ಶನಿವಾರ, ಫೆಬ್ರವರಿ 27, 2021
31 °C

ಮೆದುಳಿಗೆ ಕೈ ಹಾಕಿದ ವಿದ್ಯಾರ್ಥಿಗಳು!

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಮೆದುಳಿಗೆ ಕೈ ಹಾಕಿದ ವಿದ್ಯಾರ್ಥಿಗಳು!

ಮನುಷ್ಯನ ಬುದ್ಧಿಮತ್ತೆ ಮತ್ತು ಮೆದುಳಿನ ಕಾರ್ಯವನ್ನು ಅರಿಯುವ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಮನುಷ್ಯನ ಮೆದುಳು ಎನ್ನುವುದು ಕೌತುಕದ ಕಣಜ. ಅಗೆದಷ್ಟು, ಮೊಗೆದಷ್ಟು ಹೊಸ ವಿಷಯಗಳು ಬಹಿರಂಗವಾಗುತ್ತವೆ. ಅನಾದಿ ಕಾಲದಿಂದಲೂ ಮೆದುಳಿನ ಚಂಚಲತೆಗೆ ಕಡಿವಾಣ ಹಾಕಿ, ಏಕಾಗ್ರತೆ ಗಳಿಸುವ ಹಲವು ತಂತ್ರಗಳು, ಮಂತ್ರಗಳು, ಧ್ಯಾನ, ವ್ಯಾಯಾಮಗಳನ್ನು ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ.ಇದೀಗ ಬೆಂಗಳೂರಿನ ರೇವಾ ಶಿಕ್ಷಣ ಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಇಂತಹದ್ಕೇ ಪ್ರಯೋಗ ಮಾಡಿದೆ. ತಮ್ಮ ಶೈಕ್ಷಣಿಕ ಪ್ರಾಜೆಕ್ಟ್‌ಗಾಗಿ ಈ ತಂಡವು ಮೆದುಳಿಗೇ ಕೈಹಾಕಿದೆ ಎನ್ನಲಡ್ಡಿಯಿಲ್ಲ!ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಟನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಭರತ್, ಪವನ್, ಕೌಸಲ್ಯಾ ಮತ್ತು ಮಾನಸಾ ಮೆದುಳಿನ ವಿಚಾರಗಳ ತರಂಗಗಳನ್ನು ಅಳೆಯುವ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ತಂತ್ರಜ್ಞಾನ ಸ್ಪರ್ಧೆಗಳಲ್ಲಿ ಪ್ರದರ್ಶಿಸಿ ಪ್ರಶಸ್ತಿ ಗೆದ್ದಿದ್ದಾರೆ. ಅವರು ಸಂಶೋಧನೆ ಮಾಡಿರುವ ‘ಬ್ರೇನ್‌ವೇವ್ ರೋಬೊ’ಅನ್ನು ಬುದ್ಧಿಮಾಂದ್ಯರಿಂದ ಹಿಡಿದು ವಿದ್ಯಾರ್ಥಿಗಳವರೆಗೆ, ಆಟದ ಮೈದಾನದಿಂದ ಆಸ್ಪತ್ರೆಯ ತುರ್ತು ನಿಗಾ ಘಟಕದವರೆಗೆ ಪರಿಣಾಮಕಾರಿಯಾಗಿ ಬಳಸಬಹುದು.ಏನಿದು ರೋಬೊ?

