1975-76ನೇ ಸಾಲಿನ ಒಂದು ದಿನ. ಗುಲ್ಬರ್ಗ ಹಿಂದೆಂದೂ ಕಂಡರಿಯದ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಊರಿಗೂರೇ ಹಸಿವು-ದಾಹಗಳಿಂದ ಬಳಲಿ ಬೆಂಡಾಗಿದ್ದ ಕೆಟ್ಟ ಕಾಲ.

ಶ್ರೀಮಂತರು-ಬಡವರೆನ್ನುವ ಅಂತರವಿವೂ ಇಲ್ದ ಬರಗಾಲ ಎಲ್ಲರ ಮ್ಯಾಲೂ ತನ್ನ ಕರಾಳ ಹಸ್ತ ಚಾಚಿತ್ತು. ಮನೆ ಮಕ್ಳಿಗೇ ಹೊಟ್ಟೆಗೆ ಹಾಕಲಾಗದ ಸ್ಥಿತಿ. ಇನ್ನು ದನಗುಳಿಗೆ ಎಲ್ಲಿಂದ ಮೇವು ತರೂದು...

ಅವೂ ಹಿಂಗ ಹಸಿದು ಸಾಯೂದು ಬ್ಯಾಡ ಅಂತ ಊರಿಗೂರೇ ನಿಂತು ಪ್ರೀತಿಯಿಂದ ಸಾಕಿದ ದನ-ಕರುಗಳನ್ನು ಬರೇ ಎರಡು ರೂಪಾಯಿಗೇ ಮಾರಾಟ ಮಾಡಿ ಲಾರಿ ತುಂಬಿಸಿ ಕಳಿಸಿದ್ರು...

ಅದ ಸಮಯ, ಇಕ್ಕಟ್ಟಾದ ಗುಂಪು-ಗುಂಪು ಜೋಪಡಿಯಂತಹ ಮನೆಗಳಿರುವ ನಾಟಿಕೇರಿ ಅನ್ನು ಕೊಳಚೆ ಪ್ರದೇಶದಲ್ಲಿ, ಸರಿಯಾಗಿ ಗಾಳಿ-ಬೆಳಕೂ ಇಲ್ಲದ ಕತ್ತಲೆ ಕಮರಿದ ಮನೆಯೊಳಗೆ ಎಂಟು ಮಕ್ಕಳ ತುಂಬು ಕುಟುಂಬದಲ್ಲಿ ಬೇರೆಯದೇ ವಿಚಾರ ನಡೆದಿತ್ತು.

ಶ್ರೀಮಂತ ಮನೆಯವರಿಗೇ ಹೊಟ್ಟಿಗೆ ಹಿಟ್ಟಿಲ್ಲದಾಗ ಬಡವರು ಅದರ ಬಗ್ಗೆ ವಿಚಾರ ಮಾಡೂದೂ ತಪ್ಪಾದೀತು ಅಂತ ಮಕ್ಕಳು ಹಸಿದ ಹೊಟ್ಟೆಯನ್ನ ಡಬ್ಬ ಹಾಕ್ಕೊಂಡು ಬೋರಲು ಮಲಗಿದ ಆ ಹೊತ್ತು...

ಬೇರೆಯವರು ಹಿಡಿ ಅನ್ನ, ಹನಿ ನೀರು ಬಿಟ್ರ ಬೇರೆಯದರ ಬಗ್ಗೆ ಯೋಚನೆಯನ್ನೂ ಮಾಡದ ಅಂಥ ದರಿದ್ರ ದಿನಗಳಲ್ಲಿ ಬಾಬೂರಾವ್ ಹಾಗೂ ರತ್ನಮ್ಮ ದಂಪತಿಗೆ ಮಗಳನ್ನು ಮೆಡಿಕಲ್ ಕಾಲೇಜಿಗೆ ಸೇರಿಸುವ ಹೋರಾಟ ನಡೆದಿತ್ತು.

