ಶನಿವಾರ, ಜೂನ್ 19, 2021
23 °C

ಯುವ ಪ್ರತಿಭೆಗಳು ಬೆಳಗಿದ ಉಗಾದಿ ಉತ್ಸವ

ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಅನನ್ಯ ಸಂಸ್ಥೆಯಲ್ಲಿ ಕಳೆದ ವಾರ ಉಗಾದಿ ಉತ್ಸವವನ್ನು ಆಚರಿಸಲಾಯಿತು. 

ಮೂರು ದಿನಗಳ ಉತ್ಸವದಲ್ಲಿ 3 ಸಂಗೀತ ಕಛೇರಿಗಳು ನಡೆದವು. 11 ಜನ ಯುವ ಕಲಾವಿದರು ಗಾಯನ ವಾದ್ಯ ಕಛೇರಿಗಳಲ್ಲಿ ಪಾಲ್ಗೊಂಡರು.

 

ಎರಡು ಹಾಡುಗಾರಿಕೆ ಹಾಗೂ ಒಂದು ವಾದನ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.  ಯಾವ ಕಲಾವಿದರೂ ಹೊಸಬರಲ್ಲ. ಕಛೇರಿಗಳೂ ಅವರಿಗೆ ಹೊಸತಾಗಿರಲಿಲ್ಲ.

