ಬುಧವಾರ, ಮೇ 12, 2021
27 °C

ಮೇಯರ್ ಆಯ್ಕೆ: ಇನ್ನೂ ಹೊರಬೀಳದ ಗೆಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಿ ಹತ್ತು ದಿನಗಳು ಗತಿಸಿದರೂ ರಾಜ್ಯ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಸಭಾನಾಯಕನ ಹುದ್ದೆ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.ರಾಜ್ಯ ಸರ್ಕಾರ ಸಾಮಾನ್ಯವಾಗಿ ಪ್ರತಿ ಗುರುವಾರ ಅಧಿಸೂಚನೆ ಪ್ರಕಟಿಸುತ್ತದೆ. ಕಳೆದ ತಿಂಗಳು 24ರಂದು (ಶನಿವಾರ) ಮೇಯರ್ ಆಗಿ ಬಿಜೆಪಿಯ ಡಾ. ಪಾಂಡುರಂಗ ಪಾಟೀಲ, ಉಪ ಮೇಯರ್ ಆಗಿ ಭಾರತಿ ಪಾಟೀಲ ಆಯ್ಕೆಯಾಗಿದ್ದರು. ಆದರೆ, ಕಳೆದ ಗುರುವಾರ ಈ ಆಯ್ಕೆ ಕುರಿತಂತೆ ಅಧಿಸೂಚನೆ ಹೊರಡಿಸಲಿಲ್ಲ. ಆ ಬಳಿಕವೂ ವಾರ ಗತಿಸಿದ್ದು, ಗೆಜೆಟ್ ಪ್ರಕಟಣೆ ಹೊರ ಬೀಳದ ಕಾರಣ ನೂತನ ಮೇಯರ್‌ಗೆ ಸಭೆ ಕರೆಯುವ ಅಧಿಕಾರ ಇನ್ನೂ ಸಿಕ್ಕಿಲ್ಲ.ಮೇಯರ್ ಸಭೆ ಕರೆಯದ ಹೊರತು ಸಭಾನಾಯಕ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅವಕಾಶ ಇಲ್ಲ. ಹೀಗಾಗಿ ಎಲ್ಲ ಆಕಾಂಕ್ಷಿಗಳು ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದಾರೆ.`ಉಪ ಮೇಯರ್ ಆಯ್ಕೆ ವಿವಾದ ಕೋರ್ಟ್‌ನಲ್ಲಿ ಇರುವುದರಿಂದ ಅಧಿಕಾರಿಗಳು ಅಧಿಸೂಚನೆ ಹೊರಡಿಸಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದು, ನಮ್ಮ ಸಚಿವರು ಆ ಗೊಂದಲವನ್ನು ಬಗೆಹರಿಸಿದ್ದಾರೆ.ಗುರುವಾರ ತಪ್ಪಿದರೆ 2-3 ದಿನದೊಳಗೆ ಅಧಿಸೂಚನೆ ಪ್ರಕಟವಾಗಲಿದೆ~ ಎಂದು ಬಿಜೆಪಿ ಸ್ಥಳೀಯ ಮುಖಂಡರೊಬ್ಬರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.ತೆರಿಗೆ, ಹಣಕಾಸು, ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ, ಅಭಿವೃದ್ಧಿ ಸ್ಥಾಯಿ ಸಮಿತಿ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷಕರು ಹಾಗೂ ಸದಸ್ಯರ ನೇಮಕ ಆಗಬೇಕಿದೆ. ಪಾಲಿಕೆಯ ಪ್ರಸಕ್ತ ಅವಧಿಯು ಚುನಾವಣಾ ವರ್ಷಕ್ಕೆ ಕಾಲಿಟ್ಟಿದ್ದು ಕ್ರಿಯಾಶೀಲವಾಗಿ ಕೆಲಸ ಮಾಡಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಹವಣಿಸುತ್ತಿದೆ.`ಕೊನೆಯ ವರ್ಷದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಅವಳಿನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ರೂ 80 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳು ನಡೆಯಲಿವೆ. ಆದಷ್ಟು ಬೇಗ ಸ್ಥಾಯಿ ಸಮಿತಿಗಳಿಗೆ ನೇಮಕವಾದರೆ  ಕಾಮಗಾರಿಗಳತ್ತ ಸದಸ್ಯರು ಗಮನಹರಿಸಲು ಅನುಕೂಲವಾಗುತ್ತದೆ~ ಎಂದು ಬಿಜೆಪಿ ಸದಸ್ಯರೊಬ್ಬರು ತಮ್ಮ ಅನಿಸಿಕೆ ಹಂಚಿಕೊಂಡರು.ಅಧಿಸೂಚನೆ ಪ್ರಕಟಣೆ ವಿಳಂಬವಾದ ಬಗೆಗೆ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಅವರನ್ನು ಸಂಪರ್ಕಿಸಿದಾಗ, `ಹೌದು, ಇಷ್ಟರಲ್ಲಿ ಗೆಜೆಟ್ ಪ್ರಕಟಣೆ ಆಗಬೇಕಿತ್ತು. ಏಕೋ ವಿಳಂಬವಾಗಿದೆ. 2-3 ದಿನದಲ್ಲಿ ಅಧಿಸೂಚನೆ ಹೊರಡುವ ಭರವಸೆ ಇದೆ. ಬಳಿಕ ಮೇಯರ್ ಸ್ಥಾಯಿ ಸಮಿತಿಗಳಿಗೆ ನೇಮಕ ಮಾಡುತ್ತಾರೆ. ಸಭಾನಾಯಕನ ಆಯ್ಕೆಯನ್ನೂ ಆಗಲೇ ಮಾಡಲಾಗುವುದು~ ಎಂದು ತಿಳಿಸಿದರು. `ತಾಂತ್ರಿಕ ಕಾರಣದಿಂದ ಗೆಜೆಟ್ ವಿಳಂಬವಾಗಿದೆಯೇ ವಿನಃ ಬೇರೆ ವಿಶೇಷ ಕಾರಣ ಏನಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

ವಿಪಕ್ಷ ನಾಯಕನ ವಿವಾದ: ನಾಳೆ ವರದಿ?

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಪಕ್ಷ ನಾಯಕನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವೀಕ್ಷಕರು ಸಂಗ್ರಹಿಸಿರುವ ಅಭಿಪ್ರಾಯದ ಆಧಾರದ ಮೇಲೆ ಗುರುವಾರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೆ ವರದಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.ಕೆಪಿಸಿಸಿ ಉಪಾಧ್ಯಕ್ಷ ಸಿ.ಎಸ್. ನಾಡಗೌಡ, ಕಾರ್ಯದರ್ಶಿ ಆರ್.ಬಿ. ತಿಮ್ಮಾಪುರ ಹಾಗೂ ವೆಂಕಟೇಶಗೌಡ ವೀಕ್ಷಕರಾಗಿ ಆಗಮಿಸಿ ಮಂಗಳವಾರ ಪಾಲಿಕೆಯ ಎಲ್ಲ ಕಾಂಗ್ರೆಸ್ ಸದಸ್ಯರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಜನ ಮುಖಂಡರು ವೀಕ್ಷಕರ ಮುಂದೆ ಹಾಜರಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು.ಹಾಲಿ ವಿಪಕ್ಷ ನಾಯಕ ದಶರಥ ವಾಲಿ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆ ಕಡಿಮೆಯಾಗಿದ್ದು, ಕನಿಷ್ಠ ಆರು ತಿಂಗಳು ಮುಂದುವರಿಯಲಿದ್ದಾರೆ. ಬಳಿಕ ಯಾಸೀನ್ ಹಾವೇರಿಪೇಟ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.