ಶನಿವಾರ, ಮೇ 28, 2022
27 °C

ರಣವೀರ ಸೇನೆ ಮುಖ್ಯಸ್ಥನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಾ (ಬಿಹಾರ) (ಪಿಟಿಐ): ಮೇಲ್ವರ್ಗದ ಭೂಮಾಲೀಕರ ಕಾನೂನು ಬಾಹಿರ ಖಾಸಗಿ ಪಡೆಯಾದ `ರಣವೀರ ಸೇನೆ~ಯ ಮುಖ್ಯಸ್ಥ ಬ್ರಹ್ಮೇಶ್ವರ ಸಿಂಗ್ ಅಲಿಯಾಸ್ `ಮುಖಿಯಾ ಜಿ~ ಅವರನ್ನು ಅಪರಿಚಿತ ದಾಳಿಕೋರರು ಗುಂಡಿಟ್ಟು ಕೊಂದ ಘಟನೆ ಭೋಜಪುರ ಜಿಲ್ಲೆಯ ಅರಾದಲ್ಲಿ ಶುಕ್ರವಾರ ನಡೆದಿದೆ.ಇದರಿಂದ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು, ಐದು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರರನ್ನು ಸೇನೆಯ ಕಾರ್ಯಕರ್ತರು ಅಟ್ಟಿಸಿಕೊಂಡು ಹೋದರಲ್ಲದೆ, ಅವರೊಂದಿಗೆ ಘರ್ಷಣೆಗೆ ಇಳಿದರು.ಇದರಿಂದ ನಗರದಲ್ಲಿ ಮೊದಲು ಕರ್ಫ್ಯೂ ವಿಧಿಸಲಾಯಿತು. ಆದರೆ ಬಳಿಕ ಉನ್ನತ ಮಟ್ಟದಲ್ಲಿ ಪರಿಸ್ಥಿತಿ ಅವಲೋಕಿಸಿದ ನಂತರ ಈ ಆದೇಶವನ್ನು ಹಿಂತೆಗೆದುಕೊಳ್ಳಲಾಯಿತು. ಸಿಂಗ್ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದಾಗ ಬಂದೂಕುಧಾರಿಗಳು ಗುಂಡಿನ ಸುರಿಮಳೆಗರೆದು, ಸ್ಥಳದಲ್ಲೇ ಅವರನ್ನು ಕೊಂದು ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.ಲಕ್ಷ್ಮಣಪುರದಲ್ಲಿ 1996ರ ಡಿಸೆಂಬರ್‌ನಲ್ಲಿ ನಡೆದ 61 ದಲಿತರ ಸಾಮೂಹಿಕ ಹತ್ಯಾಕಾಂಡ ಸೇರಿದಂತೆ, ಕೆಳ ಜಾತಿಯ ಭೂರಹಿತ ಬಡವರ ಮೇಲೆ ಎಸಗಿದ ಅನೇಕ ದೌರ್ಜನ್ಯ ಪ್ರಕರಣಗಳಲ್ಲಿ 70 ವರ್ಷದ ಸಿಂಗ್ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದರು. ಇದೇ ವರ್ಷದ ಏಪ್ರಿಲ್‌ನಲ್ಲಿ ಆರೋಪಮುಕ್ತರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.