ಆದರೆ ಕೊಳಲು ನುಡಿಸಿದ ಚೆನ್ನೈ ವಾಸಿ ಶ್ರುತಿಸಾಗರ್, ಈ ಭಾಗದಲ್ಲಿ ಇನ್ನೂ ಅಷ್ಟಾಗಿ ಪರಿಚಿತರಲ್ಲ! ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್.ಕೊಳಲು ವಾದನದಲ್ಲಿ ಈ ಯುವಕ ಉದಯೋನ್ಮುಖ ಕಲಾವಿದ. ಪ್ರಾರಂಭದ ಕೇದಾರ ವರ್ಣದಿಂದಲೇ ಸಭೆಯ ಸಂಪೂರ್ಣ ಗಮನ ಸೆಳೆದುಕೊಂಡ ವೇಣುವಾದಕ, ಕೊನೆಯವರೆಗೂ ಆಸಕ್ತಿ ಉಳಿಸಿಕೊಂಡರು.ಪಂತುವರಾಳಿಯನ್ನು ಹಿತಮಿತವಾಗಿ ಪಸರಿಸಿ, `ಶಿವಶಿವ ಎನರಾದ~ ಕೃತಿ ನುಡಿಸಿದರು. ಸ್ವರಪ್ರಸ್ತಾರವನ್ನು ಕ್ರಮೇಣ ಬೆಳೆಸಿದರು. ಶ್ಯಾಮಾಶಾಸ್ತ್ರಿಗಳ  `ದೇವಿಬ್ರೋವ ಸಮಯಮಿದೆ~ ವಿಳಂಬದಲ್ಲಿ ಗಾಂಭೀರ್ಯದಿಂದ ನುಡಿಸಿದರು. ಒಂದು ಕಾಲದಲ್ಲಿ ಪ್ರಖ್ಯಾತವಾಗಿದ್ದ  `ಸರಸಿಜನಾಭ ಸೋದರಿ~  ವಿನಿಕೆ ಮಾಡಿ, ದಿನದ ಪ್ರಧಾನ ರಚನೆಗೆ ಸರಿದರು. ಭೈರವಿಯಂಥ ಘನ ರಾಗವನ್ನು ಆಯ್ದು, ಕ್ರಮೇಣ ರಾಗಭಾವವನ್ನು ಗಾಢವಾಗಿ ಹೊರಚೆಲ್ಲಿದರು.ಭೈರವಿ ಸ್ವರಜತಿಯ ಆಯ್ಕೆಯೇ ಸಭೆಯಲ್ಲಿ ಒಂದು ಹರ್ಷದ ವಾತಾವರಣ ಸೃಷ್ಟಿಸಿತು. ಭಿನ್ನ ಲೆಕ್ಕಾಚಾರದ ಸ್ವರಪುಂಜಗಳು ಸ್ವಾರಸ್ಯಕರವಾಗಿದ್ದವು. ರಾಗಕ್ಕೆ ಪೂರಕವಾಗಿತ್ತು. ಮಾಧುರ್ಯ, ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಹಸನಾದ ಸಂಗತಿಗಳು, ಸದಭಿರುಚಿಯ ನಿರೂಪಣೆಗಳು ಶ್ರುತಿಸಾಗರ್‌ರ ವೇಣುವಾದನದ ಪ್ರಮುಖ ಅಂಶಗಳು.  ಶ್ರುತಿಸಾಗರ್ ಸಂಗೀತ ಭವಿಷ್ಯ ಆಶಾದಾಯಕವಾಗಿದೆ.ಪಿಟೀಲಿನಲ್ಲಿ ಬಿ.ಕೆ. ರಘು ನೀಡಿದ ಪುಷ್ಟಿ ಶ್ಲಾಘನೀಯವಾದರೆ, ಎಸ್. ಅಶೋಕ್ ಮೃದಂಗದಲ್ಲಿ ನೆರವಾದರು.ಮಿಂಚಿನ ಸಂಗತಿಗಳುಉಗಾದಿ ಉತ್ಸವದ ಅಂತಿಮ ಕಛೇರಿ ಮಾಡಿದ ಜಿ. ರವಿಕಿರಣ್ ಕೇಳುಗರಿಗೆ ಹೊಸಬರೇನಲ್ಲ. ತಮ್ಮ ಪ್ರತಿಭೆ, ಸಾಧನೆಗಳಿಂದ ಶೀಘ್ರವಾಗಿ ಯಶಸ್ಸಿನ ಶಿಖರ ಹತ್ತುತ್ತಿರುವ ರವಿಕಿರಣ್‌ಗೆ ಪಿಟೀಲಿನಲ್ಲಿ ಚಾರುಲತಾ ರಾಮಾನುಜಂ, ಮೃದಂಗದಲ್ಲಿ ತಂಜಾವೂರು ಪ್ರವೀಣ್ ಕುಮಾರ್ ಹಾಗೂ ಘಟದಲ್ಲಿ ಎಂ.ಎ. ಕೃಷ್ಣಮೂರ್ತಿ ಒತ್ತಾಸೆ ನೀಡಿದರು.ರವಿಕಿರಣ್ `ನಿನುವಿನಾಗಾಮರಿ~  ಕೃತಿಯನ್ನು ರಾಗಭಾವ ಪ್ರಕಾಶಿಸುವಂತೆ ಹಾಡಿದರು. ದೀಕ್ಷಿತರ  `ರಾಮಚಂದ್ರೇ ಸಂರಕ್ಷಿತೊಹಂ~ ಕೃತಿಯು ಕಛೇರಿಗೆ ಒಂದು ಉತ್ತಮ ಸೇರ್ಪಡೆ.ಹಿಂದೆ ಎಲ್ಲರ ಬಾಯಲ್ಲಿ ನಲಿಯುತ್ತಿದ್ದ  `ಹಿಮಗಿರಿ ತನಯೆ~ ಆಯ್ದುಕೊಂಡಿದ್ದು ವಿಶೇಷ. ಆದರೆ ಸಾಹಿತ್ಯ ಮುರುಟಿ ಹೋಗುವಷ್ಟು ವೇಗ ಬೇಕಿತ್ತೆ? ಹಿಂದೆ ವಿಸ್ತಾರಕ್ಕೆ ಹಿರಿಯರು ತೆಗೆದುಕೊಳ್ಳುತ್ತಿದ್ದ ನಾಜೀವಧಾರಾ  ನಿರೂಪಿಸಿದರು. ತ್ಯಾಗರಾಜಸ್ವಾಮಿಗೆ ನಾಮ ಮತ್ತು ರೂಪ ಬೇರೆ ಬೇರೆಯಾಗಿರಲಿಲ್ಲ.ತನ್ನ ಸರ್ವೇಂದ್ರಿಯಾಷ್ಠಾನವು ರಾಮತಾರಕ ಬ್ರಹ್ಮವೇ ಎಂದು ಧ್ಯಾನಿಸಿದ್ದಾರೆ. ಈ ಗಾಢ ಅರ್ಥವುಳ್ಳ ಕೀರ್ತನೆಯು ಬಿಲಹರಿ ರಾಗದ ಉತ್ತಮ ಕೃತಿಗಳಲ್ಲಿ ಒಂದು. ರವಿಕಿರಣ್‌ರ ಹಾಡಿಕೆ ಚೈತನ್ಯಪೂರ್ಣವಾಗಿತ್ತು.ಉತ್ತರಾರ್ಧದಲ್ಲಿ ಭಕ್ತಿಪೂರ್ಣ ಒಂದು ರಚನೆ (ರಾಮರಾಮರಾಮ), ಜಾವಡಿ, ಸ್ವಾತಿ ತಿರುನಾಳರ ಒಂದು ಕೃತಿ (ಜಗದೀಶ), ತಿಲ್ಲಾನ (ಪೂರ್ಣಚಂದ್ರಿಕೆ)ಗಳಿಂದ ಕಛೇರಿಗೆ ಪೂರ್ಣತ್ವ ಒದಗಿತು.ಹಂಸಧ್ವನಿಯ ಕಲಾಮಂಟಪ

