ಭಾನುವಾರ, ಜನವರಿ 26, 2020
28 °C

ಯೇಸುವಿನ ಕರುಣೆಗಾಗಿ ಕಾಯುತ್ತಾ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಸಡಗರ, ಸಂಭ್ರಮದ ಕ್ರಿಸ್ ಮಸ್‍ ಈವ್ ಇಂದು. ಯೇಸು ಜನಿಸಿದ ನೆನಪಿನಲ್ಲೇ ಹೊಸ ವರ್ಷಕ್ಕೂ ಸ್ವಾಗತ ಕೋರುವ ವಿಶೇಷ ದಿನ. ಮಂಗಳವಾರದ ಈವ್ ಮುಗಿದು, ಮಧ್ಯರಾತ್ರಿ ಕಳೆದು 25ರ ಬುಧವಾರದ ಮೊದಲ ಕ್ಷಣ ಶುರುವಾಗುತ್ತಲೇ ಯೇಸು ಕ್ರಿಸ್ತ ಜನಿಸುತ್ತಾನೆ; ಎಲ್ಲರ ಹೃದಯಗಳಲ್ಲಿ. ಮನೆ ಮನಗಳಲ್ಲಿ ಕ್ರಿಸ್ ಮಸ್ ಸಂಭ್ರಮ ಕೋರೈಸುತ್ತದೆ. ಕ್ರಿಸ್ತನ ಕರುಣೆ, ಪ್ರೀತಿಯ ಬೆಳಕಿನಲ್ಲಿ ಎಲ್ಲರೂ ಪಾಪದಿಂದ ಶುದ್ಧರಾಗುವ ಕಡೆಗೆ ನಡೆಯುತ್ತಾರೆ.



ಕ್ರೈಸ್ತರಷ್ಟೇ ಈ ಕ್ಷಣಕ್ಕಾಗಿ ಕಾಯು-ತ್ತಾ­ರೆಯೇ? ಇಲ್ಲ. ಕ್ರೈಸ್ತೇತರರಾದ ಮತ­ಬಾಂಧವರೂ ಕೂಡ ಕ್ರಿಸ್ತನ ಜನನದ ಕ್ಷಣಗಳಿಗೆ ಸಾಕ್ಷಿಯಾಗಲು ಚರ್ಚ್‌ಗಳಿಗೆ, ಚಾಪೆಲ್‌ಗಳ ಕಡೆಗೆ ಶ್ರದ್ಧೆ, ಭಕ್ತಿಯಿಂದ ನಡೆಯುತ್ತಾರೆ. ಶೋಷಣೆ ಇಲ್ಲದ, ಸಮಾನತೆ ಆಶಯದ ಜಗತ್ತಿಗಾಗಿ ಹಾರೈಸುತ್ತಾ ಪ್ರಾಣ ತೆತ್ತ ಯೇಸು ಕ್ರಿಸ್ತನ ನೆನಪು ಕ್ರಿಸ್ಮಸ್ ಹಬ್ಬ­ದಲ್ಲಿ ಹಲವು ಬಗೆಯಲ್ಲಿ ಮೈದಾಳುತ್ತದೆ. ಕ್ರಿಸ್ಮಸ್ ತಾತಾ ‘ಸಾಂತಾ ಕ್ಲಾಸ್’ನನ್ನು ಬರಮಾಡಿಕೊಳ್ಳಲು, ಆತ ನೀಡುವ ಚಾಕೊ­ಲೆಟ್ ಸವಿಯಲು ಮಕ್ಕಳು ಕಾಯುತ್ತಿದ್ದಾರೆ. ಕ್ರಿಸ್ತ ಜನಿಸಿದ ಸಂದರ್ಭದಲ್ಲಿ ದೇವದೂತರು ಇಡೀ ಜಗತ್ತಿಗೆ ಸಾರಿದ ಶುಭವಾರ್ತೆಯು (ಕ್ರಿಸ್ಮಸ್ ಟೈಡ್) ಮತ್ತೆ ಪ್ರತಿಧ್ವನಿಸಲಿದೆ.



