ಮಂಗಳವಾರ, ಮೇ 17, 2022
26 °C

ಯಾದಗಿರಿ ಕೋಟೆಯಲ್ಲಿ ತೋಪು ಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತೋಪುಗಳ ಕೋಟೆ ಎಂದೇ ಹೆಸರಾದ ನಗರದ ಕೋಟೆಯಲ್ಲಿ ತೋಪಿನ ಮೇಲೆ ಪರ್ಷಿಯನ್ ಭಾಷೆಯಲ್ಲಿರುವ ಲೋಹ ಶಾಸನವನ್ನು ಇತಿಹಾಸ ಉಪನ್ಯಾಸಕ ಎ.ಎಂ. ಸೈದಾಪುರ ಪತ್ತೆ ಹಚ್ಚಿದ್ದಾರೆ.ಶಾಸನವು ಜೈನ ಗುಹೆಯ ಮುಂಭಾಗದ ಬುರುಜಿನಲ್ಲಿರುವ ತೋಪಿನ ಮೇಲಿದೆ. ಈಗಾಗಲೇ ಸಿ.ಎಸ್. ಪಾಟೀಲರು ಪತ್ತೆ ಮಾಡಿ ಮಾಹಿತಿ ಒದಗಿಸಿರುವ ಮತ್ತು ಬಸನಗೌಡ ಪಾಟೀಲ ಹುಣಸಗಿಯವರು ದೇವಿಯ ಗುಡಿಯ ಮುಂಭಾಗದಲ್ಲಿನ ತೋಪಿನಲ್ಲಿ ಪತ್ತೆ ಮಾಡಿರುವ ಶಾಸನದ ಪಾಠದಂತೆಯೇ ಈ ಶಾಸನದಲ್ಲಿಯೂ ಕೆತ್ತಲಾಗಿದೆ. ಸಂಶೋಧಕರು ಒದಗಿಸಿರುವ ಮಾಹಿತಿಯ ಆಧಾರದ ಮೇಳೆ ಈ ಶಾಸನದ ಸಾರಾಂಶವನ್ನು ಹೇಳಬಹುದಾಗಿದೆ ಎಂದು ಸೈದಾಪುರ ತಿಳಿಸಿದ್ದಾರೆ.ಈ ಶಾಸನದಲ್ಲಿ “ಮಹ್ಮದ್ ಕಾಸೀಂ ಮತ್ತು ಹಿಜರಿ ಶಕೆ 1192” ಎಂದಿದ್ದು. ಇದರ ಆಧಾರದ ಮೇಲೆ ಕೆಲವು ವಿಷಯಗಳನ್ನು ಅವಲೋಕಿಸಬಹುದು. ಹಿಜರಿ ಶಕೆಯನ್ನು ಕ್ರಿ.ಶ.ಕ್ಕೆ ಹೊಂದಾಣಿಕೆ ಮಾಡಿದಾದ 1778 ಆಗುತ್ತದೆ. ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಮೊದಲ ಅರಸ ನಿಜಾಮ್ ಅಲಿಖಾನನ ಆಧೀನದಲ್ಲಿ ಈ ಕೋಟೆ ಇತ್ತು. ಮಹ್ಮದ್ ಕಾಸೀಮ್‌ನು, ನಿಜಾಮ್ ಸಂಸ್ಥಾನದಲ್ಲಿ ಪ್ರಸಿದ್ಧ ಲೋಹ ತಜ್ಞನಾಗಿದ್ದನು ಎಂಬುದನ್ನು ತಿಳಿಯಬಹುದು.1778 ರ ಸಂದರ್ಭದಲ್ಲಿ ನಿಜಾಮ ಮತ್ತು ಮರಾಠರು ಪರಸ್ಪರ ಯುದ್ಧದಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ ನಿಜಾಮನು ಕೋಟೆಯಲ್ಲಿ ಯುದ್ಧದ ಸಿದ್ಧತೆಗಾಗಿ ತೋಪುಗಳನ್ನು ನೆಲೆಗೊಳಿಸಿದನೆಂದು ಹೇಳಬಹುದು.ಯುದ್ಧವೊಂದರಲ್ಲಿ ನಿಜಾಮನ ಪರವಾಗಿ ಹೋರಾಡಿ ಜಯ ತಂದು ಕೊಟ್ಟ ಸುರಪುರದ ಅರಸ ದೇವಿಂದ್ರ ವೆಂಕಟಪ್ಪ ನಾಯಕರು, ಯಾದಗಿರಿ, ಸೇಡಂ, ಚಿತ್ತಾಪುರ ಮುಂತಾದ ಪ್ರದೇಶಗಳ `ರುಸುಮ್~ ಅನ್ನು ವಸೂಲಿ ಮಾಡುವ ಹಕ್ಕು ಪಡೆದರೆಂಬ ವಿಷಯವನ್ನು ಈ ಕಾಲದ ಯುದ್ಧಕ್ಕೆ ಹೊಂದಾಣಿಕೆ ಮಾಡಬಹುದು ಎಂದು ಹೇಳಿದ್ದಾರೆ.