ಮಗಳಿಗೆ ಆ `ಕನಸು~ ಕೊಡಿಸುವುದು ಹೇಗೆಂಬ ಚಿಂತೆ ಅವರನ್ನ ಕಾಡಿಟ್ಟಿತ್ತು... ದಿನವೆಲ್ಲ ತಿರುಗಿದರೂ ಒಂದು ನಯ್ಯಾ ಪೈಸೆಯೂ ಸಿಕ್ಕಿರಲಿಲ್ಲ. ಆಗಿನ ಕಾಲಕ್ಕ ನೂರಾರು ರೂಪಾಯಿ ಅನ್ನೂದೇ ದೊಡ್ಡ ಮೊತ್ತ. ಎಲ್ಲಿಂದ ತರೂದು! ಇಬ್ಬರೂ ದಿನಪೂರ್ತಿ ಚಿಂತಿ ಮಾಡಿದ್ರೂ ನೀಗಲಿಲ್ಲ. ಹತ್ತಿದವರು-ಹೊಂದಿದವರು, ಮನೆಯ ಅಕ್ಕ-ಪಕ್ಕದವರು...

ಎಲ್ಲರಿಗೂ ಏನಾದರೂ ಮಾಡಬೇಕೆನ್ನುವ ಮನಸ್ಸು, `ನಮ್ಮ ಮಗಳು ಡಾಕ್ಟ್ರಾಗಲಿಲ್ಲ. ಬಾಬೂರಾವನ ಮಗಳಾದ್ರೂ ಆಗಲಿ~ ಎನ್ನುವ ಆಸೆ. ಮನಸ್ಸು ತುಂಬಿ ಬಂದರೂ ಕೈ ಮಾತ್ರ ಖಾಲಿ...

ಅಂತೂ ಬಾಬೂರಾವ್ ಒಂದು ನಿರ್ಧಾರಕ್ಕ ಬಂದ್ರು... `ಏನು...? ನಿನ್ನ ತಾಳಿ ಕೊಡ್ತಿಯಾ?~ ಅಂತ ಕೇಳಿದ್ರು. ಆ ಕಡೆಯಿಂದ ಒಂದು ಮಾತೂ ಆಡದ ರತ್ಮಮ್ಮ ಮೌನವಾಗಿ ಕೊರಳು ಖಾಲಿ ಮಾಡಿದ್ದಳು... ಮಾರನೇ ದಿನಕ್ಕ ವಿಜಯಾ ಅನ್ನೊ 18-19ರ ಪೋರಿ ಹುಬ್ಬಳ್ಳಿಯ ಕೆಎಂಎಸ್ ಮೆಡಿಕಲ್ ಕಾಲೇಜಿನಾಗ ತನ್ನ ಬದುಕಿನ ಹೊಸ ಪುಟಗಳನ್ನ ಬರೆದುಕೊಳ್ಳುತ್ತಿತ್ತು...

ಹೂಂ... ಹೀಂಗ ಆರಂಭ ಆಯ್ತು ಈ ವಿಜಯಲಕ್ಷ್ಮಿ ದೇಶಮಾನೆ ಅನ್ನೂಳ `ಡಾಕ್ಟರ್~ ಗಿರಿ ಪಯಣ... ನನಗ ಅಪ್ಪಾನೇ ಎಲ್ಲಾ, ನನ್ನಲ್ಲಿ ಡಾಕ್ಟರ್ ಆಗುವ ಕನಸು ಬಿತ್ತಿದ್ದೂ, ಬಡವರ ಸೇವೆ ಮಾಡುವ ಮನಸ್ಸನ್ನು ಸಿದ್ಧಗೊಳಿಸಿದ್ದೂ ಅವರೇ. ಅವ್ವಾನೂ ಅಷ್ಟ, ಭಾಳ ಗಟ್ಟಿ ಹೆಣ್ಮಗಳು. ಅಪ್ಪ ಹೋರಾಟ, ಸ್ವಾತಂತ್ರ್ಯ, ರಾಜಕೀಯ ಅಂತೆಲ್ಲ ಓಡಾಡುವಾಗ ಎಂಟು ಮಕ್ಕಳ ಸಂಸಾರವನ್ನ ತಾನೊಬ್ಬಳೇ ಎಳೆದ ಗಟ್ಟಿಗಿತ್ತಿ. ಮಕ್ಕಳ ಹೊಟ್ಟೆಗೆ ಊಟ ಬಟ್ಟೆ ಒದಗಿಸುವ ಜೊತೆಗೆ ಒಳ್ಳೆಯ ಸಂಸ್ಕಾರ, ಜ್ಞಾನ, ಅಂತಃಕರಣ, ಮಾನವೀಯತೆ ಬೆಳೆಸೂದೂ ಮುಖ್ಯ ಅಂತ ಮನಗಂಡವರು.