ಮೆಥೋಡಿಸ್ಟ್, ರೋಮನ್ ಕ್ಯಾಥೊಲಿಕ್, ಸೆವೆಂತ್ ಡೇ, ನ್ಯೂ ಲೈಫ್ ಚರ್ಚ್, ಪೆಂಟಿಕಾಸ್ಟಲ್ ಚರ್ಚ್, ಬ್ರದರನ್ ಅಸೆಂಬ್ಲಿ ಚರ್ಚ್‌ಗಳು ಸೇರಿದಂತೆ ನಗರದಲ್ಲಿ 25 ಚರ್ಚ್‌ಗಳಿವೆ. ಕೆಜಿಎಫ್ ಹೊರತುಪಡಿಸಿ ಇಡೀ ಜಿಲ್ಲೆಯಲ್ಲಿ 15ರಿಂದ 20 ಸಾವಿರ ಕ್ರೈಸ್ತ ಜನಸಂಖ್ಯೆ ಇದೆ. ಕೋಲಾರ ನಗರದಲ್ಲೇ ಸುಮಾರು 8 ಸಾವಿರ ಮಂದಿ ಕ್ರೈಸ್ತ ಸಮುದಾಯದವರಿದ್ದಾರೆ. ಈ ಎಲ್ಲರ ಮನೆಗಳಲ್ಲಿ ಕ್ರಿಸ್ ಮಸ್ ಸಂಭ್ರಮ ಮೈದಾಳಿದೆ.



ಹಿಂದೂಗಳ ಕಾರ್ತೀಕ ಮಾಸದ ಪೂಜೆ ತಿಂಗಳಿಡೀ ನಡೆಯುವಂತೆ, ಕ್ರೈಸ್ತರು ತಮ್ಮ ದೇವರನ್ನು ತಿಂಗಳ ಮೊದಲ ದಿನದಿಂದಲೇ ಸ್ವಾಗತಿಸಲು ಶುರು ಮಾಡುತ್ತಾರೆ. ಹೀಗಾಗಿ ಡಿಸೆಂಬರ್ ತಿಂಗಳ ಮೊದಲ ಭಾನುವಾರ ಯಾವತ್ತಿಗೂ ಕ್ರಿಸ್ತನ ಆಗಮನ ಕಾಲದ ಆರಂಭ. ಇಡೀ ಮಾಸ ಅಡ್ವೆಂಟ್ ಸೀಸನ್-. ಯೇಸುವಿನ ಬರುವಿಕೆಗಾಗಿ ಹೇಗೆ ಸಿದ್ಧರಾಗಬೇಕು. ಸ್ವಾಗತಿಸುವ ಪರಿ ಹೇಗಿರಬೇಕು ಎಂಬ ಚರ್ಚೆ ಎಲ್ಲರ ಮನೆಗಳಲ್ಲಿ ನಡೆಯುತ್ತದೆ. ಅದೂ ಹೇಗೆ? ಒಂಟಿ­ಯಾಗಿ ಅಲ್ಲ. ಮಾಸದ ಮೊದಲ ದಿನದಿಂದಲೇ ಶುರುವಾಗುವ ಭಜನೆ ನಡಿಗೆ ಮೂಲಕ. ಕ್ರೈಸ್ತನ ಆಗಮನದ ಹಾಡುಗಳನ್ನು ಹೇಳುತ್ತಾ ಕ್ರೈಸ್ತಬಾಂಧವರು ಮನೆಮನೆಗಳಿಗೆ ರಾತ್ರಿ ವೇಳೆ ತೆರಳಿ ಸ್ವಾಗತಿಸಲು ಸಿದ್ಧರಾಗಿ ಎಂಬ ಸಂದೇಶವನ್ನು ಸಾರುತ್ತಾರೆ. ನಿಜವಾದ ಕ್ರಿಸ್‌ಮಸ್ ಡಿಸೆಂಬರಿನ ಮೊದಲ ದಿನ­ದಿಂದಲೇ ಶುರುವಾಗುತ್ತದೆ ಎನ್ನುತ್ತಾರೆ ಗೃಹಿಣಿ ಶಾಲಿನಿ.



