ಶುಕ್ರವಾರ, ಮೇ 20, 2022
19 °C

ರಾಜಕಾರಣಿಗಳನ್ನು ದೂರವಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜಕಾರಣಿಗಳನ್ನು ದೂರ ಇಟ್ಟರೆ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಒಳ್ಳೆಯದು. ಸಮ್ಮೇಳನಗಳಿಗೆ ಸರ್ಕಾರದ ಹಣ ಪಡೆಯಬಾರದು.ಅದಕ್ಕಾಗಿ ಪರಿಷತ್ತು ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಬೇಕಿದೆ’ ಎಂದು 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಜಿ.ವೆಂಕಟಸುಬ್ಬಯ್ಯ ಹೇಳಿದರು.ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಮಂಗಳವಾರ ಜಂಟಿಯಾಗಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.‘ಕನ್ನಡಿಗರು ನಿದ್ರೆ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ಎಲ್ಲ ಕ್ಷೇತ್ರಗಳಲ್ಲೂ ಆಂದೋಲನವೇ ನಡೆಯಬೇಕಿದೆ’ ಎಂದು ಕನ್ನಡಿಗರನ್ನು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದರು.‘ಕನ್ನಡ ಎಂದರೆ ಭಾಷೆ ಮಾತ್ರವಲ್ಲ; ಗ್ರಾಮೀಣ ಜನರು ಕೃಷಿ ಬಿಟ್ಟು ಬೆಂಗಳೂರಿನಂತಹ ನಗರಗಳಿಗೆ ವಲಸೆ ಬರುತ್ತಿದ್ದಾರೆ. ಕೃಷಿ ಜಮೀನು ಬೀಳು ಬಿಳುತ್ತಿದೆ.ಕುಲಾಂತರಿ ತಳಿಗಳ ಸವಾಲು ಎದುರಾಗಿದೆ. ಅರಿಶಿಣ, ಶುಂಠಿಗೆ ಅಮೆರಿಕದಲ್ಲಿ ಪೇಟೆಂಟ್ ಪಡೆಯುವ ಪ್ರಯತ್ನ ನಡೆದಿದೆ. ಇವೆಲ್ಲವೂ ಕನ್ನಡದ ಸಮಸ್ಯೆಗಳೇ’ ಎಂದು ಅವರು ಅಭಿಪ್ರಾಯಪಟ್ಟರು.‘ಕನ್ನಡ ಬದುಕಬೇಕಾದರೆ ವಿಧಾನಸೌಧದಲ್ಲಿ ಕನ್ನಡ ರಾಜ್ಯಭಾರ ಮಾಡಬೇಕು. ಐಎಎಸ್ ಅಧಿಕಾರಿಗಳಾದಿಯಾಗಿ ಎಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು. ಚಿರಂಜೀವಿ ಸಿಂಗ್ ಅವರು ಕನ್ನಡ ಕಲಿತದ್ದಲ್ಲದೇ ತಮ್ಮ ಸಂಸಾರವನ್ನು ಕನ್ನಡಮಯ ಮಾಡಿದರು’ ಎಂದು ಅವರು ತಿಳಿಸಿದರು.ಕನ್ನಡದ ಅಳಿವು ಉಳಿವಿನ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ. ತಾಯಂದಿರು ಮಗುವಿಗೆ ಹಾಲೂಡಿಸುವ ಹಂತದಿಂದಲೇ ಕನ್ನಡ ಕಲಿಸಬೇಕು. ಅವರೇ ಕಲಿಸದೇ ಇದ್ದರೆ ಕನ್ನಡಕ್ಕೆ ಕಷ್ಟ ತಪ್ಪಿದ್ದಲ್ಲ.‘ಈಗಿನ ಸಂದರ್ಭದಲ್ಲಿ ನಾಡಿನ ಜನರು ನೊಂದಿದ್ದಾರೆ. ದಿಕ್ಕೆಟ್ಟು ಹೋಗಿದ್ದಾರೆ. ರಾಜಕೀಯ ಏರುಪೇರುಗಳಿಂದ ಜನ ಒದ್ದಾಡ್ತಾ ಇದಾರೆ. ಅಚ್ಚುಕಟ್ಟಾದ ಆಡಳಿತ ವ್ಯವಸ್ಥೆ ಬರಬೇಕಿದೆ. ಸದ್ಯದ ಸಮಸ್ಯೆಯಿಂದ ಹೊರ ಬರುವ ಸಾಮರ್ಥ್ಯ  ರಾಜಕೀಯ ನಿಪುಣರಿಗೆ ಇದೆ’.ಕನ್ನಡ ಸಾಹಿತ್ಯ, ಭಾರತದ ಯಾವ ಭಾಷೆಯ ಸಾಹಿತ್ಯಕ್ಕೂ ಕಡಿಮೆ ಇಲ್ಲ. ಎಲ್ಲ ಭಾಷೆಗಳಿಗೆ ಕನ್ನಡದ ಕೃತಿಗಳು ಅನುವಾದಗೊಳ್ಳುತ್ತಿವೆ. ಅನೇಕ ಭಾಷೆಗಳ ಕೃತಿಗಳು ಕನ್ನಡಕ್ಕೆ ಬರುತ್ತಿವೆ. ಹೀಗಾಗಿ ಸಾಹಿತ್ಯ ಸಮ್ಮೇಳನವು ದೇಶದ ಆಸಕ್ತಿಯನ್ನು ಕೆರಳಿಸಿದೆ ಎಂದು ಅವರು ಹೇಳಿದರು.ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್, ಸಮ್ಮೇಳನ ಮೆರವಣಿಗೆ ಸಮಿತಿ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ, ಕೂಟದ ಅಧ್ಯಕ್ಷ ಕೆ.ವಿ.ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.