ಮಂಗಳವಾರ, ಮೇ 24, 2022
29 °C

ಮೆಲ್ಕಾರ್: ಜ್ಯುವೆಲ್ಲರಿ ಮತ್ತು ಬಾರ್‌ನಲ್ಲಿ ಕಳವು:ಬೆಳ್ಳಿ ಕದ್ದು ಬೀರು ಕುಡಿದ ಕಳ್ಳರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ವೈಭವ್ ಜ್ಯುವೆಲ್ಲರಿ ಮತ್ತು ಇದೇ ಕಟ್ಟಡದದ ಬಾರೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ಮೊತ್ತದ ಬೆಳ್ಳಿ ಆಭರಣ ಮತ್ತು ನಗದು ದೋಚಿ ಪರಾರಿಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.ಇಲ್ಲಿನ ಸಾರಾ ಆರ್ಕೇಡ್‌ನಲ್ಲಿರುವ ಜ್ಯುವೆಲ್ಲರಿ ಮುಂಬಾಗಿಲನ್ನು ಬಿಟ್ಟು ಪಕ್ಕದಲ್ಲೇ ಇದ್ದ ಇನ್ನೊಂದು ಬಾಗಿಲನ್ನು ಮುರಿದ ಕಳ್ಳರು ಭಾನುವಾರ ತಡರಾತ್ರಿ ಒಳಗೆ ಪ್ರವೇಶಿಸಿದ್ದರು. ಬಳಿಕ ಸುಮಾರು ಅರ್ಧ ಇಂಚು ದಪ್ಪದ ಗಾಜಿನ ಬಾಗಿಲನ್ನೂ ಒಡೆದು, ಒಳಗಿನ ಕ್ಯಾಶ್ ಕೌಂಟರಿನಲ್ಲಿದ್ದ ರೂ.1.50 ಲಕ್ಷ ನಗದು ದೋಚಿದ್ದಾರೆ.ಸೇಫ್ ಲಾಕರ್ ಒಡೆಯಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಒಳಗೆ ಟ್ರೇನಲ್ಲಿ ಜೋಡಿಸಿಟ್ಟಿದ್ದ ಸುಮಾರು ರೂ.1.25 ಲಕ್ಷ ಮೌಲ್ಯದ ಮೂರು ಕಿಲೋ ಬೆಳ್ಳಿ ಆಭರಣ ಕಳವು ಮಾಡಿದ್ದಾರೆ ಎಂದು ಜ್ಯುವೆಲ್ಲರಿ ಮಾಲೀಕ ಯೋಗೀಶ ನಾಯಕ್ ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.ಇದೇ ಕಟ್ಟಡದಲ್ಲಿದ್ದ ರಾಜೇಶ್ ಬಾರ್‌ನ ಶಟರ್‌ಅನ್ನು ಸಲಾಕೆ ಮೂಲಕ ಮೇಲೆತ್ತಿ ಒಳ ಪ್ರವೇಶಿಸಿ ಹಣಕ್ಕಾಗಿ ತಡಕಾಡಿದ್ದಾರೆ. ಅಲ್ಲಿನ ಕ್ಯಾಶ್ ಕೌಂಟರಿನಲ್ಲಿದ್ದ ರೂ. 24,500 ನಗದು ದೋಚಿದ ಕಳ್ಳರು, ಬಳಿಕ ಶೋಕೇಸ್‌ನಲ್ಲಿ ಇರಿಸಲಾಗಿದ್ದ ಬೀರು ಬಾಟಲಿ ತೆಗೆದು ಅರ್ಧ ಕುಡಿದು ಅಲ್ಲೇ ಎಸೆದಿದ್ದಾರೆ ಎಂದು ಬಾರಿನ ಮ್ಯಾನೇಜರ್ ಹರೀಶ ರೈ ಪೊಲೀಸರಿಗೆ ದೂರು ನೀಡಿದ್ದಾರೆ.