ಮಂಗಳವಾರ, ಮೇ 11, 2021
26 °C

ರಕ್ಷಣೆ ಇಲ್ಲದ ಜಪದ ಕಟ್ಟೆ: ನೆಲದ ಮೇಲೆ ಶಿಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: `ಅಲ್ಲಲ್ಲಿ ಚದುರಿ ಬಿದ್ದ ಸುಂದರ ಕಲಾಕೃತಿಗಳು. ನಾಗರ ಕಲ್ಲಿನ ಪುಟ್ಟ ಗೋಪುರ, ವೀರಭದ್ರನನ್ನು ಹೋಲುವ ಕಲ್ಲಿನ ಕಂಬ, ನದಿಯ ತಳಭಾಗದಲ್ಲಿ ಹುದುಗಿರುವ ಅವಶೇಷ, ಹತ್ತಾರು ಮೆಟ್ಟಿಲುಗಳು ನದಿಯಲ್ಲಿ ಕೂಡಿಕೊಂಡಿರುವ ಕುರುಹುಗಳು. ರಕ್ಷಣೆಗಾಗಿ ಹಾತೊರೆಯುತ್ತಿರುವ ಸುಂದರ ಕಲಾಕೃತಿಗಳು....ಇವು ಪಟ್ಟಣದಲ್ಲಿ ಹರಿಯುವ ಸುವರ್ಣಾವತಿ ನದಿ ದಡದಲ್ಲಿ ಕಂಡುಬರುವ ಐತಿಹಾಸಿಕ ಜಪದ ಕಟ್ಟೆಯ ದುಸ್ಥಿತಿ. ಬಾಲೆಂದು ಮುನಿಗಳಿಂದ `ಎಳೆಯ ಇಂದು ಊರು~ ಎಂದು ಕರೆಯಿಸಿಕೊಂಡ ಯಳಂದೂರು ಐತಿಹಾಸಿಕ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಮಹತ್ವದ ಸ್ಥಾನ ಪಡೆದಿದೆ.

 

ಇದಕ್ಕೆ ನಿದರ್ಶನವೆಂಬಂತೆ ಅನೇಕ ಚಾರಿತ್ರಿಕ ಕುರುಹ ಇಲ್ಲಿ ಕಾಣಬಹುದಾಗಿದೆ. ಆ ಸಾಲಿಗೆ ಸೇರುವ ಮತ್ತೊಂದು ಐತಿಹಾಸಿಕ ಸ್ಥಳವೇ ಸುವರ್ಣಾವತಿ ನದಿಯ ದಡದ ದಕ್ಷಿಣದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಅದರ ಪಕ್ಕದಲ್ಲೇ ಇತ್ತೆಂದು ಹೇಳಲಾಗುವ `ಜಪದ ಕಟ್ಟೆ~.ಯಳಂದೂರು ಜೈನ ಮುನಿಗಳ ನೆಚ್ಚಿನ ತಾಣವಾಗಿತ್ತು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಈಗಿರುವ ವರಹಾಸ್ವಾಮಿ ದೇಗುಲವೂ ಇವರ ಆವಾಸ ಸ್ಥಾನವಾಗಿತ್ತು. ಜೈನ ಮುನಿಗಳು, ಬ್ರಾಹ್ಮಣ ವಟುಗಳು ಹೊಳೆಯಲ್ಲಿ ಮಿಂದು ತದ ನಂತರ ಇಲ್ಲಿನ ಕಟ್ಟೆಯಲ್ಲಿ ಜಪ-ತಪ ಮಾಡುತ್ತಿದ್ದರು. ಹಾಗಾಗಿಯೇ ಇದಕ್ಕೆ ಈ ಹೆಸರು ಬಂತು ಎಂದು ಹೇಳಲಾಗುತ್ತದೆ.ಇದಕ್ಕೆ ನಿದರ್ಶನವೆಂಬಂತೆ ಹೊಳೆಯಲ್ಲಿ ಹೂತು ಹೋಗಿತ್ತೆಂದು ನಂಬಲಾಗಿದ್ದ ಶಿಲ್ಪ ಕಲಾ ವೈಭವವುಳ್ಳ ದೇವಸ್ಥಾನ ಅಥವಾ ಮಂಟಪದ ಕುರುಹು ಕಾಣಬಹುದು.`ನದಿಯ ಮಧ್ಯಭಾಗದಲ್ಲಿ ದೇಗುಲದ ಅವಶೇಷಗಳು ಕಾಣಸಿಗುತ್ತದೆ. ಅದರಲ್ಲಿ ವಿಶಿಷ್ಟ ಶಿಲ್ಪ ವೈಭವವನ್ನು ಹೊಂದಿರುವ ಕಲ್ಲಿನ ಕಂಬವೊಂದನ್ನು ನಾಗರಿಕರು ಪಕ್ಕದ ದೇವಸ್ಥಾನದ ಹಿಂದೆ ಇಟ್ಟಿದ್ದಾರೆ. ಅಲ್ಲದೇ ಇನ್ನೂ ಕೂಡ ಇಂತಹ ಅನೇಕ ವೈಶಿಷ್ಟ್ಯಪೂರ್ಣ ಕೆತ್ತನೆಗಳುಳ್ಳ ಹಲವಾರು ಕುರುಹುಗಳು ಹೊಳೆಯಲ್ಲೇ ಹುದುಗಿಹೋಗಿವೆ~ ಎಂಬುದು ಗೋವಿಂದರಾಜು ಅವರ ಅನಿಸಿಕೆ.ಅಮೂಲ್ಯ ಕಲಾಕೃತಿಗಳು ಸಿಕ್ಕಿರುವ ಈ ಸ್ಥಳವನ್ನು ಈ ಹಿಂದಿನ ಹಲವು  ತಹಶೀಲ್ದಾರರು ಪರಿಶೀಲನೆ ನಡೆಸಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಇದನ್ನು ಇಂದಿಗೂ ಹಾಗೇ ಬಿಟ್ಟಿದ್ದು ಇದರ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ಕೆ ಮತ್ತೆ ಕತ್ತಲೆ ಹಿಡಿದಿದೆ.`ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಶೋಧ ಕಾರ್ಯವನ್ನು ನಡೆಸಿದಲ್ಲಿ ಜಿಲ್ಲೆಯ ಇತಿಹಾಸಕ್ಕೆ ಮತ್ತಷ್ಟು ಮೆರಗು ಸಿಗಬಹುದು~ ಎಂಬುದು ಇಲ್ಲಿನ       ನಾಗರಿಕರಾದ ಶ್ರೀನಿವಾಸ್, ಮಹಾದೇವ್, ಮಾದೇಶ್, ಸೇರಿದಂತೆ ಹಲವರ ಅನಿಸಿಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.