ಬುಧವಾರ, ಮೇ 18, 2022
23 °C
ನಗರ ಸಂಚಾರ

ರಸ್ತೆ `ಬಲಿ' ತೆಗೆದುಕೊಂಡ ನೀರಿನ ಗುಂಡಿ...!

ವಿಜಯ್ ಹೂಗಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ `ಬಲಿ' ತೆಗೆದುಕೊಂಡ ನೀರಿನ ಗುಂಡಿ...!

ಹಾವೇರಿ: ನಗರದ ರಸ್ತೆಗಳಲ್ಲಿ ಸಣ್ಣ ಪುಟ್ಟ ತಗ್ಗು ಗುಂಡಿಗಳು ಇರುವುದು, ಅವುಗಳಿಗೆ ಮಣ್ಣು ಹಾಕಿ ಮುಚ್ಚುವುದು, ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗುವುದು ಹೊಸದೇನಲ್ಲ. ಆದರೆ, ಕಳೆದ ಎರಡು ವರ್ಷದಿಂದ ರಸ್ತೆ ಮಧ್ಯದಲ್ಲಿ ಇರುವ ಬೃಹತ್ ಗುಂಡಿಯೊಂದು ನೀರು ತುಂಬಿಕೊಂಡು ರಸ್ತೆಯನ್ನೇ ಬಲಿ ತೆಗೆದುಕೊಂಡಿದೆ ಯಲ್ಲದೇ, ನರಬಲಿಗಾಗಿ ಕಾದು ನಿಂತಿದೆ.ಇಲ್ಲಿನ ಅಶ್ವಿನಿ ನಗರದಲ್ಲಿ ಇರುವ ನಗರಕ್ಕೆ ನೀರು ಪೂರೈಕೆ ಮಾಡುವ ಓವರ್‌ಹೆಡ್ ಟ್ಯಾಂಕ್‌ನ ಮುಖ್ಯ ಪೈಪ್‌ಲೈನ್‌ನ ಜೋಡಣೆ ಸ್ಥಳದಲ್ಲಿ ನೀರಿನ ಸೋರಿಕೆಯಾಗಿ ರಸ್ತೆ ಮಧ್ಯದಲ್ಲಿಯೇ ಈ ಗುಂಡಿ ನಿರ್ಮಾಣವಾಗಿದೆ. ಸುಮಾರು ಆರು ಅಡಿ ಆಳದ ಈ ಗುಂಡಿಯಲ್ಲಿ ಸದಾ ನೀರು ತುಂಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಹಿಂದೆ ತಗ್ಗು ಈಗ ಗುಂಡಿ: ಪೈಪ್‌ಲೈನ್ ಜೋಡಣೆ ಸರಿಯಾಗಿ ಆಗದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ನಗರಸಭೆ ಅಧಿಕಾರಿಗಳು ಈ ಹಿಂದೆ ಕೆಲವು ಬಾರಿ ಪ್ರಯತ್ನಿಸಿದ್ದಾರೆ. ದುರಸ್ತಿ ಮಾಡಿದ ನಂತರ ಒಂದು ವಾರ ಸರಿ ಇದ್ದರೆ, ಎರಡನೇ ವಾರದಲ್ಲಿ ಮತ್ತೆ ನೀರಿನ ಸೋರಿಕೆ ಆರಂಭವಾಗುತ್ತದೆ. ಪದೇ ಪದೇ ಇದೇ ರೀತಿ ಆಗುತ್ತಿರುವುದಕ್ಕೆ ಬೇಸತ್ತೋ ಏನೋ ನಗರಸಭೆ ಅಧಿಕಾರಿ ಗಳು ಇತ್ತೀಚಿನ ತಿಂಗಳಲ್ಲಿ ದುರಸ್ತಿ ಮಾಡುವುದನ್ನೇ ಬಿಟ್ಟಿದ್ದಾರೆ. ಹೀಗಾಗಿ ತಗ್ಗು ಇದ್ದುದು ಈಗ ಗುಂಡಿಯಾಗಿ ಪರಿವರ್ತನೆಯಾಗಿದೆ.ಬಿದ್ದು ಎದ್ದವರು: ರಸ್ತೆ ಮಧ್ಯದಲ್ಲಿಯೇ ಇರುವುದರಿಂದ ಈ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಓಡಾಡಲು ಜನರು ಹೆದರುತ್ತಾರೆ. ಮಕ್ಕಳನ್ನಂತೂ ಈ ರಸ್ತೆಯಲ್ಲಿ ಓಡಾಡದಂತೆ ಪಾಲಕರು ನಿರ್ಬಂಧವನ್ನು ಹೇರಿದ್ದಾರೆ. ಈ ಗುಂಡಿಯ ಬಗ್ಗೆ ಮಾಹಿತಿ ಇಲ್ಲದೇ ಬೈಕ್ ಮೇಲೆ ಬರುವ ಬಹಳಷ್ಟು ಜನರು ಈ ಗುಂಡಿಯಲ್ಲಿ ಬಿದ್ದು ಗಾಯಗಳನ್ನು ಮಾಡಿಕೊಂಡಿದ್ದಾರೆ. ಆದರೆ, ಎರಡು ವರ್ಷದಲ್ಲಿ ಈವರೆಗೂ ಯಾರೊಬ್ಬರು ಅದರೊಳಗೆ ಬಿದ್ದು ಮೃತಪಟ್ಟಿಲ್ಲ ಎಂಬುದು ಸಮಾಧಾನದ ಸಂಗತಿ ಎಂದು ಹೇಳುತ್ತಾರೆ ಅಶ್ವಿನಿ ನಗರದ ನಿವಾಸಿ ಬಾನಪ್ಪನವರ.ಕುಡಿಯಲು ಕಲುಷಿತ ನೀರು: ಗುಂಡಿಯಲ್ಲಿ ಸದಾ ಒಂದು ಆಳು ನೀರು ನಿಲ್ಲುತ್ತಿರುವುದರಿಂದ ಬಹಳಷ್ಟು ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ ಯಲ್ಲದೇ, ನೀರನ್ನು ಸುತ್ತ ಮುತ್ತಲು ಕಟ್ಟಡ ಕಟ್ಟುವವರು ಟ್ಯಾಂಕರ್ ಮೂಲಕ ನೀರನ್ನು ಎತ್ತಿಕೊಂಡು ಹೋಗುತ್ತಾರೆ.ಅಲ್ಲದೇ, ಈ ಭಾಗದ ನಿವಾಸಿಗಳು ಸಾಬೂನಿನಿಂದ ಕಾರು, ಬೈಕ್‌ಗಳನ್ನು ಇದೇ ನೀರಲ್ಲಿ ತೊಳೆಯು ತ್ತಾರೆ. ಇದೇ ನೀರು ಪೈಪ್‌ಲೈನ್ ಮೂಲಕ ಟ್ಯಾಂಕ್‌ಗೆ ಸೇರುತ್ತದೆ. ಅದೇ ನೀರು ನಲ್ಲಿಗಳಿಗೆ ಪೂರೈಕೆ ಆಗುತ್ತದೆ. ಹೀಗಾಗಿ ಈ ಪ್ರದೇಶದ ಜನರು ಕಲುಷಿತ ನೀರು ಕುಡಿಯುವುದು ಅನಿವಾರ್ಯ ವಾಗಿದೆ ಎನ್ನುತ್ತಾರೆ ಅವರು.ರಸ್ತೆ ಇಲ್ಲದಿರುವುದು, ವ್ಯರ್ಥವಾಗಿ ಹರಿಯುತ್ತಿರುವುದು, ಆ ನೀರಿನಲ್ಲಿ ವಾಹನಗಳನ್ನು ತೊಳೆದು ಕಲುಷಿತ ಗೊಳಿಸುವುದು, ಈ ಎಲ್ಲ ಸಮಸ್ಯೆಗಳ ಬಗ್ಗೆ ನಗರಸಭೆ ಅಧಿಕಾರಿಗಳ ಬಹಳಷ್ಟು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ನಿವಾಸಿಗಳೇ ಸೇರಿಕೊಂಡು ಆ ಗುಂಡಿಯನ್ನು ಮುಚ್ಚ ಬೇಕೆಂದರೆ, ನೀರಿನ ಸೋರಿಕೆಯಿಂದ ಅದು ಸಾಧ್ಯವಾಗುತ್ತಿಲ್ಲ.ನೀರು ಹರಿದು ಗಲೀಜು ನಿರ್ಮಾಣವಾಗಿ ಸೊಳ್ಳೆಗಳು ಕಾಟ ಕೂಡ ಹೆಚ್ಚಾಗಿ ರೋಗ ರುಜಿನ ಗಳಿಗೆ ಕಾರಣವಾಗಿದೆ. ಆದಕಾರಣ, ಕೂಡಲೇ ಪೈಪ್‌ಲೈನ್ ಜೋಡಣೆ ಮಾಡಬೇಕು. ಗುಂಡಿಯನ್ನು ಮುಚ್ಚಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸ ಬೇಕು ಎಂದು ನಗರದ ನಿವಾಸಿಗಳು ನಗರಸಭೆಯನ್ನು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.