ಗುರುವಾರ , ಮೇ 19, 2022
21 °C

ರಸ್ತೆಗಳ ವಿಸ್ತರಣೆ ಹತ್ತಾರು ವಿಘ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ 215ಕ್ಕೂ ಹೆಚ್ಚು ರಸ್ತೆಗಳನ್ನು ವಿಸ್ತರಿಸಲು ಬಿಬಿಎಂಪಿ ಗುರುತು ಮಾಡಿದ್ದರೂ ಇದುವರೆಗೆ ಕೇವಲ 20 ರಸ್ತೆಗಳನ್ನು ಮಾತ್ರ ಪೂರ್ಣಗೊಳಿಸಲು ಸಾಧ್ಯವಾಗಿದೆ. ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್) ಪ್ರಕ್ರಿಯೆ ಆಧಾರದಲ್ಲಿ ಜಾಗ ಬಿಟ್ಟುಕೊಡಲು ಸಾರ್ವಜನಿಕರು ಆಸಕ್ತಿ ತೋರದ ಕಾರಣ ರಸ್ತೆಗಳ ವಿಸ್ತರಣೆ ನಿಧಾನಗತಿಯಲ್ಲಿ ಸಾಗುತ್ತಿದೆ.ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ರಾಜ್ಯ ಸರ್ಕಾರದ ನಿರ್ಧಾರದ ಮೇರೆಗೆ ಬಿಬಿಎಂಪಿಯು 2005ರಿಂದೀಚೆಗೆ ಸುಮಾರು 215 ರಸ್ತೆಗಳನ್ನು ವಿಸ್ತರಿಸಲು ಗುರುತಿಸಿತ್ತು.

ಈ ಪೈಕಿ ಮೊದಲ ಹಂತದಲ್ಲಿ 45 ಹಾಗೂ ಎರಡನೇ ಹಂತದಲ್ಲಿ 46 ರಸ್ತೆ ಸೇರಿದಂತೆ ಒಟ್ಟು 91 ರಸ್ತೆಗಳನ್ನು ವಿಸ್ತರಿಸಲು ಅಧಿಸೂಚನೆ ಹೊರಡಿಸಿ ಹಂತ-ಹಂತವಾಗಿ ವಿಸ್ತರಿಸಲು ತೀರ್ಮಾನಿಸಲಾಯಿತು. ಆದರೆ, ಭೂಸ್ವಾಧೀನದ ಅಡ್ಡಿಯಿಂದಾಗಿ ರಸ್ತೆ ವಿಸ್ತರಣೆ ವಿಳಂಬವಾಗುತ್ತಿದೆ.ಟಿಡಿಆರ್‌ಗೆ ನಾಗರಿಕರ ನಿರಾಸಕ್ತಿ: ಬಿಬಿಎಂಪಿಯು ವಿಸ್ತರಣೆಗಾಗಿ ಗುರುತಿಸಿರುವ ರಸ್ತೆಗಳಲ್ಲಿ ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್) ಪ್ರಕ್ರಿಯೆ ಮೂಲಕ ಜಾಗ ಬಿಟ್ಟು ಕೊಡಲು ನಾಗರಿಕರು ಅಷ್ಟೊಂದು ಉತ್ಸುಕತೆ ತೋರುತ್ತಿಲ್ಲ. ಇನ್ನು, ಬಿಬಿಎಂಪಿ ಕೂಡ ನಾಗರಿಕರ ಮೇಲೆ ಬಲವಂತವಾಗಿ ಟಿಡಿಆರ್ ಹೇರಿ ಜಾಗ ಸ್ವಾಧೀನಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ.