ಶುಕ್ರವಾರ, ಮಾರ್ಚ್ 5, 2021
23 °C

ಮೆಗಾಪಿಕ್ಸೆಲ್ ಎಂಬ ಮಾಯೆ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಮೆಗಾಪಿಕ್ಸೆಲ್ ಎಂಬ ಮಾಯೆ

ಗ್ಯಾಜೆಟ್ ಲೋಕ ಸಂಖ್ಯಾಮಟ್ಟಕ್ಕಿಂತ ಗುಣಮುಟ್ಟ ಮುಖ್ಯ. ಒಪ್ಪುತ್ತೀರಿ ತಾನೆ? ಇದು ಹಲವು ಕ್ಷೇತ್ರಗಳಿಗೆ ಅನ್ವಯವಾಗುತ್ತದೆ. ಇದು ನಮ್ಮ ಗ್ಯಾಜೆಟ್‌ಗಳ ಲೋಕಕ್ಕೂ ಒಪ್ಪುತ್ತದೆ.ಕ್ಯಾಮರಾ ಕೊಳ್ಳುವಾಗ ಮೊಟ್ಟಮೊದಲನೆಯ ಪ್ರಶ್ನೆಯೇ ಮೆಗಾಪಿಕ್ಸೆಲ್‌ಗಳದು.  ಸ್ವಾಮಿ ಇದು ನೋಡಿ 12 ಮೆಗಾಪಿಕ್ಸೆಲ್, ಇದಕ್ಕೆ 12 ಸಾವಿರ ಬೆಲೆ. ಅದು ನೋಡಿ ಎಂಟೇ ಮೆಗಾಪಿಕ್ಸೆಲ್, ಅದಕ್ಕೆ 8 ಸಾವಿರ ಬೆಲೆ. ನಿಮಗೆ ಗೊತ್ತೇ ಇದೆ, ಹೆಚ್ಚು ಮೆಗಾಪಿಕ್ಸೆಲ್ ಇದ್ದಷ್ಟು ಒಳ್ಳೆಯ ಚಿತ್ರ ತೆಗೆಯಬಹುದು.

 

