ಶನಿವಾರ, ಜನವರಿ 18, 2020
19 °C
ಜಿಲ್ಲೆಯ ಮೂರೂ ಖರೀದಿ ಕೇಂದ್ರಗಳಿಂದ ರೈತರು ದೂರ

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ರೈತರೇಕೆ ಬರುತ್ತಿಲ್ಲ?

ಪ್ರಜಾವಾಣಿ ವಾರ್ತೆ/ ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ರೈತರೇಕೆ ಬರುತ್ತಿಲ್ಲ?

ಚಿತ್ರದುರ್ಗ: ಬೆಂಬಲ ಬೆಲೆಯೊಂದಿಗೆ ಮೆಕ್ಕೆಜೋಳದ ಖರೀದಿಗಾಗಿ  ಜಿಲ್ಲೆಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಮೂರು ಖರೀದಿ ಕೇಂದ್ರಗಳನ್ನು ತೆರೆದಿದ್ದು, ಇಲ್ಲಿಯವರೆಗೆ ಕೇಂದ್ರಕ್ಕೆ ಒಂದು ಕೆ.ಜಿ ಮೆಕ್ಕೆಜೋಳ ಕೂಡ ಮಾರಾಟವಾಗಿಲ್ಲ!ಮಾರುಕಟ್ಟೆಯಲ್ಲಿ ಕ್ವಿಂಟಲ್ ಮೆಕ್ಕೆಜೋಳ ₨ 1200 ಇದ್ದು, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₨ 1310 ರಂತೆ ನಿಗದಿಪಡಿಸಿದೆ. ಮುಕ್ತ ಮಾರುಕಟ್ಟೆ ಬೆಲೆಗಿಂತ ₨ 100 ಹೆಚ್ಚಿಗೆ ಇದ್ದರೂ ರೈತರು ಖರೀದಿ ಕೇಂದ್ರಕ್ಕೆ ಬರುತ್ತಿಲ್ಲ.ಪ್ರಚಾರದ ಕೊರತೆಯಿಂದ ಹೀಗಾಗಿರಬಹುದೆಂದು ಚಿಂತನೆ ನಡೆಸಿದ ಜಿಲ್ಲಾಡಳಿತ, ಮಾಧ್ಯಮಗಳ ಮೂಲಕ ಪ್ರಚಾರದ ಕೊರತೆಯನ್ನೂ ನೀಗಿಸಿತು. ಇದಾದ ನಂತರ ಮೆಕ್ಕೆಜೋಳ ಬೆಳೆಗಾರರು ಖರೀದಿ ಕೇಂದ್ರಕ್ಕೆ ಬಂದು ಖರೀದಿಯ ಪ್ರಕ್ರಿಯೆ, ದರ ನಿಗದಿ ಹಾಗೂ ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ಪಡೆದು, ತಮ್ಮ ಹೆಸರನ್ನು ದಾಖಲಿಸಿದ್ದಾರೆಯೇ ಹೊರತು, ಖರೀದಿಗೆ ಮುಂದಾಗಿಲ್ಲ ಎಂದು ಖರೀದಿ ಕೇಂದ್ರದ ನೋಡಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಈ ನಡುವೆ ಚಿತ್ರದುರ್ಗದ ಎಪಿಎಂಸಿ ಮಾರುಕಟ್ಟೆಯಿಂದ ದಲ್ಲಾಳಿಗಳ ಮೂಲಕ (ಕ್ವಿಂಟಲ್‌ಗೆ ₨ 1,210ನಂತೆ) ಪ್ರತಿ ನಿತ್ಯ 7,000 ಚೀಲಗಳಷ್ಟು ಮೆಕ್ಕೆಜೋಳ ಹೊರಗೆ ರವಾನೆಯಾಗುತ್ತಿದೆ. ಪ್ರತಿ ಅಂಗಡಿಯಿಂದ ಕನಿಷ್ಠ 100ರಿಂದ 150 ಚೀಲಗಳಷ್ಟು ಮೆಕ್ಕೆಜೋಳ ಮಾರಾಟವಾಗುತ್ತಿದೆ ಎನ್ನುತ್ತಾರೆ ಪೂಜಾ ಏಜೆನ್ಸಿಸ್‌ನ ಬಸವರಾಜು.ಖರೀದಿ ಕೇಂದ್ರಕ್ಕೆ ಬಾರದಿರಲು ಕಾರಣ ಏನು?: ಮೊದಲನೆಯದಾಗಿ ಕೊಯ್ಲಾದ ಬೆಳೆಯನ್ನು ದಲ್ಲಾಳಿಗಳು ಜಮೀನಿನಿಂದಲೇ ಖರೀದಿಸುತ್ತಾರೆ. ಹಾಗಾಗಿ ಸಾಗಾಟದ ಸಮಸ್ಯೆ ಇರುವುದಿಲ್ಲ. ತೇವಾಂಶ ಪರೀಕ್ಷೆಯಂತಹ ಕಠಿಣ ಪ್ರಕ್ರಿಯೆಗಳು ಇರುವುದಿಲ್ಲ.  ರೈತರು ದಲ್ಲಾಳಿಗಳ ಬಳಿ ಸಾಲ ಮಾಡಿರುವುದರಿಂದ, ಅನಿವಾರ್ಯವಾಗಿ ತಮ್ಮ ಬೆಳೆಯನ್ನು ಅವರಲ್ಲೇ ಬಿಡುತ್ತಾರೆ.ಬೆಳೆಯನ್ನು ಖರೀದಿ ಕೇಂದ್ರಕ್ಕೆ ತರವುದೇ ಒಂದು ಸಾಹಸದ ಕೆಲಸ. ಸಾಗಾಟದ ವೆಚ್ಚವೂ ದುಬಾರಿ. ಇದರ ಜತೆಗೆ ಖರೀದಿ ಕೇಂದ್ರಗಳಲ್ಲಿ ಮೊದಲು ಮಾದರಿ ತಂದು ತೇವಾಂಶ ಪರೀಕ್ಷೆ ಮಾಡಿಸಿ, ದರ ನಿಗದಿಪಡಿಸಬೇಕು. ಈ ಪ್ರಕ್ರಿಯೆ ತುಸು ತಡವಾಗುತ್ತದೆ. ತಕ್ಷಣವೇ ಹಣಕಾಸು ಲಭ್ಯವಾಗುವುದರಿಂದ ದಲ್ಲಾಳಿಗಳ ಬಳಿ ಬಿಡುವುದೇ ಸೂಕ್ತ ಎಂದು ನಿರ್ಧರಿಸುತ್ತಾರೆ ಎನ್ನುವುದು ತಾಳ್ಯದ ಕೃಷಿಕ ಪಿ.ಆರ್.ಕುಲಕರ್ಣಿ ಅಭಿಪ್ರಾಯ.1 ಎಕರೆ ಮೆಕ್ಕೆಜೋಳ ಬಿತ್ತನೆಗೆ ₨ 12 ರಿಂದ 13ಸಾವಿರ ಖರ್ಚಾಗುತ್ತದೆ. 20 ರಿಂದ 22 ಚೀಲ ಇಳುವರಿ ದೊರೆತು