ಟಿಡಿಆರ್ ಪ್ರಕ್ರಿಯೆಯಡಿ ರಸ್ತೆ ವಿಸ್ತರಣೆಗೆ ಜಾಗ ಬಿಟ್ಟು ಕೊಡುವ ನಾಗರಿಕರಿಗೆ ನೇರವಾಗಿ ಪರಿಹಾರ ನೀಡಲು ಅವಕಾಶವಿಲ್ಲ. ಬದಲಿಗೆ, ಜಾಗ ನೀಡಿದಂತಹ ಮಾಲೀಕರಿಗೆ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ (ಡೆವಲಪ್‌ಮೆಂಟ್ ರೈಟ್ಸ್ ಸರ್ಟಿಫಿಕೇಟ್) ನೀಡಲಾಗುತ್ತದೆ. ಈ ಪ್ರಮಾಣ ಪತ್ರಗಳನ್ನು ಮಾಲೀಕರು ವರ್ಗಾವಣೆ ಮಾಡಿಕೊಳ್ಳಲು ಅಥವಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವಿದೆ. ಅಲ್ಲದೆ, ಸ್ವಂತ ಕಟ್ಟಡದಲ್ಲಿ ಹೆಚ್ಚುವರಿ ಅಂತಸ್ತು ನಿರ್ಮಿಸಿಕೊಳ್ಳಬಹುದು.ನಾಗರಿಕರಲ್ಲಿ ಜಾಗೃತಿ ಕೊರತೆ: `ಮುಂಬೈ ಹಾಗೂ ಹೈದರಾಬಾದ್ ನಗರಗಳಲ್ಲಿ ಈ ಟಿಡಿಆರ್ ಪ್ರಕ್ರಿಯೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿಯೂ ಬೆಂಗಳೂರಿನಲ್ಲಿಯೂ ಅದನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ ಮುಂದಾಯಿತು. ಆದರೆ, ನಗರದ ನಾಗರಿಕರಿಗೆ ಟಿಡಿಆರ್‌ನ ಬಗ್ಗೆ ಅಂತಹ ಜಾಗೃತಿ ಮೂಡಿಲ್ಲ.

 

ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಕೂಡ ಅಷ್ಟಾಗಿ ನಡೆದಿಲ್ಲ. ಈ ಕಾರಣದಿಂದಲೇ ಟಿಡಿಆರ್‌ಗೆ ನಾಗರಿಕರಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ~ ಎಂಬುದು ಹೆಸರೇಳಲು ಇಚ್ಛಿಸದ ಪಾಲಿಕೆ ಎಂಜಿನಿಯರ್ ಒಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಜನ ಸ್ನೇಹಿಯಾಗಬೇಕು: `ನಗರದ ನಾಗರಿಕರು ಒಪ್ಪುವ ರೀತಿಯಲ್ಲಿ ಈ ಅಭಿವೃದ್ಧಿ ಹಕ್ಕುಗಳ ಹಸ್ತಾಂತರ ಪ್ರಕ್ರಿಯೆಯನ್ನು ಪಾಲಿಕೆ ಜಾರಿಗೆ ತಂದಿಲ್ಲ. ಬದಲಿಗೆ ಅದು ನಾಗರಿಕ ಸ್ನೇಹಿಯಂತಿರಬೇಕಿತ್ತು. ಜನರೇ ಮುಂದೆ ಬಂದು ಟಿಡಿಆರ್ ಪಡೆಯುವ ಮೂಲಕ ಜಾಗ ಬಿಟ್ಟುಕೊಡುವ ಮೂಲಕ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಿರಬೇಕಿತ್ತು.ಆದರೆ, ಪ್ರಸ್ತುತ ಜಾರಿಗೆ ತಂದಿರುವ ಟಿಡಿಆರ್ ಪ್ರಕ್ರಿಯೆಯನ್ನು ಜನ ಅಷ್ಟಾಗಿ ಬಯಸದಿರುವುದು ಯೋಜನೆಯ ಹಿನ್ನಡೆಗೆ ಕಾರಣ~ ಎನ್ನುತ್ತಾರೆ ಮಾಜಿ ಮೇಯರ್ ಪಿ.ಆರ್. ರಮೇಶ್.