ಶುಕ್ರವಾರ, ಏಪ್ರಿಲ್ 23, 2021
24 °C

ಮೂಲಸೌಲಭ್ಯ ವಂಚಿತ ಕರೇನಹಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ದೊಡ್ಡಬಳ್ಳಾಪುರ: ಮೂರು ಸಾವಿರದಷ್ಟು ಮತದಾರರ ಸಂಖ್ಯೆಯಿರುವ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಕರೇನಹಳ್ಳಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.ಆಡಳಿತಾತ್ಮಕವಾಗಿ ಅರಳುಮಲ್ಲಿಗೆ ಹಾಗೂ ದರ್ಗಾಜೋಗಿಹಳ್ಳಿ ಎರಡು ಗ್ರಾಮ ಪಂಚಾಯಿತಿಗಳಿಗೆ ಒಳಪಟ್ಟಿದ್ದು, ಇತ್ತೀಚೆಗಷ್ಟೆ ಅಂದರೆ ನಗರಸಭೆ ಚುನಾವಣೆ ಸಮಯದಲ್ಲಿ ‘ನಗರಸಭೆಗೆ ವಾಪ್ತಿಗೆ ಸೇರಿಕೊಂಡಿದೆ’ಹೀಗಾಗಿ ಇಲ್ಲಿನ ಮತದಾರರು ಕಳೆದ ಮೂರು ವರ್ಷಗಳಲ್ಲಿ ಎರಡು ಗ್ರಾಮ ಪಂಚಾಯಿತಿ ಮತ್ತು ಒಂದು ನಗರಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.  ‘ಮತ ಹಾಕಿಸಿಕೊಳ್ಳುವಾಗ ಮಾತ್ರ ಮತದಾರರ ಪಟ್ಟಿ ಕೈಯಲ್ಲಿಡಿದುಕೊಂಡು ಬರುತ್ತಾರೆ. ಅಭಿವೃದ್ಧಿ ಕುರಿತು ಮಾತನಾಡಿದರೆ ಇದು ನಮ್ಮ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಬೆನ್ನು ತೋರಿಸುತ್ತಾರೆ ಎಂದು ದೂರುತ್ತಾರೆ ಕರೇನಹಳ್ಳಿ ನಿವಾಸಿ ಸುಮಿತ್ರಮ್ಮ.‘ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಯಾವ ಪ್ರದೇಶ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ ಎನ್ನುವ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಈ ಬಗ್ಗೆ ಯಾರನ್ನೇ ಕೇಳಿದರೂ ಸ್ಪಷ್ಟ ಉತ್ತರವಿಲ್ಲದೇ ಪರದಾಡುವಂತಾಗಿದೆ’ ಎನ್ನುತ್ತಾರೆ.‘ಕುಡಿಯುವ ನೀರು, ರಸ್ತೆ ಸೌಲಭ್ಯ ಕಲ್ಪಿಸಲು ನಗರಸಭೆ ಆಯುಕ್ತರನ್ನು ಕೇಳಿದರೆ ಇಲ್ಲಿ ಮನೆ ಕಟ್ಟಿಕೊಳ್ಳಲು ನಿಮಗೆ ಹೇಳಿದವರು ಯಾರು’ ಎನ್ನುತ್ತಾರೆ. ವಸತಿ ಸೌಲಭ್ಯ ಅಥವಾ ಮೂಲ ಸೌಲಭ್ಯ ಒದಗಿಸಲು ಆಗದ ನಗರಸಭೆಯವರು ಕಂದಾಯ ವಸೂಲಿ ಏಕೆ ಮಾಡಬೇಕು ಎಂದು ಕರೇನಹಳ್ಳಿ ಹಿತರಕ್ಷಣಾ ವೇದಿಕೆ ಸಂಚಾಲಕ ಕೆರಮಲಬದ್ರಿ ಪ್ರಶ್ನಿಸುತ್ತಾರೆ.ಐದು ದಿನಕ್ಕೆ ಒಮ್ಮೆ ನೀರು: ಒಂದು ವರ್ಷದ ಹಿಂದೆ ಎರಡು ಬೃಹತ್ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಈವರೆಗೆ ಟ್ಯಾಂಕ್‌ಗೆ ನೀರು ಬಿಟ್ಟಿಲ್ಲ. ಇರುವ ಕೊಳಾಯಿಗಳಲ್ಲೇ ವಾರಕ್ಕೆ ಒಮ್ಮೆ 15 ನಿಮಿಷ ನೀರು ವಿತರಿಸುತ್ತಾರೆ. ಉಳಿದಂತೆ ಖಾಸಗಿ ಟ್ಯಾಂಕರ್‌ಗಳಿಂದ ಒಂದು ಕೊಡ ನೀರಿಗೆ 2 ರೂಪಾಯಿಗಳನ್ನು ನೀಡಿ ಖರೀದಿಸಲಾಗುತ್ತಿದೆ. ಕರೇನಹಳ್ಳಿ ಪ್ರದೇಶದಲ್ಲಿ ಶೇಕಡ 80 ರಷ್ಟು ಕುಟುಂಬಗಳು ಕೂಲಿ ಕಾರ್ಮಿಕರು. ಇಂಥ ಪ್ರದೇಶಕ್ಕೆ ಪ್ರತಿದಿನ ನೀರು ಬಿಡಬೇಕು. ಆದರೆ ಇಲ್ಲಿ ಒಮ್ಮೆ 15 ನಿಮಿಷ ಮಾತ್ರ ನೀರು ವಿತರಿಸಲಾಗುತ್ತಿದೆ.ಹಂದಿಗಳ ಕಾಟ: ಕರೇನಹಳ್ಳಿಯಲ್ಲಿ ಚರಂಡಿ, ರಸ್ತೆಗಳು ಇಲ್ಲದಿರುವುದರಿಂದ ಚರಂಡಿ ನೀರು ಎಲ್ಲೆಂದರಲ್ಲಿ ಹರಿದು ಗಲೀಜಾಗಿದೆ. ಇದರಿಂದಾಗಿ ಹಂದಿಗಳ ಸಾಕಾಣಿಕೆ ಹೇಳಿ ಮಾಡಿಸಿದಂತ ಸ್ಥಳ. ಹೀಗಾಗಿ ಇಲ್ಲಿನ ಸುಮಾರು 200ಕ್ಕೂ ಹೆಚ್ಚು ಹಂದಿಗಳನ್ನು ಜನ ವಸತಿ ಪ್ರದೇಶದಲ್ಲೇ ಸಾಕಾಣಿಕೆ ಮಾಡಲಾಗಿದೆ.ಹಂದಿಗಳನ್ನು ಹಿಡಿದು ಹೊರಗೆ ಸಾಗಿಸುವಂತೆ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಕೆರಮಲಬದ್ರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.