ಮಂಗಳವಾರ, ಜೂನ್ 22, 2021
29 °C

ಮೈಕ್ರೊಸಾಫ್ಟ್‌ ಇಂಡಿಯಾಕ್ಕೆ 2,000 ವಾಣಿಜ್ಯ ಕ್ಲೌಡ್‌ ಗ್ರಾಹಕರು ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಾರತದಲ್ಲಿ ಪ್ರತಿ ತಿಂಗಳು 2,000 ವಾಣಿಜ್ಯ ಕ್ಲೌಡ್‌ ಗ್ರಾಹಕರು ಸಂಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ’ ಎಂದು ಮೈಕ್ರೊ­ಸಾಫ್ಟ್‌ ಇಂಡಿಯಾ ಅಧ್ಯಕ್ಷ ಭಾಸ್ಕರ್‌ ಪ್ರಮಾಣಿಕ್‌ ಹೇಳಿದರು.



ಮೈಕ್ರೊಸಾಫ್ಟ್‌ ಇಂಡಿಯಾ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಂಡೋಸ್‌ ಅಜೂರ್‌’ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.



‘ಬ್ಯಾಂಕಿಂಗ್‌, ತಯಾರಕಾ ವಲಯ, ಆರೋಗ್ಯ ಸೇವೆ, ಮಾಧ್ಯಮ ಹಾಗೂ ಬೃಹತ್‌, ಮಧ್ಯಮ ಹಾಗೂ ಸಣ್ಣ ಕಂಪೆನಿಗಳು ಈ ಗ್ರಾಹಕ­ರು. ಕಳೆದ 12 ತಿಂಗಳಲ್ಲಿ ದೇಶದಲ್ಲಿನ ಸಂಸ್ಥೆಯ ಬೆಳವಣಿಗೆಯಲ್ಲಿ ಗಣನೀಯ ಪಾಲು ಕ್ಲೌಡ್‌ ವ್ಯವಹಾರದಿಂದ ಬಂದಿದೆ’ ಎಂದು ಅವರು ಮಾಹಿತಿ ನೀಡಿದರು.



‘ಕಡಿಮೆ ವೆಚ್ಚ, ಸರಳ, ವ್ಯಾಪಾರಿ ಜಾಗೃತಿ ಹಾಗೂ ತ್ವರಿತ ಸೇವೆ ಕಾರಣದಿಂದ ದೇಶದಲ್ಲಿ ಕ್ಲೌಡ್‌ ಗ್ರಾಹಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಸಂಸ್ಥೆಯು 10,000 ಕ್ಲೌಡ್‌ ಪಾಲುದಾ­ರ­ರನ್ನು ಹೊಂದಿದೆ. 16 ಲಕ್ಷ ತಂತ್ರಾಂಶ ಅಭಿವೃದ್ಧಿ­ದಾರ­ರಿಗೆ ಕ್ಲೌಡ್‌ ವರ್ಗಾ­ವಣೆಗೆ ಬೇಕಾದ ಅಗತ್ಯ ನೆರವು ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.



ಮೈಕ್ರೊಸಾಫ್ಟ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕರಣ್‌ ಬಾಜ್ವಾ ಮಾತನಾಡಿ, ‘ಪಾಲುದಾರರು ಹಾಗೂ ತಂತ್ರಾಂಶ ಅಭಿ­ವೃದ್ಧಿ­ದಾರರ ನಡುವೆ ಕ್ಲೌಡ್‌ ಸಾಮರ್ಥ್ಯವನ್ನು ಸುಧಾರಿಸಲು ಮೈಕ್ರೊಸಾಫ್ಟ್‌ ಗಣನೀಯ ಬಂಡವಾಳ ಹೂಡುತ್ತಿದೆ. ಕಳೆದ ವರ್ಷ ಸಂಸ್ಥೆಯ ಕ್ಲೌಡ್‌ ಸೊಲೂಷನ್‌ ಪಾಲುದಾರರ ಸಂಖ್ಯೆಯಲ್ಲಿ ಶೇ 200 ವೃದ್ಧಿ ಆಗಿದೆ. ವಿಂಡೋಸ್‌ ಅಜೂರ್‌ನಲ್ಲಿ ಐಎಸ್‌ವಿ (ಇಂಡಿ­ಪೆಂಡೆಂಟ್‌ ಸಾಫ್ಟ್‌ವೇರ್‌ ವೆಂಡರ್‌) ಅಪ್ಲಿಕೇಶನ್‌ಗಳ ಸಂಖ್ಯೆಯಲ್ಲಿ ಶೇ 100ರಷ್ಟು ಪ್ರಗತಿ ಆಗಿದೆ. ವಿಂಡೋಸ್‌ ಅಜೂರ್‌ ಅಳವ­ಡಿಸಿ­ಕೊಳ್ಳಲು 1700 ಸ್ಟಾರ್ಟ್‌ ಅಪ್‌ಗಳಿಗೆ ನೆರವು ನೀಡಲಾಗಿದೆ’ ಎಂದರು.



‘ದೇಶದಲ್ಲಿ ಮೂರು ಖಾಸಗಿ ಬ್ಯಾಂಕ್‌ಗಳು, ಐದು ವಾಹನ ತಯಾರಕಾ ಸಂಸ್ಥೆಗಳು, ನಾಲ್ಕು ಆರೋಗ್ಯ ಸೇವಾ ಸಂಸ್ಥೆಗಳು, ಮೂರು ಮಾಧ್ಯಮ ಸಂಸ್ಥೆಗಳು ವಿಂಡೋಸ್‌ ಅಜೂರ್‌ ಗ್ರಾಹಕರು. ಸಂಸ್ಥೆಯ ಸಹಯೋಗದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮೈಕ್ರೊಸಾಫ್ಟ್‌ ನಾವಿನ್ಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ದೇಶದಲ್ಲಿ ಇಂತಹ 39 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ಎರಡು ಲಕ್ಷ ಮಾಹಿತಿ ತಂತ್ರಜ್ಞಾನ ವೃತ್ತಿಪರರು ಹಾಗೂ ತಂತ್ರಾಂಶ ಅಭಿವೃದ್ಧಿ­ದಾರರಿಗೆ ಒಟ್ಟು 2,000 ತರಬೇತಿಗಳನ್ನು ನೀಡಲಾಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.