`ನಗರದ ಬೆಳವಣಿಗೆಗೆ ಟಿಡಿಆರ್ ಪ್ರಕ್ರಿಯೆ ಪೂರಕವಾದುದು. ಟಿಡಿಆರ್ ಮೂಲಕ ಜಾಗ ನೀಡಿದಂಥವರಿಗೆ ನೀಡುವ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರವನ್ನು (ಡಿಆರ್‌ಸಿ) ಒಂದೆರಡು ವರ್ಷ ಹಾಗೇ ಇಟ್ಟುಕೊಂಡು ಷೇರುಗಳ ರೀತಿ ಸೂಕ್ತ ಬೆಲೆಗೆ ಮಾರಾಟ ಮಾಡಲು ಅವಕಾಶವಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಉತ್ತೇಜಿಸಿದಲ್ಲಿ ಖಂಡಿತಾ ಯೋಜನೆ ಸಫಲವಾಗಲಿದೆ~ ಎಂದು ಅವರು ಅಭಿಪ್ರಾಯಪಡುತ್ತಾರೆ.`ಇನ್ನು ಭೂಸ್ವಾಧೀನ ಕಾಯ್ದೆಯಡಿ ರಸ್ತೆ ವಿಸ್ತರಣೆಗೆ ಜಾಗ ಸ್ವಾಧೀನಪಡಿಸಿಕೊಳ್ಳಲು ಪರಿಹಾರ ನೀಡುವುದಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅವಶ್ಯಕತೆಯಿದೆ. ಹೀಗಾಗಿ, ಈ ಭೂಸ್ವಾಧೀನ ಕಾಯ್ದೆಯಡಿ ಜಾಗ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ~ ಎಂದು ಪಾಲಿಕೆಯ ಎಂಜಿನಿಯರ್ ಒಬ್ಬರು ಪ್ರತಿಕ್ರಿಯಿಸಿದರು.ಆತಂಕ ಪಡುವ ಅಗತ್ಯವಿಲ್ಲ: `ರಸ್ತೆ ವಿಸ್ತರಣೆಗೆ ಗುರುತು ಮಾಡಿರುವಂತಹ ಕಡೆಗಳಲ್ಲಿ ಜಾಗ ಮಾರಾಟ ಮಾಡುವುದಕ್ಕೆ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ. 2015ರ ಬೆಂಗಳೂರು ಮಾಸ್ಟರ್ ಪ್ಲಾನ್ ಪ್ರಕಾರ, ಯಾವ ರಸ್ತೆಗಳನ್ನು ಎಷ್ಟೆಷ್ಟು ವಿಸ್ತರಣೆ ಮಾಡಲಾಗುತ್ತದೆ ಎಂಬುದನ್ನು ಬಿಡಿಎ ಈಗಾಗಲೇ ಬಹಿರಂಗಪಡಿಸಿದೆ.

 ಹೀಗಾಗಿ, ರಸ್ತೆ ವಿಸ್ತರಣೆಗೆ ಗುರುತಿಸಿರುವ ಉದ್ದೇಶಿತ ಜಾಗವನ್ನು ಬಿಟ್ಟು ಆಸ್ತಿ ಮಾರಾಟ ಮಾಡುವುದಕ್ಕೆ ತೊಂದರೆಯಿಲ್ಲ. ಮಾರಾಟಗಾರರು ಹಾಗೂ ಖರೀದಿದಾರರಿಗೆ ಈ ಬಗ್ಗೆ ಅರಿವಿದ್ದರೆ ಸಾಕು~ ಎಂದು ಅವರು ಹೇಳುತ್ತಾರೆ.ವಿಸ್ತರಣೆ ಪೂರ್ಣಗೊಂಡ 20 ರಸ್ತೆಗಳು