ಅದು ಏಕಾಂತದ ಪೂಜೆಯೂ ಹೌದು. ಲೋಕಾಂತದ ಉತ್ಸವವೂ ಹೌದು. ಶುಭಾಶಯ, ಉಡುಗೊರೆ, ಖುಷಿ ವಿನಿಯಮಕ್ಕೆ ನಗರದಲ್ಲಿ ಕ್ರೈಸ್ತರು ಸಿದ್ಧತೆ ನಡೆಸಿದ್ದಾರೆ. ಹಲವು ಮನೆಗಳಲ್ಲಿ ಗೋದಲಿ (ಕ್ರಿಸ್ತನ ಜನ್ಮಿಸಿದ ದನದ ಕೊಟ್ಟಿಗೆಯ ಸುಂದರ ಪ್ರತಿಕೃತಿ), ಕ್ರಿಸ್ ಮಸ್ ಟ್ರೀಗಳನ್ನು ಸಿದ್ಧಪಡಿಸುವ ಕೆಲಸವೂ ಭರದಿಂದ ನಡೆದಿದೆ. ಎಲ್ಲ ಚರ್ಚುಗಳಲ್ಲೂ ಗೋದಲಿ ಮತ್ತು ಕ್ರಿಸ್ಮಸ್ ಟ್ರೀಗಳ ದೊಡ್ಡ ಪ್ರತಿಕೃತಿಗಳು ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಲಿವೆ. ತಮಗಿಂತಲೂ ಬಡವಾರದವರಿಗೆ ಕ್ರೈಸ್ತರು ವಸ್ತುಗಳನ್ನು ದಾನ ಮಾಡುವುದು ಮತ್ತೊಂದು ವಿಶೇಷ.



ತಪ್ಪೊಪ್ಪಿಗೆ: ಕ್ರಿಸ್‌ಮಸ್ ಹಬ್ಬದ ಮತ್ತೊಂದು ವಿಶೇಷ ಎಂದರೆ ಎಲ್ಲರೂ ತಮ್ಮ ಪಾಪದ ತಪ್ಪೊಪ್ಪಿಗೆ ಕೆಲಸಕ್ಕೆ ಮುಂದಾಗುವುದು. ಆಗಮನದ ದಿನದಿಂದ ಕ್ರಿಸ್ ಮಸ್ ಈವ್ ವರೆಗೆ ಯಾವತ್ತಾದರೂ ಒಂದು ದಿನ ಚರ್ಚಿಗೆ ತೆರಳಿ ತಮ್ಮ ಪಾಪಗಳ ನಿವೇದನೆ­ಯನ್ನು ಪಾದ್ರಿಗಳಲ್ಲಿ ಮಾಡಿಕೊಳ್ಳುತ್ತಾರೆ. ಆ ಮೂಲಕ ಕ್ರಿಸ್ತನ ಆಗಮನಕ್ಕೆ ಸ್ವಾಗತ ಕೋರಲು ಸಂಪೂರ್ಣವಾಗಿ ಸಜ್ಜಾಗುತ್ತಾರೆ. ಕ್ರಿಸ್‌ಮಸ್ ಕ್ರೈಸ್ತರ ಪಾಲಿಗೆ ಹೊಸ ವರ್ಷದ ಆಗಮನವಷ್ಟೇ ಅಲ್ಲ. ಹೊಸ ಜೀವನದ ಆಗಮನವೂ ಹೌದು ಎಂಬುದು ಜಿಲ್ಲೆಯ ಮೆಥೋಡಿಸ್ಟ್ ಚರ್ಚುಗಳ ಜಿಲ್ಲಾ ಮೇಲ್ವಿಚಾರಕರಾದ ರೆವರೆಂಡ್ ಕ್ರಿಸ್ಟೋಫರ್ ಡೇವಿಡ್ ಅವರ ವಿಶ್ಲೇಷಣೆ.



ಕ್ರಿಸ್ ಮಸ್ ಈವ್ ಮುನ್ನಾ ದಿನವಾದ ಮಂಗಳವಾರ ಸಂಜೆ 6ರಿಂದ ಮಧ್ಯರಾತ್ರಿ 12 ಗಂಟೆವರೆಗೆ ವಿಶೇಷ ಪ್ರಾರ್ಥನೆ ಚರ್ಚ್‌ಗಳಲ್ಲಿ ನಡೆಯಲಿದೆ. ಅಲ್ಲಿಂದ ಕ್ರೈಸ್ತರು ಮನೆಗಳಲ್ಲಿ ಪ್ರಾರ್ಥನೆ ಮಾಡಿ, ಶುಭಾಶಯ ವಿನಿಮಯ ಮಾಡಿಕೊಂಡು, ಸಿಹಿ ಹಂಚಿ ಹಬ್ಬವನ್ನು ಆಚರಿಸುತ್ತಾರೆ. ಹೊಸ ವರ್ಷ, ಹೊಸ ಜೀವನವು ಕ್ರಿಸ್ತನ ಪ್ರೀತಿ ಕರುಣೆಯ ನೆರಳಲ್ಲಿ ಮತ್ತೆ ತೆರೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)