ಶುಕ್ರವಾರ, ಜೂನ್ 25, 2021
29 °C

ಮೂಲ ಆದಿವಾಸಿಗಳ ಪಟ್ಟಿ: ಸೋಲಿಗರ ಸೇರ್ಪಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸೋಲಿಗರನ್ನು ಮೂಲ ಆದಿವಾಸಿಗಳ ಪಟ್ಟಿಗೆ ಸೇರಿಸಿ ಸವಲತ್ತು ಕಲ್ಪಿಸಿಕೊಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು~ ಎಂದು ಸಂಸದ ಆರ್. ಧ್ರುವನಾರಾಯಣ ಒತ್ತಾಯಿಸಿದ್ದಾರೆ.ಸಂಸತ್ ಅಧಿವೇಶನದಲ್ಲಿ ಮಂಗಳವಾರ ಮ್ಯೋಟರ್ ಅಂಡರ್ ರೂಲ್-377 ಅಡಿ ಮಾತನಾಡಿದ ಅವರು, 1975ರಲ್ಲಿ ಕೇಂದ್ರ ಸರ್ಕಾರ ಪರಿಶಿಷ್ಟ ವರ್ಗದ ಗುಂಪಿನಲ್ಲಿ ಅತ್ಯಂತ ಹಿಂದುಳಿದ ಗಿರಿಜನರನ್ನು `ಮೂಲ ಆದಿವಾಸಿಗಳ ಗುಂಪು~ ಎಂದು ವರ್ಗೀಕರಿಸಿದೆ. ಇಲ್ಲಿಯವರೆಗೆ ದೇಶದ ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿ 75 ಗಿರಿಜನ ಗುಂಪುಗಳನ್ನು ಗುರುತಿಸಲಾಗಿದೆ ಎಂದರು.ರಾಜ್ಯದಲ್ಲಿ ಜೇನು ಕುರುಬ ಮತ್ತು ಕೊರಗ ಜನಾಂಗವನ್ನು ಮಾತ್ರ ಮೂಲ ಆದಿವಾಸಿಗಳ ಗುಂಪಿಗೆ ಸೇರಿಸಲಾಗಿದೆ. ಆದರೆ, ಸೋಲಿಗರನ್ನು ಈ ಗುಂಪಿನಿಂದ ಕೈಬಿಡಲಾಗಿದೆ. ಈ ಕಾರಣದಿಂದ ಪರಿಶಿಷ್ಟ ವರ್ಗದ ಇತರೇ ಗುಂಪಿನ ಸದಸ್ಯರು ಕೇಂದ್ರ ಸರ್ಕಾರದ ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.ಚಾಮರಾಜನಗರ ಜಿಲ್ಲೆಯಲ್ಲಿ ಜೇನು ಕುರುಬ, ಕಾಡು ಕುರುಬ ಮತ್ತು ಸೋಲಿಗ ಎಂಬ ಪರಿಶಿಷ್ಟ ವರ್ಗದ ವಿವಿಧ ಗುಂಪುಗಳಿವೆ. 2001ನೇ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಸೋಲಿಗರಿದ್ದಾರೆ.ಅವರ ಜೀವನ ಶೈಲಿ, ಸಂಸ್ಕೃತಿ ವಿಭಿನ್ನವಾಗಿದೆ. ಸೋಲಿಗರನ್ನು ಮೂಲ ಆದಿವಾಸಿಗಳ ಪಟ್ಟಿಯಲ್ಲಿ ಸೇರಿಸದಿರುವ ಪರಿಣಾಮ ಗಿರಿಜನರ ವಿವಿಧ ಗುಂಪುಗಳಲ್ಲಿ ಸಮಸ್ಯೆ ಉಂಟಾಗಿದೆ.ಜತೆಗೆ, ಗೊಂದಲ ಏರ್ಪಡಲಿದೆ. ಕೂಡಲೇ, ಸೋಲಿಗರನ್ನು ಮೂಲ ಆದಿವಾಸಿಗಳ ಗುಂಪಿನ ಪಟ್ಟಿಗೆ ಸೇರಿಸಬೇಕು. ಆ ಮೂಲಕ ಕೇಂದ್ರ ಗಿರಿಜನ ಕಲ್ಯಾಣ ಇಲಾಖೆಯ ಸವಲತ್ತು ಕಲ್ಪಿಸಿಕೊಡಬೇಕು ಎಂದು ಸಂಸದರು ಸರ್ಕಾರದ ಗಮನ ಸೆಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.