ಗುರುವಾರ , ಜನವರಿ 23, 2020
22 °C
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಪಂಚಾಯ್ತಿ ಸದಸ್ಯರು

ರಾಜೀವ್‌ಗಾಂಧಿ ಸಬ್ ಮಿಷನ್ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ರಾಜೀವ್‌ಗಾಂಧಿ ಸಬ್ ಮಿಷನ್ ಯೋಜನೆ ವಿಫಲವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಿ.ಆರ್.ಪ್ರೇಮಾ ಲೋಕೇಶಪ್ಪ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಹುತೇಕ ಸಮಯ ರಾಜೀವಗಾಂಧಿ ಸಬ್ ಮಿಷನ್ ಯೋಜನೆಯ ವಿಚಾರದ ಚರ್ಚೆಯೇ ನಡೆಯಿತು.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಹುಕೋಟಿಯ ರಾಜೀವಗಾಂಧಿ ಸಬ್ ಮಿಷನ್ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಆರೋಪಿಸಿದರು.ಸಬ್ ಮಿಷನ್ ಯೋಜನೆ ಪ್ರಾಯೋಗಿಕವಾಗಿ ಸಾಗುತ್ತಿರುವ ಹಂತದಲ್ಲೇ ಮಲೇಬೇನ್ನೂರು ಹಾಗೂ ಕೊಂಡಜ್ಜಿ ವ್ಯಾಪ್ತಿಯ ಪೈಪ್‌ಲೈನ್‌ಗಳು ಒಡೆದಿವೆ. ಈ ಬಗ್ಗೆ ಸಾರ್ವಜನಿಕರು ಮಾತ್ರವಲ್ಲದೇ ಸ್ಥಳಿಯ ಜನಪ್ರತಿನಿಧಿಗಳು ಅನೇಕ ಬಾರಿ ದೂರು ಸಲ್ಲಿಸಿದ್ದರೂ, ಪಂಚಾಯತ್‌ರಾಜ್ ಇಲಾಖೆಯ ಎಇಇ ಎಂ.ಜಿ. ಕಂಚಿಮಠ್, ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಎಂ.ವೀರೇಶ್ ಮಾತನಾಡಿ, ‘ಅಧಿಕಾರಿಗಳು ಜನಪ್ರತಿನಿಧಿಗಳಿಂದ ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅನೇಕ ಸುಳ್ಳುಗಳನ್ನು ಹೇಳಿಸಿ ನಮ್ಮನ್ನು ಸುಳ್ಳುಗಾರನ್ನಾಗಿ ಮಾಡಿದ್ದೀರಾ, ಸಭೆಯಲ್ಲೂ ಅದೇ ಸುಳ್ಳನ್ನು ಹೇಳುತ್ತೀದ್ದೀರಿ. ಸುಳ್ಳು ಹೇಳುವುದನ್ನು ಬಿಟ್ಟು. ಇನ್ನಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ. ಬೇಸಿಗೆ ಆರಂಭವಾಗುವ ಮುನ್ನವೇ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಕೊಡಿ’ ಎಂದು ಕಂಚಿಮಠ್ ಅವರನ್ನು ತರಾಟೆಗೆ ತೆಗೆದುಕೊಂಡರು.ಜಿಲ್ಲಾ ಪಂಚಾಯ್ತಿ ಸದಸ್ಯ ಎಂ. ನಾಗೇಂದ್ರಪ್ಪ ಮಾತನಾಡಿ, ‘ಪ್ರತಿ ಎರಡು ದಿನಕೊಮ್ಮೆ ಹಳ್ಳಿಗಳಿಗೆ ನೀರು ನೀಡುತ್ತಿರುವುದಾಗಿ ಹೇಳುತ್ತಿರಿ. ಆದರೆ, ವಾರಕ್ಕೆ ಒಮ್ಮೆ ಕೂಡ ನಮ್ಮ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸಿಗುತ್ತಿಲ್ಲ. ನೀವು ಸರಬರಾಜು ಮಾಡುವ ನೀರು ಎಲ್ಲಿಗೆ ಹೋಗುತ್ತದೆ’ ಎಂದು ಪ್ರಶ್ನಿಸಿದರು.ಈ ಯೋಜನೆಯ ಅಡಿ ನೀರಿನ ಟ್ಯಾಂಕ್‌ಗಳಿಗೆ ನೀರು ತುಂಬಿಸಿ, ಅವುಗಳ ಮೂಲಕ ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಬೇಕು. