ಭಾನುವಾರ, ಜೂಲೈ 5, 2020
22 °C

ರಂಗೋಲಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತ್ರೆಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ನೈವೇದ್ಯ ಸಮರ್ಪಣೆ, ಹರಕೆ ಸಲ್ಲಿಕೆ ಇತ್ಯಾದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಸಂಜೆ ಹೊತ್ತಿನಲ್ಲಿ ತೇರು ಎಳೆಯುವುದು ಜಾತ್ರೆಯ ಮುಖ್ಯ ಆಚರಣೆ. ತೇರು ಎಳೆಯುವುದನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಾರೆ.ಅದೇ ಜಾತ್ರೆಯ ಪ್ರಮುಖ ಘಟ್ಟ. ಇದನ್ನು ಬಿಟ್ಟರೆ ಬಗೆ ಬಗೆಯ ತಿಂಡಿ, ತಿನಿಸುಗಳು, ಮಕ್ಕಳ ಆಟಿಕೆಗಳು, ಹೆಂಗಳೆಯರ ಅಲಂಕಾರದ ವಸ್ತುಗಳ ಅಂಗಡಿಗಳು ಜಾತ್ರೆಗೆ ಬರುವ ಜನರನ್ನು ವಿಶೇಷವಾಗಿ ಆಕರ್ಷಿಸುತ್ತವೆ. ಜಾತ್ರೆಗೆ ಬರುವ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಗುಂಪು ಗೂಡುತ್ತಾರೆ.ಕಾರವಾರದ ಶ್ರೀ ಮಾರುತಿ ದೇವರ ಜಾತ್ರೆ ವಿಶಿಷ್ಟವಾದದ್ದು. ಇಲ್ಲಿಗೆ ಜನರು ರಂಗೋಲಿ ವೈವಿಧ್ಯ ನೋಡಲು ಬರುತ್ತಾರೆ! ಈ ಜಾತ್ರೆ ‘ರಂಗೋಲಿ’ ಜಾತ್ರೆ ಎಂದೇ ಹೆಸರುವಾಸಿ. ಇದು ಮಾರುತಿ ದೇವರ ವಾರ್ಷಿಕ ಜಾತ್ರೆ. ಮಾರುತಿ ಜಾತ್ರೆಯಲ್ಲಿ ರಂಗೋಲಿಗಳೇ ವಿಶೇಷ ಆಕರ್ಷಣೆಗಳು!ಎರಡು ವಾರಗಳ ಹಿಂದೆ (ಜನವರಿ 3 ಮತ್ತು 4ರಂದು) ನಡೆದ ಎರಡು ದಿನಗಳ ಜಾತ್ರೆಯಲ್ಲಿ ಹಲವಾರು ಮಂದಿ ಕೈಯಲ್ಲಿ ರಂಗೋಲಿ ಪುಡಿ, ಬಣ್ಣಗಳನ್ನು ಹಿಡಿದು ಹತ್ತಾರು ಬಗೆಯ ಕಲಾತ್ಮಕ ರಂಗೋಲಿಗಳನ್ನು ಬಿಡಿಸಿದರು.  ರಂಗೋಲಿ ನೋಡಲು ನೂರಾರು ಜನರು ಸೇರಿದ್ದರು. ಕೆಲವು ರಂಗೋಲಿಗಳ ವೀಕ್ಷಣೆಗೆ ಜನರ ನೂಕು ನುಗ್ಗಲು ಕಂಡು ಬಂತು. ಮಾರುತಿ ಗಲ್ಲಿ, ಬ್ರಾಹ್ಮಣರ ಗಲ್ಲಿ, ಸಬನೀಸ್ ಚಾಳ ರಸ್ತೆಗಳಲ್ಲಿ ಜಾತ್ರೆ ನಡೆಯುತ್ತದೆ. ಈ ರಸ್ತೆಗಳನ್ನು ಜಾತ್ರೆಗಾಗಿ ವಿಶೇಷವಾಗಿ ಶೃಂಗರಿಸಲಾಗಿತ್ತು.  ಹಲವಾರು ಆಸಕ್ತರು, ಕಲಾವಿದರು ಬಣ್ಣಗಳ ಹಿಟ್ಟು, ರಂಗೋಲಿ ಪುಡಿಗಳಿಂದ ಕಲಾತ್ಮಕ ಹಾಗೂ ಸಾಂಪ್ರದಾಯಿಕ ರಂಗೋಲಿಗಳನ್ನು ಬಿಡಿಸಿದರು. ಸಂಜೆ ಆರರಿಂದಲೇ ಜನರು ಗುಂಪು ಗುಂಪಾಗಿ ರಂಗೋಲಿಗಳನ್ನು ನೋಡಲು ಬಂದರು. ರಾತ್ರಿ ಹನ್ನೊಂದರವರೆಗೂ ರಂಗೋಲಿ ನೋಡಿದರು. ಜಾತ್ರೆಯಲ್ಲಿ ಓಡಾಡಿ ಸಂತಸಪಟ್ಟರು.ಸಾಂಪ್ರದಾಯಿಕ ರಂಗೋಲಿಗಳಿಂದ ಹಿಡಿದು ರಾಜಕೀಯ, ಸಾಮಾಜಿಕ ಕ್ಷೇತ್ರಗಳ ವ್ಯಕ್ತಿಗಳು, ಚಿತ್ರ ನಟರುಗಳು, ಕ್ರಿಕೆಟ್ ಆಟಗಾರರನ್ನು ರಂಗೋಲಿಗಳಲ್ಲಿ ಬಿಡಿಸಲಾಗಿತ್ತು. ಏಕದಳ- ದ್ವಿದಳ ಧಾನ್ಯಗಳು, ಬೇಳೆ  ಕಾಳುಗಳಲ್ಲಿ ಕೆಲವು ರಂಗೋಲಿಗಳು ಮೂಡಿ ಬಂದವು. ಇನ್ನು ಕೆಲವು ರಂಗೋಲಿಗಳು ಮೇಲ್ನೋಟಕ್ಕೆ ಪೋಸ್ಟರುಗಳಂತೆ ಕಾಣುತ್ತಿದ್ದವು.ಸಾಂಪ್ರದಾಯಿಕ ರಂಗೋಲಿ ಕಲೆ ಉಳಿಸುವುದು ಸೇರಿದಂತೆ ರಂಗೋಲಿ ಕಲೆಯ ಹೊಸ ಸಾಧ್ಯತೆ ಗುರುತಿಸಿ, ಪ್ರದರ್ಶಿಸುವುದು ಈ ಹಬ್ಬದ ಉದ್ದೇಶ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.