ಬುಧವಾರ, ಮೇ 18, 2022
24 °C

ರಸ್ತೆ ಉಬ್ಬು ತೆಗೆದರೂ ತಪ್ಪದ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ಉಬ್ಬು ತೆಗೆದರೂ ತಪ್ಪದ ತೊಂದರೆ

ಬೆಂಗಳೂರು: ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದ ರಸ್ತೆ ಉಬ್ಬುಗಳನ್ನು ತೆಗೆದಿರುವುದೂ ಈಗ ವಾಹನ ಸವಾರರ ಪಾಲಿಗೆ ತೊಂದರೆಯಾಗಿ ಪರಿಣಮಿಸಿದೆ. ನಗರ ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಜಂಟಿಯಾಗಿ ಅವೈಜಾನಿಕ ರಸ್ತೆ ಉಬ್ಬುಗಳನ್ನು ತೆರವು ಮಾಡಿದ್ದು, ಸಮರ್ಪಕವಾಗಿ ರಸ್ತೆ ಉಬ್ಬುಗಳನ್ನು ತೆಗೆಯದೇ ಇರುವುದರಿಂದ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.ಈ ವರ್ಷದ ಜನವರಿಯಲ್ಲಿ ನಗರದಲ್ಲಿ ಒಟ್ಟು 1684 ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಗರ ಸಂಚಾರ ಪೊಲೀಸರು ಗುರುತಿಸಿದ್ದರು. ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವಂತೆ ಸಂಚಾರ ಪೊಲೀಸರು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು.ನಗರ ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಒಟ್ಟಾಗಿ ಕಾರ್ಯ ಯೋಜನೆ ರೂಪಿಸಿ ಇದುವರೆಗೆ 1520 ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿದೆ. ಇಂಡಿಯನ್ ರೋಡ್ ಕಾಂಗ್ರೆಸ್‌ನ ನಿಯಮಗಳ ಪ್ರಕಾರ, 164 ಕಡೆಗಳಲ್ಲಿ ಪುನಃ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಲು ಸಂಚಾರ ಪೊಲೀಸರು ಬಿಬಿಎಂಪಿಗೆ ಶಿಫಾರಸು ಸಲ್ಲಿಸಿದ್ದಾರೆ.`ನಮ್ಮ ಬಡಾವಣೆಯಲ್ಲಿ ಹಲವು ಕಡೆ ಅವೈಜ್ಞಾನಿಕ ರಸ್ತೆ ಉಬ್ಬುಗಳಿದ್ದವು. ಇವನ್ನು ತೆಗೆಸುವಂತೆ ಸ್ಥಳೀಯ ಬಿಬಿಎಂಪಿ ಸದಸ್ಯರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಇತ್ತೀಚೆಗೆ ನಗರ ಸಂಚಾರ ಪೊಲೀಸರು ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವು ಮಾಡಿದ್ದು ಸಂತೋಷ ತಂದಿದೆ.