ಹುಬ್ಬಳ್ಳಿಗೆ ಬಂದೆ. ಕನ್ನಡ ಮಾಧ್ಯಮದಲ್ಲಿ ಓದಿದ್ದಕ್ಕೇನೊ ಗೊತ್ತಿಲ್ಲ ಇಂಗ್ಲಿಷ್ ಭಾಷೆಯ ಬಗ್ಗೆ ವಿಪರೀತ ಭಯವಿತ್ತು. ಸಾಕಷ್ಟು ಜ್ಞಾನವಿದ್ದರೂ ಅದನ್ನು ಹೊರಹಾಕಲು ಗೊತ್ತಿರಲಿಲ್ಲ. ಪರಿಣಾಮ ಮೊದಲ ವರ್ಷ ಫೇಲ್!

ಅಯ್ಯ್ ದೇವರೇ ನನ್ನಪ್ಪ ಕಂಡ ಕನಸನ್ನು ನಾನೇ ಕೊಲ್ಲುವುದೇ! ನನ್ನಿಂದ ಇನ್ನೊಮ್ಮೆ ಇಂಥ ಪ್ರಮಾದ ಆಗದಿರಲಿ ಎಂದು ರಾತ್ರಿ ಹಗಲು ಒದ್ದಾಡಿದೆ. ನನ್ನ ಕೊರತೆಗಳನ್ನು ನೀಗಿಸಿಕೊಳ್ಳಲು ಗೆಳತಿಯರು/ಶಿಕ್ಷಕರು ಸಹಾಯ ಮಾಡಿದರು. ಕೊನೆಯ ವರ್ಷದ ಪರೀಕ್ಷೆ ಬರೆದು ಊರಿಗೆ ಮರಳಿದ್ದೆ. ಮನೆಯಲ್ಲಿನ್ನೂ ಬಡತನದ ಛಾಯೆ ಮರೆಯಾಗಿರಲಿಲ್ಲ. ಸಂಸಾರದ ತಾಪತ್ರಯದ ನಡುವೆ ತಮ್ಮ ಹಾಗೂ ಆರೂ ಜನ ತಂಗಿಯರ ವಿದ್ಯಾಭ್ಯಾಸದ ಹೊರೆ ಅಮ್ಮನ ಮೇಲೆ.

ಅದೊಂದು ದಿನ ಗೆಳತಿ ಪತ್ರ ಬರೆದಿದ್ದಳು. `ವಿಜಿ, ನೀ ಡಾಕ್ಟರ್ ಆಗಿ, ಅದೂ ಯುನಿವರ್ಸಿಟಿಗೇ ಫಸ್ಟ್, ಕೂಡಲೇ ಹೊರಟು ಬಾ~ ಅಂತ. ಆ ಪತ್ರ ಓದಿ ನನ್ನ ಕೈ-ಕಾಲು ನಡುಗಿ ಹೋಗಿತ್ತು. ಅಷ್ಟೇ ಸಾಲದು ಎಂದು ಬಳ್ಳಾರಿಯಲ್ಲಿ ಎಂ.ಎಸ್. ಮಾಡಿದೆ. 1984ರಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಗೆ ಕಾಲಿಟ್ಟೆ.