ಗಣ್ಯ ಗಾಯಕಿ ಎಂ.ಎಸ್. ಶೀಲಾ ಅವರ  ಹಂಸಧ್ವನಿ ಕ್ರಿಯೇಷನ್ಸ್ ನ ಆಶ್ರಯದಲ್ಲಿ ಯುವಜನ ವಿಭಾಗ ಕಲಾ ಮಂಟಪ  ಪ್ರಾರಂಭವಾಗಿದೆ. ಬೆಂಗಳೂರು ಉತ್ತರ ಭಾಗದ ಅಮೃತಹಳ್ಳಿಯ ತಲಕಾವೇರಿ ಲೇಔಟ್‌ನ ಕ್ರಿಯೇಟಿವ್ ಚಿತ್ರಕೂಟ್ ಅಪಾರ್ಟ್ ಮೆಂಟ್ಸ್‌ನಲ್ಲಿ ಪ್ರತಿ ತಿಂಗಳ ಎರಡನೇ ಭಾನುವಾರ ಒಂದು ಸಂಗೀತ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ. ಯುವ ಕಲಾವಿದರ ಸಂಗೀತ ಕಛೇರಿ ಮತ್ತು ಅಧ್ಯಯನ ಗೋಷ್ಠಿಗಳನ್ನು ಪರ್ಯಾಯವಾಗಿ ಏರ್ಪಾಡು ಮಾಡುವರು.ಭಾನುವಾರ ನಡೆದ ಸಂಗೀತ ಕಛೇರಿಯಲ್ಲಿ ಉದಯೋನ್ಮುಖ ಕಲಾವಿದೆ ಕುಮಾರಿ ಶ್ರೀಮಾತಾ ಗಾಯನ ನಡೆಯಿತು. ಎಂ.ಎಸ್. ಶೀಲಾ ಅವರ ಶಿಷ್ಯೆಯಾದ ಶ್ರೀಮಾತಾ ವಿದ್ವತ್‌ನಲ್ಲಿ ತೇರ್ಗಡೆಯಾಗಿದ್ದು, ಇಂಡಿಯಾ ಫೌಂಡೇಶನ್ ಮುಂತಾದೆಡೆ ಸಂಗೀತ ಸಹವಿಷಯಗಳಲ್ಲಿ ಕೆಲಸ ಸಹ ಮಾಡಿದ್ದಾರೆ.ಹಾಡು ಹಕ್ಕಿ ಹಬ್ಬ, ಕಲಿ ಕಲಿಸು ಮುಂತಾದ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಘನವಾದ ತೋಡಿ ವರ್ಣ `ಏರಾನಾಪೈ~ಯನ್ನು ದ್ರುತ ಕಾಲದಲ್ಲಿ ಹಾಡಿ, ಕಛೇರಿಗೆ ಬಿರುಸಾದ ಚಾಲನೆ ನೀಡಿದರು. ಗಾಯನದ ಪ್ರಾರಂಭಕ್ಕೆ ಹಾಗೂ ಗಂಟಲನ್ನು ಹದಗೊಳಿಸಲು ಮತ್ತು ಕಾರ್ಯಕ್ರಮಕ್ಕೆ ಭದ್ರಬುನಾದಿ ಹಾಕಲು, ತೋಡಿ ರಾಗದ ಈ ವರ್ಣ ಒಂದು ಉತ್ತಮ ಆಯ್ಕೆ.ಹಾಗೆಯೇ  ವನಜಾಕ್ಷಿ ಕೃತಿ, ಶ್ರೀರಂಜಿನಿಯ ಕಿರು ಆಲಾಪನೆ, ಸ್ವರಗಳೊಂದಿಗೆ ತ್ಯಾಗರಾಜರ ಸೊಗಸುಗಾ ಮೃದಂಗ ತಾಳಮು ಹಿತವಾಗಿ ಮೂಡಿತು. ಯೋಚನ ದ್ರುತ ಕಾಲದಲ್ಲಿ ಹಾಡಿ, ಭಜರೇ ಚಿತ್ತ ತೆಗೆದುಕೊಂಡರು. ಸ್ವರ ಪ್ರಸ್ತಾರದಲ್ಲಿ ಅಡೆತಡೆಗಳನ್ನು ತಪ್ಪಿಸಬಹುದಿತ್ತು.

