ಬೆಂಗಳೂರು: ಮಾಲಿನ್ಯ ಅಪಾರ, ನಡೆಯದ ವ್ಯಾಪಾರ, ದೊರೆಯದ ಪರಿಹಾರ...ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯವರೆಗಿನ ‘ರೀಚ್ 1’ ಮೆಟ್ರೊ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ಅನೇಕ ಸಮಸ್ಯೆಗಳ ಕಣಜವಾಗಿದೆ. ಒಂದರ್ಥದಲ್ಲಿ ಜನರ ಸಹಜ ಜೀವನವೇ ‘ಒತ್ತುವರಿ’ಯಾಗಿದೆ.

ಮೂರು ವರ್ಷಗಳ ಹಿಂದೆ ಆರಂಭವಾದ ಬೈಯಪ್ಪನಹಳ್ಳಿ- ಎಂ.ಜಿ.ರಸ್ತೆ ನಡುವಣ ಮೆಟ್ರೊ ರೈಲು ಕಾಮಗಾರಿಯ ಒಟ್ಟು ಉದ್ದ 7 ಕಿ.ಮೀ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ ವೇಳೆಗೆ ಕಾಮಗಾರಿಗಳು ಮುಗಿದು ಮೆಟ್ರೊ ರೈಲು ಸಂಚರಿಸಬೇಕಿತ್ತು. ಆದರೆ ಕಾಮಗಾರಿ ಇಂದು ಮುಗಿದೀತು ನಾಳೆ ಮುಗಿದೀತು ಎಂಬ ಲೆಕ್ಕಾಚಾರವೆಲ್ಲಾ ತಲೆಕೆಳಕಾಗಿದೆ. ಏಪ್ರಿಲ್ವರೆಗೂ ಮುಂದುವರೆಯಲಿರುವ ಕಾಮಗಾರಿ ಆಸುಪಾಸಿನ ಜನರನ್ನು ಕಂಗೆಡಿಸಿದೆ.

ಪರಿಹಾರ ಕೊಡ್ತಾರಾ?: ಹಳೆ ಮದ್ರಾಸು ರಸ್ತೆಯಲ್ಲಿ ಒಳಚರಂಡಿ ಒಡೆದು ಅದರ ಮೇಲೆಯೇ ಮೆಟ್ರೊ ಸ್ಥಂಭವನ್ನು ನಿರ್ಮಿಸಲಾಗುತ್ತಿದೆ. ಪೈಪ್ ಮೂಲಕ ಸರಾಗವಾಗಿ ಹರಿದುಹೋಗುತ್ತಿದ್ದ ಕೊಳಚೆ ನೀರು ಇಲ್ಲಿರುವ ಕೆಲಮನೆಗಳಿಗೆ ನುಗ್ಗುತ್ತಿದೆ.ಬದಲಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಯ ಒಳಗೂ ಹೊರಗೂ ಅಸಹ್ಯಕರ ವಾತಾವರಣ ನಿರ್ಮಾಣವಾಗಿದೆ.

