ಶುಕ್ರವಾರ, ಮೇ 29, 2020
27 °C

ರಮ್ಯ ಹಟಗಾರಿಕೆಯ ನೆನಪುಗಳೂ ತಲ್ಲಣಗಳೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾತ.ಚಿಕ್ಕಣ್ಣನವರ ಕಥೆಗಳ ಮುಖ್ಯಕೇಂದ್ರ ಹಳ್ಳಿ ಹಾಗೂ ಆ ಸುತ್ತಲ ಪ್ರಕೃತಿ; ಮತ್ತು ಆ ಹಳ್ಳಿ- ಪ್ರಕೃತಿಯ ಸುತ್ತ ಹಬ್ಬಿಕೊಂಡಿರುವ ಮನುಷ್ಯ ಸಂಬಂಧಗಳ ಹೆಣಿಗೆ. ಈ ಹೆಣಿಗೆ ತನ್ನ ಭಾವುಕ ಎಳೆಗಳ ಮೂಲಕವೇ ಕಟ್ಟಲ್ಪಡುತ್ತಾ ಹೋಗುತ್ತದೆ. ಆ ಕಾರಣದಿಂದಾಗಿಯೇ ಏನೋ ಬದುಕಿನ ಇನ್ನೊಂದು ಕಗ್ಗಂಟಿನ ರೂಪವನ್ನೂ-ಕುರೂಪವನ್ನೂ ಹೆಣೆಯುವುದರಲ್ಲಿ ಅದು ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಸ್ವತಃ ಕಥೆಗಾರರೇ ಅದನ್ನು ‘ಈ ಅನುಸಂಧಾನ ಅವತ್ತಿನ ನೆನಪುಗಳ ಮೆರವಣಿಗೆಯಲ್ಲ, ಪ್ರಸ್ತುತ ಸ್ಥಿತಿಯ ಪದರಗಳಲ್ಲಿ ನುಸುಳುತ್ತಿರುವ ಕ್ರಿಯಾ ನಡೆಯ ಗತಿ.ಈ  ಗ್ಯಾರಂಟಿಯನ್ನು ಈ ಕಥೆಗಳು ನೀಡಬೇಕಷ್ಟೆ’ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಈ ‘ಕ್ರಿಯಾ ನಡೆ’ ಎನ್ನುವುದು ಚಲನಶೀಲತೆಯ ಬಹುರೂಪಗಳ ನಡೆಯೂ ಆಗಿದೆ ಎನ್ನುವ ‘ಗ್ಯಾರಂಟಿ’ಯನ್ನು ‘ಮೋಡ ನೆರಳ ನಿರಾಳ’ ಸಂಕಲನದ ಕಥೆಗಳು ಅಷ್ಟಾಗಿ ನಿರೂಪಿಸಲು ಹೋಗುವುದಿಲ್ಲ.