ಮಂಗಳವಾರ, ಮೇ 11, 2021
26 °C

ರಸಗೊಬ್ಬರ ಮಾಫಿಯಾ: ರೈತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಭತ್ತಕ್ಕೆ ಸಧ್ಯ ಅವಶ್ಯವಾಗಿ ರಸಗೊಬ್ಬರ ಬೇಕಾಗಿದ್ದು, ಪ್ರತಿದಿನ ರೈತರು ಗೊಬ್ಬರಕ್ಕಾಗಿ ಬೆಳಗಿನಿಂದ ಸಾಯಂಕಾಲ ಅಲೆದಾಡಿದರೂ ಗೊಬ್ಬರ  ಸಿಗುತ್ತಿಲ್ಲ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವು ಸಂಘ ಸಂಸ್ಥೆಗಳು ರೈತರ ಹೆಸರಿನಲ್ಲಿ ರಸಗೊಬ್ಬರ ತಂದು ಅದನ್ನು ರಾತ್ರೊ ರಾತ್ರಿ ಹೆಚ್ಚಿನ ಬೆಲೆಗೆ ರಸಗೊಬ್ಬರ ವ್ಯಾಪಾಸ್ಥರಿಗೆ ಮಾರಾಟ ಮಾಡಿರುವ ಆರೋಪಗಳು ಕೇಳಿ ಬರುತ್ತಿವೆ.ಇದರಿಂದಾಗಿ ರಸಗೊಬ್ಬರ ಅಂಗಡಿಗಳಲ್ಲಿ ಅವರು ಹೇಳಿದ್ದೇ ದರ ಎನ್ನುವಂತಾಗಿದೆ. ಇದರಲ್ಲಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳೇ ಶಾಮಿಲಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.ಅಧಿಕೃತ ಮಾಹಿತಿಯ ಪ್ರಕಾರ ಏಪ್ರಿಲ್ ಒಂದನೇ ವಾರದಿಂದ ಆಗಸ್ಟ್ ಅಂತ್ಯದವರೆಗೆ ಬಲಶೆಟ್ಟಿಹಾಳ ಗ್ರಾಮದ ನೀರು ಬಳಕೆದಾರರ ಸಹಕಾರಿ ಸಂಘಕ್ಕೆ 45 ಮೆಟ್ರಿಕ್‌ಟನ್ ಯೂರಿಯಾ, 90 ಮೆಟ್ರಿಕ್‌ಟನ್ ಡಿಎಪಿ, 155 ಮೆಟ್ರಿಕ್‌ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಸರಬರಾಜು ಮಾಡಲಾಗಿದೆ ಎಂದು ದಾಖಲೆ ಹೇಳುತ್ತದೆ. ಆದರೆ ರೈತರು ಹೇಳುವ ಪ್ರಕಾರ ಇದರಲ್ಲಿ ಕಾಲು ಭಾಗದ ಗೊಬ್ಬರ ಕೂಡಾ ರೈತರಿಗೆ ನೀಡಿಲ್ಲ.

 

ಕೇವಲ ಒಂದೇ ಸಂಘಕ್ಕೆ ಈ ರೀತಿ ರಸಗೊಬ್ಬರ ನೀಡಿದ್ದರೆ ಇನ್ನೂ ಉಳಿದ ಸಂಘಕ್ಕೆ ಅಧಿಕೃತವಾಗಿ ಎಷ್ಟು ಗೊಬ್ಬರ ಸರಬರಾಜು ಆಗಿರಬಹುದು. ಅನಧಿಕೃತವಾಗಿ ಸಹ ನೀಡಲಾಗಿದೆ ಎನ್ನಲಾಗುತ್ತಿದೆ. ಸರಬರಾಜು ಆಗಿದ್ದ ರಸಗೊಬ್ಬರ ಎಲ್ಲಿ ಹೋಯಿತು, ಒಟ್ಟು ಯಾದಗಿರಿ ಜಿಲ್ಲೆಗೆ ಬೇಕಾಗಿದ್ದ ರಸಗೊಬ್ಬರ ಎಷ್ಟು, ಸರಬರಾಜು ಆಗುತ್ತಿರುವ ರಸಗೊಬ್ಬರ ಎಲ್ಲಿ ಪೋಲಾಗುತ್ತಿದೆ ಎಂದು ಅಧಿಕಾರಿಗಳೇ ಉತ್ತರಿಸಬೇಕಿದೆ.ನೀರು ಬಳಕೆದಾರರ ಸಹಕಾರಿ ಸಂಘ ಸೇರಿದಂತೆ ಸಂಘ ಸಂಸ್ಥೆಗಳಿಗೆ ರಸಗೊಬ್ಬರ ಪೂರೈಕೆ ಮಾಡಬೇಕೆಂದರೆ ಯಾವ ಮಾನದಂಡದಿಂದ ರಸಗೊಬ್ಬರ ನೀಡುತ್ತಿದ್ದಾರೆ. ಅಥವಾ ಸಂಘಗಳಿಗೆ ರಸಗೊಬ್ಬರ ನೀಡುವದೇ ಆದರೆ ಅದನ್ನು ರೈತರಿಗೆ ಸಮರ್ಪಕವಾಗಿ ರೈತರಿಗೆ ಮುಟ್ಟಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತವಾರಿ ಸಚಿವರು ಈ ಕುರಿತು ಗಮನ ಹರಿಸಬೇಕು. ಅವರ ತವರು ಮತ ಕ್ಷೇತ್ರದ ರೈತರ ರಸಗೊಬ್ಬರ ಸಮಸ್ಯೆ ಪರಿಹರಿಸಬೇಕು.ಇಲ್ಲದಿದ್ದಲ್ಲಿ ಹೋರಾಟದ ಹಾದಿ ಹಿಡಿಯುವದು ಅನಿವಾರ್ಯ ಎಂದು ಬಲಶೆಟ್ಟಿಹಾಳ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಕಾಸಿಂಸಾಬ ಔರಾದಿ, ಮುತ್ತಣ್ಣ ಜಡಜಲಿ, ಬಸವರಾಜ ಹೊಸಮನಿ, ಹಣಮಂತ್ರಾಯ ಬೂದಿಹಾಳ, ಜಟಟೆಪ್ಪ ಒಂಬಳಕಲ್ಲ, ಶಿವಬಸಪ್ಪ ಚಿಂಚೋಳಿ, ಸಿದ್ದಪ್ಪ ಮಾಳಿ ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.