ಮೊಟೇರಾದಲ್ಲಿ ಪೂಜಾರ ದ್ವಿಶತಕದ ಅಭಿಷೇಕ

ಅಹಮದಾಬಾದ್: ಪ್ರತಿಯೊಂದು ಸುರಂಗದ ಅಂತ್ಯದಲ್ಲಿ ಬೆಳಕಿರುತ್ತಿದೆ ಎಂಬ ಮಾತಿದೆ. ಆದರೆ ಇಂಗ್ಲೆಂಡ್ ಪಾಲಿಗೆ ಸುರಂಗದ ಅಂತ್ಯದಲ್ಲಿ ಎದುರಾಗಿದ್ದು ಮತ್ತೊಂದು ರೈಲು! ಸೆಹ್ವಾಗ್ ಹಾಗೂ ಪೂಜಾರ ಅವರ ಅಮೋಘ ಬ್ಯಾಟಿಂಗ್ಗೆ ಮೊದಲು ತತ್ತರಿಸಿ ಹೋಗಿದ್ದ ಆಂಗ್ಲರಿಗೆ ಈಗ ಆತಿಥೇಯ ಸ್ಪಿನ್ನರ್ಗಳು ಆಘಾತ ನೀಡಿದ್ದಾರೆ.
`ಮಹಾಗೋಡೆ~ ರಾಹುಲ್ ದ್ರಾವಿಡ್ ಈಗ ಭಾರತ ತಂಡದಲ್ಲಿಲ್ಲ ಎಂಬ ನಿಶ್ಚಿಂತೆಯಿಂದ ಭಾರತಕ್ಕೆ ಬಂದಿಳಿದಿದ್ದ ಇಂಗ್ಲೆಂಡ್ ಆಟಗಾರರು ಚೇತೇಶ್ವರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮೊಟೇರಾ ಅಂಗಳದಲ್ಲಿ ಶುಕ್ರವಾರ ಅವರು ತಮ್ಮ ಯೋಜನೆಗೆ ಅಡ್ಡಿಯಾದ ರೀತಿಯನ್ನು ಆಂಗ್ಲರು ಸದ್ಯಕ್ಕೆ ಮರೆಯಲಾರರು.
ಪರಿಣಾಮ ಭಾರತ ತಂಡ ಟೆಸ್ಟ್ ಕ್ರಿಕೆಟ್ ಸರಣಿಯ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 160 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 521 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಚೇತೇಶ್ವರ (ಅಜೇಯ 206) ಅವರೊಂದಿಗೆ ಉತ್ತಮ ಜೊತೆಯಾಟ ನೀಡಿದ ಯುವರಾಜ್ ಸಿಂಗ್ (74) ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದರು.
ಈ ಬ್ಯಾಟ್ಸ್ಮನ್ಗಳು ನೀಡಿದ ಆಘಾತ ಸಾಲದು ಎಂಬಂತೆ ಆಂಗ್ಲ ಪಡೆಯ ಮೇಲೆ ಈಗ ಆತಿಥೇಯ ಸ್ಪಿನ್ನರ್ಗಳ ಬೇಟೆ ಶುರುವಾಗಿದೆ. ಪ್ರಥಮ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 18 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಆತಂಕಕ್ಕೆ ಸಿಲುಕಿದೆ.
ಸ್ಪಿನ್ನರ್ಗಳಾದ ಅಶ್ವಿನ್ ಹಾಗೂ ಓಜಾ ಶುರುವಿನಲ್ಲೇ ಭಯ ಹುಟ್ಟಿಸಿದ್ದಾರೆ. ಫಾಲೋಆನ್ನಿಂದ ಪಾರಾಗಲು ಈ ತಂಡದವರು ಇನ್ನೂ 281 ರನ್ ಗಳಿಸಬೇಕಾಗಿದೆ. ಹಾಗಾಗಿ ಆಂಗ್ಲರ ಎದುರು ಬೆಟ್ಟದಷ್ಟೇ ದೊಡ್ಡ ಸವಾಲಿದೆ.
