ರಸ್ತೆ ಅಪಘಾತ: ಇಬ್ಬರು ಎಂಜಿನಿಯರ್ ಸಾವು
ಬೆಂಗಳೂರು: ಹಳೇ ಮದ್ರಾಸ್ ರಸ್ತೆಯಲ್ಲಿ ಶನಿವಾರ ರಾತ್ರಿ ಬಿಬಿಎಂಪಿ ಕಸದ ಲಾರಿಗೆ ಬೈಕ್ ಗುದ್ದಿಸಿದ ಸುಶ್ರುತ್ (26) ಎಂಬ ಸಾಫ್ಟ್ವೇರ್ ಎಂಜಿನಿಯರ್ ಸಾವನ್ನಪ್ಪಿದ್ದು, ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರ ಮುಖ್ಯರಸ್ತೆಯಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಅಭಿಷೇಕ್ ಪ್ರಿಯದರ್ಶನ್ (23) ಎಂಬ ಸಾಫ್ಟ್ವೇರ್ ಎಂಜಿನಿಯರ್ ಮೃತಪಟ್ಟಿದ್ದಾರೆ.
ಕೆ.ಆರ್.ಪುರ ಬಳಿಯ ಆವಲಹಳ್ಳಿ ನಿವಾಸಿಯಾದ ಸುಶ್ರುತ್, ಬೊಮ್ಮನಹಳ್ಳಿಯ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದರು. ಅವರು ಕೆಲಸ ಮುಗಿಸಿಕೊಂಡು ಕಂಪೆನಿಯಿಂದ ಬೈಕ್ನಲ್ಲಿ ಮನೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಹಳೇ ಮದ್ರಾಸ್ ರಸ್ತೆಯ ಎಡ ಬದಿಯಲ್ಲಿ ನಿಂತಿದ್ದ ಕಸದ ಲಾರಿಗೆ ಸುಶ್ರುತ್ ಅವರು ಹಿಂದಿನಿಂದ ಬೈಕ್ ಗುದ್ದಿಸಿದ್ದಾರೆ. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕೆ.ಆರ್.ಪುರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣ: ಬಿಹಾರ ಮೂಲದ ಅಭಿಷೇಕ್, ಸರ್ಜಾಪುರದಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದರು. ಮಾರತ್ಹಳ್ಳಿಯ ಸಾಫ್ಟ್ವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದ ಅವರು ಶನಿವಾರ ರಾತ್ರಿ ದೊಡ್ಡತೋಗೂರಿನ ಸ್ನೇಹಿತನ ಮನೆಗೆ ಹೋಗಿದ್ದರು. ಅವರು ಭಾನುವಾರ ಬೆಳಿಗ್ಗೆ ಸ್ನೇಹಿತನ ಮನೆಯಿಂದ ಸರ್ಜಾಪುರಕ್ಕೆ ಬರುತ್ತಿದ್ದಾಗ ರಸ್ತೆ ಉಬ್ಬಿನ ಬಳಿ ನಿಯಂತ್ರಣ ತಪ್ಪಿ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಆಗ ಅವರ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವೇಳೆ ಅಭಿಷೇಕ್ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಬದಲಿಗೆ ಕೈನಲ್ಲಿ ಹಿಡಿದುಕೊಂಡು ಬೈಕ್ ಚಾಲನೆ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಎಲೆಕ್ಟ್ರಾನಿಕ್ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಟ್ಟದಿಂದ ಬಿದ್ದು ಯುವಕನ ಸಾವು
ಮಾಗಡಿ: ಗೆಳೆಯರೊಂದಿಗೆ ಸಾವನದುರ್ಗಕ್ಕೆ ಪ್ರವಾಸ ಬಂದಿದ್ದ ಕುಣಿಗಲ್ ಮೂಲದ ಬೆಂಗಳೂರಿನ ಗಾರ್ಮೆಂಟ್ಸ್ನ ಲೋಕೇಶ್ (31) ಉದ್ಯೋಗಿ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದಾನೆ. ಮಳೆ ಆರಂಭವಾದ ಕಾರಣ ಅವಸರದಲ್ಲಿ ಬೆಟ್ಟದ ಹತ್ತುವಾಗ ಆಯತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದು ಮೃತಪಟ್ಟಿದ್ದಾನೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.