ಅಸ್ಪೃಶ್ಯತೆಯ ನೋವಿನೆಳೆ...
ಈ ವಿಜಯಾ ಅನ್ನೊ ಹುಡುಗಿಗೆ ಆಗ ಹದಿಮೂರೊ-ಹದಿನಾಲ್ಕೊ ಪ್ರಾಯ. ಏಳನೇ ತರಗತಿಯಲ್ಲೇನೊ ಇದ್ದೆ. ಲಿಂಗಾಯತ ಗೆಳತಿಯ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ದೊಡ್ಡವರೆನಿಸಿಕೊಂಡವರು ಆಡಿದ ಮಾತು ಅದ್ಯಾಕೊ ಮನಸ್ಸಿನಗೆ ಚುಚ್ಚಿದಂಗಾಯ್ತು... `ಬ್ಯಾಡ ಅಂದ್ರೂ ವಿಜಯಾನ ಕರಕೊಂಡು ಬಂದಿ... ಅದಕ್ಕ ಮನ್ಯಾಗ ಚೋಳ ಬಂದೈತಿ...~

ನನಗೂ ಚೋಳಿಗೆ ಎಲ್ಲಿಂದ ಸಂಬಂಧ? ನಾನು ಬಂದಿದ್ದಕ್ಕ ಚೋಳು ಯಾಕ ಬರಬೇಕು? ಅನ್ನೊ ಪ್ರಶ್ನೆ ಭಾಳ ದಿನ ಕಾಡಿತು. ಗೆಳತಿ ಹೇಳಿದಳು `ನೀನು ಮಾಂಸ ತಿಂತಿಯಲ್ಲ... ಅದಕ್ಕ~ ಅಂತ. ಪಾಪ ಅದೂ ನನ್ನಂತೆ ಚಿಕ್ಕ ಹುಡುಗಿ ಆಗ. ದೊಡ್ಡೋರು ಹೇಳಿದ್ದನ್ನ ಕೇಳಿಸಿಕೊಂಡು ಹಾಗೆ ಹೇಳಿತ್ತು. `ಹಂಗಂದ್ರ ನಾನು ಮಾಂಸ ತಿನ್ನೂದು ಬಿಟ್ರ ನಿಮ್ಮ ಮನ್ಯಾಗ ಚೋಳ ಬರೂದಿಲ್ಲ?~ ಅಂದವಳು ಅವತ್ತಿನಿಂದ ಎಷ್ಟೊ ದಿನಗಳ ಕಾಲ ನಾನು ಬರೀ ತರಕಾರಿ ತಿಂದ್ನಿ...

ಅಲ್ಲಿಂದ ಅಂತಹ ಪ್ರಸಂಗಗಳು ನಡೆದ ನೆನಪಿಲ್ಲ. ಗುಲ್ಬರ್ಗದ ಮಾದೇವಿ ಹೈಸ್ಕೂಲ್ನಲ್ಲಿ, ಎಸ್ಬಿ (ಶರಣಬಸಪ್ಪ) ಕಾಲೇಜಿನಲ್ಲಿ ಓದುವಾಗ, ಹುಬ್ಬಳ್ಳಿಯ ಮೆಡಿಕಲ್ ಕಾಲೇಜು ಹಾಂಗ... ಬಳ್ಳಾರಿಯಲ್ಲಿ ಎಂ.ಎಸ್. ಮಾಡೂವಾಗ ಎಲ್ಲೂ ಈ ಜಾತೀಯತೆ, ಅಸ್ಪೃಶ್ಯತೆ ಅನ್ನೂದು ನನ್ನ ಗಮನಕ್ಕ ಬರಲಿಲ್ಲ. ಎಲ್ಲಾ ಮೇಲ್ಜಾತಿ ಗೆಳತಿಯರೇ ಇದ್ರೂ, ಎಲ್ರೂ ಉನ್ನತ ವಿಚಾರ ಉಳ್ಳವರು ಆಗಿದ್ರು...