ದ್ರಾವಿಡ್ ಆಟ ನೆನಪಿಸಿದ ಪೂಜಾರ: ಸುನಿಲ್ ಗಾವಸ್ಕರ್ ವಿದಾಯ ಹೇಳಿದ ಮೇಲೆ ತಂಡಕ್ಕೆ ಸಚಿನ್ ಆಸರೆಯಾಗಿದ್ದು ಗೊತ್ತೇ ಇದೆ. ದ್ರಾವಿಡ್ ನಿವೃತ್ತಿಯ ಬಳಿಕ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುವ ಭರವಸೆ ನೀಡಿರುವುದು ಪೂಜಾರ. ಮೊಟೇರಾ ಅಂಗಳದಲ್ಲಿ ಅವರು ಕಟ್ಟಿದ ಚೆಂದದ ಇನಿಂಗ್ಸ್ ಅದಕ್ಕೆ ಸಾಕ್ಷಿ. ಚೇತೇಶ್ವರ ಬ್ಯಾಟಿಂಗ್ ವೈಖರಿ ದ್ರಾವಿಡ್ ಆಟ ನೆನಪಿಸುತಿತ್ತು. ಮೂರನೇ ಕ್ರಮಾಂಕವನ್ನು ಯಶಸ್ವಿಯಾಗಿ ತುಂಬುವ ಭರವಸೆ ನೀಡಿದಂತಿತ್ತು.
ಚೊಚ್ಚಲ ದ್ವಿಶತಕದ ಸವಿ: ಮೊದಲ ದಿನ ಸೆಹ್ವಾಗ್ ಅಬ್ಬರದ ಆಟಕ್ಕೆ ಇಂಗ್ಲೆಂಡ್ ತತ್ತರಿಸಿ ಹೋಗಿತ್ತು. ಆದರೆ ಎರಡನೇ ದಿನ ಪೂಜಾರ (ಅಜೇಯ 206; 513 ನಿ, 389 ಎ, 21 ಬೌಂ) ಅವರ ಶಾಂತಚಿತ್ತದ ಆಟಕ್ಕೆ ಪ್ರವಾಸಿಗರು ಶರಣಾದರು. ದೇಶಿ ಕ್ರಿಕೆಟ್ನಲ್ಲಿ `ರನ್ ಯಂತ್ರ~ ಎಂದೇ ಪ್ರಸಿದ್ಧಿ ಪಡೆದಿರುವ ರಾಜ್ಕೋಟ್ನ ಪೂಜಾರ ತದೇಕಚಿತ್ತದ ಪ್ರದರ್ಶನ ನೀಡಿದರು.
ಗುಜರಾತ್ ರಾಜ್ಯದ ಜನರ ನೆಚ್ಚಿನ ಹುಡುಗ ಚೇತೇಶ್ವರ್ ಸುಮಾರು ಎಂಟೂವರೆ ಗಂಟೆ ಕ್ರೀಸ್ನಲ್ಲಿದ್ದರು. 24 ವರ್ಷ ವಯಸ್ಸಿನ ಪೂಜಾರಗೆ ಇದು ಚೊಚ್ಚಲ ದ್ವಿಶತಕದ ಸವಿ. ವಾರದ ಹಿಂದೆಯಷ್ಟೇ ಪೂಜಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಚೇತೇಶ್ವರ ತಮ್ಮ ಭಾವಿ ಪತ್ನಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದರು. ಹೊಸ ವರ್ಷ ಹಾಗೂ ದೀಪಾವಳಿ ಸಂಭ್ರಮದಲ್ಲಿದ್ದ ಸ್ಥಳೀಯ ಅಭಿಮಾನಿಗಳ ಖುಷಿಗೆ ಕಾರಣರಾದರು.