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ ನಮಗೂ ಸಾಕಾಗಿದೆ ಎಂದರು.ಎಇಇ ಕಂಚಿಮಠ್ ಮಾತನಾಡಿ, ಯೋಜನೆಯ ಅನುಷ್ಠಾನ ಸಮಯದಲ್ಲಿ ಈ ರೀತಿಯ ಸಮಸ್ಯೆಗಳು ಸಾಮಾನ್ಯ. ಯೋಜನೆ ಸಂಪೂರ್ಣವಾಗುವವರಿಗೂ ಚಿಕ್ಕ ಪುಟ್ಟ ರಿಪೇರಿ ಇದ್ದೇ ಇರುತ್ತದೆ. ಸಮಸ್ಯೆಗಳ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುತ್ತೇನೆ ಎಂದು ಸಮಜಾಯಿಷ ನೀಡಿದರು.ಸಬ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಅನೇಕ ದೂರುಗಳು ಬರುತ್ತಿವೆ. ಕೂಡಲೇ ಅವುಗಳ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಕ್ರಮ ಜರುಗಿಸಿ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಿ.ಆರ್. ಪ್ರೇಮಾ ಲೋಕೇಶಪ್ಪ ಸೂಚಿಸಿದರು.ತಾಲ್ಲೂಕು ಪಂಚಾಯ್ತಿ ಸದಸ್ಯ ಎಚ್.ಎಚ್.ಬಸವರಾಜ್ ಮಾತನಾಡಿ, ಪ್ರಗತಿ ಪರಿಶೀಲನೆ ಸಭೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಎರಡು ವರ್ಷದ ಅವಧಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರಗತಿ ಪರಿಶೀಲನೆ ಬಂದಿಲ್ಲ. ಕಾರಣ ನಮ್ಮ ಸಮಸ್ಯೆಗಳು ಸಭೆಯಲ್ಲಿ ಪ್ರಸ್ತಾಪಗೊಂಡರೂ, ಫಲಿತಾಂಶ ದೊರೆತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯ್ತಿ ಸಿಇಒ, ಪ್ರಗತಿ ಪರಿಶೀಲನಾ ಸಭೆಗೆ ಬಂದು ಸಮಸ್ಯೆ ಅರ್ಥ ಮಾಡಿಕೊಂಡರೆ, ಪರಿಹಾರ ಸುಲಭವಾಗುತ್ತದೆ. ಸದಸ್ಯರು ಜಿಲ್ಲಾ ಪಂಚಾಯ್ತಿಗೆ ಹೋದರೆ, ನಮ್ಮ ಸಮಸ್ಯೆ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ ಎಂದು ದೂರಿದರು.ಜಿಲ್ಲಾ ಪಂಚಾಯ್ತಿ ವತಿಯಿಂದ ತಾಲ್ಲೂಕಿನ ಸರ್ಕಾರಿ ಶಾಲೆಗೆ ಸರಬರಾಜು ಮಾಡಲಾದ ನೀರಿನ ಫಿಲ್ಟರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳ ಗುಣಮಟ್ಟ ಕಳಪೆಯಾಗಿದ್ದು, ಅವುಗಳನ್ನು ಸರಬರಾಜು ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರಿಂದ ದಂಡ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.ತಾಲೂಕು ಪಂಚಾಯ್ತಿ ಅಧ್ಯಕ್ಷೆ ಗೀತಾ ಕೆ.ದೇವೇಂದ್ರಪ್ಪ, ಉಪಾಧ್ಯಕ್ಷೆ ಶಾಂತಾಬಾಯಿ ಕಲ್ಯಾಣಕರ್  ಸ್ಥಾಯಿ ಸಮತಿ ಅಧ್ಯಕ್ಷೆ ಕೊಟ್ರಮ್ಮ ಫಕ್ಕೀರಪ್ಪ, ಇಒ ಡಾ.ಎಸ್. ರಂಗಸ್ವಾಮಿ ಉಪಸ್ಥಿತರಿದ್ದರು.ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಪಂಚಾಯ್ತಿ ಪಿಡಿಒಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)