ಸಂಘರ್ಷವನ್ನು ಅಷ್ಟಾಗಿ ಇಷ್ಟಪಡದ ಕಥೆಗಾರಿಕೆಯ ಈ ಸರಳತನಕ್ಕೆ ಉದಾಹರಣೆಯಾಗಿ ‘ಕೆಂಬಾರೆ’ ಕಥೆಯನ್ನಾಗಲೀ, ‘ಕೆಂಪೊಳೆ’ಯನ್ನಾಗಲೀ ಗಮನಿಸಬಹುದು. ತನ್ನ ಒಡಲೊಳಗೆ ಸಂಘರ್ಷದ ಕಿಡಿಗಳನ್ನು ಇಟ್ಟುಕೊಂಡಿರುವ ‘ಕೆಂಬಾರೆ’ ಕಥೆಯಲ್ಲಿ ಮೇಲ್ವರ್ಗ-ಕೆಳವರ್ಗಗಳ ಹೋರಾಟದ ವಿವರಗಳಿದ್ದರೂ ಕಥೆಗಾರರು ಮೇಲ್ವರ್ಗದ ದೌರ್ಜನ್ಯಗಳ ವಿರುದ್ಧ ಹನುಮನನ್ನು ಸಂಘರ್ಷಕ್ಕೆ ಸಜ್ಜುಗೊಳಿಸುವುದರಲ್ಲಿ ಆಸಕ್ತಿ ತೋರುವುದಿಲ್ಲ; ಅದು ಅವರ ಕಥೆಗಳ ಶ್ರದ್ಧೆಯೂ ಅಲ್ಲ. ಹಾಗಾಗಿಯೇ ತನ್ನ ಛಲವನ್ನು ಹನುಮ ಪ್ರಾಣಿ-ಪಕ್ಷಿ, ಮರ-ಗಿಡಗಳತ್ತ ತಿರುಗಿಸಿ ನಿರುಮ್ಮಳನಾಗಿಬಿಡುತ್ತಾನೆ. ಆದರೆ ಅದು ನಿಜವಾದ ಹನುಮನ ಪ್ರಕೃತಿಮುಖಿ ಹಂಬಲವೋ, ಕಥೆಗಾರರು ತಮ್ಮ ಶ್ರದ್ಧಾಕೇಂದ್ರವಾಗಿ ಕಥೆಗೆ ತಂದುಕೊಂಡಿರುವ ಉದ್ದೇಶಪೂರ್ವಕ ನಿಲುವೋ?‘ಕೆಂಪೊಳೆ’ಯಲ್ಲಿಯೂ ಇಂತಹುದೇ ತಾಕಲಾಟ ಇನ್ನಷ್ಟು ನಿಚ್ಚಳವಾಗಿ ಕಾಣಸಿಗುತ್ತದೆ. ಊರ ಮುಖಂಡರ ಕೇಡುತನದಿಂದಾಗಿಯೇ ಊರಿನಿಂದ ಹೊರಕ್ಕೆ ಹಾಕಲ್ಪಟ್ಟಿರುವ ತೆಂಕ, ಸಾವಿಗೆ ತಮ್ಮಟೆ ಬಾರಿಸುವ ತನ್ನ ಕಾಯಕದಿಂದಾಗಿ; ಬಾಯಿ ಬಿಟ್ಟ ಹೆಣದ ದಸಿ ಹೊಡೆಯುವ ವಿಶಿಷ್ಟ ನೈಪುಣ್ಯದಿಂದಾಗಿ ಊರಿಗೆ ಬೇಕಾದವನು. ಅದೇ ಮುಖಂಡರ ಒತ್ತಾಯಕ್ಕೆ ಆತ ಸತ್ತ ಪಟೇಲರ ಹೆಣದ ದಸಿ ಹೊಡೆಯುವ ಕೆಲಸಕ್ಕೆ ಹೋಗಿ ಸಂಕಷ್ಟಕ್ಕೆ ಮುಖಾಮುಖಿಯಾಗುತ್ತಾನೆ. ಸಮಾಜದ ಕಠೋರತೆಯಿಂದ, ಮೇಲ್ವರ್ಗಗಳ ಪ್ರತಿಷ್ಠೆ, ಸ್ವಾರ್ಥ ಸಾಧನೆಯ ಹಟದಿಂದ ಹುಟ್ಟಿರುವ ಈ ಸಂಕಷ್ಟವನ್ನು ತೆಂಕನಾಗಲೀ ಅವನ ಹೆಂಡತಿಯಾಗಲೀ ಸಾಮಾಜಿಕ ಹಿನ್ನೆಲೆಯಲ್ಲಿ ಮುಖಾಮುಖಿಯಾಗಲು