ಜೇಮ್ಸ ಆ್ಯಂಡರ್ಸನ್ ಎಸೆತದಲ್ಲಿ ಒಂಟಿ ರನ್ ತೆಗೆದು ದ್ವಿಶತಕ ಪೂರೈಸಿದರು. ಅದಕ್ಕಾಗಿ 374 ಎಸೆತ ಎದುರಿಸಿದರು. ಚೇತೇಶ್ವರ 199 ರನ್ ಗಳಿಸಿದ್ದ ವೇಳೆ ಇಂಗ್ಲೆಂಡ್ ತಂಡದ ನಾಯಕ ಕುಕ್ ಎಂಟು ಮಂದಿ ಫೀಲ್ಡರ್ಗಳನ್ನು ಆಫ್ ಸೈಡ್ನಲ್ಲಿ ನಿಲ್ಲಿಸಿದ್ದರು. ಆದರೆ ಅದಕ್ಕೆ ಈ ಯುವ ಆಟಗಾರ ಬೆದರಲಿಲ್ಲ. ದ್ವಿಶತಕ ಗಳಿಸಿದ ಭಾರತದ 19ನೇ ಆಟಗಾರ ಪೂಜಾರ.
ದಿನದ ಆರಂಭದ ನಾಲ್ಕನೇ ಓವರ್ನಲ್ಲಿಯೇ ಪೂಜಾರ ಶತಕದ ಗೆರೆ ಮುಟ್ಟಿದ್ದರು. ಅದಕ್ಕಾಗಿ 190 ಎಸೆತ ತೆಗೆದುಕೊಂಡರು. ಬ್ರಾರ್ಡ್ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ನತ್ತ ಅಟ್ಟಿ ಈ ಸಾಧನೆ ಮಾಡಿದ್ದರು.
ಹೃದಯ ಗ್ದ್ದೆದ ಯುವರಾಜ್: ಕ್ಯಾನ್ಸರ್ನಿಂದ ಚೇತರಿಕೊಂಡ ಬಳಿಕ ಆಡಿದ ಮೊದಲ ಟೆಸ್ಟ್ನಲ್ಲಿ ಯುವಿ ಮನಮೆಚ್ಚುವ ಇನಿಂಗ್ಸ್ ಕಟ್ಟಿದರು. ಪ್ರವಾಸಿ ತಂಡದ ಯಶಸ್ವಿ ಬೌಲರ್ ಎನಿಸಿರುವ ಸ್ವಾನ್ ಹಾಗೂ ಸಮಿತ್ ಪಟೇಲ್ಗೆ ಈ ಎಡಗೈ ಬ್ಯಾಟ್ಸ್ಮನ್ ಸಿಕ್ಸರ್ ಎತ್ತಿ ತಮ್ಮ ತಾಕತ್ತು ತೋರಿಸಿದರು.
``ಯುವಿ ಪ್ರಸ್ತಾಪ ಬಂದಾಗಲೆಲ್ಲಾ ಪದೇಪದೇ `ಕ್ಯಾನ್ಸರ್~ ಎಂಬ ಪದ ಬಳಸಬೇಡಿ. ಪಂದ್ಯ ಆಡುತ್ತಿರುವ ಉಳಿದ 21 ಮಂದಿಯಂತೆ ಅವರನ್ನೂ ಪರಿಗಣಿಸಿ~ ಎಂದು ಗ್ಯಾಲರಿಯಲ್ಲಿ ಯುವತಿಯೊಬ್ಬಳು ಪೋಸ್ಟರ್ ಹಿಡಿದು ನಿಂತ್ದ್ದಿದಳು.
