ಮಂಗಳವಾರ, ಜನವರಿ 21, 2020
19 °C

ರಣಜಿ ಕ್ರಿಕೆಟ್: ಫೈನಲ್ ಪ್ರವೇಶಿಸಿದ ರಾಜಸ್ತಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಹತಕ್ (ಪಿಟಿಐ): ಕಳೆದ ಬಾರಿಯ ಚಾಂಪಿಯನ್ ರಾಜಸ್ತಾನ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಬನ್ಸಿಲಾಲ್ ಕ್ರೀಡಾಂಗಣದಲ್ಲಿ ಎರಡೂವರೆ ದಿನದಲ್ಲೇ ಕೊನೆಗೊಂಡ ಸೆಮಿಫೈನಲ್ ಪಂದ್ಯದಲ್ಲಿ ರಾಜಸ್ತಾನ 64 ರನ್‌ಗಳಿಂದ ಹರಿಯಾಣ ವಿರುದ್ಧ ಜಯ ಸಾಧಿಸಿತು.ಗೆಲುವಿಗೆ 185 ರನ್‌ಗಳ ಗುರಿ ಪಡೆದಿದ್ದ ಹರಿಯಾಣ ಮೂರನೇ ದಿನವಾದ ಗುರುವಾರ ಭೋಜನ ವಿರಾಮದ ಬಳಿಕದ ಒಂದು ಗಂಟೆಯ ಆಟದಲ್ಲಿ 48.5 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟಾಯಿತು. ರಿತುರಾಜ್ ಸಿಂಗ್ (37ಕ್ಕೆ5) ಮತ್ತು ಪಂಕಜ್ ಸಿಂಗ್ (48ಕ್ಕೆ 4) ಪ್ರಭಾವಿ ಬೌಲಿಂಗ್ ಮೂಲಕ ರಾಜಸ್ತಾನ ತಂಡದ ಗೆಲುವಿಗೆ ಕಾರಣರಾದರು.ಹರಿಯಾಣ 2 ವಿಕೆಟ್‌ಗೆ 15 ರನ್‌ಗಳಿಂದ ಗುರುವಾರ ಆಟ ಆರಂಭಿಸಿತ್ತು. ಭೋಜನ ವಿರಾಮದ ವೇಳೆಗಾಗಲೇ 88 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿದಿತ್ತು. ಆ ಬಳಿಕ ಇನ್ನುಳಿದ ಮೂರು ವಿಕೆಟ್ ಪಡೆದ ರಾಜಸ್ತಾನ ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ರಿತುರಾಜ್ ಪಂದ್ಯದಲ್ಲಿ ಒಟ್ಟಾರೆ 82 ರನ್‌ಗಳಿಗೆ 12 ವಿಕೆಟ್ ಪಡೆದರು.ಮುಂಬೈ ವರದಿ: 39 ಬಾರಿಯ ಚಾಂಪಿಯನ್ ಮುಂಬೈ ತಂಡದ ಫೈನಲ್ ಪ್ರವೇಶದ ಕನಸು ಹೆಚ್ಚುಕಡಿಮೆ ಅಸ್ತಮಿಸಿದೆ. ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ಭಾರಿ ಮುನ್ನಡೆ ಪಡೆದಿದ್ದು, ಎದುರಾಳಿಯ ಫೈನಲ್ ಪ್ರವೇಶದ ಎಲ್ಲ ಬಾಗಿಲುಗಳನ್ನೂ ಮುಚ್ಚಿದೆ.ಮುಂಬೈ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 157 ರನ್‌ಗಳಿಗೆ ಆಲೌಟ್ ಮಾಡಿದ ತಮಿಳುನಾಡು ಮೂರನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್‌ನಲ್ಲಿ 70 ಓವರ್‌ಗಳಲ್ಲಿ 4 ವಿಕೆಟ್‌ಗೆ 220 ರನ್ ಗಳಿಸಿದೆ. ಇದೀಗ ಲಕ್ಷ್ಮೀಪತಿ ಬಾಲಾಜಿ ನೇತೃತ್ವದ ತಂಡ ಒಟ್ಟಾರೆ 422 ರನ್‌ಗಳ ಮುನ್ನಡೆಯಲ್ಲಿದೆ.ಅಂತಿಮ ದಿನದ ಆಟ ಮಾತ್ರ ಬಾಕಿಯುಳಿದಿದ್ದು, ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವ ಸಾಧ್ಯತೆಯೇ ಅಧಿಕ. ಹಾಗಾದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ತಮಿಳುನಾಡು ಫೈನಲ್‌ಗೆ ಅರ್ಹತೆ ಪಡೆಯಲಿದೆ. ಮುರಳಿ ವಿಜಯ್ (ಅಜೇಯ 103, 210 ಎಸೆತ, 15 ಬೌಂ, 1 ಸಿಕ್ಸರ್) ಭರ್ಜರಿ ಶತಕ ಗಳಿಸಿ ಎರಡನೇ ಇನಿಂಗ್ಸ್‌ನಲ್ಲಿ ತಮಿಳುನಾಡು ತಂಡದ ನೆರವಿಗೆ ನಿಂತರು.ಇದಕ್ಕೂ ಮುನ್ನ ಆರು ವಿಕೆಟ್‌ಗೆ 121 ರನ್‌ಗಳಿಂದ ಗುರುವಾರ ಆಟ ಆರಂಭಿಸಿದ ಮುಂಬೈ ಬೇಗನೇ ಆಲೌಟಾಯಿತು. ಲಕ್ಷ್ಮೀಪತಿ ಬಾಲಾಜಿ (28ಕ್ಕೆ4) ಮತ್ತು ಯೋಮಹೇಶ್ (63ಕ್ಕೆ 3) ತಮಿಳುನಾಡು ಪರ ಯಶಸ್ವಿ ಬೌಲರ್ ಎನಿಸಿಕೊಂಡರು.