ಅಂದ ಮೇಲೆ 12 ಸಾವಿರದ ಕ್ಯಾಮರಾವನ್ನೆ ಕೊಂಡುಕೊಳ್ಳುತ್ತೀರಿ ತಾನೆ?  ಅಂದ ವ್ಯಾಪಾರಿಯ ಮಾತು ನಿಮ್ಮನ್ನು ಆತನ ವಾದಗಳಿಗೆ ಒಪ್ಪುವಂತೆ ಮಾಡಿಬಿಡುತ್ತದೆ. ಆದರೆ ಈ ಮೆಗಾಪಿಕ್ಸೆಲ್ ಎಂಬ ಮಿಥ್ಯೆಯ ಬಗ್ಗೆ ಸ್ವಲ್ಪ ಕಣ್ಣಾಡಿಸೋಣ.ಮೊತ್ತಮೊದಲನೆಯದಾಗಿ ಈ ಮೆಗಾಪಿಕ್ಸೆಲ್ ಎಂದರೇನು ನೋಡೋಣ. ಪಿಕ್ಸೆಲ್(pixel)   ಎನ್ನುವುದು picture element ಎನ್ನುವುದರ ಹಸ್ವ ರೂಪ. ಗಣಕ ಪರದೆ ಅಥವಾ ಮುದ್ರಿತ ಚಿತ್ರದಲ್ಲಿ ಅಡ್ಡಕ್ಕೆ ಮತ್ತು ನೀಟಕ್ಕೆ ಚುಕ್ಕಿಗಳಿರುತ್ತವೆ. ಚುಕ್ಕಿಗಳ ಗಾತ್ರ ಅತಿ ಚಿಕ್ಕದಾಗಿರುತ್ತದೆ. ಈ ಚುಕ್ಕಿಗಳು ಒಟ್ಟು ಸೇರಿ ಚಿತ್ರವಾಗುತ್ತದೆ.ಈ ಒಂದು ಚುಕ್ಕಿಯೇ ಪಿಕ್ಸೆಲ್. ಮೆಗಾ ಎಂದರೆ 106. ಅಂದರೆ ಹತ್ತು ಲಕ್ಷ ಅರ್ಥಾತ್ ಒಂದರ ಮುಂದೆ ಆರು ಸೊನ್ನೆ ಬರೆಯಬೇಕು. ಆದರೆ ಗಣಕ ಪರಿಭಾಷೆಯಲ್ಲಿ ಮೆಗಾ ಎಂದರೆ 10,48,576.ಈಗ ಇನ್ನೊಂದು ಪದವನ್ನು ತಿಳಿಯೋಣ. ಅದುವೇ ರೆಸೊಲೂಶನ್. ಒಂದು ಚಿತ್ರದಲ್ಲಿ ಅಡ್ಡಕ್ಕೆ ಮತ್ತು ನೀಟಕ್ಕೆ ಎಷ್ಟು ಚುಕ್ಕಿಗಳನ್ನು ಪೇರಿಸಿದ್ದೀರಿ ಎಂಬುದೇ ರೆಸೊಲೂಶನ್. ಸಾಮಾನ್ಯ ಗಣಕ ಪರದೆಯ ರೆಸೊಲೂಶನ್ 1024 x 768   ಇರುತ್ತದೆ. ಇತರೆ ರೆಸೊಲೂಶನ್‌ಗಳು 640 x 480, 800 x600,  ಇತ್ಯಾದಿ.  1024 x 768 ಎಂದರೆ ಪರದೆಯ ಅಡ್ಡಕ್ಕೆ 1024 ಚುಕ್ಕಿಗಳಿವೆ ಮತ್ತು ನೀಟಕ್ಕೆ 768 ಚುಕ್ಕಿಗಳಿವೆ ಎಂದರ್ಥ.ಈ ಚುಕ್ಕಿಗಳ ಸಂಖ್ಯೆ ಜಾಸ್ತಿಯಿದ್ದಷ್ಟು ಪರದೆ ಒಳ್ಳೆಯದು ಮತ್ತು ಮೂಡಿಬಂದ ಚಿತ್ರ ನೈಜವಾದುದಕ್ಕೆ ಹೆಚ್ಚು ಸಮೀಪವಾಗಿರುತ್ತದೆ. ಚುಕ್ಕಿಗಳು ಸೇರಿ ಚಿತ್ರವಾಗುತ್ತದೆ.  ಇದು ಗಣಕ ಪರದೆಯ ರೆಸೊಲೂಶನ್.ಮುದ್ರಣಕ್ಕೆ ಬಂದಾಗ ಇನ್ನೊಂದು ರೆಸೊಲೂಶನ್ ಅಸ್ತಿತ್ವದಲ್ಲಿದೆ. ಅದು ಸಾಮಾನ್ಯವಾಗಿ ಒಂದು ಇಂಚಿಗೆ 300 ಅಥವಾ 600 ಇರುತ್ತದೆ. ಇದನ್ನು dots per inch (DPI)ಎಂದು ಕರೆಯುತ್ತಾರೆ. ಇದನ್ನು ಮುದ್ರಣದ ಸಾಂದ್ರತೆ ಎಂದೂ ಕರೆಯಬಹುದು. ಇದೇ ರೀತಿ ಪರದೆಗೂ ಸಾಂದ್ರತೆಯಿದೆ. ಅದು ಸಾಮಾನ್ಯವಾಗಿ ಒಂದು ಇಂಚಿಗೆ 102 ಚುಕ್ಕಿ ಆಗಿರುತ್ತದೆ.ಈಗ ಮೆಗಾಪಿಕ್ಸೆಲ್ ಕಡೆಗೆ ಬರೋಣ. 3 ಮೆಗಾಪಿಕ್ಸೆಲ್ ಕ್ಯಾಮರಾದಲ್ಲಿ ತೆಗೆದ ಚಿತ್ರದಲ್ಲಿ ಅಡ್ಡಕ್ಕೆ 2,048 (horizontal)  ಮತ್ತು ನೀಟಕ್ಕೆ  1,536 (vertical)  ಪಿಕ್ಸೆಲ್‌ಗಳಿರುತ್ತವೆ, ಅರ್ಥಾತ್ 31,45,728 ಚುಕ್ಕಿಗಳಿರುತ್ತವೆ.ಈ ಲೆಕ್ಕಾಚಾರದಲ್ಲಿ ಅಡ್ಡ ಮತ್ತು ನೀಟಗಳ ಗುಣಲಬ್ಧವು ಗಣನೆಗೆ ಬರುತ್ತದೆ. ಆದುದರಿಂದ ಮೆಗಾಪಿಕ್ಸೆಲ್ ಅನ್ನು ದುಪ್ಪಟ್ಟು ಮಾಡಿದಾಗ ಒಂದು ಆಯಾಮದಲ್ಲಿ ಅಂದರೆ ಉದ್ದ ಅಥವಾ ನೀಟದಲ್ಲಿ ಅದರ ಗುಣಮಟ್ಟದಲ್ಲಿ ಕೇವಲ 40% ಹೆಚ್ಚಳ ಆಗಿರುತ್ತದೆ. ಇದನ್ನು ಸ್ವಲ್ಪ ವಿಶದೀಕರಿಸೋಣ.10 ಮೆಗಾಪಿಕ್ಸೆಲ್ ಚಿತ್ರದ ಗಾತ್ರ 3888 x 2592 ಆಗಿರುತ್ತದೆ. 5 ಮೆಗಾಪಿಕ್ಸೆಲ್‌ನ ಚಿತ್ರದ ಗಾತ್ರ 2816 x1880 ಆಗಿರುತ್ತದೆ. ಉದ್ದವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ 3888 ಅನ್ನುವುದು 2816 ಕ್ಕಿಂತ ಕೇವಲ 38% ಜಾಸ್ತಿಯಾಗಿರುತ್ತದೆ, ದುಪ್ಪಟ್ಟು ಆಗಿರುವುದಿಲ್ಲ!ಈ ಮೆಗಾಪಿಕ್ಸೆಲ್ ಮತ್ತು ರೆಸೊಲೂಶನ್ ಕೊನೆಗೊಳ್ಳುವುದು ಮುದ್ರಣದಲ್ಲಿ. ಅಲ್ಲಿ ಅದು ಇಂಚಿಗೆ ಸಾಮಾನ್ಯವಾಗಿ 300 ಇರುತ್ತದೆ. ನಾವು ಯಾವ ಗಾತ್ರದಲ್ಲಿ ಫೋಟೋವನ್ನು ಮುದ್ರಿಸುತ್ತೇವೆ ಎಂಬುದು ನಮಗೆ ಯಾವ ರೆಸೊಲೂಶನ್ ಬೇಕು ಎಂಬುದನ್ನು ನಿರ್ಧರಿಸುತ್ತದೆ.

