ಶುಕ್ರವಾರ, ಮೇ 14, 2021
31 °C

`ರಕ್ತ'ದಿಂದ ಗೃಹಿಣಿಗೆ ಏಡ್ಸ್ ಶಂಕೆ

ರಾಜೇಶ್ ರೈ ಚಟ್ಲ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಂದು (ಜೂನ್ 14) ವಿಶ್ವ ರಕ್ತದಾನ ದಿನ. `ರಕ್ತದಾನ ಮಾಡಿ, ಇನ್ನೊಂದು ಜೀವಕ್ಕೆ ಕೊಡುಗೆ ನೀಡಿ' ಎಂಬುವುದು ಈ ಬಾರಿಯ ರಕ್ತದಾನ ದಿನದ ಧ್ಯೇಯ ವಾಕ್ಯ. ಆದರೆ ಜೀವದಾನದ ಶಕ್ತಿ ಇರುವ ರಕ್ತ, ಗೃಹಿಣಿಯೊಬ್ಬರಿಗೆ ಏಡ್ಸ್ `ಕೊಡುಗೆ' ನೀಡಿ, ಆಕೆಯ ಭವಿಷ್ಯವನ್ನೇ ಅಂಧಕಾರದಲ್ಲಿ ಮುಳುಗಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಹೆರಿಗೆ ವೇಳೆ ರಕ್ತಹೀನತೆಗಾಗಿ ರಕ್ತ ತೆಗೆದುಕೊಂಡ ಗೃಹಿಣಿ, ಒಂಬತ್ತು ತಿಂಗಳ ಬಳಿಕ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್ಸ) ಹೋದ ವೇಳೆ ಆಕೆಗೆ ಏಡ್ಸ್ ತಗಲಿರುವುದು ಪತ್ತೆಯಾದ ಪ್ರಕರಣವಿದು.ಈ ಹಿಂದಿನ ವೈದ್ಯಕೀಯ ಚಿಕಿತ್ಸೆ, ದಾಖಲೆಗಳನ್ನು ಪರಿಶೀಲಿಸಿದ ವೈದರು, ರಕ್ತದ ಮೂಲಕ ಏಡ್ಸ್ ತಗಲಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗೃಹಿಣಿಯ ಸಹೋದರ, `ಈ ಕುರಿತು ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು' ಎಂದು ಧಾರವಾಡ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗೆ ದೂರು ನೀಡಿದ್ದಾರೆ.ವಿಷಯ ಅರಿತ ಗೃಹಿಣಿಯ ಪತಿ, `ಇದರಲ್ಲಿ ನನ್ನ ತಪ್ಪಿಲ್ಲ. ಏಡ್ಸ್ ಸೋಂಕು ತಗಲಿರುವ ಅವಳು ನನಗೆ ಬೇಡ' ಎಂದು ದೂರವಾದರೆ, ಆಘಾತಗೊಂಡಿರುವ ಗೃಹಿಣಿ, `ನಾನೇನೂ ತಪ್ಪು ಮಾಡಿಲ್ಲ' ಎಂದು ಕಣ್ಣೀರಿಡುತ್ತಾ ಏನೂ ಅರಿಯದ ಪುಟ್ಟ ಕಂದನ ಜೊತೆ ಕತ್ತಲೆ ಕೋಣೆ ಸೇರಿದ್ದಾರೆ.ಘಟನೆಯ ವಿವರ: ಆಕೆ ಹಳೇಹುಬ್ಬಳ್ಳಿ ನಿವಾಸಿ ಸಾವಿತ್ರಿ (ಹೆಸರು ಬದಲಿಸಲಾಗಿದೆ). ಪಕ್ಕದ ಕಲಘಟಗಿ ತಾಲ್ಲೂಕಿಗೆ ಮದುವೆ ಮಾಡಿಕೊಡಲಾಗಿತ್ತು.ಹೆರಿಗೆಗಾಗಿ ತವರು ಮನೆಗೆ ಬಂದಿದ್ದ ಸಾವಿತ್ರಿ, 2012 ಮೇ 30ರಂದು ಕಿಮ್ಸಗೆ ತೆರಳಿದ್ದಳು. ಒಳರೋಗಿಯಾಗಿ ದಾಖಲಾದ ಸಾವಿತ್ರಿಯನ್ನು ತಪಾಸಣೆಗೊಳಪಡಿಸಿದ ವೈದ್ಯರು, ಗರ್ಭಿಣಿಗೆ ರಕ್ತದ ಅಗತ್ಯವಿದೆ, `ಒ' ಪಾಸಿಟಿವ್ ರಕ್ತ ಬೇಕು ಎಂದು ಸೂಚಿಸಿದ್ದರು. ಖಾಸಗಿ ರಕ್ತ ನಿಧಿಯೊಂದಕ್ಕೆ ತೆರಳಿದ ಆಕೆಯ ಸಹೋದರ ತಾನು ರಕ್ತದಾನ ಮಾಡಿ, ಬದಲಿ ರಕ್ತ ತೆಗೆದುಕೊಂಡು ಬಂದಿದ್ದರು. ಆ ರಕ್ತವನ್ನು ಸಾವಿತ್ರಿಗೆ ನೀಡಲಾಗಿತ್ತು. ಹೆರಿಗೆ ಜೊತೆಗೇ (ಜೂ. 6ರಂದು) ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ವೈದ್ಯರಿಗೆ ತಿಳಿಸಿದಾಗ, `ರಕ್ತಹೀನತೆ ಇದೆ. ದೇಹ ಸದೃಢವಾದ ಬಳಿಕ ಮಾಡೋಣ' ಎಂದು ಸಲಹೆ ನೀಡಿದ್ದರು. ಹೀಗಾಗಿ ಕಿಮ್ಸನಿಂದ ಮನೆಗೆ ಮರಳಿದ್ದರು.ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆಂದು ಒಂಬತ್ತು ತಿಂಗಳ ಬಳಿಕ (ಮಾರ್ಚ್ 5, 2013) ಮತ್ತೆ  ಕಿಮ್ಸಗೆ ಬಂದ ಸಾವಿತ್ರಿಯ ರಕ್ತ ಪರೀಕ್ಷಿಸಿದಾಗ ಆಕೆಗೆ ಏಡ್ಸ್ ತಗಲಿರುವುದು ಪತ್ತೆಯಾಗಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಇದರಿಂದ ಗಾಬರಿಗೊಂಡ ಆಕೆಯ ಕುಟುಂಬ, ವೈದ್ಯರಲ್ಲಿ ವಿಚಾರಿಸಿದಾಗ, ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, `ಹೆರಿಗೆಯ ಮೊದಲು ಯಾವುದೇ ಸಮಸ್ಯೆ ಇರಲಿಲ್ಲ. ರಕ್ತದಿಂದ ಏಡ್ಸ್ ಹರಡಿರುವ ಸಾಧ್ಯತೆ ಇದೆ' ಎಂದು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.ಏಡ್ಸ್ ತಗಲಿದೆ ಎಂಬುದು ಖಚಿತವಾಗುತ್ತಲೇ ವೈದರು ಆಕೆಯನ್ನು ಎಆರ್‌ಟಿ (ಆ್ಯಂಟಿ ರಿಟ್ರೋ ವೈರಲ್ ಟ್ರೀಟ್‌ಮೆಂಟ್) ಕೇಂದ್ರದಲ್ಲಿ ನೋಂದಾಯಿಸಿ ಚಿಕಿತ್ಸೆ ನೀಡಲು ಆರಂಭಿಸಿದ್ದರು. ಕಂಕುಳಲ್ಲಿದ್ದ ಕಂದಮ್ಮಗೆ ಎದೆಹಾಲು ನೀಡದಂತೆಯೂ ಸೂಚಿದ್ದರು.ಸಾವಿತ್ರಿಗೆ ಏಡ್ಸ್ ತಗಲಿರುವುದು ಗೊತ್ತಾಗುತ್ತಲೇ ಸಹೋದರ, ಆಕೆಯ ಪತಿ ಮತ್ತು ಮೊದಲ ಮಗನ ರಕ್ತ ತಪಾಸಣೆ (2013 ಮಾರ್ಚ್ 20ರಂದು) ನಡೆಸಿದ್ದು, ಇಬ್ಬರಲ್ಲೂ ಏಡ್ಸ್ ಇಲ್ಲ ಎಂದು ದೃಢೀಕರಣಗೊಂಡಿದೆ. ಒಂಬತ್ತು ತಿಂಗಳ ಹಸುಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಮಗುವಿಗೆ ಎದೆಹಾಲಿನ ಮೂಲಕ ಹರಡಿರುವ ಶಂಕೆ ವ್ಯಕ್ತವಾಗಿತ್ತು. ಆ ಮಗು ಸಾವಿಗೀಡಾಗಿದೆ.ಪತ್ನಿ ಏಡ್ಸ್ ಪೀಡಿತೆ ಎಂದು ಗೊತ್ತಾಗುತ್ತಲೇ ಪತಿ ದೂರವಾಗಿದ್ದಾನೆ. ಆಟೋರಿಕ್ಷಾ ಚಾಲಕನಾದ ಸಹೋದರನ ಮೇಲೆ ತಂಗಿ ಮತ್ತು ಆಕೆಯ ಮಗನನ್ನು ನೋಡಿಕೊಳ್ಳುವ ಹೊಣೆ ಬಿದ್ದಿದೆ.`ಸಾವಿತ್ರಿಗೆ ಏಡ್ಸ್ ಹೇಗೆ ತಗಲಿದೆ?' ಎನ್ನುವುದು ಗೊತ್ತಾಗಬೇಕು. ಆಕೆಗೆ ಪರಿಹಾರ ಸಿಗಬೇಕು ಎಂದ ಪಣತೊಟ್ಟಿರುವ ಸಹೋದರ, `ಸೋಂಕು ತಗಲಲು ವೈದ್ಯರ ನಿರ್ಲಕ್ಷ್ಯ ಕಾರಣವೇ?, ರಕ್ತದಿಂದ ಹರಡಿದೆಯೇ? ಎಂದು ಪತ್ತೆ ಮಾಡುವಂತೆ ಪೂರಕ ದಾಖಲೆಗಳ ಸಹಿತ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗೆ ದೂರು ಸಲ್ಲಿಸಿದ್ದೇನೆ' ಎಂದು `ಪ್ರಜಾವಾಣಿ'ಗೆ ತಿಳಿಸಿದರು.`ಸೂಕ್ಷ್ಮ ವಿಷಯ; ಸಮಗ್ರ ತನಿಖೆ

`ದೂರು ಬಂದಿರುವುದು ನಿಜ. ಇದೊಂದು ಸೂಕ್ಷ್ಮ ಮತ್ತು ಗಂಭೀರ ವಿಷಯ. ರಕ್ತ ವರ್ಗಾವಣೆ ನಡೆದ ಕಿಮ್ಸನಲ್ಲಿ ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ತನಿಖೆ ನಡೆಸಲಾಗುವುದು' ಎಂದು ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಸ್.ಎಂ.ಹೊನಕೇರಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.