ಒಟ್ಟಿನಲ್ಲಿ ಕಳ್ಳರು ಬೀರು ಕುಡಿದು ಧೈರ್ಯದಿಂದಲೇ ಜ್ಯುವೆಲ್ಲರಿಗೆ ನುಗ್ಗಿದ್ದಾರೋ ಅಥವಾ ಜ್ಯುವೆಲ್ಲರಿಯಲ್ಲಿ ಕಳವು ನಡೆಸಿದ ಬಳಿಕ ಬೀರು ಕುಡಿದಿದ್ದಾರೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬಹುದು ಎಂಬ ಕುತೂಹಲ ಸ್ಥಳೀಯರಲ್ಲಿ ಉಂಟಾಗಿದೆ.ನುರಿತ ಕಳ್ಳರ ಕೃತ್ಯ: ಭಾನುವಾರ ರಾತ್ರಿ ಸುಮಾರು ಹನ್ನೊಂದೂವರೆ ಗಂಟೆಯವರೆಗೆ ಬಾರ್ ವ್ಯವಹಾರ ನಡೆದಿದ್ದು, ಮಧ್ಯರಾತ್ರಿ ಸುಮಾರು ಎರಡು ಗಂಟೆಗೆ ಸಂಚಾರಿ ಪೊಲೀಸರು ಗಸ್ತು ನಡೆಸಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಸೋಮವಾರ ಮುಂಜಾನೆ ಈ ಕೃತ್ಯ ನಡೆದಿದ್ದು, ಬಾಗಿಲನ್ನು ಸುಲಭವಾಗಿ ತೆರೆಯಲು ಗ್ಯಾಸ್ ಕಟ್ಟಿಂಗ್ ಯಂತ್ರ ಬಳಸಿರಬಹುದು.ಮಾತ್ರ ವಲ್ಲ, ಕಬ್ಬಿಣದ ಸಲಾಖೆ ಉಪಯೋಗಿಸಲಾಗಿದೆ. ಇದಕ್ಕೂ ಮೊದಲು ಕಳ್ಳರು ಸ್ಥಳ ಪರಿಶೀಲನೆ ನಡೆಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಂಟ್ವಾಳ ತಾಲ್ಲೂಕಿನಲ್ಲಿ ಪ್ರತೀ ವರ್ಷ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಕಳ್ಳರೂ ಚುರು ಕಾಗುತ್ತಾರೆ. ಈ ಹಿಂದೆ ಬಿ.ಸಿ.ರೋಡ್‌ನ ಮೊಡಂಕಾಪು, ಗಾಣದಪಡ್ಪು, ಸಜಿಪಮುನ್ನೂರು, ಅಜ್ಜಿಬೆಟ್ಟು ಮತ್ತಿತರ ಕಡೆಗಳಲ್ಲಿ ಮಳೆಗಾಲದಲ್ಲಿ ಭಾರೀ ಪ್ರಮಾಣದ ಕಳ್ಳತನ ನಡೆದಿತ್ತು. ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಜಧಾನಿ    ಜ್ಯುವೆಲ್ಲರ್ಸ್‌ನಲ್ಲಿ ಕೂಡಾ ಮಳೆಗಾಲದಲ್ಲೇ ಕಳವು ನಡೆದಿತ್ತು.ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಅನಿಲ್ ಎಸ್.ಕುಲಕರ್ಣಿ, ನಗರ ಠಾಣಾಧಿಕಾರಿ ಶೇಖರ್ ಮತ್ತಿತರ ಪೊಲೀಸರು ಸೋಮವಾರ ಬೆಳಿಗ್ಗೆ ಧಾವಿಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ತಪಾಸಣೆ ನಡೆಸಿದ್ದಾರೆ. ಕಳವು ಸುದ್ದಿ ತಿಳಿಯುತ್ತಿದ್ದಂತೆಯೇ  ಸ್ಥಳೀಯರು ಕುತೂಹಲದಿಂದ ಜಮಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.