 

ಮಹಾರಾಜ ಜಯಚಾಮರಾಜ ಒಡೆಯರ `ಬ್ರಹ್ಮಾಂಡ ವಲಯೇ~ದಲ್ಲೂ ಪುನರಾವರ್ತನೆ ಕಾಣಿಸಿತು. ಶಂಕರಾಭರಣದ ಜನ್ಯವಾದ ಮಾಂಡ್ ರಾಗದಲ್ಲಿರುವ ಈ ಕೃತಿಯೂ ಸೊಗಸಾಗಿದೆ. ಕಛೇರಿಗೆ ಕಳಶಪ್ರಾಯವಾಗುವಂತೆ ಪಲ್ಲವಿಯನ್ನು ಆಯ್ದ ಶ್ರೀಮಾತಾ ಸಭೆಯ ಗೌರವಕ್ಕೆ ಪಾತ್ರರಾದರು. ರಾಗ -ತಾನ -ಪಲ್ಲವಿಯನ್ನು ಆರಿಸಿಕೊಂಡದ್ದು ಅಭಿನಂದನೀಯ. ಚತುರಶ್ರ ರೂಪಕ ತಾಳದಲ್ಲಿ  ನೀರಜದಳನಯನ ಪಲ್ಲವಿ ಮಿತ ಚೌಕಟ್ಟಿನಲ್ಲಿ ಸಾಗಿತು.ಆಲಾಪನೆ, ತಾನ, ಸ್ವರ ಪ್ರಸ್ತಾರಗಳು ಇನ್ನೂ ಗಾಢವೂ, ಪ್ರಬಲವೂ ಆಗಬೇಕಾದರೂ ಶ್ರೀಮಾತಾ ಅವರ ದಕ್ಷ ಶಿಕ್ಷಣ, ಸಾಧನೆಗಳು ಸಗೋಚರ. ಅಂತಃಪುರ ಗೀತೆ (ಏನೇ ಶುಕಭಾಷಿಣಿ), ನರಹರಿ ಚಂಚಲ (ಪ್ರಯೀದಾಸ್), ಮಂಗಳ (ಮನ್ನಾರು ಕೃಷ್ಣಗೆ ಮಂಗಳ)ಗಳಿಂದ ಮುಕ್ತಾಯಗೊಳಿಸಿದರು. ಪ್ರೌಢ ಶಿಕ್ಷಣ, ಕೇಳ್ಮೆ, ಸಾಧನೆಗಳಿಂದ ಶ್ರೀಮಾತಾ ಅವರ ಸಂಗೀತ ಗಗನ ಮುಟ್ಟಬಹುದು.ಅಚ್ಯುತರಾವ್ (ಪಿಟೀಲು) ಮತ್ತು ಅದಮ್ಯ ಭಟ್ (ಮೃದಂಗ) ಪಕ್ಕವಾದ್ಯಗಳಲ್ಲಿ ನೀಡಿದ ಬೆಂಬಲ ಕಡಿಮೆ ಏನಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.