ಹೋಗುವುದಿಲ್ಲ. ಬದಲಿಗೆ ಹೆಣದ ದಸಿ ಹೊಡೆದ ಕಾರಣಕ್ಕೇ ಭಾರಿ ಮಳೆ ಬಂತು ಎಂಬ ಊರಜನರ ನಂಬಿಕೆಯ ಮೂಲಕವೇ; ಆ ಮಳೆಯಿಂದಾಗಿ ತಾವು ನೆಚ್ಚಿದ ಭೂಫಸಲು ಉಳಿಯಿತೆಂಬ ಆಸೆಯ ಮೂಲಕವೇ ತಮ್ಮ ಸಂಕಷ್ಟವನ್ನು ಮರೆಯುತ್ತಾರೆ.ಪ್ರಕೃತಿಯೊಡನೆ ಒಡನಾಡುವ ಮೂಲಕ ತಮ್ಮೆಲ್ಲ ಸಂಕಟದ ಸಂಕಗಳನ್ನು ದಾಟುವ ಇಂತಹವೇ ಪಾತ್ರಗಳು ‘ಮಳೆ-ಮಾರು’ ಕಥೆಯಲ್ಲೂ ಪ್ರಕಟವಾಗುತ್ತವೆ. ಮಣ್ಣಿನ ಸಹಜಗುಣಗಳೊಂದಿಗೆ ಬೆರೆತು ಹೋಗಿರುವ ಈ ಕಥೆಯ ರೇವು ಮತ್ತು ಕ್ವಾಟೆಯಮ್ಮನ ಸ್ವಾಭಾವಿಕ ಬದುಕನ್ನು ಅಲ್ಲಾಡಿಸುವುದು ದೇವಣ್ಣನ ಪುಡಿ ರಾಜಕಾರಣ. ಅದು ಆಧುನಿಕತೆಯ ಸ್ವರೂಪವಾಗಿಯೂ ಕಥೆಯಲ್ಲಿ ವ್ಯಕ್ತಗೊಳ್ಳುತ್ತದೆ. ಈ ಕೃತಕ ಬದುಕಿನ ಹುಸಿಯನ್ನು ರೇವು ಆಗಲಿ, ಕ್ವಾಟೆಯಮ್ಮನಾಗಲೀ ಮೀರುವುದು ಕೂಡ ಉಕ್ಕಿ ಬರುವ ನೀರಿನೊಂದಿಗೆ ಮೀಯುವುದರೊಂದಿಗೆ.-ಇವೆಲ್ಲವೂ ಒಂದು ಬಗೆಯಲ್ಲಿ ಕಥೆಗಾರರು ತಮ್ಮ ತಾತ್ವಿಕ ಶ್ರದ್ಧೆಯನ್ನು ಕಥೆಯ ಮೇಲೆ ತಂದು ಹಾಯಿಸಿರುವುದರಿಂದ ಉಂಟಾಗಿರುವ ಎರಕದಂತಾಗಿದೆ; ಹೀಗೆ ಕಥೆಗಾರರ ತಾತ್ವಿಕಶ್ರದ್ಧೆ ಪ್ರಶ್ನಾರ್ಹವೇನೂ ಅಲ್ಲ. ಆದರೆ ತಮ್ಮ ಒಡಲೊಳಗೇ ಬದುಕಿನ ಬಹುರೂಪಗಳನ್ನು, ಸಮಾಜದ ಹಲವು ನೆಲೆಗಳನ್ನು, ವಿಸ್ತರಣೆಗಳನ್ನು ಸ್ವಾಭಾವಿಕವಾಗಿ ತೊಟ್ಟಿರುವ ಚಿಕ್ಕಣ್ಣನವರ ಕಥೆಗಳು- ಆ ಎಲ್ಲಾ ಬಹುರೂಪ, ನೆಲೆ, ವಿಸ್ತರಣೆಗಳ ಹಾಗೆ ಚೆಲ್ಲಿಕೊಳ್ಳದೆ ಕಥೆಗಾರರು ತೋರಿಸಿದ ಹಾದಿ ಹಿಡಿದು ನಡೆದುಬಿಟ್ಟಂತಿವೆ. ಬಹುಶಃ ಕಥೆಗಾರನೊಬ್ಬನ ತಾತ್ವಿಕ ಶ್ರದ್ಧೆಯ ವಜೆಯಿಂದ ಬಳಲುವ ಎಲ್ಲಾ ಕಥೆಗಳ ಇಕ್ಕಟ್ಟೂ ಇದೇ ಬಗೆಯದಿರಬಹುದು.