 

ಸಂಕ್ಷಿಪ್ತ ಸ್ಕೋರ್: ರಾಜಸ್ತಾನ: ಮೊದಲ ಇನಿಂಗ್ಸ್ 36.1 ಓವರ್‌ಗಳಲ್ಲಿ 89 ಹಾಗೂ ಎರಡನೇ ಇನಿಂಗ್ಸ್ 68.5 ಓವರ್‌ಗಳಲ್ಲಿ 192. ಹರಿಯಾಣ: ಮೊದಲ ಇನಿಂಗ್ಸ್ 47.5  ಓವರ್‌ಗಳಲ್ಲಿ 97 ಹಾಗೂ ಎರಡನೇ ಇನಿಂಗ್ಸ್ 48.5 ಓವರ್‌ಗಳಲ್ಲಿ 120. (ನಿತಿನ್ ಸೈನಿ 23, ಸಚಿನ್ ರಾಣಾ 25, ಮೋಹಿತ್ ಶರ್ಮ 20, ರಿತುರಾಜ್ ಸಿಂಗ್ 37ಕ್ಕೆ5, ಪಂಕಜ್ ಸಿಂಗ್ 48ಕ್ಕೆ 4).ಫಲಿತಾಂಶ: ರಾಜಸ್ತಾನಕ್ಕೆ 64 ರನ್ ಗೆಲುವು ಹಾಗೂ ಫೈನಲ್ ಪ್ರವೇಶ

ತಮಿಳುನಾಡು: ಮೊದಲ ಇನಿಂಗ್ಸ್ 136.1 ಓವರ್‌ಗಳಲ್ಲಿ 359 ಮತ್ತು ಎರಡನೇ ಇನಿಂಗ್ಸ್ 70 ಓವರ್‌ಗಳಲ್ಲಿ 4 ವಿಕೆಟ್‌ಗೆ 220 (ಅಭಿನವ್ ಮುಕುಂದ್ 42, ಮುರಳಿ ವಿಜಯ್ ಬ್ಯಾಟಿಂಗ್ 103, ಕೆ. ವಾಸುದೇವದಾಸ್ 36, ಕ್ಷೇಮಲ್ ವೈಂಗಾವ್ಕರ್ 43ಕ್ಕೆ 2). ಮುಂಬೈ: ಮೊದಲ ಇನಿಂಗ್ಸ್ 51 ಓವರ್‌ಗಳಲ್ಲಿ 157. (ಹಿಕೇನ್ ಶಾ 21, ಬಲ್ವಿಂದರ್ ಸಂಧು 18, ಲಕ್ಷ್ಮೀಪತಿ ಬಾಲಾಜಿ 28ಕ್ಕೆ4, ಯೋಮಹೇಶ್ 63ಕ್ಕೆ 3).

ಪ್ರತಿಕ್ರಿಯಿಸಿ (+)