ಭಾನುವಾರ, ಜನವರಿ 19, 2020
28 °C

ಮೋದಿಯಿಂದ ಕೆಎಲ್‌ಇ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಾಮಾಜಿಕ ಕೆಲಸ ಮಾಡಬೇಕು. ಸಮಾಜದ ಸಂಘಟನೆ ಮಾಡಿದಾಗ ರಾಜನೀತಿಯ ಗತಿ ಹೆಚ್ಚುತ್ತದೆ. ಸಮಾಜದ ವಿಶ್ವಾಸ ಪಡೆದು ರಾಜನೀತಿ ಮಾಡುವ ಪ್ರಯತ್ನ ಎಲ್ಲ ಕಡೆ ನಡೆಯುತ್ತಿದೆ. ಆದರೆ, ಕೆಲವು ಮಹಾನ್‌ ಪುರುಷರು ದೂರದೃಷ್ಟಿ ಉಳ್ಳವರಾಗಿದ್ದಾರೆ. ಅವರು ಮಾಡಿದ ಕೆಲಸ ಸಮಕಾಲೀನ ಜನರಿಗೆ ತಿಳಿಯುವುದಿಲ್ಲ. ಅವರ ಒಂದು ಸಣ್ಣ ಪ್ರಯತ್ನ ಕ್ರಾಂತಿಗೆ ಕಾರಣವಾಗುತ್ತದೆ. 98 ವರ್ಷಗಳ ಹಿಂದೆ ಶಿಕ್ಷಣದ ಮಹತ್ವವನ್ನು ಅರಿತು, ಅದು ಎಲ್ಲರಿಗೂ ಸಿಗಲಿ ಎಂಬ ಮಹತ್ವಾಕಾಂಕ್ಷೆಯಿಂದ ಸಪ್ತರ್ಷಿಗಳು ಎನಿಸಿಕೊಂಡ ಏಳು ಶಿಕ್ಷಕರು ಕೆಎಲ್‌ಇ ಎಂಬ ಬೀಜವನ್ನು ನೆಟ್ಟಿದ್ದಾರೆ. ಆ ಸಪ್ತರ್ಷಿಗಳಿಗೆ ಹಾಗೂ ಸಂಸ್ಥೆಯನ್ನು ಇಂದು ಹೆಮ್ಮರವಾಗಿ ಬೆಳೆಸಿದ ಜನರಿಗೆ ನಾನು ಶಿರಬಾಗಿ ನಮಿಸುತ್ತೇನೆ’ ಎಂದು ನರೇಂದ್ರ ಮೋದಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.‘2800 ವರ್ಷಗಳ ಶಿಕ್ಷಣ ಇತಿಹಾಸ ಇರುವ ಭಾರತದಲ್ಲಿ ನಳಂದಾ, ತಕ್ಷಶಿಲಾ ಅಂಥ ವಿಶ್ವವಿದ್ಯಾಲಯಗಳು ವಿಶ್ವದಲ್ಲೇ ಹೆಸರು ಮಾಡಿದ್ದವು. 80 ದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಶಿಕ್ಷಣ ಪಡೆಯುತ್ತಿದ್ದರು. ಆದರೆ, ಬ್ರಿಟಿಷರ ಗುಲಾಮಗಿರಿಯಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೇ ಹಾಳಾಯಿತು. ಸ್ವಾತಂತ್ರ್ಯ ಬಂದು 50 ವರ್ಷಗಳು ಕಳೆದಿರುವಾಗ ಭಾರತವು ಜ್ಞಾನ ಕ್ಷೇತ್ರದಲ್ಲಿ ದೊಡ್ಡ ಶಕ್ತಿ ಆಗಬೇಕಿತ್ತು. ಆದರೆ, ನಾವು ಶಿಕ್ಷಣಕ್ಕೆ ಮಹತ್ವನ್ನೇ ನೀಡಲಿಲ್ಲ’ ಎಂದು ಮೋದಿ ವಿಷಾದಿಸಿದರು.‘ಇಂದು ಆರೋಗ್ಯ ಕ್ಷೇತ್ರ ಚಿಂತಾಜನಕ ಸ್ಥಿತಿಯಲ್ಲಿದೆ. ಹೊಸ ಹೊಸ ರೋಗ ಹಾಗೂ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಜೊತೆಯಲ್ಲಿಯೇ ವೈದ್ಯರ ಹಾಗೂ ಅರೆ ವೈದ್ಯರ ಕೊರತೆಯೂ ಹೆಚ್ಚುತ್ತಿದೆ. ಹೀಗಾಗಿ ವೈದ್ಯರ ಹಾಗೂ ಅರೆ ವೈದ್ಯರನ್ನು ಹೆಚ್ಚು ಸೃಷ್ಟಿಸಿ, ಆರೋಗ್ಯ ಕ್ಷೇತ್ರವನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.‘ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬಡವರಿಗೂ ಆರೋಗ್ಯ ಸೇವೆ ಲಭಿಸಲು ಕ್ರಮ ಕೈಗೊಳ್ಳಬೇಕು. ಮೊಬೈಲ್‌ ಆಸ್ಪತ್ರೆಗಳನ್ನು ಹೆಚ್ಚೆಚ್ಚು ಮಾಡುವ ಮೂಲಕ ಜನರ ಬಳಿಗೆ ಆರೋಗ್ಯ ಸೇವೆಯನ್ನು ಒಯ್ಯಬೇಕು. ಯುವ ವೈದ್ಯರು ಆರೋಗ್ಯವಂತ ಭಾರತ ನಿರ್ಮಿಸಲು ಕೈಜೋಡಿಸಬೇಕು’ ಎಂದು ಮೋದಿ ಕರೆ ನೀಡಿದರು.

ಪ್ರತಿಕ್ರಿಯಿಸಿ (+)