ಆದರೆ ಕಥೆಗಾರರ ಇಂತಹ ಹಂಗನ್ನು ತೊರೆದು ತಮ್ಮಷ್ಟಕ್ಕೇ ಬೆಳೆಯುತ್ತಾ ಹೋಗಿರುವ; ಆ ಮೂಲಕ ಕಥನ ಸಾಧ್ಯತೆಗಳಿಗೆ ತೆರೆದುಕೊಂಡಿರುವ ಕಥೆಗಳೂ ಇಲ್ಲಿವೆ. ಅಂತಹ ಉತ್ತಮ ಕಥೆಗಳ ಪೈಕಿ ‘ದಿಗಂಬರನಂತಾಗದೆ’ ಕಥೆ ಮೊದಲನೆಯದು. ತನ್ನ ಸಂಯಮದಿಂದಾಗಿ, ಹೆಪ್ಪುಗಟ್ಟಿಸುವ ವಿಷಾದದಿಂದಾಗಿ ಥಟ್ಟನೆ ಮನಸ್ಸಿನಲ್ಲಿ ನಿಂತು ಬಿಡುವ ಕಥೆಯಿದು. ಕಥೆಯೊಂದೇ ಚಿಕ್ಕಣ್ಣನವರ ಉದ್ದೇಶವಾಗಿರುವುದಕ್ಕೆ ಈ ಕಥೆ ಉದಾಹರಣೆ.ತನ್ನ ದೀನಸ್ಥಿತಿಗಾಗಿ ಕಳವಳಿಸುವ ಆಡಿಟೋರಿಯಂನ ಕೆಲಸಗಾರ ನರಸಿಂಹಯ್ಯ ದಿನಾಲೂ ತಾನು ಆಡಿಟೋರಿಯಂನ ಸಭೆಗಳಲ್ಲಿ ಎದುರಾಗುವ ಕೋಟಿನ ಮನುಷ್ಯನ ಬದುಕಿನೊಂದಿಗೆ, ಆತನ ಸಾವಿನೊಂದಿಗೆ ಬದುಕಿನ ವಿಷಣ್ಣತೆಯನ್ನು ಕಂಡುಕೊಳ್ಳುತ್ತಾನೆ; ಎಲ್ಲಾ ಮನುಷ್ಯಜೀವಿಗಳ ಒಡಬಾಳೂ ಒಂದೇ ಬಗೆಯಿರಬಹುದೆಂಬುದನ್ನು ಕಂಡು ಕಂಗಾಲಾಗುತ್ತಾನೆ. ಈ ಕಥೆಯ ನಿರೂಪಣೆಯ ಅಚ್ಚುಕಟ್ಟುತನವೂ, ಭಾಷಾಬಂಧವೂ ಗಮನ ಸೆಳೆಯುವಂತಿದೆ.ಇಂತಹುದೇ ಸಾಧ್ಯತೆ ಇರುವ ‘ಸಂತೆಮಾಳದ ಹಾದಿಗುಂಟೆ’ ಕಥೆ ಕೊಂಚ ಭಾವುಕತೆಯ ಅಂಚಿಗೆ ಹೋಗಿದೆ ಎನ್ನಿಸಿದರೂ ಅದರ ನೋವಿನ ಗುಣದಿಂದಾಗಿ ಕಾಡುವ ಕಥೆ. ತನ್ನಿಂದ ದೂರ ಹೋಗಿ ‘ಪಟ್ಟಣಿಗ’ನಾಗಿರುವ ಮಗ ಮೋನಾ ಮತ್ತು ತನ್ನ ಚಪ್ಪಲಿ ಹೊಲಿಯುವ ಕಾಯಕದಲ್ಲೇ ‘ತಳ’ವಾಗಿಬಿಟ್ಟಿರುವ ಅಪ್ಪ ಮಾಪತಿ- ಈ ಇಬ್ಬರ ಅಂತಃತಲ್ಲಣಗಳನ್ನು ಕಥೆ ಚೆನ್ನಾಗಿ ಕಟ್ಟಿಕೊಡುತ್ತದೆ. ಎಷ್ಟೋ ವರ್ಷಗಳ ನಂತರ ತನ್ನ ಅಪ್ಪನನ್ನು ಎದುರುಗೊಳ್ಳಲು ಬಂದಿರುವ ಮಗ ಅವನನ್ನು ಧಿಕ್ಕರಿಸಿ ನಡೆದೇಬಿಟ್ಟನಲ್ಲ ಎಂದು ಓದುಗಮನಸ್ಸು ಭಾವಿಸುತ್ತಿರುವಾಗಲೇ ಮೋನಾ ಅಪ್ಪನ ಬಳಿ ಇರಿಸಿ ಹೋಗಿರುವ ಚೀಲದಲ್ಲಿನ ಹೊಸ ಅಂಗಿ, ಪಂಚೆಗಳ ಚಿತ್ರಣ ಮನ ಮುಟ್ಟುವಂತಿದೆ.ಕಥೆಯ ಆರಂಭದಲ್ಲೇ ಮಾಪತಿ ತನ್ನ ಹರಿದ ಅಂಗಿ ಹೊಲಿಯಲು ಹೆಣಗಾಡುವುದು ಈ ಕೊನೆಯ ಚಿತ್ರಣದ ಭಾವನಾತ್ಮಕ ಕ್ಷಣಗಳಿಗೆ ಪೂರಕವಾಗಿದೆ. ‘ಆಡಿ ಬಾ ನನ ಕಂದ’ ಕಥೆ ಕೂಡ ಮೊದಲು ಹೇಳಿದಂತೆ ಕಥೆಗಾರರ ಕೇಂದ್ರಶ್ರದ್ಧೆಯನ್ನು ಬಿಟ್ಟು ಹೊಸ ನೋಟಗಳತ್ತ ಚಲಿಸಲು ಯತ್ನಿಸುವ ಕಥೆ. ‘ಗದ್ದೆ ಗುಮ್ಮ’ ಗ್ರಾಮ್ಯತೆ ಮತ್ತು ಆಧುನಿಕತೆಗಳನ್ನು ಎದುರು ಬದುರು ಇರಿಸಿಕೊಂಡು ಆಲೋಚಿಸಿದಾಗ ಹುಟ್ಟಿದ ರಮ್ಯ ಕಥೆಯಂತಿದೆ; ಹಾಗಾಗಿ ಕೊಂಚ ಕೃತಕತೆಯನ್ನೂ ಪಡೆದುಬಿಟ್ಟಿದೆ. ಗದ್ದೆ ಗುಮ್ಮ ಹಕ್ಕಿಯನ್ನು ಊರಿನ ಹಿರಿಯ ಜೀವ ದೇವೀರಪ್ಪನೊಂದಿಗೆ ಸಮೀಕರಿಸಿ ನೋಡುವ ಮೂಲಕ ಹಳೆಯದಕ್ಕೆ ಹಪಾಹಪಿಸುವ ಹೊಸ ತಲೆಮಾರಿನ ಮಾದನಾಯಕನ ಜಿಜ್ಞಾಸೆ ಕೊನೆಗೊಂದು ಅರ್ಥವಂತಿಕೆಯನ್ನು ತಲುಪಿತೆ ಎನ್ನುವುದಕ್ಕೆ ಕಥೆಯಲ್ಲಿ ಉತ್ತರ ಸಿಗುವುದಿಲ್ಲ.