ಭಾನುವಾರ, ಜೂನ್ 20, 2021
24 °C

ಯೋಜನೆ ಸಮರ್ಪಕವಾಗಿ ತಲುಪುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸ್ವಾತಂತ್ರ್ಯ ಬಂದು 63 ವರ್ಷಗಳಾದರೂ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪದಿರುವುದು ವಿಷಾದಕರ~ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಡಿಸಿದರು.



ಅಖಿಲ ಭಾರತ ಬಾಬು ಜಗಜೀವನರಾಮ್ ದಲಿತ ಅಭಿವೃದ್ಧಿ ಒಕ್ಕೂಟವು ನಗರದ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಭಾನುವಾರ `ಜಾಂಬವ ಜನಾಂಗದ ಸ್ಥಿತಿಗತಿ~ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.



`ಅಕ್ಷರಜ್ಞಾನ ಇಲ್ಲದವರು ಮೀಸಲಾತಿ ಆಧಾರದ ಮೇಲೆ ರಾಜಕಾರಣಕ್ಕೆ ಬಂದು ಅಧಿಕಾರ ಅನುಭವಿಸಿದರೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಿಲ್ಲ~ ಎಂದು ಅವರು ದೂರಿದರು.



`ನ್ಯಾಯಾಲಯಗಳ ಸೂಚನೆಯಂತೆ ನಡೆದರೆ, ಸರ್ಕಾರದ ಯೋಜನೆಗಳು ಸಂಪೂರ್ಣವಾಗಿ ಸಾರ್ವಜನಿಕರಿಗೆ ತಲುಪುತ್ತವೆ. ಆಡಳಿತ ವ್ಯವಸ್ಥೆಯನ್ನು ಮೆಟ್ಟಿ ನಿಲ್ಲುವಂತಹ ಹಾಗೂ ಹೋರಾಟ ಮಾಡುವ ವ್ಯಕ್ತಿಗಳು ರಾಜಕಾರಣಕ್ಕೆ ಬಂದಾಗ ಮಾತ್ರ ಹಿಂದುಳಿದ ಸಮುದಾಯಗಳು ಅಭಿವೃದ್ಧಿ ಕಾಣಲು ಸಾಧ್ಯ~ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.



ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮತನಾಡಿ, `ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಪುತ್ಥಳಿಗಳ ನಿರ್ಮಾಣ ಮಾಡುತ್ತಾರೆ ವಿನಹ ಅವರ ಆಶಯಗಳಿಗೆ ಯಾವುದೇ ಬೆಲೆ ನೀಡಿಲ್ಲ. ರಾಜಕೀಯ ಪಕ್ಷಗಳು ದಲಿತರನ್ನು ಕೇವಲ ಮತ ಬ್ಯಾಂಕ್‌ಗಳಾಗಿ ಬಳಸಿಕೊಳ್ಳುತ್ತಿವೆ. ಕೆಳವರ್ಗದವರೆಲ್ಲರೂ ಒಟ್ಟಾಗಿ ಒಬ್ಬಉ ತ್ತಮ ನಾಯಕನ್ನು ಆಯ್ಕೆ ಮಾಡಿದಾಗ ಸಮಾಜ ಮುಂದೆ ಬರಲು ಸಾಧ್ಯ~ ಎಂದು ಹೇಳಿದರು.



ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ರಾಮಕೃಷ್ಣ, ಮಾಜಿ ಸಚಿವ ಅಂಜನಾಮೂರ್ತಿ, ಜೆಡಿ (ಎಸ್) ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ, ಬಿಬಿಎಂಪಿ ಸದಸ್ಯ ಎನ್.ಚಂದ್ರು, ರಾಜ್ಯ ಘಟಕದ ಅಧ್ಯಕ್ಷ ಬಾಬು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.