ಒಬ್ಬ ವ್ಯಕ್ತಿಯ ಮೆದುಳು ಆತನು ನಿರ್ವಹಿಸುವ ಕಾರ್ಯಗಳಿಗೆ ತಕ್ಕಂತೆ ವಿಚಾರ ತರಂಗಗಳನ್ನು ಹೊಮ್ಮಿಸುತ್ತಿರುತ್ತದೆ. ಆದರೆ, ಕೆಲವೊಮ್ಮೆ ಆ ವ್ಯಕ್ತಿಯು ಏನೋ ಕೆಲಸ ಮಾಡುತ್ತ, ಏನೋ ಬೇರೆ ವಿಚಾರ ಮಾಡುತ್ತಿರುತ್ತಾನೆ. ಉದಾಹರಣೆಗೆ; ಧ್ಯಾನ ಮಾಡುವ ಸಂದರ್ಭದಲ್ಲಿ ಸಂಪೂರ್ಣ ಏಕಾಗ್ರತೆ ಸಾಧಿಸಲು ಸಾಧ್ಯವಾಗದೇ ಅವತ್ತು ಮಾಡಬೇಕಾದ ಕೆಲಸದ ಬಗ್ಗೆಯೋ ಅಥವಾ ಹಿಂದೆ ಯಾವಾಗಲೋ ನಡೆದ ಘಟನೆಯ ವಿಚಾರಗಳಲ್ಲಿ ತೊಳಲಾಡುತ್ತಾನೆ. ಇಂತಹ ಸಂದರ್ಭದಲ್ಲಿ ಬ್ರೇನ್‌ವೇವ್ ರೋಬೋನ ಹೆಡ್‌ಸೆಟ್ ಅನ್ನು ಅಳವಡಿಸಿ ತರಂಗಗಳ ಮೂಲಕ ವಿಚಾರ ಲಹರಿಯನ್ನು ಪತ್ತೆ ಹಚ್ಚಲಾಗುತ್ತದೆ. ಆ ಮೂಲಕ ಮತ್ತೆ ಮನಸ್ಸನ್ನು ಸ್ಥಿಮಿತಕ್ಕೆ ತರಲು ಸಾಧ್ಯವಾಗುತ್ತದೆ.‘ಮಾರುಕಟ್ಟೆಯಲ್ಲಿ ಲಭ್ಯವಿರುವ ನ್ಯೂರೊಸ್ಕೈ ಹೆಡ್‌ಸೆಟ್ ಎಂಬ ಸಾಧನವನ್ನು ಬಳಸಿಕೊಂದ್ದೇವೆ. ಅದನ್ನು ಕಂಪ್ಯೂಟರ್‌ಗೆ ಅಳವಡಿಸಿ ಅದಕ್ಕೆ ನಾವು ಅಭಿವೃದ್ಧಿಪಡಿಸಿರುವ ಕೋಡ್ ಸಂಯೋಜಿಸಿದ್ದೇವೆ. ಆ ಮೂಲಕ ಲೈನ್ ಪವರ್ ರೋಬೊ ಸಿದ್ಧಪಡಿಸಲಾಗಿದೆ. ಇದರಲ್ಲಿ ಒಂದು ಸೆನ್ಸಾರ್ ಬಳಸಿ ಪ್ರಯೋಗ ಮಾಡಿದ್ದೇವೆ.

ನಮ್ಮ ಮೆದುಳಿನ ಪ್ರತಿಯೊಂದು ಭಾಗದಿಂದಲೂ ಹಲವಾರು ತರಂಗಗಳು ಏಕಕಾಲದಲ್ಲಿ ಚಲಿಸುತ್ತವೆ. ಅವು ಎಲೆಕ್ಟ್ರೋನ್ಯೂರಾನ್ ತರಂಗಗಳು. ಅವುಗಳು ಅಗೋಚರವಾಗಿದ್ದು, ಫ್ರಿಕ್ವೆನ್ಸಿ ಮೂಲಕ ಅದರ ಗುಣಲಕ್ಷಣಗಳನ್ನು ಪತ್ತೆ ಹಚ್ಚಬಹುದು. ನಮ್ಮ ಪ್ರಯೋಗದಲ್ಲಿ ನಾವು ಏಕಾಗ್ರತೆಯ ವಿಷಯದ ಮೇಲೆ ಹೆಚ್ಚು ಅಭ್ಯಾಸ ಮಾಡಿದ್ದೇವೆ. ಈ ಸಾಧನದಲ್ಲಿ ಹೆಚ್ಚು ಸೆನ್ಸಾರ್‌ಗಳನ್ನು ಬಳಸಿದರೆ ಬಹಳಷ್ಟು ವಿಷಯಗಳ ಅಧ್ಯಯನ ಸಾಧ್ಯವಿದೆ. ಸುಮಾರು 12 ಸಾವಿರ ರೂಪಾಯಿ ಬೆಲೆಯ ಸೆನ್ಸಾರ್ ಬಳಸಿದ್ದೇವೆ’ ಎಂದು ಭರತ್ ವಿವರಿಸುತ್ತಾರೆ.ಓದುವ ಮಕ್ಕಳಲ್ಲಿ ಏಕಾಗ್ರತೆ ಕೊರತೆಯ ದೂರುಗಳು ಸಾಮಾನ್ಯ. ಅಂತಹ ಸಂದರ್ಭದಲ್ಲಿ ತರಗತಿ ಕೋಣೆಗಳಲ್ಲಿ ಈ ಸಾಧನವನ್ನು ಬಳಸಿ, ಮಕ್ಕಳ ಏಕಾಗ್ರತೆ ವೃದ್ಧಿಸಲು ಕ್ರಮ ಕೈಗೊಳ್ಳಬಹುದು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರುವ ರೋಗಿಯ ಮನದಲ್ಲಿ ಯಾವ ರೀತಿಯ ವಿಚಾರಗಳು,  ಭಾವನೆಗಳು ಸುಳಿದಾಡುತ್ತಿವೆ ಎನ್ನುವುದನ್ನು ಗ್ರಹಿಸಲು ಸಾಧ್ಯವಿದೆ. ಆ ರೋಗಿಯ ತಲೆಗೆ ಈ ಹೆಡ್‌ಸೆಟ್ ಹಾಕಿ, ಕಂಪ್ಯೂಟರ್ ಪರದೆಯಲ್ಲಿ ತರಂಗಗಳ ಚಲನವಲನ ಅಭ್ಯಾಸ ಮಾಡಬಹುದು.