 

ಇಂಚಿಗೆ 300 ಚುಕ್ಕಿ ಅಂದರೆ 6 x 4 ಇಂಚಿನ ಫೋಟೋದ ರೆಸೊಲೂಶನ್ 1600 x 1200 ಆಗುತ್ತೆ. ಇದು 2 ಮೆಗಾಪಿಕ್ಸೆಲ್‌ಗಳಿಗಿಂತಲೂ ಸ್ವಲ್ಪ ಕಡಿಮೆಯೇ. ಹಾಗಿದ್ದರೆ ನಿಮಗೆ 10, 18, ಮೆಗಾಪಿಕ್ಸೆಲ್‌ಗಳು ನಿಜವಾಗಿಯೂ ಬೇಕೇ? 12 ಮೆಗಾಪಿಕ್ಸೆಲ್ ರೆಸೊಲೂಶನ್‌ನಲ್ಲಿ ತೆಗೆದ ಚಿತ್ರವನ್ನು ನೀವು ಸಿನಿಮಾ ಪೋಸ್ಟರ್‌ಗಳ ಗಾತ್ರದಲ್ಲಿ ಮೆಜೆಸ್ಟಿಕ್ ಬಸ್‌ಸ್ಟ್ಯಾಂಡ್‌ನಲ್ಲಿ ತೂಗುಹಾಕುವಷ್ಟು ದೊಡ್ಡ ಗಾತ್ರದಲ್ಲಿ ಮುದ್ರಿಸಬಹುದು. (ಕೋಷ್ಟಕ ನೋಡಿ).ಇಷ್ಟೆಲ್ಲ ಹೇಳಿದ ಮೇಲೂ ಈ ಮೆಗಾಪಿಕ್ಸೆಲ್ ರೆಸೊಲೂಶನ್ ಕೆಲವೊಮ್ಮೆ ಮಹತ್ವ ಪಡೆಯುತ್ತದೆ. ಅದು ಅತ್ಯುತ್ತಮ ಗುಣಮಟ್ಟದ ಚಿತ್ರ ಬೇಕಾದಾಗ. ಪೋಸ್ಟ್‌ಕಾರ್ಡ್ ಗಾತ್ರದ (6 x 4  ಇಂಚು) ಫೋಟೋದಲ್ಲಿ ಒಂದು ಹೂವಿನ ಪರಾಗ ರೇಣುಗಳು ಸ್ಪಷ್ಟವಾಗಿ ಮೂಡಿ ಬರಬೇಕಾದರೆ ನೀವು ಮೇಲೆ ನೀಡಿದ ಲೆಕ್ಕಾಚಾರದಂತೆ ಎರಡು ಮೆಗಾಪಿಕ್ಸೆಲ್‌ನಲ್ಲಿ ಫೊಟೋ ತೆಗೆದರೆ ಅದು ಅಷ್ಟು ಚೆನ್ನಾಗಿ ಮೂಡಿಬರುವುದಿಲ್ಲ.