ಸಮಿತ್ ಪಟೇಲ್ ಎಸೆತವನ್ನು ಮಿಡ್ ವಿಕೆಟ್ನತ್ತ ಬೌಂಡರಿಗಟ್ಟಿ ಯುವಿ ಅರ್ಧ ಶತಕ ಗಳಿಸಿದರು. ಕ್ರೀಡಾಂಗಣದಲ್ಲಿದ್ದ ಎಲ್ಲರೂ ಎದ್ದು ನಿಂತು ಯುವಿಗೆ ಆಟಕ್ಕೆ ಮೆಚ್ಚುಗೆಯ ಚಪ್ಪಾಳೆ ತಟ್ಟಿದರು. ಯುವಿ ನಿರುಮ್ಮಳ ಭಾವದೊಂದಿಗೆ ಪ್ರೇಕ್ಷಕರತ್ತ ಒಮ್ಮೆ ಬ್ಯಾಟ್ ತೋರಿಸಿ ಆಟ ಮುಂದುವರಿಸಿದರು.
ಅಷ್ಟು ಮಾತ್ರವಲ್ಲದೇ, ಅವರು ಐದನೇ ವಿಕೆಟ್ಗೆ ಪೂಜಾರ ಜೊತೆಗೂಡಿ 130 ರನ್ (285 ಎಸೆತ) ಸೇರಿಸಿದರು. ಆದರೆ ಸಮಿತ್ ಹಾಕಿದ ಫುಲ್ಟಾಸ್ ಎಸೆತವನ್ನು ಅರಿಯುವಲ್ಲಿ ಎಡವಿದ ಯುವಿ (74; 151 ಎ, 184 ನಿ, 6 ಬೌಂ, 2 ಸಿ.) ಔಟಾದರು.
ನಿಜವಾದ ಸ್ಪಿನ್ ಆತಂಕ: ಎರಡನೇ ದಿನದ ಕೊನೆಯಲ್ಲಿ ದೊರೆತ 18 ಓವರ್ ಆಡಲು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಪರದಾಡಿದರು. ಪದಾರ್ಪಣೆ ಮಾಡಿದ ನಿಕ್ ಕಾಂಪ್ಟನ್ ಅವರಿಗೆ ಎರಡಂಕಿ ಮೊತ್ತ ಮುಟ್ಟಲೂ ಅಶ್ವಿನ್ ಬಿಡಲಿಲ್ಲ. ಇದು ಅಶ್ವಿನ್ಗೆ ದೊರೆತ 50ನೇ ವಿಕೆಟ್. ತಮ್ಮ 9ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ಭಾರತದ ಮಟ್ಟಿಗೆ ಟೆಸ್ಟ್ ನಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬೌಲರ್ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ ಅನಿಲ್ ಕುಂಬ್ಳೆ ಮೊದಲ 50 ವಿಕೆಟ್ ಕಬಳಿಸಲು 10 ಪಂದ್ಯ ತೆಗೆದುಕೊಂಡಿದ್ದರು.
`ನೈಟ್ ವಾಚ್ಮನ್~ ಆ್ಯಂಡರ್ಸನ್ ಹಾಗೂ ಭರವಸೆಯ ಆಟಗಾರ ಜೊನಾಥನ್ ಟ್ರಾಟ್ ಬಂದಷ್ಟೇ ವೇಗವಾಗಿ ಹಿಂತಿರುಗಿದರು. ಈ ತಂಡದ ಬ್ಯಾಟ್ಸ್ಮನ್ಗಳು ಮೂರನೇ ದಿನ ಆತಿಥೇಯ ಸ್ಪಿನ್ನರ್ಗಳನ್ನು ಯಾವ ರೀತಿ ಎದುರಿಸುತ್ತಾರೆ ಎಂಬುದು ಈಗ ಉಳಿದಿರುವ ಕುತೂಹಲ.