ಕ್ವಿಂಟಲ್ ಗೆ ₨ 1,100 ರಿಂದ 1,300 ಬೆಲೆ ಸಿಕ್ಕರೆ ರೈತ ತುಸು ಸುಧಾರಿಸಿಕೊಳ್ಳುತ್ತಾನೆ. ಆದರೆ ಬೆಲೆ ಅನಿಶ್ಚತತೆ ನಡುವೆ ರೈತರು ಇವೆಲ್ಲಕ್ಕೂ ಕಾಯದೇ ಕೊಯ್ಲಾದಷ್ಟು ಬೆಳೆಯನ್ನು, ಕೇಳಿದವರಿಗೆ, ಸಿಕ್ಕಷ್ಟು ಬೆಲೆಗೆ ಮಾರುತ್ತಾರೆ ಎನ್ನುತ್ತಾರೆ ಕುಲಕರ್ಣಿ.ಬೆಲೆ ಹೆಚ್ಚಳದ ನಿರೀಕ್ಷೆ: ಈ ಬಾರಿ ಹೊಳಲ್ಕೆರೆ, ಭರಮಸಾಗರ ಹಾಗೂ ಚಿತ್ರದುರ್ಗದ ಕೆಲವು ಭಾಗಗಳಲ್ಲಿ ಮಳೆ ಹೆಚ್ಚಾಗಿ ಮೆಕ್ಕೆಜೋಳ ನಾಶವಾಗಿದೆ. ಈ ಕೊರತೆಯ ನಡುವೆಯೂ ಬೆಳೆ ಬೆಳೆದಿರುವವರಲ್ಲಿ ಸಣ್ಣ ರೈತರು