ಆದರೆ, ರಸ್ತೆ ಉಬ್ಬುಗಳನ್ನು ಸರಿಯಾಗಿ ತೆರವು ಮಾಡಲಾಗಿಲ್ಲ. ಪೂರ್ಣವಾಗಿ ಉಬ್ಬನ್ನು ತೆರವು ಮಾಡದೇ ಇರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ಕಷ್ಟವಾಗಿದೆ~ ಎಂದು ಬಿಟಿಎಂ ಬಡಾವಣೆಯ ನಿವಾಸಿ ಸುಂದರ್‌ನಾಥ್ ದೂರಿದ್ದಾರೆ.`ಮೊದಲು ನಾನು ಓಡಾಡಲು ಬೈಕ್ ಬಳಸುತ್ತಿದ್ದೆ. ಆದರೆ, ರಸ್ತೆ ಉಬ್ಬುಗಳ ಕಾರಣದಿಂದ ಬೈನ ಓಡಾಟ ಬೆನ್ನು ನೋವು ತರಿಸಿತ್ತು. ಬೆನ್ನು ನೋವಿನ ಕಾರಣಕ್ಕೆ ಬೈಕ್ ಚಾಲನೆ ಬಿಟ್ಟು, ಕಾರು ಬಳಸಲು ವೈದ್ಯರು ಸಲಹೆ ಮಾಡಿದರು. ಈಗ ಕಾರನ್ನು ಬಳಸುತ್ತಿದ್ದರೂ ರಸ್ತೆ ಉಬ್ಬುಗಳನ್ನು ಸರಿಯಾಗಿ ತೆಗೆಯದ ಕಾರಣ ಬೆನ್ನು ನೋವು ಇನ್ನೂ ಉಳಿದುಕೊಂಡಿದೆ~ ಎಂದು ನಗರದ ಉದ್ಯಮಿ ವೆಂಕಟೇಶ್ ಹೇಳಿದರು.`ನಗರದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಟೆಂಡರ್ ಕರೆಯದೇ ತೆರವು ಮಾಡಲಾಗಿದೆ ಎಂಬ ಆರೋಪವೂ ಈಗ ಬಿಬಿಎಂಪಿಯ ಮೇಲಿದೆ. ಬಿಬಿಎಂಪಿ ಎಂಜಿನಿಯರ್‌ಗಳು ಸ್ಥಳೀಯ ಗುತ್ತಿಗೆದಾರರ ಮೂಲಕ ರಸ್ತೆ ಉಬ್ಬುಗಳನ್ನು ತೆರವು ಮಾಡಿಸಿದ್ದಾರೆ. ಜೆಸಿಬಿ ಯಂತ್ರಗಳ ಮೂಲಕ ತೆರವು ಮಾಡಿರುವುದರಿಂದ ರಸ್ತೆ ಉಬ್ಬುಗಳು ಪೂರ್ಣವಾಗಿ ಸಮವಾಗಿಲ್ಲ~ ಎಂದು ನಗರದ ನಿವಾಸಿಗಳು ದೂರಿದ್ದಾರೆ.`ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ನಗರದ ವಾಹನ ಸವಾರರಿಗೆ ತೀವ್ರವಾದ ತೊಂದರೆಯಾಗುತ್ತಿತ್ತು. ಇದನ್ನು ನಿವಾರಿಸಲು ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ಅವೈಜ್ಞಾನಿಕ ರಸ್ತೆ ಉಬ್ಬುಗಳ ಪಟ್ಟಿ ಕಳುಹಿಸಿಕೊಡಲಾಗಿತ್ತು.ಆದರೆ, ರಸ್ತೆ ಉಬ್ಬುಗಳನ್ನು ಸಮರ್ಪಕವಾಗಿ ತೆರವು ಮಾಡಿಲ್ಲ ಎಂಬ ದೂರುಗಳು ಬಂದಿವೆ. ಈ ವಿಷಯವನ್ನು ಬಿಬಿಎಂಪಿ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ~ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ `ಪ್ರಜಾವಾಣಿ~ ಗೆ ತಿಳಿಸಿದ್ದಾರೆ.`ನಗರದ ಹಲವೆಡೆ ರಸ್ತೆ ಉಬ್ಬುಗಳನ್ನು ಸರಿಯಾಗಿಯೇ ತೆಗೆಯಲಾಗಿದೆ. ಕೆಲವು ಕಡೆಗಳಲ್ಲಿ ಸರಿಯಾಗಿ ರಸ್ತೆ ಉಬ್ಬುಗಳನ್ನು ತೆಗೆಯಲಾಗಿಲ್ಲ. ಅಂತಹ ಕಡೆಗಳಲ್ಲಿ ಉಬ್ಬುಗಳನ್ನು ಸಮರ್ಪಕವಾಗಿ ತೆಗೆಯಲು ಪಾಲಿಕೆಯ ವಿಭಾಗ ಮಟ್ಟದ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದ್ದು, ಮಳೆಗಾಲದೊಳಗೆ ಸಮಸ್ಯೆ ಪರಿಹಾರವಾಗಲಿದೆ~ ಎಂದು ಬಿಬಿಎಂಪಿ ಸಂಚಾರ ವಿಭಾಗದ ಎಂಜಿನಿಯರ್ ಬಸವರಾಜ್ ಕಬಾಡೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.