 

ಅದರ ಬದಲು ಹತ್ತು ಮೆಗಾಪಿಕ್ಸೆಲ್‌ನಲ್ಲಿ ತೆಗೆದು ನಂತರ ಫೋಟೋಶಾಪ್‌ನಲ್ಲಿ ಅದನ್ನು 6x4  ಇಂಚಿನ ಗಾತ್ರಕ್ಕೆ ಕುಗ್ಗಿಸಿದರೆ ಚಿತ್ರ ತುಂಬ ಚೆನ್ನಾಗಿ ಮೂಡಿಬರುತ್ತದೆ. ಇದು ಎಲ್ಲ ವೃತ್ತಿನಿರತ ಛಾಯಾಗ್ರಾಹಕರಿಗೆ ಗೊತ್ತಿರುವ ಸತ್ಯ.  ಈ ಮೆಗಾಪಿಕ್ಸೆಲ್‌ನ ಜೊತೆ ಕ್ಯಾಮರಾದ ಸಂವೇದಕ (sensor)   ಎಷ್ಟು ದೊಡ್ಡದಿದೆ ಮತ್ತು ಯಾವ ಗುಣಮಟ್ಟದ್ದು ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಈ ಸಂವೇದಕಗಳು ದೊಡ್ಡದಿದ್ದಷ್ಟೂ ಒಳ್ಳೆಯದು.ಆದುದರಿಂದಲೇ ಡಿಜಿಟಲ್ ಕ್ಯಾಮರಾದ 8 ಮೆಗಾ ಪಿಕ್ಸೆಲ್ ಮೊಬೈಲ್ ಫೋನಿನ 8 ಮೆಗಾ ಪಿಕ್ಸೆಲ್‌ಗಿಂತ ಎಷ್ಟೋ ಪಾಲು ಉತ್ತಮ ಚಿತ್ರ ನೀಡುವುದು. ಯಾಕೆಂದರೆ ಡಿಜಿಟಲ್ ಕ್ಯಾಮರಾದ ಸಂವೇದಕ ದೊಡ್ಡದಿರುತ್ತದೆ.

 