ಇದರಿಂದ ರೋಗಿಯ ಮನಸ್ಥಿತಿಗೆ ಅನುಗುಣವಾಗಿ ಔಷಧಿ, ಆರೈಕೆಗಳನ್ನು ನೀಡುವುದು ಸುಲಭವಾಗುತ್ತದೆ. ಬುದ್ಧಿಮಾಂದ್ಯ ಮಕ್ಕಳ ಪುನರ್ವಸತಿ, ಚಿಕಿತ್ಸೆ ಮತ್ತು ಆರೈಕೆಯಲ್ಲಿಯೂ ಈ ಸಾಧನವನ್ನು ಪರಿಣಾಮಕಾರಿಯಾಗಿ ಬಳಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ರಾತ್ರಿ ವೇಳೆಯಲ್ಲಿ ವಾಹನ ಚಾಲನೆ ಮಾಡುವ ಚಾಲಕರಿಗೆ ಇದು ಹೆಚ್ಚು ಉಪಯುಕ್ತ.ಮಧ್ಯರಾತ್ರಿಯ ಹೊತ್ತಲ್ಲಿ ಕಣ್ಣುಗಳು ತೆರೆದಿದ್ದರೂ, ಮೆದುಳಿಗೆ ನಿದ್ದೆಯ ಮಂಪರು ಕವಿಯುತ್ತದೆ. ಚಾಲಕ ನಿದ್ದೆ ನಿಯಂತ್ರಿಸಿದ್ದೇನೆ ಎಂದುಕೊಂಡು ಚಾಲನೆ ಮಾಡುತ್ತಾನೆ. ಆದರೆ, ಎಲ್ಲೋ ಒಂದು ಹಂತದಲ್ಲಿ ಅಪಘಾತದ ಅಪಾಯ ಇದ್ದೇ ಇರುತ್ತದೆ. ಅದಕ್ಕಾಗಿಯೇ ಬೆಳಗಿನ ಜಾವದಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಈ ಸಾಧನವನ್ನು ಬಳಸುವುದರಿಂದ ಚಾಲಕನಿಗೆ ತನ್ನ ಮೆದುಳಿನ ಸ್ಥಿತಿಯ ಕುರಿತು ಗೊತ್ತಾಗುತ್ತದೆ. ಆಗ ಆತ ಎಚ್ಚರಿಕೆಯಿಂದ ವಾಹನದ ವೇಗ ತಗ್ಗಿಸಬಹುದು ಅಥವಾ ಪ್ರಯಾಣ ಸ್ವಲ್ಪ ಹೊತ್ತು ನಿಲ್ಲಿಸಿ ವಿಶ್ರಾಂತಿ ಪಡೆಯಬಹುದು. ಇದರಿಂದ ಬಹಳಷ್ಟು ಅಮೂಲ್ಯ ಜೀವಗಳು ಉಳಿಯುತ್ತವೆ’ ಎಂದು ವಿದ್ಯಾರ್ಥಿಗಳು ವಿವರಿಸುತ್ತಾರೆ.‘ನಮ್ಮ ಪ್ರಯೋಗ ಆರಂಭಿಕ ಹಂತ ಮಾತ್ರ. ಇನ್ನೂ ಹೆಚ್ಚು ಹಣ ವಿನಿಯೋಗಿಸಿದರೆ ಹೆಚ್ಚು ಪರಿಣಾಮಕಾರಿಯಾದ ಪ್ರಯೋಗ ಮಾಡಬಹುದು. ಟೆಕ್ಸಾಸ್ ಸಂಸ್ಥೆಗೆ ನಮ್ಮ ಸಂಶೋಧನೆಯ ವಿವರಗಳನ್ನು ನೀಡಿದ್ದೇವೆ. ಅವರು ಇದರ ಉನ್ನತ ದರ್ಜೆಯ ಸಾಧನವನ್ನು ತಯಾರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ವಿಜ್ಞಾನ, ತಂತ್ರಜ್ಞಾನ ನಿಯತಕಾಲಿಕೆಗೂ ಸಂಶೋಧನಾ ಲೇಖನ ಕಳಿಸಿದ್ದು, ಪ್ರಕಟವಾಗುವ ನಿರೀಕ್ಷೆ ಇದೆ’ ಎಂದು ಭರತ್ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.