ಸ್ಕೋರ್ ವಿವರ:
ಭಾರತ ಮೊದಲ ಇನಿಂಗ್ಸ್ 160 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 521 ಡಿಕ್ಲೇರ್ಡ್
(ಗುರುವಾರ 90 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 323)
ಚೇತೇಶ್ವರ ಪೂಜಾರ ಔಟಾಗದೆ 206
ಯುವರಾಜ್ ಸಿಂಗ್ ಸಿ ಗ್ರೇಮ್ ಸ್ವಾನ್ ಬಿ ಸಮಿತ್ ಪಟೇಲ್ 74
ಮಹೇಂದ್ರ ಸಿಂಗ್ ದೋನಿ ಬಿ ಗ್ರೇಮ್ ಸ್ವಾನ್ 05
ಆರ್.ಅಶ್ವಿನ್ ಸಿ ಮಟ್ ಪ್ರಯೋರ್ ಬಿ ಕೆವಿನ್ ಪೀಟರ್ಸನ್ 23
ಜಹೀರ್ ಖಾನ್ ಸಿ ಜೊನಾಥನ್ ಟ್ರಾಟ್ ಬಿ ಜೇಮ್ಸ ಆ್ಯಂಡರ್ಸನ್ 07
ಪ್ರಗ್ಯಾನ್ ಓಜಾ ಔಟಾಗದೆ 00
ಇತರೆ (ಬೈ-1, ಲೆಗ್ಬೈ-10, ನೋಬಾಲ್-1) 12
ವಿಕೆಟ್ ಪತನ: 1-134 (ಗಂಭೀರ್; 29.5); 2-224 (ಸೆಹ್ವಾಗ್; 50.1); 3-250 (ಸಚಿನ್; 56.5); 4-283 (ಕೊಹ್ಲಿ; 76.4); 5-413 (ಯುವಿ; 124.1); 6-444 (ದೋನಿ; 134.5); 7-510 (ಅಶ್ವಿನ್; 154.5); 8-519 (ಜಹೀರ್; 157.1)
ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 27-7-75-1, ಸ್ಟುವರ್ಟ್ ಬ್ರಾಡ್ 24-1-97-0 (ನೋಬಾಲ್-1), ಟಿಮ್ ಬ್ರೆಸ್ನನ್ 19-2-73-0, ಗ್ರೇಮ್ ಸ್ವಾನ್ 51-8-144-5, ಸಮಿತ್ ಪಟೇಲ್ 31-3-96-1, ಕೆವಿನ್ ಪೀಟರ್ಸನ್ 8-1-25-1
ಇಂಗ್ಲೆಂಡ್ ಮೊದಲ ಇನಿಂಗ್ಸ್ 18 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 41
ಅಲಸ್ಟೇರ್ ಕುಕ್ ಬ್ಯಾಟಿಂಗ್ 22
ನಿಕ್ ಕಾಂಪ್ಟನ್ ಬಿ ಆರ್.ಅಶ್ವಿನ್ 09
ಜೇಮ್ಸ ಆ್ಯಂಡರ್ಸನ್ ಸಿ ಗೌತಮ್ ಗಂಭೀರ್ ಬಿ ಪ್ರಗ್ಯಾನ್ ಓಜಾ 02
ಜೊನಾಥನ್ ಟ್ರಾಟ್ ಸಿ ಚೇತೇಶ್ವರ ಪೂಜಾರ ಬಿ ಆರ್.ಅಶ್ವಿನ್ 00
ಕೆವಿನ್ ಪೀಟರ್ಸನ್ ಬ್ಯಾಟಿಂಗ್ 06
ಇತರೆ (ಬೈ-2) 02
ವಿಕೆಟ್ ಪತನ: 1-26 (ಕಾಂಪ್ಟನ್; 13.3); 2-29 (ಆ್ಯಂಡರ್ಸನ್; 14.4); 3-30 (ಟ್ರಾಟ್ 15.3)
ಬೌಲಿಂಗ್: ಆರ್.ಅಶ್ವಿನ್ 8-1-21-2, ಜಹೀರ್ ಖಾನ್ 5-3-6-0, ಪ್ರಗ್ಯಾನ್ ಓಜಾ 4-1-3-1, ಯುವರಾಜ್ ಸಿಂಗ್ 1-0-9-0
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.