ವಿಜಾಪುರದ ಆದಿಲ್‌ಶಾಹಿಗಳ ಆಧೀನದಲ್ಲಿ ಈ ಕೋಟೆ ಮಹತ್ವದ ರಕ್ಷಣಾತ್ಮಕ ನೆಲೆಯಾಗಿತ್ತು. 1557-58 ರ ಸಂದರ್ಭದಲ್ಲಿ ಆದಿಲ್‌ಶಾಹಿಗಳು ಗೋಲ್ಕೊಂಡದ ಶಾಹಿಳೊಂದಿಗೆ ಯುದ್ಧದಲ್ಲಿ ತೊಡಗಿದ್ದರು. ವಿಜಯನಗರದ ರಾಮರಾಯನು ಗೋಲ್ಕೊಂಡದ ಪರವಾಗಿ ನಿಂತುಕೊಂಡಿದ್ದನು. ಆದುದರಿಂದ ಯಾದಗಿರಿಯ ಕೋಟೆಯಲ್ಲಿ ಭರದ ಸಿದ್ಧತೆಗಳು ನಡೆದು ಕೋಟೆಯ ಅಭಿವೃದ್ಧಿಯೊಂದಿಗೆ ಹಲವು ತೋಪುಗಳನ್ನು ಹೊಸದಾಗಿ ನೆಲೆಗೊಳಿಸಲಾಗಿತ್ತು. ಹಾಗೆಯೇ ನಿಜಾಮನು ಮರಾಠರೊಂದಿಗೆ ಹೋರಾಡುವುದಕ್ಕಾಗಿ ಮತ್ತೆ ಹೊಸದಾಗಿ ಹಲವು ತೋಪುಗಳನ್ನು ನೆಲೆಗೊಳಿಸಿದನೆಂದು ಹೇಬಹುದಾಗಿದೆ.ಒಟ್ಟಾರೆ ಇಷ್ಟೊಂದು ತೋಪುಗಳನ್ನು ನೆಲೆಗೊಳಿಸಿರುವ ಸಂಗತಿಯನ್ನು ನೋಡಿದರೆ, ಯಾದಗಿರಿ ಕೋಟೆಯು ಪ್ರಮುಖ ಯುದ್ಧ ಭೂಮಿ ಆಗಿತ್ತು ಎಂದು ನಿರ್ಧರಿಸಬಹುದಾಗಿದೆ.ಬುರುಜುಗಳು, ಬತೇರಿಗಳು, ಪ್ರವೇಶದ ದ್ವಾರಗಳ ಮೇಲಿನ ಅಟ್ಟಗಳು, ಹೀಗೆ ಎಲ್ಲೆಂದರಲ್ಲಿ ತೋಪುಗಳನ್ನು ಇಡಲಾಗಿದೆ. ಇಷ್ಟೊಂದು ತೋಪುಗಳನ್ನು ಬೇರೆ ಕೋಟೆಗಳಲ್ಲಿ ಕಾಣುವುದು ಅಪರೂಪವೇ ಸರಿ. ಏನಿಲ್ಲವೆಂದರೂ 12-15 ತೋಪುಗಳು ಈಗಲೂ ನೋಡಲು ಸಿಗುತ್ತವೆ. ಸಾಕಷ್ಟು ಕಡೆ ತೋಪುಗಳನ್ನು ಇಡುವ ಸ್ಥಳಗಳು ಗೋಚರಿಸುತ್ತವೆ. ಆದರೆ ಅಲ್ಲಿ ತೋಪುಗಳು ಇಲ್ಲ. ಕಲ್ಲು, ಮಣ್ಣಿನಡಿ ಸೇರಿ ಹೋಗಿರುವ ಸಾಧ್ಯತೆ ಇದೆ. 5-6 ಅಡಿಯಿಂದ 20 ಅಡಿ ಉದ್ದದವರೆಗಿನ ವಿವಿಧ ಅಳತೆ, ಆಕಾರದ ತೋಪುಗಳು ಗಮನ ಸೆಳೆಯುತ್ತವೆ.