ವೈಯಕ್ತಿಕ ಬದುಕು
ನನಗ ಹಾಂಗ `ವೈಯಕ್ತಿಕ ಬದುಕು~ ಅಂತ ಹೇಳಿಕೊಳ್ಳುವಂಥದ್ದೇನೂ ಇಲ್ಲ. ನನ್ನ ಜೀವನ ಅಂದ್ರ ಕರ್ತವ್ಯ, ಸೇವೆ ಅಷ್ಟ. ಮದುವಿ ಆಗಬೇಕು ಅಂತ ಅನಿಸಲಿಲ್ಲ. ಮದುವಿ ಆಗಲಿಲ್ಲ ಅನ್ನೊ ನೋವೂ ಇಲ್ಲ.ಆದ್ರೂ ನನಗ ಅಂತ ಒಂದಿಷ್ಟು ಸಮಯ ಮೀಸಲಿಟ್ಟೇನಿ. ಮೊದಲೇ ನಾನು ಶಾಂತಿ ಪ್ರಿಯಳು. ನನಗ ನೆಮ್ಮದಿ ಬೇಕು-ಶಾಂತಿ ಬೇಕು. ಅದಕ್ಕಾಗಿ ದಿನಾ ಗೀತಾ ಓದ್ತೀನಿ. ಸಮಯ ಸಿಕ್ರ ರೋಗಿಗಳಿಗೆ, ಎಳೆ ಡಾಕ್ಟ್ರಗಳಿಗೆ ಅದರ ಸಾರಾಂಶ ಹೇಳ್ತಿನಿ.

ಆಗಿನ ಹತ್ತು ಜನರ ತುಂಬು ಕುಟುಂಬದಲ್ಲಿ ಈಗ ಹೊಸ ಹೊಸ ಸದಸ್ಯರೆಲ್ಲ ಸೇರಿಕೊಂಡಾರ, ತಂಗಿಯರ ಗಂಡಂದಿರು, ತಮ್ಮನ ಹೆಂಡತಿ, ಅವರ ಮಕ್ಕಳು... ಆದ್ರ ಮನೆಯೊಡತಿಯ ಜಾಗ ಖಾಲಿ ಆಗೈತಿ. ಅವ್ವ ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರು ತಗೊಂಡ್ಳು.

ತಮ್ಮ ಅಜಯ್ ಅಲ್ಲೇ ಗುಲ್ಬರ್ಗದಾಗ ವಕೀಲ ಅದಾನು, ತಂಗಿ ಸಮತಾ ಬೆಂಗಳೂರು ವಿವಿಯಲ್ಲಿ, ಜಾಗೂ(ಜಾಗೃತಿ) ರಾಯಚೂರಿನ ಕೃಷಿ ವಿವಿಯಲ್ಲಿ, ನಾಗೂ(ನಾಗರತ್ನ) ಯಾದಗಿರಿಯಲ್ಲಿ, ಇಂದೂ ಗುಲ್ಬರ್ಗದ ಎಂಜಿನಿಯರ್ ಕಾಲೇಜಿನಲ್ಲಿ, ಜಯಾ(ಜಯಶ್ರೀ) ಧಾರವಾಡ ವಿವಿಯಲ್ಲಿ ನೌಕರಿ ಮಾಡ್ತಾರು. ಮತ್ತ ನನಗ ಕಿದ್ವಾಯಿನ ಮನೆ-ಕುಟುಂಬ ಎಲ್ಲ.

ಇಲ್ಲಿವರೆಗೂ ಬರಾಕ ನನಗ ಯಾರ್ಯಾರು ಸಹಾಯ ಮಾಡಿದ್ರು... ಯಾರನ್ನ ನೆನಿಬೇಕು... ಹೂಂ ಹೂಂ... ಎಷ್ಟು ಸಾರಿ ವಿಚಾರ ಮಾಡಿದ್ರೂ ಗೊತ್ತ ಆಗೂದಿಲ್ಲ. ಹಂಗ ನೋಡಿದ್ರ ಗುಲ್ಬರ್ಗದ ಆ ಒಣ ಧೂಳಿನ ಸಮೇತ ಎಲ್ಲಾರಿಗೂ ಸಲಾಂ ಹೇಳಬೇಕು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.