‘ಈ ಬಗ್ಗೆ ಮೆಟ್ರೊ ಪ್ರಧಾನ ಕಚೇರಿಯಲ್ಲಿ ದೂರು ಸಲ್ಲಿಸಿದರೆ ಜಲಮಂಡಳಿಯನ್ನು ಸಂಪರ್ಕಿಸಿ ಎನ್ನುತ್ತಾರೆ. ಜಲಮಂಡಳಿಗೆ ದೂರು ಸಲ್ಲಿಸಿದರೆ ಮೆಟ್ರೊದವರ ಪ್ರಮಾದ ಎನ್ನುತ್ತಾರೆ. ದೂರು ಪಡೆದ ಬಗ್ಗೆ ಬಿಎಂಆರ್ಸಿಎಲ್ ದೂರು ಸ್ವೀಕೃತಿ ಕೂಡ ನೀಡುವುದಿಲ್ಲ’ ಎಂದು ದೂರುತ್ತಾರೆ ಮನೆ ಮಾಲೀಕ ಸುಭಾಷ್ಚಂದ್.ಇದೇ ಪ್ರದೇಶದಲ್ಲಿ ಕಾಮಗಾರಿಯಿಂದಾಗಿ ಅಕ್ಕಪಕ್ಕದ ಕಟ್ಟಡಗಳು ಬಿರುಕುಬಿಟ್ಟಿವೆ. ಕಟ್ಟಡದ ಕೆಳಭಾಗವನ್ನು ಸಿಮೆಂಟ್ ಮುಚ್ಚಿ ದುರಸ್ತಿಗೊಳಿಸಿರುವ ಮೆಟ್ರೊ ಸಿಬ್ಬಂದಿ ಮೇಲಿನ ಅಂತಸ್ತಿನಲ್ಲಿ ಉಂಟಾದ ಬಿರುಕುಗಳ ದುರಸ್ತಿಗೆ ಮುಂದಾಗಿಲ್ಲ.

‘ಕುಸಿಯುವ ಭೀತಿ ಇದ್ದರೂ ಅನಿವಾರ್ಯವಾಗಿ ಜೀವನ ನಡೆಸುತ್ತಿದ್ದೇವೆ. ಬಿರುಕು ಬಿಟ್ಟ ಕಟ್ಟಡಗಳಿಗೆ ಬಿಎಂಆರ್ಸಿಎಲ್ ಪರಿಹಾರ ನೀಡುತ್ತದೆ ಎನ್ನುವ ಯಾವುದೇ ಭರವಸೆ ಇಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ನಿವಾಸಿ ಕಂದಸ್ವಾಮಿ.

ಸಮಸ್ಯೆಗಳ ಸುಳಿ: ಕಾಮಗಾರಿ ನಡೆಯುತ್ತಿರುವ ಸಿಎಂಎಚ್ ರಸ್ತೆ, ಹಳೆ ಮದ್ರಾಸ್ ರಸ್ತೆ, ಹಲಸೂರು, ಟ್ರಿನಿಟಿ ವೃತ್ತದಲ್ಲಿ ದೂಳು ಮಿತಿ ಮೀರಿದೆ. ಹೊಟೆಲ್ಗಳು, ತಳ್ಳುಗಾಡಿ ವ್ಯಾಪಾರಿಗಳು ಅನೇಕ ತಿಂಗಳುಗಳಿಂದ ಅಂಗಡಿ ತೆರೆಯದೇ ಜೀವನ ಸಾಗಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಎಲ್ಲೆಂದರಲ್ಲಿ ಹಳ್ಳಗಳು ಉಂಟಾಗಿರುವುದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿರುತ್ತದೆ. ಕೆಸರು ಮಿಶ್ರಿತ ರಸ್ತೆಯಲ್ಲಿ ಸಂಚರಿಸುವುದು ಕಷ್ಟ ಎನ್ನುತ್ತಾರೆ ವಾಹನ ಚಾಲಕರು. ಸಂಚಾರ ನಿಯಂತ್ರಣ ಅಸಾಧ್ಯವಾಗಿರುವುದರಿಂದ ಅನೇಕ ಅಡ್ಡರಸ್ತೆಗಳ ಮೂಲಕ ಮುಖ್ಯರಸ್ತೆಗೆ ನುಗ್ಗುವ ವಾಹನಗಳು ಸಂಚಾರ ಸಮಸ್ಯೆ ಸೃಷ್ಟಿಸುತ್ತಿವೆ.