ಶತಮಾನಗಳಿಂದ ಮಳೆ, ಗಾಳಿ, ಬಿಸಿಲು, ಚಳಿ ಹಾಗೂ ಮನುಷ್ಯರ ದಾಳಿಗೆ ಮೈಯೊಡ್ಡಿ ನಿಂತಿರುವ ತೋಪುಗಳು ಈಗಲೂ ಗಟ್ಟಿಮುಟ್ಟಾಗಿರುವುದನ್ನು ಗಮನಿಸಿದರೆ, ಅಂದಿನ ಲೋಹ ಜ್ಞಾನದ ಬಗ್ಗೆ ಆಶ್ಚರ್ಯ ಮೂಡುತ್ತದೆ.

ಕಲ್ಯಾಣ ಚಾಲುಕ್ಯರಿಂದ ನಿಜಾಮನ ಕಾಲದವರೆಗೆ ಯಾದಗಿರಿ ಕೋಟೆಯು ಒಂದು ಪ್ರಮುಖ ರಕ್ಷಣಾತ್ಮಕ ನೆಲೆಯಾಗಿದ್ದು, ಕೆಲವು ಕಾಲ ರಾಜಧಾನಿ ಆಗಿಯೂ ಮೆರೆದ ಗರಿಮೆ ಹೊಂದಿದೆ. ಗತ ವೈಭವದ ಇತಿಹಾಸಕ್ಕೆ ಸಾಕ್ಷಿಯಾಗಿರುವ ಕೋಟೆಯು ಇಂದು ಅಳಿವು-ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ಕಳೆದ ವರ್ಷದ ಕುರುಹುಗಳು ಈ ವರ್ಷ ಮರೆಯಾಗುತ್ತಿವೆ. ಇನ್ನು ದಶಕಗಳ ಹಿಂದಿನ ಕೋಟೆಯ ಚಿತ್ರಣಗಳನ್ನು ನೆನೆದರೆ, ಆಘಾತವಾಗುವಷ್ಟು ಹಾಳಾಗಿದೆ.ಕೋಟೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಸಿದ್ಧವಾಗಿದೆ ಎಂಬುದು ಹರ್ಷದ ಸಂಗತಿ. ಆದಷ್ಟು ಬೇಗನೆ ಈ ಕಾರ್ಯಗಳು ನಡೆಯಲಿ. ಹಾಗೆಯೇ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿ, ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳನ್ನು ರಕ್ಷಿಸುವ ಕೆಲಸ ಆಗಬೇಕು ಎಂಬುದು ಈ ಭಾಗದ ಇತಿಹಾಸ ಪ್ರಿಯರ ಒತ್ತಾಯವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.