ಸೋಮವಾರ, ಸೆಪ್ಟೆಂಬರ್ 16, 2019
21 °C

ಮೂಲಸೌಕರ್ಯ ಕಲ್ಪಿಸಲು ಆಗ್ರಹ

Published:
Updated:

ಯಾದಗಿರಿ: ತಾಲ್ಲೂಕಿನ ಹಳಗೇರಾ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ರಾಜೀವ ಗಾಂಧಿ ಗ್ರಾಮ ವಿದ್ಯುತ್ ಯೋಜನೆಯಲ್ಲಿ ಗ್ರಾಮಕ್ಕೆ ಸುಮಾರು 44 ಕಂಬಗಳು, ಎರಡು ಟಿಸಿಗಳನ್ನು ಅಳವಡಿಸಲಾಗಿದ್ದು, ಹತ್ತು ತಿಂಗಳಾದರೂ, ಸಂಪರ್ಕ ಕಲ್ಪಿಸಿಲ್ಲ. ತಂತಿ ಹಾಗೂ ಟಿಸಿ ಸಾಮಗ್ರಿಗಳು ಕಳುವಾಗುತ್ತಿವೆ ಎಂದು ತಿಳಿಸಿದ್ದಾರೆ.ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ, ಚರಂಡಿಯ ಸ್ವಚ್ಛತೆ, ನ್ಯಾಯಬೆಲೆ ಅಂಗಡಿಯ ಅವ್ಯವಸ್ಥೆ, ಸೀಮೆ ಎಣ್ಣೆಯ ಅಸಮರ್ಪಕ ವಿತರಣೆ, ಗ್ರಾಮ ಲೆಕ್ಕಿಗರು ಗ್ರಾಮಕ್ಕೆ ಬರದೇ ಇರುವುದು, ಕೃಷಿ ಇಲಾಖೆಯ ಗ್ರಾಮ ಸೇವಕರು ಗ್ರಾಮಕ್ಕೆ ಬಂದು ಬೀಜೋಪಚಾರಗಳ ಬಗ್ಗೆ ತಿಳಿಸದೇ ಇರುವುದು, ವಿದ್ಯುತ್ ಟಿಸಿ ಸುಟ್ಟು ಮೂರು ವಾರವಾದರೂ ಬದಲಿಸದೇ ಇರುವುದು ಸೇರಿದಂತೆ ಹಲವಾರು ಸಮಸ್ಯೆಗಳು ಗ್ರಾಮದಲ್ಲಿವೆ ಎಂದು ವಿವರಿಸಿದ್ದಾರೆ.2009-10 ನೇ ಸಾಲಿನ ವಾರ್ಷಿಕ ಜಮಾಬಂದಿ ಕಾರ್ಯಕ್ರಮವನ್ನು ಕಾರ್ಯದರ್ಶಿಗಳು ಮಾಡಿಲ್ಲ. ಅಧಿಕಾರಿಗಳನ್ನು ಕೇಳಿದರೆ, ಮೇಲಧಿಕಾರಿಗಳು ಜಮಾಬಂದಿ ಮಾಡದಂತೆ ಸೂಚಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಕಟ್ಟಡ ಅರ್ಧಕ್ಕೆ ನಿಂತಿದ್ದು, ಮೂರು ವರ್ಷ ಕಳೆದರೂ ಪೂರ್ಣವಾಗುತ್ತಿಲ್ಲ. ಶಾಲಾ ಕಟ್ಟಡಗಳು ಕಿಟಕಿ, ಬಾಗಿಲು ಇಲ್ಲದೇ ಅರ್ಧಕ್ಕೆ ನಿಂತಿವೆ. ಕಂಪೌಂಡ್ ನಿರ್ಮಿಸಿಲ್ಲ. ಇದರಿಂದಾಗಿ ಶಾಲೆಯ ಆವರಣದಲ್ಲಿ ದನಕರುಗಳನ್ನು ಕಟ್ಟಲಾಗುತ್ತಿದೆ. ಶಾಲೆ ಎಂಬುದು ದನದ ಕೊಟ್ಟಿಗೆಯಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ನಾಗಣ್ಣಗೌಡ ದಿವಟಗೇರ, ದೊಡ್ಡಪ್ಪ ಕುಂಬಾರ, ದೇವೀಂದ್ರಪ್ಪ ನಾಯಕ ಮುಂತಾದವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Post Comments (+)