ಬುಧವಾರ, ಜನವರಿ 22, 2020
28 °C

ಮ್ಯಾರಥಾನ್: ಒಲಿಂಪಿಕ್‌ಗೆ ಅರ್ಹತೆ ಪಡೆದ ಭಾರತದ ರಾಮ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮುಂಬೈ (ಪಿಟಿಐ): ಕೀನ್ಯಾದ ಲಬಾನ್ ಮೊಬೆನ್ ಹಾಗೂ ಇಥಿಯೋಪಿಯದ ನೆತ್ಸಾನೆಟ್ ಅಬೆಯೊ ಭಾನುವಾರ ಇಲ್ಲಿ ನಡೆದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮುಂಬೈ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು. ಭಾರತದ ಸ್ಪರ್ಧಿಗಳಲ್ಲಿ ಪ್ರಭಾವಿ ಪ್ರದರ್ಶನ ನೀಡಿದ ರಾಮ್ ಸಿಂಗ್ ಯಾದವ್ ಲಂಡನ್ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆದುಕೊಂಡರು.ಇಥಿಯೋಪಿಯದ ರಜಿ ಅಸೆಫಾ ಅವರ ಪ್ರಬಲ ಪೈಪೋಟಿಯನ್ನು ಮೆಟ್ಟಿನಿಂತ ಮೊಬೆನ್ 42.195 ಕಿ.ಮೀ. ದೂರವನ್ನು 2 ಗಂಟೆ 10 ನಿಮಿಷ 48 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಅಸೆಫಾ ಕೂಡಾ ಇಷ್ಟೇ ಕಾಲ ತೆಗೆದುಕೊಂಡು ಸ್ಪರ್ಧೆ ಕೊನೆಗೊಳಿಸಿದರು. `ಫೋಟೋ ಫಿನಿಷ್~ನಲ್ಲಿ ಮೊಬೆನ್ ಚಾಂಪಿಯನ್ ಎಂದು ಪ್ರಕಟಿಸಲಾಯಿತು. ಕೀನ್ಯಾದ ಜಾನ್ ಕ್ಯು (2:10.54) ಮೂರನೇ ಸ್ಥಾನ ಪಡೆದರು.ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಇಥಿಯೋಪಿಯ ಪೂರ್ಣ ಪ್ರಭುತ್ವ ಸಾಧಿಸಿ ಮೊದಲ ಮೂರು ಸ್ಥಾನಗಳನ್ನು ಜಯಿಸಿತು. 2 ಗಂಟೆ 26 ನಿ. 12 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಅಬೆಯೊ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಇಥಿಯೋಪಿದವರೇ ಆದ ಫತುಮಾ ಸಡೊ (2:30.20) ಹಾಗೂ ಮಕ್ದಾ ಹರೂನ್ (2:30.47) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡರು.ಮಿಂಚಿದ ರಾಮ್: ಭಾರತದ ಸ್ಪರ್ಧಿಗಳಲ್ಲಿ ಅಗ್ರಸ್ಥಾನ ಪಡೆದ ರಾಮ್ ಸಿಂಗ್ ಯಾದವ್ (2:16.59) ಒಟ್ಟಾರೆಯಾಗಿ 12ನೇ ಸ್ಥಾನ ಗಳಿಸಿದರು. ಮಾತ್ರವಲ್ಲ ಲಂಡನ್ ಒಲಿಂಪಿಕ್‌ಗೆ ಅರ್ಹತೆಯನ್ನೂ ಪಡೆದರು.

ಲಲಿತಾ ಬಬ್ಬರ್ (2:53.35) ಮಹಿಳೆಯರ ವಿಭಾಗದಲ್ಲಿ ಭಾರತದ ಸ್ಪರ್ಧಿಗಳಲ್ಲಿ ಮೊದಲ ಸ್ಥಾನ ಗಳಿಸಿದರು. ಒಟ್ಟಾರೆಯಾಗಿ ಅವರಿಗೆ 16ನೇ ಸ್ಥಾನ ಲಭಿಸಿತು. ಕಿರಣ್ ತಿವಾರಿ (2:53.56) ಹಾಗೂ ಪ್ರೀತಿ ಎಲ್ ರಾವ್ (3:01.34) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.ಹಾಫ್ ಮ್ಯಾರಥಾನ್‌ನಲ್ಲಿ ಪುರುಷರ ವಿಭಾಗದಲ್ಲಿ ಸೋಜಿ ಮ್ಯಾಥ್ಯೂ (1:05.29), ಆಶೀಶ್ ಸಿಂಗ್ (1:05.31) ಹಾಗೂ ಮನ್ ಸಿಂಗ್ (1:06.27) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕಾ ಸಿಂಗ್ ಪಟೇಲ್ (1:21.55), ವಿಜಯ್ ಮಾಲಾ ಪಾಟೀಲ್ (1:22.25) ಮತ್ತು ಸುಪ್ರಿಯಾ ಪಾಟೀಲ್ (1:23.15) ಕ್ರಮವಾಗಿ ಚಿನ್ನ, ಬೆಳ್ಳಿ, ಹಾಗೂ ಕಂಚು ಗೆದ್ದುಕೊಂಡರು.

ಪ್ರತಿಕ್ರಿಯಿಸಿ (+)