ಶುಕ್ರವಾರ, ಏಪ್ರಿಲ್ 23, 2021
24 °C

ಯುನೆಸ್ಕೊ ಪಟ್ಟಿಗೆ ಪಶ್ಚಿಮಘಟ್ಟ: ಮರಣಶಾಸನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ಪಶ್ಚಿಮಘಟ್ಟವನ್ನು ಯುನೆಸ್ಕೊ ಪಟ್ಟಿಗೆ ಸೇರಿಸಬೇಕೆಂಬ ನಿಲುವು ಅರಣ್ಯದಲ್ಲಿ ವಾಸಮಾಡುತ್ತಿರುವ ಗಿರಿಜನರಿಗೆ ಮರಣಶಾಸನ ಬರೆದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪಟ್ಟಣದ ಚರ್ಚ್‌ಹಾಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ನಮ್ಮಲ್ಲಿರುವ ಅರಣ್ಯವನ್ನು ಕಾಪಾಡಿಕೊಳ್ಳಲು ನಾವು ಪಾಲಿಸುತ್ತಿರುವ ಕಾನೂನುಗಳನ್ನು  ಬಲಪಡಿಸಿದರೆ ಸಾಕಾಗುತ್ತದೆ.ಮೂಲ ಸೌಕರ್ಯಗಳಿಂದ ವಂಚಿತರಾಗಿ ಅರಣ್ಯದಲ್ಲಿ ವಾಸವಾಗಿರುವ ಗಿರಿಜನರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್‌ನಂತಹ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದ್ದು, ಯುನೆಸ್ಕೊ ಪಟ್ಟಿಗೆ ಸೇರ್ಪಡೆಗೊಂಡರೆ ಈ ಎಲ್ಲಾ ಮೂಲ ಸೌಲಭ್ಯಗಳಿಂದ ಅರಣ್ಯವಾಸಿಗಳು ವಂಚಿತರಾಗಬೇಕಾಗುತ್ತದೆ. ಅಭಿವೃದ್ಧಿ ಕಾರ್ಯಗಳು ನಡೆಯದೇ ಅರಣ್ಯವಾಸಿಗಳಿಗೆ ಯುನೆಸ್ಕೊ ಪಟ್ಟಿ ಮುಳುವಾಗುತ್ತದೆ~ ಎಂದು ತಿಳಿಸಿದರು.ಕಳಸ ಭಾಗದಲ್ಲಿ ಉಲ್ಬಣಗೊಂಡಿರುವ ಡೀಮ್ಡ ಫಾರೆಸ್ಟ್ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರು, ಹಾಗೂ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ರೂಪಿಸಲಾಗುವುದು. ಯಾವುದೇ ಕಾರಣಕ್ಕೂ ನಿವಾಸಿಗಳು ಆತಂಕಗೊಳ್ಳಬಾರದು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜು ಸನ್ಮಾನ ಸ್ವೀಕರಿಸಿ ಮಾತನಾಡಿ, ಪಡಿತರ ಆಹಾರ ಪೂರೈಕೆಯ ತೂಕದಲ್ಲಿ ದೂರುಗಳು ಕೇಳಿಬರುತ್ತಿದ್ದು, ನೂತನ ಮಾದರಿಯ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಜಾರಿಗೆ ತರುವ ಉದ್ದೇಶವಿದ್ದು, ಈ ಯಂತ್ರಗಳು ತೂಕವನ್ನು ಧ್ವನಿಯ ಮೂಲಕ ತೋರ್ಪಡಿಸುತ್ತವೆ.

 

ಇಂತಹ ಯಂತ್ರಗಳನ್ನು ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಜಾರಿಗೆ ತರಲಾಗುವುದು. ನಂತರ ಅದರ ಸಾಧಕ ಭಾದಕ ಪರಿಶೀಲಿಸಿ ರಾಜ್ಯದೆಲ್ಲೆಡೆಗೆ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.ಪಡಿತರ ಚೀಟಿ ವ್ಯವಸ್ಥೆಯಲ್ಲಿ ವಿತರಕರ ಬಳಿಯೇ ಕಳ್ಳ ಪಡಿತರ ಚೀಟಿಗಳಿರುವ ಮಾಹಿತಿ ಲಭಿಸಿದ್ದು, ಪಡಿತರ ಧಾನ್ಯಗಳನ್ನು ಗೊದಾಮಿನಿಂದ ಬಿಡುಗಡೆಗೊಂಡ ತಕ್ಷಣ ಗ್ರಾಮ ಪಂಚಾಯತಿಗೆ ಸಂದೇಶ ಬರುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.  ಮುಜರಾಯಿ ಸಚಿವ ಕೋಟಾ ಶ್ರಿನಿವಾಸ ಪೂಜಾರಿ ಮಾತನಾಡಿ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಡನೆ ಬಡ ರೈತರಿಗೆ ನೆರವಾಗಲು 25 ಸಾವಿರದ ವರೆಗಿನ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದರು.ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅರಣ್ಯ ಮತ್ತು ವಸತಿ ವಿಹಾರಧಾಮ  ನಿಗಮದ ಅಧ್ಯಕ್ಷ ಎಂ.ಕೆ. ಪ್ರಾಣೇಶ್ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.