ಗುರುವಾರ , ಮೇ 13, 2021
16 °C

ಮ್ಯಾನ್ಮಾರ್ ಚುನಾವಣೆ:ಸಂಸತ್ ಕೆಳಮನೆಗೆ ಸೂಕಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಮು/ಯಾಂಗೂನ್ (ಐಎಎನ್‌ಸ್, ಎಎಫ್‌ಪಿ): ನೊಬೆಲ್ ಪಾರಿತೋಷಕ ವಿ ಪುರಸ್ಕೃತೆ ಮತ್ತು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಅಧ್ಯಕ್ಷೆ ಆಂಗ್ ಸಾನ್ ಸೂಕಿ ಅವರು ಭಾನುವಾರ ನಡೆದ ಚುನಾವಣೆಯಲ್ಲಿ ಸಂಸತ್ತಿನ ಕೆಳ ಮನೆಗೆ ಆಯ್ಕೆಯಾಗಿದ್ದಾರೆ.ಕ್ವಾಮು ಪಟ್ಟಣದ ಕ್ಷೇತ್ರದಲ್ಲಿ ಶೇಕಡಾ 75ರಷ್ಟು ಮತಗಳನ್ನು ಪಡೆಯು ಮೂಲಕ ಇದೇ ಮೊದಲ ಬಾರಿಗೆ ಅವರು ಸಂಸತ್ತನ್ನು ಪ್ರವೇಶಿಸಿದ್ದಾರೆ.ಒಂಬತ್ತು ವಲಯಗಳಲ್ಲಿ ತೆರವಾಗಿದ್ದ 45 ಸ್ಥಾನಗಳಿಗೆ ನಡೆದ ಉಪ ಚುನವಣೆಯಲ್ಲಿ 17 ಪಕ್ಷಗಳ 157 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಐರೋಪ್ಯ ಸಮುದಾಯ ರಾಷ್ಟ್ರಗಳು, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಭಾರತದ 150 ವೀಕ್ಷಕರ ಸಮ್ಮುಖದಲ್ಲಿ ಚುನಾವಣೆ ನಡೆಯಿತು.ನಾಲ್ಕು ಗಂಟೆಗೆ ಮತದಾನ ಮುಕ್ತಾಯವಾಯಿತು. ಮತ ಎಣಿಕೆಯ ನಂತರ ಸೂಕಿ ಆಯ್ಕೆಯಾಗಿದ್ದಾರೆಂದು ಅವರ ಪಕ್ಷದ ಮೂಲಗಳು ತಿಳಿಸಿವೆ. ಈ ಪ್ರಕಟಣೆ ಹೊರಬೀಳುತ್ತಿದ್ದಂತೆ ಸೂಕಿ ಅಭಿಮಾನಿಗಳು ಹರ್ಷದಿಂದ ಕುಣಿದಾಡಿದರು. ಫಲಿತಾಂಶವನ್ನು ಚುನಾವಣಾ ಆಯೋಗವು ಅಧಿಕೃತವಾಗಿ ಪ್ರಕಟಿಸಬೇಕಿದೆ.

 66 ವರ್ಷದ ಸೂಕಿ ಅವರು ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಅವಿರತ ಹೋರಾಟ ಮಾಡುತ್ತ ಸುಮಾರು 22 ವರ್ಷಗಳನ್ನು ಜೈಲಿನಲ್ಲಿಯೇ ಕಳೆದಿದ್ದಾರೆ.ಮತದಾನದ ಸಂದರ್ಭದಲ್ಲಿ ತಾವು ಸ್ಪರ್ಧಿಸಿದ್ದ ಕ್ವಾಮು ಕ್ಷೇತ್ರದ ಗ್ರಾಮೀಣ ಪ್ರದೇಶದ ಮತಗಟ್ಟೆಯೊಂದಕ್ಕೆ ಸೂಕಿ ಅವರು ಭೇಟಿ ನೀಡಿದ ಕೂಡಲೇ ನೂರಾರು ಬೆಂಬಲಿಗರು ಮತ್ತು ಪತ್ರಕರ್ತರು ಅವರನ್ನು ಸುತ್ತುವರಿದರು.

`ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ನಿರಂತರ ಹೋರಾಟ ನಡೆಸಿದ ತಾಯಿ ಸೂಕಿ ಅವರಿಗೇ ಮತ ನೀಡುತ್ತೇನೆ, ನಾನು ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ, ಅವರು ನಮ್ಮೂರಿಗೆ ಬಂದಿದ್ದೇ ದೊಡ್ಡ ಪುಣ್ಯ~ ಎಂದು 43 ವರ್ಷದ ಸಾನ್ ಸಾನ್ ವಿನ್ ಹೇಳಿದರು.ಸೂಕಿ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷವು 1990ರಲ್ಲಿ ಭಾರಿ ಬಹುಮತದಿಂದ ಗೆದ್ದರೂ ದೇಶವನ್ನು ಆಳುತ್ತಿದ್ದ ಸೇನಾ ಮುಖ್ಯಸ್ಥ ಈ ಫಲಿತಾಂಶಕ್ಕೆ ಮಾನ್ಯತೆ ನೀಡಿರಲಿಲ್ಲ.  ಉಪ ಚುನಾವಣೆಯಲ್ಲಿ 44 ಸ್ಥಾನಗಳಲ್ಲಿ ಸೂಕಿ ಅವರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 44 ಸ್ಥಾನಗಳನ್ನು ಗೆದ್ದರೂ ಆಡಳಿತ ಪಕ್ಷದ ಬಹುಮತಕ್ಕೆ ಧಕ್ಕೆ ಬರುವುದಿಲ್ಲ. ಆದರೆ ಯಾವುದೇ ಕಾನೂನನ್ನು ರಚಿಸಬೇಕಾದರೂ ಸೂಕಿ ಪಕ್ಷದ ಅಭಿಪ್ರಾಯಕ್ಕೆ ಮನ್ನಣೆ ದೊರೆಯಲಿದೆ.2010ರಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದು ಸೇನೆಯ ಬೆಂಬಲದ ರಾಜಕಾರಣಿಗಳು ಅಧಿಕಾರದ ಗದ್ದುಗೆ ಏರಿದ್ದಾರೆ.ಸೂಕಿ ಅವರನ್ನು ಚುನಾವಣೆಯಿಂದ ದೂರವಿಡುವ ಉದ್ದೇಶದಿಂದಲೇ ಏಳು ವರ್ಷಗಳವರೆಗೆ ಗೃಹ ಬಂಧನದಲ್ಲಿ ಇಡಲಾಗಿತ್ತು.ಅಕ್ರಮದ ಆರೋಪಈಗ ನಡೆಯುತ್ತಿರುವ ಉಪ ಚುನಾವಣೆಯೂ ಸಂಪೂರ್ಣವಾಗಿ ನ್ಯಾಯಸಮ್ಮತ ಮತ್ತು ಮುಕ್ತವಾಗಿ ನಡೆಯುತ್ತಿಲ್ಲ. ಅಭ್ಯರ್ಥಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಹಾಗೂ ಸತ್ತವರ ಹೆಸರುಗಳೂ ಮತದಾರರ ಪಟ್ಟಿಯಲ್ಲಿ ಇವೆ ಎಂದು ಸೂಕಿ ಆಪಾದಿಸಿದ್ದಾರೆ.ಸೂಕಿ ನೇತೃತ್ವದ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ವಕ್ತಾರ ನ್ಯಾನ್ ವಿನ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮತ ಚೀಟಿಗಳ ಮೇಲೆ ಒಂದು ತರಹದ ಅಂಟು ಲೇಪಿಸಲಾಗಿದ್ದು ನಂತರ ನಕಲಿ ಮತ ಚಲಾಯಿಸುವ ಸಾಧ್ಯತೆಗಳು ಇವೆ ಎಂದು ದೂರಿದ್ದಾರೆ.ಈ ಬಗ್ಗೆ ತಾವು ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.