ಮಾತ್ರ ಇವತ್ತಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹತ್ತಾರು ಎಕರೆ ಬೆಳೆ ಬೆಳೆದು, 100 ರಿಂದ 150 ಚೀಲ

ಬೆಳೆಯುವ ರೈತರು ಈಗ ಮಾರಾಟ ಮಾಡುವುದಿಲ್ಲ. ಅವರಿಗೆ ಹಣದ ಅನಿವಾರ್ಯ ಇಲ್ಲದಿರುವುದರಿಂದ, ಹೊರಕೆ ದೇವಪುರದ ಜಾತ್ರೆ ಮುಗಿಯುವ ವೇಳೆಗೆ (ಡಿಸೆಂಬರ್ ಅಂತ್ಯದಿಂದ) ಮಾರಾಟ ಆರಂಭಿಸುತ್ತಾರೆ ಎನ್ನುವುದು ಕಡಬನಕಟ್ಟೆ ರೈತ ಭೀಮಾರೆಡ್ಡಿ ಅಭಿಪ್ರಾಯ.ಒಂದೂವರೆ ತಿಂಗಳು ಕಳೆದರೆ ಬೆಲೆ ಹೆಚ್ಚಾಗುತ್ತದೆ. ಕನಿಷ್ಠ ಕ್ವಿಂಟಲ್ ಮೆಕ್ಕೆಜೋಳಕ್ಕೆ ₨ 1,500 ಆಗಬಹುದೆಂಬ ನಿರೀಕ್ಷೆ ಇದೆ. ಆ ಸಮಯದಲ್ಲಿ ಬೆಲಯೂ ಸಿಗುತ್ತದೆ,  ಜೋಳದ ಕಾಳು ಕೂಡ ಚೆನ್ನಾಗಿ ಒಣಗಿರುತ್ತದೆ. ತೇವಾಂಶದ ಸಮಸ್ಯೆ ಇರುವುದಿಲ್ಲ ಹೀಗಾಗಿ ದೊಡ್ಡ ರೈತರು ಕೊಯ್ಲಾದ ಮೆಕ್ಕೆಜೋಳವನ್ನು ಒಣಗಿಸಿ ದಾಸ್ತಾನು ಮಾಡುತ್ತಾರೆ.ಇನ್ನು ಕೆಲವರು ಅಕ್ಕಪಕ್ಕದ ರೈತರಿಂದ ಜೋಳ ಖರೀದಿಸಿ ಸಂಗ್ರಹಿಸುತ್ತಾರೆ ಎನ್ನುವುದು ಅವರ ಅನುಭವದ ಮಾತು.

ಒಟ್ಟಾರೆ ಸರ್ಕಾರ ಕ್ವಿಂಟಲ್ ಮೆಕ್ಕೆಜೋಳಕ್ಕೆ ₨ 100 ಹೆಚ್ಚಿಗೆ ನೀಡುತ್ತೇವೆಂದರೂ, ಖರೀದಿ ಪ್ರಕ್ರಿಯೆ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಸಣ್ಣ ರೈತರು ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಿಲ್ಲ.ಪ್ರಕ್ರಿಯೆ ಸರಳಗೊಂಡರೆ ಹಾಗೂ ಸಂಚಾರಿ ಖರೀದಿ ಕೇಂದ್ರಗಳು ಸ್ಥಾಪನೆಯಾದರೆ, ರೈತರು ಖರೀದಿಗೆ ಮುಂದಾಗಬಹುದು ಎಂಬುದು ಪ್ರಜ್ಞಾವಂತ ರೈತರ ಅಭಿಪ್ರಾಯವಾಗಿದೆ.

ಪ್ರತಿಕ್ರಿಯಿಸಿ (+)