ಹೊಸೂರು ರಸ್ತೆ (ಯ್ಯಾಂಕಿ ಕಾರ್ಖಾನೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ); ಅರಮನೆ ರಸ್ತೆ (ಮೈಸೂರು ಬ್ಯಾಂಕ್ ವೃತ್ತದಿಂದ ಹೈಗ್ರೌಂಡ್ ಪೊಲೀಸ್ ಠಾಣೆ ವೃತ್ತದವರೆಗೆ); ಶೇಷಾದ್ರಿ ರಸ್ತೆ (ಹಳೇ ಸೆಂಟ್ರಲ್ ಜೈಲಿನ ತಿರುವಿನಿಂದ ಕೆ.ಆರ್. ವೃತ್ತದವರೆಗೆ); ಡಿಕನ್ಸನ್ ರಸ್ತೆ (ಎಂ.ಜಿ. ರಸ್ತೆಯಿಂದ ಹಲಸೂರು ರಸ್ತೆ ಜಂಕ್ಷನ್‌ವರೆಗೆ), ರೇಸ್‌ಕೋರ್ಸ್ ರಸ್ತೆ (ಆನಂದರಾವ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ), ಬಳ್ಳಾರಿ ರಸ್ತೆ (ಸಂಜಯನಗರ ಜಂಕ್ಷನ್‌ನಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ಹಾಗೂ ಹಳೇ ಹೈಗ್ರೌಂಡ್ ಪೊಲೀಸ್ ಠಾಣೆಯಿಂದ ವಿಂಡ್ಸರ್ ಮ್ಯಾನರ್‌ವರೆಗೆ); ಮೇಡಹಳ್ಳಿ-ಬೆಳ್ಳತ್ತೂರು ರಸ್ತೆ; ಗೇರ್ ಕಾಲೇಜು ರಸ್ತೆ; ಯಲಹಂಕ ರಸ್ತೆ (ವಿದ್ಯಾರಣ್ಯಪುರ ರಸ್ತೆ); ಕೋಗಿಲು ರಸ್ತೆ.ನಾಗವಾರ ರಸ್ತೆ; ನ್ಯಾನಪ್ಪನಹಳ್ಳಿ ರಸ್ತೆ (ಬನ್ನೇರುಘಟ್ಟ-ಅರಕೆರೆ ರಸ್ತೆ); ಅಂಜನಾಪುರ ಮುಖ್ಯ ರಸ್ತೆಯಿಂದ ಕನಕಪುರ ಮುಖ್ಯರಸ್ತೆ; ಕೆಂಗೇರಿ ಟೌನ್ ರಸ್ತೆ (ಕೋಡಿಪಾಳ್ಯ ಹೆಮ್ಮಿಗೆಪುರ ರಸ್ತೆ); ದೊಡ್ಡನೆಕ್ಕುಂದಿ ಮುಖ್ಯ ರಸ್ತೆ; ದೊಡ್ಡನೆಕ್ಕುಂದಿ ರಸ್ತೆಯಿಂದ ಗುರುರಾಜ ಲೇ ಔಟ್, ಕೃಷ್ಣಾರೆಡ್ಡಿ ಲೇ ಔಟ್, ಶಾನುಬೋಗ ಲೇ ಔಟ್ ಮತ್ತು ಇತರೆ ಮುಖ್ಯರಸ್ತೆಗಳು; ಅಲ್ಲಸಂದ್ರ ರೈಲ್ವೆ ಗೇಟ್‌ನಿಂದ ದೊಡ್ಡಬಳ್ಳಾಪುರ ರಸ್ತೆ (ಮಾರ್ಗ: ಜುಡಿಷಿಯಲ್ ಕಾಲೋನಿ, ಯಲಹಂಕ); ಯಶವಂತಪುರ ರಸ್ತೆಯಿಂದ ಮದರ್ ಡೇರಿ ವೃತ್ತ, ಎಂ.ಎಸ್. ಪಾಳ್ಯ; ದೊಡ್ಡಬಳ್ಳಾಪುರ ರಸ್ತೆಯಿಂದ ಮದರ್ ಡೇರಿ ವೃತ್ತ (ಮಾರ್ಗ: 3ನೇ `ಎ~ ಕ್ರಾಸ್ 1ನೇ ಮುಖ್ಯ ರಸ್ತೆ ಮತ್ತು 15 `ಬಿ~ ಕ್ರಾಸ್, 7ನೇ `ಎ~ ಮತ್ತು 15ನೇ `ಅ~ ಕ್ರಾಸ್; ಅಬ್ಬಿಗೆರೆ ಮುಖ್ಯ ರಸ್ತೆ, ಕಮ್ಮನಹಳ್ಳಿ ಒಳಗಿನಿಂದ ಅಬ್ಬಿಗೆರೆ ಗಡಿ (ಹೆಸರಘಟ್ಟ ರಸ್ತೆಯಿಂದ ಎಂ.ಎಸ್.ಪಾಳ್ಯ, ಸಿಂಗಾಪುರ, ಲಕ್ಷ್ಮೀಪುರ ರಸ್ತೆ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.