೀನು ಗಾರರಿಗೆ ಎಚ್ಚರಿಕೆ ನೀಡಲಾಗಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.