‘ಪೀಕ್ ಅವರ್ಗಳಲ್ಲಿ ವಾಹನ ಸಂದಣಿ ಇರುವುದರಿಂದ ವೈಟ್ಫೀಲ್ಡ್, ಮಾರತ್ಹಳ್ಳಿ, ಕೋಲಾರ ಜಿಲ್ಲೆಯ ಮಾಲೂರು, ಮುಳಬಾಗಿಲು ಇತ್ಯಾದಿ ದೂರದ ಸ್ಥಳಗಳಿಗೆ ತೆರಳುವ ವಾಹನ ಸವಾರರು ರಸ್ತೆಯಲ್ಲಿಯೇ ದಿನ ದೂಡುವ ಪರಿಸ್ಥಿತಿ ಇದೆ’ ಎನ್ನುತ್ತಾರೆ ಮಹದೇವಪುರ ನಿವಾಸಿ ಎಸ್.ಎಂ. ಉಮೇಶ್.ಸಾಮಾನ್ಯರಿಗಲ್ಲ: ಮೆಟ್ರೊ ರೈಲು ಸಂಚಾರದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಅಭಿಪ್ರಾಯ ಇಲ್ಲಿನ ಜನ ಸಾಮಾನ್ಯರಲ್ಲಿದೆ. ‘ನಾಲ್ಕೈದು ಕಿ.ಮೀ ದೂರದ ಪ್ರಯಾಣಕ್ಕೆ 15ರಿಂದ 20 ರೂಪಾಯಿ ನೀಡುವಷ್ಟು ಚೈತನ್ಯ ಜನ ಸಾಮಾನ್ಯರಿಗಿರುವುದಿಲ್ಲ. ಪಾಸ್ ದರ ಕೂಡ ದುಬಾರಿ ಎಂಬ ಮಾತು ಕೇಳಿ ಬರುತ್ತಿದೆ. ಬಹುತೇಕ ಜನರು ಮೆಟ್ರೊ ಬಳಸುವ ಬಗ್ಗೆ ಅನುಮಾನಗಳಿವೆ’ ಎನ್ನುತ್ತಾರೆ ಔಷಧ ಅಂಗಡಿ ಮಾಲೀಕ ಅನಿಲ್.

ಸಿಗ್ನಲ್ ಸುಮ್ಮನೆ: ಹಳೆ ಮದ್ರಾಸು ರಸ್ತೆ, ಹಳೆ ಏರ್ಪೋರ್ಟ್ ರಸ್ತೆ, ಹಲಸೂರು, ಎಂ.ಜಿ.ರಸ್ತೆಗಳು ಕೂಡುವ ಟ್ರಿನಿಟಿ ವೃತ್ತದಲ್ಲಿ ಮೆಟ್ರೊ ಕಾಮಗಾರಿ ಸಂಚಾರ ದಟ್ಟಣೆಯನ್ನು ಹೆಚ್ಚಿಸಿದೆ. ಬ್ಯಾರಿಕೇಡ್ಗಳನ್ನು ನಿಲ್ಲಿಸಿರುವುದರಿಂದಾಗಿ ಎಂ.ಜಿ.ರಸ್ತೆಯಿಂದ ಬರುವ ವಾಹನಗಳು ಸರ್ಕಲ್ನಲ್ಲೇ ಯುಟರ್ನ್ ತಗೆದುಕೊಳ್ಳುತ್ತವೆ.

ಇಲ್ಲಿ ಸಿಗ್ನಲ್ಗಳಿದ್ದರೂ ಸಂಚಾರ ನಿಯಂತ್ರಣಕ್ಕಾಗಿ ಹತ್ತಾರು ಮಂದಿ ಸಂಚಾರ ಪೊಲೀಸರು ಇರಲೇ ಬೇಕಾದ ಸ್ಥಿತಿ ಇದೆ. ಮೆಟ್ರೊ ಕಾಮಗಾರಿ ದಿನ ಕಳೆದಂತೆ ವಿಳಂಬವಾಗುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಸಕಾಲಕ್ಕೆ ಮುಗಿಸದೇ ಹೋದರೆ ಸಮಸ್ಯೆಗಳು ಕೂಡ ಹೆಚ್ಚುತ್ತಲೇ ಇರುತ್ತವೆ ಎಂದು ಅನೇಕ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.