ಕಥೆಗಾರರು ಭಿನ್ನತೆಗಾಗಿ ಹುಡುಕಿಕೊಂಡ ವಸ್ತುಗಳಂತೆ ತೋರುವ ‘ಕಣಿವೆ ಕತ್ತಲ ಬೆಳಕು’ ಮತ್ತು ‘ಅಸ್ವಸ್ಥ’ ಕಥೆಗಳು ತೆಳು ಹಂದರದಿಂದಾಗಿ ನಿರುದ್ದಿಶ್ಯ ಬರಹಗಳಾಗಿಯೇ ನಿಂತುಬಿಟ್ಟಿವೆ.ಮೂವತ್ತು ವರ್ಷಗಳಿಂದಲೂ ಕಥೆಗಳನ್ನು ಬರೆಯುತ್ತ ಬಂದಿರುವ ಚಿಕ್ಕಣ್ಣನವರ ಗ್ರಾಮ್ಯ ಸಂವೇದನೆಯ ಕಥಾಶೈಲಿ ಈ ಸಂಕಲನದಲ್ಲೂ ಅದೇ ಬಗೆಯಲ್ಲಿ ಮಿಡಿಯುತ್ತಿದೆ; ಒಂದೆಡೆ ಅದು ಪ್ರಬಂಧಾತ್ಮಕವಾಗಿಯೂ, ಸಮಕಾಲೀನ ಕಥಾಕಸುಬುದಾರಿಕೆಯಲ್ಲಿ ಅಷ್ಟಾಗಿ ಕಾಣಸಿಗದ ಗ್ರಾಮೀಣ ಪದಪುಂಜ, ಹಳ್ಳಿ ಸೊಗಡಿನ ನಾಜೂಕು ನಿರೂಪಣೆಯಾಗಿಯೂ ಗಮನ ಸೆಳೆಯುತ್ತದೆ. ಇನ್ನೊಂದೆಡೆ ಅಳಿದುಳಿದ ಊರ ನೆನಪುಗಳನ್ನು ಗುಡ್ಡೆ ಹಾಕಿಕೊಂಡು, ‘ಚೆಂದಗಾಣ’ವಾಗಿರುವ ಪದಗಳನ್ನು ಹೆಕ್ಕಿ ಕೊಡುವ ರಮ್ಯ ಹಟವಾಗಿಯೂ ಕಾಣುತ್ತದೆ.ಆದರೆ ಈ ರಮ್ಯತೆಯೊಳಗೂ ಕಥೆಗಳು ಹುದುಗಿಸಿಟ್ಟುಕೊಂಡಿರುವ ವಿವಿಧ ತಲ್ಲಣ, ತುಮುಲ, ಸಂಘರ್ಷಗಳನ್ನು ಚರ್ಚಿಸುವ ಅಗತ್ಯಕ್ಕೆ ಹೋಗದ ಮುನ್ನುಡಿಕಾರರಾದ ಹಿ.ಶಿ. ರಾಮಚಂದ್ರೇಗೌಡರು ಕಥೆಗಾರರ ಮೇಲಿನ ಅತಿ ಅಕ್ಕರೆಯಿಂದಲೋ ಏನೋ ಕಥೆಗಳನ್ನು ಏಕಪ್ರಕಾರದ ಭಾವುಕತೆಯಲ್ಲಿ ಹೊಗಳುತ್ತಲೇ ಹೋಗಿರುವುದು ಅತಿಯಾಯಿತೇನೋ ಎನ್ನಿಸುತ್ತದೆ.

ಮೋಡ ನೆರಳ ನಿರಾಳ

ಲೇ: ಕಾ.ತ.ಚಿಕ್ಕಣ್ಣ

ಪು: 116; ಬೆ: ರೂ. 90

ಪ್ರ: ಸಿರಿವರ ಪ್ರಕಾಶನ, ನಂ. ಎಂ37/ಬಿ, 8ನೇ ಕ್ರಾಸ್, ಲಕ್ಷ್ಮೀನಾರಾಯಣಪುರ, ಬೆಂಗಳೂರು-560021


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.