ಗುರುವಾರ , ಜೂನ್ 24, 2021
28 °C

ಯುನಿಸೆಫ್ ವರದಿ: ನಗರದ ಮಕ್ಕಳ ಆರೋಗ್ಯ ಕಳವಳಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: `ವಿಶ್ವದಲ್ಲಿನ ಮಕ್ಕಳ ಸ್ಥಿತಿಗತಿ~ ಕುರಿತ ಯುನಿಸೆಫ್‌ನ ವರದಿಯಲ್ಲಿ ಭಾರತದ ನಗರ ಪ್ರದೇಶಗಳಲ್ಲಿ ಮಕ್ಕಳು ಅನಾರೋಗ್ಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶದ ಮೇಲೆ ಬೆಳಕು ಚೆಲ್ಲಲಾಗಿದೆ.

ವಿಶ್ವದ 193 ದೇಶಗಳ ಮಕ್ಕಳ ಆರೋಗ್ಯ ಸ್ಥಿತಿಗತಿಯಲ್ಲಿ ಭಾರತದ ಸ್ಥಾನ 46 ಆಗಿದೆ. ಇದೇ ವೇಳೆ ಮಕ್ಕಳ ಆರೋಗ್ಯದ ಮೇಲೆ ಅರಿವು ಮೂಡಿಸುವುದು ಹಾಗೂ ಅಂತಹ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯ ಸೇವೆಯ ಬಗ್ಗೆ ಯುನಿಸೆಫ್ ಪ್ರಶಂಸೆ ವ್ಯಕ್ತಪಡಿಸಿದೆ.

ಹೊಸ ಶತಮಾನದ ಮೊದಲ ದಶಕದಲ್ಲಿ ನಗರೀಕರಣದ ವೇಗ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಗರ ಪ್ರದೇಶಗಳಲ್ಲಿನ ಮಕ್ಕಳ ಆರೋಗ್ಯ ತೃಪ್ತಿದಾಯಕವಾಗಿಲ್ಲ. ಐದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೌಷ್ಠಿಕ ಅಹಾರದ ಕೊರತೆಯೂ ಒಂದು ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

`ವಿಶ್ವದಲ್ಲಿನ ಮಕ್ಕಳ ಸ್ಥಿತಿಗತಿ-2012~ ಕುರಿತ ಯುನಿಸೆಫ್‌ನ ವರದಿಯನ್ನು ತಮಿಳುನಾಡು ಯೋಜನಾ ಆಯೋಗದ ಉಪಾಧ್ಯಕ್ಷೆ ಶಾಂತಾ ಶೈಲಾ ನಾಯರ್ ಸೋಮವಾರ ಬಿಡುಗಡೆ ಮಾಡಿದರು.

ವರದಿಯಲ್ಲಿ ಪ್ರಮುಖವಾಗಿ `ನಗರ ಪ್ರದೇಶದಲ್ಲಿನ ಮಕ್ಕಳ ಸ್ಥಿತಿಗತಿ~ ಕುರಿತು ಮಹತ್ವ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ವಾಸ ಮಾಡುವ ಬಡ ಪೋಷಕರು ಮಕ್ಕಳಿಗೆ ಸೂಕ್ತ ಪೌಷ್ಠಿಕ ಆಹಾರ ಒದಗಿಸುವಲ್ಲಿ ವಿಫಲವಾಗಿದ್ದಾರೆ. ಜತೆಗೆ ಆರೋಗ್ಯ, ಯೋಗ್ಯ ಕುಡಿಯುವ ನೀರು, ಶೌಚಾಲಯ, ಶಿಕ್ಷಣ ಮತ್ತು ಪೌಷ್ಠಿಕ ಅಹಾರಗಳ ಕೊರತೆ ನಗರ ಪ್ರದೇಶದಲ್ಲಿನ ಮಕ್ಕಳನ್ನು ಕಾಡುತ್ತಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಇತರ ದೇಶಗಳಿಗೆ ಹೋಲಿಸಿದರೆ ಐದು ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿಯೂ ಭಾರತ ವಿಫಲವಾಗಿದೆ. ಭಾರತದಲ್ಲಿ ಐದು ವರ್ಷದೊಳಗಿನ ಪ್ರತಿ ಸಾವಿರ ಮಕ್ಕಳಿಗೆ 63 ಮಂದಿ ಸಾಯುತ್ತಿದ್ದಾರೆ. ಈ ಮಕ್ಕಳ ಆರೋಗ್ಯ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದರಿಂದ ಈ ದಶಕದಲ್ಲಿ ಸಾಯುತ್ತಿರುವ ಮಕ್ಕಳ ಸಂಖ್ಯೆ ಶೇ 3.1ರಷ್ಟು ಕಡಿಮೆ ಆಗಿದೆ ಎನ್ನುವ ಸಮಾಧಾನಕರ ಅಂಶವೂ ವರದಿಯಲ್ಲಿದೆ.

ಬಾಲ್ಯ ವಿವಾಹ, ಮಕ್ಕಳ ಕಳ್ಳಸಾಗಣೆ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಬೆಂಗಳೂರಿನ ಸರ್ಕಾರೇತರ ಸಂಸ್ಥೆ `ಕಿಲಿಕಿಲಿ~ ಸೇವೆಯನ್ನು ವರದಿಯಲ್ಲಿ ಪ್ರಶಂಸಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.