ಇದೇ ಕಾರಣಕ್ಕೆ ಎಸ್‌ಎಲ್‌ಆರ್ ಕ್ಯಾಮರಾಗಳ ಚಿತ್ರಗಳ ಗುಣಮಟ್ಟ ಏಮ್ ಆಂಡ್ ಶೂಟ್ ಕ್ಯಾಮರಾಗಳ ಗುಣಮಟ್ಟಕ್ಕಿಂತ ಚೆನ್ನಾಗಿರುವುದು. ಇನ್ನೂ ಒಂದು ಮಹತ್ವದ ವಿಷಯವೆಂದರೆ ಕ್ಯಾಮರಾದ ಲೆನ್ಸ್‌ನ ಗುಣಮಟ್ಟ. ಅದು ಚೆನ್ನಾಗಿಲ್ಲದಿದ್ದಲ್ಲಿ ಎಷ್ಟು ಮೆಗಾಪಿಕ್ಸೆಲ್ ಇದ್ದರೂ ಪ್ರಯೋಜನವಿಲ್ಲ.ಸಾಮಾನ್ಯವಾಗಿ ಎಸ್‌ಎಲ್‌ಆರ್ ಕ್ಯಾಮರಾಗಳ ಲೆನ್ಸ್‌ಗಳ ಗುಣಮಟ್ಟ ಏಮ್ ಆಂಡ್ ಶೂಟ್ ಕ್ಯಾಮರಾಗಳ ಲೆನ್ಸ್‌ಗಳ ಗುಣಮಟ್ಟಕ್ಕಿಂತ ಹೆಚ್ಚಾಗಿರುತ್ತದೆ. ಅಷ್ಟು ಮಾತ್ರವಲ್ಲ ಅವುಗಳ ವ್ಯಾಸವೂ ಜಾಸ್ತಿ ಇರುತ್ತದೆ. ಇದರಿಂದಾಗಿ ಅವುಗಳ ಬೆಳಕು ಗ್ರಹಿಸುವ ಶಕ್ತಿ ಜಾಸ್ತಿ ಇರುತ್ತದೆ. ಹೆಚ್ಚು ಬೆಳಕನ್ನು ಸಂಗ್ರಹಿಸಬಲ್ಲುದು ಎಂದರೆ ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರ ಪಡೆಯಬಹುದು. ಒಟ್ಟಿನಲ್ಲಿ ಹೇಳಬೇಕಾದರೆ ಕ್ಯಾಮರಾದ ಮೆಗಾಪಿಕ್ಸೆಲ್ ಒಂದೇ ಅದರ ಗುಣಮಟ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ. ಲೆನ್ಸ್, ಸಂವೇದಕ, ಎಲ್ಲ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. 
ಗ್ಯಾಜೆಟ್ ಸಲಹೆ

ಅವಿನಾಶ್ ಅವರ ಪ್ರಶ್ನೆ: ನನಗೆ ಐಫೋನ್ 4 ಎಸ್ ಕೊಳ್ಳಬೇಕೆಂಬಾಸೆ. ಸದ್ಯದಲ್ಲೆೀ ನನ್ನ ಸಂಬಂಧಿಕರೊಬ್ಬರು ಅಮೇರಿಕಾದಿಂದ ಬರುವವರಿದ್ದಾರೆ. ಅವರ ಜೊತೆ ಅಲ್ಲಿಂದ ತರಿಸಲೇ ಅಥವಾ ಭಾರತದಲ್ಲೆೀ ಕೊಂಡುಕೊಳ್ಳಲೇ?: ಅಮೇರಿಕಾದಿಂದ ಕೊಂಡುಕೊಂಡರೆ ಭಾರತದಲ್ಲಿ ಕೊಳ್ಳುವುದಕ್ಕಿಂತ ತುಂಬ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂಬುದೇನೋ ನಿಜ. ಆದರೆ ಅವರು ಅಲ್ಲಿ ನೀಡುವ ಗ್ಯಾರಂಟಿ ಭಾರತಕ್ಕೂ ಅನ್ವಯವಾಗುತ್ತದೆಯೇ ಎಂದು ನೋಡಿಕೊಳ್ಳಬೇಕು.

 

ಅಲ್ಲಿ ಸಾಮಾನ್ಯವಾಗಿ ಫೋನನ್ನು ಯಾವುದಾದರೂ ಮೊಬೈಲ್ ಸಂಪರ್ಕ ಸೇವೆ ನೀಡುವ ಕಂಪೆನಿಯ ಯಾವುದಾದರೂ ಸ್ಕೀಂ ಜೊತೆ ನೀಡುತ್ತಾರೆ. ಇದು ಒಂದು ಕಿರಿಕಿರಿ. ಫೋನ್ ಲಾಕ್ ಆಗಿದ್ದಲ್ಲಿ ಅದನ್ನು ಇಲ್ಲಿ ತಂದು ಇಲ್ಲಿಯ ಸಿಮ್ ಹಾಕಿ ಬಳಸಲು ಆಗುವುದಿಲ್ಲ. ಆದರೆ ಇಪ್ಪತ್ತು ಡಾಲರ್ ಖರ್ಚು ಮಾಡಿ ಅದನ್ನು ಅನ್‌ಲಾಕ್ ಮಾಡಿಸಿ ತಂದರೆ ಅಡ್ಡಿಯಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.