ಶುಕ್ರವಾರ, ಮೇ 7, 2021
25 °C

ಯಡಿಯೂರಪ್ಪ ಮರಳಿ ಕರೆತರಲು ತೀವ್ರ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆ ತರುವ ಪ್ರಕ್ರೀಯೆ ತೀವ್ರಗೊಂಡಿದ್ದು,  ಅದಕ್ಕಾಗಿ ಶೀಘ್ರದಲ್ಲಿಯೇ ಸೂಕ್ತ ವೇದಿಕೆ ಏರ್ಪಡಿಸುವ ನಿಟ್ಟಿನಲ್ಲಿ ಪಕ್ಷದ ಒಂದು ವರ್ಗ ನಾಯಕರು ಪಕ್ಷದ ಹೈಕಮಾಂಡ್‌ನ ಮೋರೆ ಹೋಗುವ ಚಿಂತನೆ ನಡೆಸಿದ್ದಾರೆ.ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಜಿ.ಮಧುಸೂದನ್ ಸೇರಿದಂತೆ ಪಕ್ಷದ ಕೆಲ ನಾಯಕರು ಸಂಸದ ಡಿ.ಬಿ. ಚಂದ್ರೆಗೌಡ ಅವರ ಬೆಂಗಳೂರಿನ ನಿವಾಸದಲ್ಲಿ ಗುರುವಾರ ರಾತ್ರಿ ಸಭೆ ಸೇರಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಶಾಸಕರಾದ ಬಸವರಾಜ ಬೊಮ್ಮಾಯಿ, ಉಮೇಶ ಕತ್ತಿ ಹಾಗೂ ಸಿ.ಎನ್.ಅಶ್ವಥ್‌ನಾರಾಯಣ ಹಾಜರಿದ್ದರು ಎನ್ನಲಾಗಿದೆ.ಶೀಘ್ರದಲ್ಲಿಯೇ ಸಭೆ

ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ತರುವ ವಿಚಾರವಾಗಿ ಕೇಂದ್ರ ನಾಯಕರ ಜತೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿದ್ದು, ಈ ಕುರಿತಂತೆ ನಿಯೋಗವೊಂದು ಸಧ್ಯದಲ್ಲಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೆಟ್ಲಿ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಲಿದೆ. ಜತೆಗೆ ತಮ್ಮ ಕಾರ್ಯ ಯೋಜನೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಲು ಯೋಚಿಸಲಾಗಿದೆ ಎಂದು ತಿಳಿದು ಬಂದಿದೆ.ಶನಿವಾರ ಸೌತ್ ಎಂಡ್ ವೃತ್ತದಲ್ಲಿ ನಾಗರೀಕ ಸೇವಾ ಯೋಜನೆಯೊಂದಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಯಡಿಯೂರಪ್ಪ ಅವರ ರಾಜಕೀಯ ವೈರಿ ಎಂದೇ ಬಿಂಬಿತರಾಗಿರುವ ಅನಂತ್ ಕುಮಾರ್ ಅವರು ದೇಶವನ್ನು `ಕಾಂಗ್ರೆಸ್ ಮುಕ್ತ'ವಾಗಿಡಲು ಬಿಜೆಪಿ ಎಲ್ಲ ಆಯ್ಕೆಗಳನ್ನು ತೆರೆದಿಟ್ಟಿದೆ ಎಂದು ಹೇಳಿದರು.ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನಂತ್ ಕುಮಾರ್ ಅವರು ಕೆಜೆಪಿಯೊಂದಿಗೆ ಬಿಜೆಪಿ ಮೈತ್ರಿಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತ್ ಕುಮಾರ್ ಅವರಿಗೆ ತಾವು ಸ್ಪರ್ಧಿಸುವ ಬೆಂಗಳೂರಿನ ದಕ್ಷಿಣ ಲೋಕಸಭಾ ಮತಕ್ಷೇತ್ರದಲ್ಲಿ ಪ್ರಬಲರಾಗಿರುವ ಲಿಂಗಾಯತ ಮತದಾರರು ಹಾಗೂ ಯಡಿಯೂರಪ್ಪ ಬೆಂಬಲಿಗರ ಸಹಾಯ ಮುಂಬರುವ ಚುನಾವಣೆಯಲ್ಲಿ ಅಗತ್ಯವಿರುವುದರಿಂದ ಅವರು ಕೂಡ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ತರುವ ನಿಟ್ಟಿನಲ್ಲಿ ಒಲವು ತೋರುತ್ತಾರೆ ಎನ್ನುವುದು ರಾಜಕೀಯ ಪರಿಣಿತರ ಲೆಕ್ಕಾಚಾರ.ಮೋದಿ ಭೇಟಿ ಮಾಡಲು ಸಿದ್ಧ

ಯಡಿಯೂರಪ್ಪ ಅವರನ್ನು ಬಿಜೆಪಿ ಕರೆತರುವ ನಿಟ್ಟಿನಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚಂದ್ರೆಗೌಡ ಅವರು ದೃಢಪಡಿಸಿದ್ದಾರೆ.ಸದ್ಯ ಧರ್ಮಸ್ಥಳದಲ್ಲಿರುವ ಯಡಿಯೂರಪ್ಪ ಅವರು ಅಲ್ಲಿನ  ಪ್ರಕೃತಿ ಚಿಕಿತ್ಸಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.